ಭಾರತ್ ಮಾತಾ ಕಿ ಜೈ

Update: 2016-03-26 05:12 GMT

ಇವತ್ತು ಭಾರೀ ಸದ್ದುಗದ್ದಲದೊಂದಿಗೆ ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ದೇಶಭಕ್ತ, ದೇಶ ವಿರೋಧಿ ಕುರಿತ ಬಿರುಸಿನ ಚರ್ಚೆಗಳ ಮೂಲ ನಾಗಪುರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದರ ಹಿಂದೆ ಹಿಂದೂರಾಷ್ಟ್ರ ಸ್ಥಾಪನೆಯನ್ನು ವಿರೋಧಿಸುವವರನ್ನೆಲ್ಲ ಸ್ಪಷ್ಟವಾಗಿ ಗುರುತಿಸಿ ಪ್ರತ್ಯೇಕಿಸುವ ಉದ್ದೇಶವಿರುವುದನ್ನು ಗುರುತಿಸಬಹುದು.ಇದಕ್ಕೆ ಮೋದಿ ಸರಕಾರದ ಹಸಿರು ನಿಶಾನೆ ಸಿಕ್ಕಿರುವುದರ ಬಗ್ಗೆ ಅಂತೂ ಯಾವ ಅನುಮಾನವೂ ಬೇಡ. ದಿನಗಳೆದಂತೆ ಕಾವೇರುತ್ತಿರುವ ಚರ್ಚೆಗಳ ನಡುವೆ ಯಾರು ದೇಶಪ್ರೇಮಿ, ಯಾರು ಅಲ್ಲ ಎಂಬುದನ್ನು ಗುರುತಿಸಲು ಇನ್ನೊಂದು ಮಾನದಂಡವನ್ನು ಘೋಷಿಸಲಾಗಿದೆ. ಇದನ್ನು ಪ್ರಾರಂಭಿಸಿರುವುದೂ ಅದೇ ಗುಂಪು. ಇದೇ ಮಾರ್ಚ್ 3ರಂದು ಮಾತನಾಡಿದ ಆರೆಸ್ಸೆಸ್ ಸರ ಸಂಘಚಾಲಕ ಮೋಹನ ಭಾಗವತ್, ಭಾರತೀಯ ಯುವ ಜನತೆಗೆ ಭಾರತ್‌ಮಾತಾ ಕಿ ಜೈ ಘೋಷಣೆಯನ್ನು ಕಲಿಸುವ ಅಗತ್ಯವಿದೆ ಎಂದಿದ್ದಾರೆ. ಇದನ್ನೇ ಮುಂದುವರಿಸಿರುವ ಅನುಪಮ್ ಖೇರ್‌ರಂತಹ ಕಟ್ಟರ್ ಮೋದಿ ಭಕ್ತರು ಯಾರು ಭಾರತ್‌ ಮಾತಾ ಕಿ ಜೈ ಎಂದು ಕೂಗುವುದಿಲ್ಲವೊ ಅಂಥವರನ್ನೆಲ್ಲ ದೇಶ ವಿರೋಧಿಗಳೆಂದು ಪರಿಗಣಿಸ ಬೇಕೆಂದು ಫತ್ವಾ ಹೊರಡಿಸಿದ್ದಾರೆ!. ಉಷ್ಣಾಂಶ, ರಕ್ತದೊತ್ತಡ, ಮಧುಮೇಹ ಮುಂತಾದವುಗಳಿಗೆ ನಾನಾ ಮಾಪಕಗಳಿರುವ ಹಾಗೆ ದೇಶಭಕ್ತಿಯನ್ನು ಅಳೆಯುವ ಮಾಪಕಗಳನ್ನು ಕಂಡುಹಿಡಿಯುವ ಮೂಲಕ ಅಪರೂಪದ ಸಾಧನೆ ಮಾಡಿರುವ ಇವರಿಗೆ ನಾಳೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದರೆ ಸೋಜಿಗವಿಲ್ಲ!

