ಗುರ್‌ಗಾಂವ್‌ನಲ್ಲಿ ಬರಲಿದೆ ಆಕಾಶದಲ್ಲಿ ಸಾಗುವ ಪಾಡ್ ಟ್ಯಾಕ್ಸಿ
ಗುರುಗಾಂವ್, ಮಾ.21: ಭಾರತದ ಹಲವು ರಾಜ್ಯಗಳು ಯೋಜಿಸುತ್ತಿದ್ದ ಪಾಡ್ ಟ್ಯಾಕ್ಸಿಗಳು ಕೊನೆಗೂ ಗುರುಗಾಂವ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತದ ಮೊದಲ ಪರ್ಸನಲ್ ರ್ಯಾಪಿಟ್ ಟ್ರಾನ್ಸಿಟ್ ನೆಟ್ವರ್ಕ್ ಆರಂಭಿಸಲು ತಳಹದಿಯನ್ನು ಹಾಕಿದೆ ಮತ್ತು ಈ ಯೋಜನೆಗೆ ಮುಂದಿನ ತ್ರೈ ಮಾಸಿಕ ಅವಧಿಯಲ್ಲಿ ಜಾಗತಿಕ ಬಿಡ್ ಕರೆಯಲಾಗುವುದು. ಈ ವ್ಯವಸ್ಥೆಯನ್ನು 850 ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಮೆಟ್ರಿನೊ ಎಂದು ಹೆಸರಿಸಲಾಗಿರುವ ಯೋಜನೆಯಲ್ಲಿ ಕಂಬದ ಆಧಾರದಲ್ಲಿ ನಿಂತ ಕಬ್ಬಿಣದ ಕಂಬಿಗಳ ಮೇಲೆ ಪಾಡ್‌ಗಳು ನೇತಾಡುತ್ತಾ ಚಲಿಸುತ್ತವೆ. ಪ್ರತೀ ಪಾಡ್‌ಗಳಲ್ಲಿ ಐವರು ಪ್ರಯಾಣಿಕರನ್ನು ಕರೆದೊಯ್ಯಬಹುದು. ಪ್ರಾಯೋಗಿಕ ದಾರಿಗೆ ಆಂಬಿಯನ್ಸ್ ಮಾಲ್‌ನಿಂದ ಆರಂಭಿಸಿ 16 ನಿಲ್ದಾಣಗಳನ್ನು ಯೋಜಿಸಲಾಗಿದೆ.
ಸಣ್ಣ ಸ್ವಯಂಚಾಲಿತ ವಾಹನಗಳು ಒಂದರ ಹಿಂದೆ ಮತ್ತೊಂದರಂತೆ ಚಲಿಸುತ್ತಾ ನಿಲ್ದಾಣಗಳಿಂದ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು ಮಾಡುತ್ತದೆ. ಐವರೇ ಒಂದು ಪಾಡ್‌ನಲ್ಲಿ ಚಲಿಸಬೇಕು ಎಂದೇನಿಲ್ಲ, ಸಂಪೂರ್ಣ ಪಾಡನ್ನೇ ಬಾಡಿಗೆಗೆ ಪಡೆದುಕೊಂಡು ಹೋಗಬಹುದು. ಅಂತಹ ಪಾಡ್ ಪ್ರಯಾಣಿಕರನ್ನು ನೇರವಾಗಿ ಗುರಿಯ ಕಡೆಗೆ ಕರೆದೊಯ್ಯುತ್ತವೆ. ಪ್ರತೀ ಪಾಡ್‌ನ ಸರಾಸರಿ ವೇಗ ಗಂಟೆಗೆ 60 ಕಿಮೀ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಈ ನೆಟ್ವರ್ಕನ್ನು ವರ್ಷದೊಳಗೆ ನಿರ್ಮಿಸಬಹುದು ಎಂದಿದ್ದಾರೆ. ಇಲ್ಲಿಗೆ ಪಾಡ್ ಟಾಕ್ಸಿ ವ್ಯವಸ್ಥೆ ಚೆನ್ನಾಗಿ ಅನ್ವಯಿಸುತ್ತದೆ. ನಾವು ನಮ್ಮ ಆಯ್ಕೆಗಳನ್ನು ವಿಸ್ತರಿಸಿದ್ದೇವೆ. ಖಾಸಗಿಯವರು ಇನ್ನೂ ಉತ್ತಮ ಕಲ್ಪನೆಯನ್ನು ಮುಂದಿಡಬಹುದು. ಸ್ಕೈರೈಲಿನ ಯೋಜನೆಯೂ ಮುಂದಿದೆ. ಸ್ಕೈರೈಲ್ ಕೂಡ ಪಿಆರ್‌ಟಿ ವ್ಯವಸ್ಥೆಯೇ ಆಗಿದ್ದರೂ, ರೋಪ್‌ವೇ ತರಹ ಇರುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯ ಪ್ರಕಾರ ಯೋಜನೆಗೆ ಭೂಮಿ ಈಗಾಗಲೇ ಗುರುತಿಸಲಾಗಿದೆ. ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಅಂಗೀಕಾರದ ಅಗತ್ಯವಿರುವುದಿಲ್ಲ. ಪೂರ್ಣ ಹಣಕಾಸು ವ್ಯವಸ್ಥೆಯನ್ನು ಪಿಆರ್‌ಟಿ ನಿರ್ಮಿಸುವ ಖಾಸಗಿ ಸಂಸ್ಥೆಯೇ ಹೂಡಿಕೆ ಮಾಡಲಿದೆ. ಟಿಕೆಟು ಮೂಲಕ ಸಂಸ್ಥೆ 25 ವರ್ಷಗಳಲ್ಲಿ ಹೂಡಿಕೆ ಹಣವನ್ನು ವಾಪಾಸು ಪಡೆಯಲಿದೆ.