ಭಾರತವನ್ನು ತಾಯಿಯೆಂದು ಕರೆದು ಆಕೆಯನ್ನು ಓರ್ವ ಕರುಣಾಮಯಿ ಹಿಂದೂ ದೇವತೆ ಎಂಬುದಾಗಿ ಕಲ್ಪಿಸಿದಾತ ಬಂಗಾಳಿ ಲೇಖಕ ಬಂಕಿಂಚಂದ್ರ ಚಟ್ಟೋಪಾಧ್ಯಾಯ. ಅವರು 1875ರಲ್ಲಿ ಬರೆದ ಆನಂದ ಮಠ ಪುಸ್ತಕದಲ್ಲಿ ಮುಸ್ಲಿಂ ಆಡಳಿತಗಾರರನ್ನು ದೇಶದ ವೈರಿಗಳಂತೆ ಚಿತ್ರಿಸಲಾಗಿದೆ. ಅದರಲ್ಲಿದ್ದ ಹಿಂದೂ ದೇವತೆ ದುರ್ಗೆಯನ್ನು ಸ್ತುತಿಸುವ ವಂದೇ ಮಾತರಂ ಹಾಡನ್ನು ರಾಷ್ಟ್ರಗೀತೆಯಾಗಿಸಬೇಕೆಂದು ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಕೂಗೆಬ್ಬಿಸಿದಾಗ ರವೀಂದ್ರನಾಥ ಠಾಕೂರ್‌ಅದನ್ನು ಬಲವಾಗಿ ವಿರೋಧಿಸಿದರು. ನಂತರದ ಬೆಳವಣಿಗೆಯೊಂದರಲ್ಲಿ ವಾರಾಣಸಿ, ಹರಿದ್ವಾರ ಮತ್ತು ಮಹಾರಾಷ್ಟ್ರದ ದೌಲತಾಬಾದ್ ಕೋಟೆಗಳಲ್ಲಿ ಹತ್ತು ಕೈಗಳ ಭಾರತಮಾತೆಯ ಮಂದಿರಗಳು ಸ್ಥಾಪಿಸಲ್ಪಟ್ಟವು. ಗಾಂಧಿ ಕೂಡ ಜನಗಣಮನವೆ ನಮ್ಮ ರಾಷ್ಟ್ರಗೀತೆ ಆಗಬೇಕು ಹೊರತು ವಂದೇ ಮಾತರಂ ಅಲ್ಲ ಎಂಬ ದೃಢ ನಿಲುವನ್ನು ಹೊಂದಿದ್ದರು. ಗಾಂಧಿ ಹಂತಕ ನಾಥೂರಾಂ ಗೋಡ್ಸೆ ತಾನೇಕೆ ಗಾಂಧಿಯನ್ನು ಕೊಂದೆ ಎಂಬುದಕ್ಕೆ ಕೊಟ್ಟಿರುವ ಹಲವು ಕಾರಣಗಳಲ್ಲಿ ಇದೂ ಒಂದು. ನ್ಯಾಯಶಾಸದ ವಿಷಯಕ್ಕೆ ಬಂದರೆ ಭಾರತದ ಸಂವಿಧಾನ ಜನಗಣಮನವನ್ನು ರಾಷ್ಟ್ರಗೀತೆ ಎಂಬುದಾಗಿ ಮತ್ತು ವಂದೇ ಮಾತರಂ ಅನ್ನು ರಾಷ್ಟ್ರಕವನ ಎಂಬುದಾಗಿ ಗುರುತಿಸುತ್ತದೆ; ಆದರೆ ಇವುಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಒತ್ತಾಯಿಸುವುದು ಸಂವಿಧಾನ ನೀಡುವ ಧಾರ್ಮಿಕ ಸ್ವಾತಂತ್ರ್ಯದ (ವಿ 25) ಉಲ್ಲಂಘನೆ ಎಂದು ಸರ್ವೋಚ್ಚ ನ್ಯಾಯಾಲಯ ಹಲವು ವರ್ಷಗಳ ಹಿಂದೆಯೆ ತೀರ್ಪು ನೀಡಿದೆ.

ಮೋಹನ ಭಾಗವತರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಎಂಐಎಂ ಪಕ್ಷದ ಮುಖಂಡ ಅಸದುದ್ದೀನ್ ಉವೈಸಿ ಈ ಘೋಷಣೆ ಕೂಗುವಂತೆ ಚೂರಿ ಹಿಡಿದು ಬೆದರಿಸಿದರೂ ತಾನು ಜಗ್ಗಲಾರೆ... ತಾನು ಜೈ ಹಿಂದ್ ಎನ್ನಲು ಸಿದ್ಧ ಎಂದಿದ್ದಾರೆ. ತದ ನಂತರ ಎಂಐಎಂನ ಶಾಸಕ ವಾರಿಸ್ ಪಠಾಣ್ ಇದನ್ನೇ ಮಹಾ ರಾಷ್ಟ್ರಸದನದಲ್ಲಿ ಪುನರುಚ್ಚರಿಸಿದಾಗ ದೊಡ್ಡ ಕೋಲಾಹಲವೆದ್ದಿತು. ಈ ಸಂದರ್ಭದಲ್ಲಿ ಶಿವಸೇನಾ ಶಾಸಕ ಗುಲಾಬ್‌ರಾವ್ ಪಾಟೀಲ ಎಂಬಾತ ‘ಏ ನಾಯಿಗಳಿರಾ, ಈ ದೇಶದಲ್ಲಿ ಇರಬೇಕೆಂದಿದ್ದರೆ ವಂದೇ ಮಾತರಂ ಹಾಡಲೇಬೇಕು’ ಎಂದು ಅಪ್ಪಣೆ ಕೊಡಿಸಿದ್ದಾರೆ. ಇಡೀ ಸಮುದಾಯವನ್ನು ಉದ್ದೇಶಿಸಿ ಮಾಡಿದಂತಿರುವ ಈ ಹುಕುಮಿನ ಬಗ್ಗೆ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಟಿಆರ್‌ಪಿ ಬೆಂಬತ್ತಿರುವ ಖಾಸಗಿ ಟಿವಿ ವಾಹಿನಿಗಳು, ತಲೆಕೆಡಿಸಿಕೊಂಡಂತಿಲ್ಲ. ಉವೈಸಿ ಮತ್ತಾತನ ಪಕ್ಷದ ಕೋಮುವಾರು ಅಜೆಂಡಾವನ್ನು ಯಾರೂಒಪ್ಪಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಎಂಐಎಂ ಮತ್ತು ಆರೆಸ್ಸೆಸ್ ಒಂದೇ ನಾಣ್ಯದ ಎರಡು ಮುಖಗಳು ಎನ್ನಬಹುದು. ಕೋಮು ವಿಷವನ್ನು ಹರಡುವುದರಿಂದ ಎರಡಕ್ಕೂ ರಾಜಕೀಯ ಲಾಭ ಇದೆ. ಕೆಲವೊಮ್ಮೆ ಇವೆರಡರ ನಡುವೆ ಹೊಂದಾಣಿಕೆ ನಡೆದಿರುವ ಆರೋಪಗಳೂ ಇವೆ. ಪಠಾಣರನ್ನು ಸದನದಿಂದ ಅಮಾನತುಗೊಳಿಸಿ ಕಲಾಪಗಳಿಂದ ಹೊರಗಿಡುವ ನಿರ್ಧಾರವನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಕೂಡ ಬೆಂಬಲಿಸಿರುವುದು ಇವೆರಡು ಪಕ್ಷಗಳ ಸೈದ್ಧಾಂತಿಕ ದೌರ್ಬಲ್ಯದ ಸೂಚಕವಾಗಿದೆ.

ಇವತ್ತು ನಮಗೆಲ್ಲ್ಲ ದೇಶಭಕ್ತಿಯ ಪಾಠ ಹೇಳ ಹೊರಟಿರುವ ಇದೇ ಚೆಡ್ಡಿಪಡೆಗಳು ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ಎಂಜಲಿಗೆ ಕೈಯೊಡ್ಡಿ ಅವರ ಸೇನೆಗೆ ಭಾರತೀಯ ಯುವಕರನ್ನು ಭರ್ತಿ ಮಾಡಿಕೊಟ್ಟು ದೇಶಭಕ್ತಿ ಮೆರೆದ ಕತೆ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ಇಂದು ದೇಶಪ್ರೇಮದ ಗುತ್ತಿಗೆ ವಹಿಸಿಕೊಂಡವರಂತೆ ಆಡುತ್ತಿರುವ ಇವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತೋರಿದ ವಿದೇಶ ಭಕ್ತಿಯ ಕತೆಯನ್ನು ದೇಶಾದ್ಯಂತ ಬಿತ್ತರಿಸಬೇಕಾಗಿದ್ದ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಹೆಚ್ಚಿನವು ಯಾಕೊ ಸುಮ್ಮನಾಗಿವೆ. ತೀರಾ ಕ್ಷುಲ್ಲಕ ವಿಚಾರಗಳ ಬಗ್ಗೆ ತಥಾಕಥಿತ ಚರ್ಚೆಗಳನ್ನು ದಿನಗಟ್ಟಳೆ ಆಯೋಜಿಸುವ ದೃಶ್ಯ ಮಾಧ್ಯಮಗಳೂ ಗಪ್‌ಚಿಪ್‌ಎನ್ನುತ್ತಿಲ್ಲ. ಇದಕ್ಕೆ ಕಾರಣ ದಾಳಿಯ ಭಯವೊ ಅಥವಾ ಜಾಹೀರಾತು ಸ್ತಂಭನೆಯ ಭಯವೊ ಅಥವಾ ಕೇಸರೀಕರಣವೊ ಗೊತ್ತಿಲ್ಲ.

ಹಿಂದೂ ರಾಷ್ಟ್ರವನ್ನು ಹೇರಹೊರಟಿರುವವರ ಬಲೆಗೆ ಬಿದ್ದ ವಿಶ್ವ ಸೂಫಿ ವೇದಿಕೆ ಮತ್ತು ಜಾವೆದ್‌ಅಖ್ತರ್‌ರಂಥವರು ಭಾರತ್ ಮಾತಾ ಕಿ ಜೈ ಎಂದು ಕೂಗಿ ತಮ್ಮ ದೇಶಭಕ್ತಿಯನ್ನು ಸಾರಿ ಕೃತಕೃತ್ಯರಾಗಿದ್ದಾರೆ. ಪರಿಣಾಮವಾಗಿ ಮುಸ್ಲಿಮರನ್ನು ಒಳ್ಳೆ ಮುಸ್ಲಿಮರು ಮತ್ತು ಕೆಟ್ಟ ಮುಸ್ಲಿಮರು ಎಂದು ವರ್ಗೀಕರಿಸಿ ಸಮುದಾಯದೊಳಗೆ ಒಡಕು ಮೂಡಿಸಲು ಯತ್ನಿಸುತ್ತಿರುವ ಸಂಘ ಪರಿವಾರಕ್ಕೆ ಇಂಥವರಿಂದ ಆನೆಬಲ ಬಂದಂತಾಗಿದೆ. ಮುಸ್ಲಿಮರನ್ನು ವಿಭಜಿಸುತ್ತಿರುವುದಕ್ಕೆ ಇತ್ತೀಚಿನ ನಿದರ್ಶನವೆಂದರೆ ಉರ್ದು ಲೇಖಕರು ಹಾಗೂ ಸಂಪಾದಕರ ಮೇಲೆ ಹೇರಲಾಗಿರುವ ನಿಯಂತ್ರಣಗಳು. ಅವರೆಲ್ಲ ಈಗ ಮಾನವ ಸಂಪನ್ಮೂಲ ಇಲಾಖೆಯಡಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ಉರ್ದು ಭಾಷಾಭಿವೃದ್ಧಿ ಮಂಡಳಿ (ಎನ್‌ಸಿಪಿಯುಎಲ್)ಯ ಸಗಟು ಖರೀದಿ ಮಾಡುವ ಪುಸ್ತಕಗಳಲ್ಲಿ ಸರಕಾರ ಮತ್ತು ಪ್ರಭುತ್ವ ವಿರೋಧಿ ಅಂಶಗಳಿಲ್ಲವೆಂದು ಘೋಷಿಸಿ ಅದಕ್ಕೆ ಇಬ್ಬರು ಸಾಕ್ಷಿಗಳ ಸಹಿ ಪಡೆದು ಕಳುಹಿಸಿಕೊಡಬೇಕಾಗಿದೆ. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗಿ ಬರಬಹುದೆಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಜಾವೆದ್‌ಅಖ್ತರ್ ಇದುವರೆಗೂ ಸಾಹಿತಿಗಳಿಂದ ಪ್ರಶಸ್ತಿ ವಾಪಸಾತಿ, ಜೆಎನ್‌ಯು ವಿವಾದ, ತಿರುಚಿದ ವೀಡಿಯೊ, ನ್ಯಾಯವಾದಿಗಳ ದುಂಡಾವರ್ತನೆ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ತುಟಿಬಿಚ್ಚಿದಂತಿಲ್ಲ. ಸೂಫಿಗಳ ವಿಷಯಕ್ಕೆ ಬಂದರೆ ಅಂದು ಮೊಗಲ್ ಆಡಳಿತಗಾರರ ಆಧ್ಯಾತ್ಮಿಕ ಗುರುಗಳಾಗಿದ್ದ ಸೂಫಿಗಳೆಂದೂ ಅಕಾರಸ್ಥರಿಗೆ ನಿಕಟವರ್ತಿಗಳಾಗಿರಲಿಲ್ಲ. ಕೆಲವು ಸೂಫಿ ಸಂತರು ಆಳರಸರಿಂದ ದೂರ ಉಳಿದರೆ ಇನ್ನು ಕೆಲವರು ಆಳರಸರಿಗೆ ನ್ಯಾಯಸಮ್ಮತತೆ ತಂದುಕೊಟ್ಟಿದ್ದರು. ಸೂಫಿ ಸಂತ ಹಝರತ್ ನಿಝಾಮುದ್ದೀನ್ ಔಲಿಯಾರ ಕಾಲದಲ್ಲಿ ದಿಲ್ಲಿಯಲ್ಲಿ ಎಂಟು ಮಂದಿ ಸುಲ್ತಾನರ ರಾಜ್ಯಭಾರ ನಡೆದಿದೆ. ಆದರೆ ಆ ಸಂತ ಯಾರೊಬ್ಬರನ್ನೂ ತನ್ನ ಬಳಿ ಬಿಟ್ಟುಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಸುಲ್ತಾನ ಜಲಾಲುದ್ದೀನ್ ಖಿಲ್ಜಿ ಮಾರುವೇಷದಲ್ಲಿ ತನ್ನನ್ನು ಭೇಟಿ ಮಾಡಲಿರುವ ವಿಷಯ ತಿಳಿದುಬಂದಾಗ ಊರು ತೊರೆದು ಬೇರೆಲ್ಲಿಗೋ ಹೋಗಿದ್ದರು. ಸೂಫಿ ವೇದಿಕೆಯ ವರ್ತನೆಯನ್ನು ಟೀಕಿಸಿರುವ ಅಮೆರಿಕದ ಇಸ್ಲಾಮಿಕ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಊಮಿದ್ ಶಾಫಿ ಧಾರ್ಮಿಕ ಗುರುಗಳು ಸಾಮ್ರಾಜ್ಯಶಾಹಿಗೆ ಮಣಿಯುವ ಬದಲು ದುರ್ಬಲರ ಪರವಾಗಿ ಧ್ವನಿ ಎತ್ತಬೇಕು; ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದಿದ್ದಾರೆ.

ಭಾರತ್ ಮಾತಾ ಕಿ ಜೈ ಹೇಳುವುದರಿಂದ ಧರ್ಮಕ್ಕೆ ಯಾವುದೇ ತೊಡಕಿಲ್ಲ; ಅದು ಕೇವಲ ದೇಶಪ್ರೇಮದ ಸಂಕೇತ ಎನ್ನುವವರು ಕೆಲವೊಂದು ವಿಷಯಗಳನ್ನು ಮರೆತಿದ್ದಾರೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡ ನಾವು ನಮಗೊಂದು ಸಂವಿಧಾನವನ್ನು ಕೊಟ್ಟುಕೊಂಡ ತರುವಾಯವೇ ನಮ್ಮದೇಶ ಒಂದು ಪ್ರಜಾತಾಂತ್ರಿಕ ಗಣತಂತ್ರವೆಂದು ಗುರುತಿಸಿಕೊಂಡಿದೆ. ಸಂವಿಧಾನದಲ್ಲಿ ಇತರ ಹಲವಾರು ವಿಷಯಗಳ ಜೊತೆ ಪ್ರತಿಯೋರ್ವ ಭಾರತೀಯ ಪ್ರಜೆಯ ಹಕ್ಕು ಮತ್ತು ಕರ್ತವ್ಯ ಗಳನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಹಾಗಾಗಿ ಯಾರು ತಮ್ಮ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ಕರ್ತವ್ಯಗಳನ್ನು ಪಾಲಿಸುತ್ತಾರೊ, ಯಾರು ಸಂವಿಧಾನದ ಜಾತ್ಯತೀತತೆಯ ಆಶಯವನ್ನು ಕೃತಿರೂಪಕ್ಕಿಳಿಸುತ್ತಾರೊ, ಯಾರು ಜಾತಿಪದ್ಧತಿಯನ್ನು ವಿರೋಧಿಸುವುದರೊಂದಿಗೆ ಅದನ್ನು ಹೋಗಲಾಡಿಸಲು ಧನಾತ್ಮಕ ಪ್ರಯತ್ನಗಳನ್ನು ಮಾಡುತ್ತಾರೊ ಅವರೆ ನಿಜಾರ್ಥದಲ್ಲಿ ದೇಶವನ್ನು ಪ್ರೀತಿಸುವವರು. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಭಾರತವನ್ನು ಪ್ರೀತಿಸುವುದೆಂದರೆ ಭಾರತದ ಸಂವಿಧಾನಕ್ಕೆ ಗೌರವ, ಅಭಿಮಾನ, ನಿಷ್ಠೆ ತೋರುವುದು ಎಂದರ್ಥ.ಬರೀ ಪತಾಕೆ ಪ್ರದರ್ಶನ ಮತ್ತು ಘೋಷಣೆಗಳೆಂದೂ ದೇಶಪ್ರೇಮವನ್ನು ಸಂಕೇತಿಸಲಾರವು.

ಭಾರತೀಯ ಹಿಂದೂ ಸಮಾಜದ ಕಟು ವಾಸ್ತವ ಏನೆಂದರೆ ಅಲ್ಲಿ ಸೀಯರ ಮೇಲೆ ಅತ್ಯಕ ದೌರ್ಜನ್ಯ ಎಸಗುವವರು ಕುಟುಂಬಸ್ಥರು ಮತ್ತು ಪರಿಚಯಸ್ಥರೆ ಆಗಿರುತ್ತಾರೆ. ಮಹಿಳಾ ಹೋರಾಟಗಾರ್ತಿ ಕಮಲಾ ಭಾಸಿನ್ ಪ್ರಕಾರ ಶೇ. 80ರಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ಮನೆಯೊಳಗೆ ನಡೆಯುತ್ತವೆ, ಅದೂ ಸಮೀಪದ ಸಂಬಂಗಳಿಂದ. ವರದಕ್ಷಿಣೆ ಸಾವು; ಭ್ರೂಣ ಹತ್ಯೆ; ಮಕ್ಕಳ ಮೇಲೆ ಅತ್ಯಾಚಾರ; ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ; ಮರ್ಯಾದಾ ಹತ್ಯೆ; ಸ್ವಾತಂತ್ರ್ಯ, ಸಮಾನತೆಗಳ ನಿರಾಕರಣೆ ಇವೆಲ್ಲವೂ ಪುರುಷ ಪ್ರಧಾನ ಭಾರತೀಯ ಸಂಸ್ಕೃತಿಯ ಭಾಗವೇ ಆಗಿವೆ. ಉದಾಹರಣೆಗೆ ಬಿಜೆಪಿ ಆಡಳಿತದ ಛತ್ತೀಸ್‌ಗಡದಲ್ಲಿ ಏನಾಗುತ್ತಿದೆ ನೋಡಿ. ಅಲ್ಲಿ 3000 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು ಆ ಪೈಕಿ ಶೇಕಡಾ 60ಕ್ಕೂ ಹೆಚ್ಚು ಬಾಲಕಿಯರ ಶಾಲೆಗಳಾಗಿವೆ. ಅಷ್ಟಕ್ಕೂ ಇವರಲ್ಲಿ ಹೆಚ್ಚಿನವರು ಆದಿವಾಸಿಗಳು ಮತ್ತು ದಲಿತರು.ಒಂದು ಕಡೆಯಲ್ಲಿ ಭಾರತ ಮಾತೆಗೆ ಜೈಕಾರ ಇನ್ನೊಂದು ಕಡೆ ಭಾರತೀಯ ನಾರಿಯ ದಮನವೇ ಹಿಂದೂತ್ವವಾದಿಗಳ ಅಸಲಿ ಸಂಸ್ಕೃತಿಯಾಗಿದೆ. ಭಾರತೀಯ ಪುರುಷರು ಭಾರತಾಂಬೆಯ ಹೆಣ್ಮಕ್ಕಳ ಮೇಲೆ ಇಷ್ಟೊಂದು ಶೋಷಣೆ, ದಮನ, ದೌರ್ಜನ್ಯ, ಅತ್ಯಾಚಾರಗಳನ್ನು ನಡೆಸುತ್ತಿರುವ ವಾಸ್ತವ ಕಣ್ಣೆದುರೆ ಇದ್ದರೂ ತಪ್ಪನ್ನೆಲ್ಲ ಬೇರೊಬ್ಬರ ಮೇಲೆ ಹೊರಿಸುವ ಮೋಹನ ಭಾಗವತರ ಕುತಂತ್ರದ ಹೇಳಿಕೆ ಹೇಗಿದೆ ನೋಡಿ. ಭಾರತಮಾತೆಯ ತಥಾಕಥಿತ ಪೂಜಕರ ಗುರು ಭಾಗವತ ಮಹಾಶಯರ ಪ್ರಕಾರ ಅತ್ಯಾಚಾರಗಳು ನಡೆಯುತ್ತಿರುವುದು ಭಾರತದಲ್ಲಿ ಅಲ್ಲವಂತೆ, ಇಂಡಿಯಾದಲ್ಲಿ ಅಂತೆ! ವಾಸ್ತವವಾಗಿ ಇವರು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಲು ಒಪ್ಪದವರು, ಮಹಿಳೆಯರನ್ನು ವೇಶ್ಯೆಯರೆಂದು ಕರೆಯುವ ಮಂತ್ರಿಗಳನ್ನು ಹೊಂದಿರುವವರು, ಸ್ವಾತಂತ್ರ್ಯದ ಹೆಸರಲ್ಲಿ ಬಟ್ಟೆ ಬಿಚ್ಚಿ ಬತ್ತಲಾಗಿ ಎನ್ನುವವರು, ಮುಸ್ಲಿಂ ಮಹಿಳೆಯ ಹೊಟ್ಟೆ ಸೀಳಿ ತ್ರಿಶೂಲದಿಂದ ಭ್ರೂಣವನ್ನು ಚುಚ್ಚಿ ಮೇಲೆತ್ತಿ ಕೇಕೆ ಹಾಕುತ್ತ ಸಂಭ್ರಮಿಸುವವರು, ಸಂವಿಧಾನದ ಜಾತ್ಯತೀತತೆಯನ್ನು ಧಿಕ್ಕರಿಸುವವರು, ಹೆಣ್ಣನ್ನು ಕೀಳಾಗಿ ಪರಿಗಣಿಸುವ ಮನುಸ್ಮತಿಯನ್ನೇ ಜಾರಿಗೆ ತರಲಿಚ್ಛಿಸುವವರು, ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಯಾವುದೇ ಹಿಂಜರಿಕೆ ಇಲ್ಲದೆ ಅದನ್ನು ಉಲ್ಲಂಸುವ ಜನಪ್ರತಿನಿಗಳನ್ನು ಸಾಕುವವರು. ಇಂತಹವರು ಈಗ ಭಾರತ್ ಮಾತಾ ಕಿ ಜೈ ಘೋಷಣೆ ಕೂಗದವರನ್ನು ನೇಣುಗಂಬಕ್ಕೇರಿಸಲು ಹೊರಟಿದ್ದಾರೆ! ಇದಕ್ಕಿಂತ ದೊಡ್ಡ ವಿಪರ್ಯಾಸ ಯಾವುದಿದೆ?

ಹೀಗಿರುವಾಗ ಸಂಘ ಪರಿವಾರದ ಮಿಕ್ಕೆಲ್ಲ ಘೋಷಣೆಗಳಂತೆ ಭಾರತ್ ಮಾತಾ ಕಿ ಜೈ ಕೂಡ ಒಂದು ದುರುದ್ದೇಶಪೂರಿತ ಪೊಳ್ಳು ಘೋಷಣೆ ಎಂಬುದು ಸ್ಪಷ್ಟವಿದೆ. ಅದರ ಹಿಂದೆ ಎರಡು ಉದ್ದೇಶಗಳಿವೆ. ಒಂದು, ಸಮಾಜದ ಧ್ರುವೀಕರಣ ಮತ್ತು ಶ್ರೇಣೀಕರಣ. ಎರಡು, ಧರ್ಮಾಧರಿತ ಹಿಂದೂರಾಷ್ಟ್ರದ ಸ್ಥಾಪನೆಗೆ ಪ್ರತಿರೋಧವನ್ನು ಹತ್ತಿಕ್ಕುವುದು. ಇದು, ತಮ್ಮದೇ ಸರ್ವಶ್ರೇಷ್ಠ ಜನಾಂಗ ಎಂದುಕೊಳ್ಳುವವರು ಸಮಾಜದ ಮೇಲೆ ತಮ್ಮ ಸರ್ವಾಕಾರವನ್ನು ಹೇರಲೆತ್ನಿಸುವ ಫ್ಯಾಯಾಶಿಸ್ಟ್ ತಂತ್ರಗಾರಿಕೆಯಲ್ಲದೆ ಇನ್ನೇನೂ ಅಲ್ಲ. ಹಿಂದೂತ್ವವಾದಿಗಳ ಈ ವಿನಾಶಕಾರಿ ರಾಜಕಾರಣವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬಹುಸಂಖ್ಯಾತ ಸಜ್ಜನ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಭಾರತವನ್ನು ಏಕಧರ್ಮೀಯ, ಏಕಸಂಸ್ಕೃತಿಯ, ಏಕನಾಯಕತ್ವದ ನಾಡಾಗಿ ಪರಿವರ್ತಿಸಲು ಹೊರಟಿರುವ ಸಂಘ ಪರಿವಾರದ ಪ್ರಯತ್ನಗಳನ್ನು ಹತ್ತಿಕ್ಕಬೇಕಾಗಿದೆ.

************
(ಆಧಾರ:ವಿವಿಧ ಮೂಲಗಳಿಂದ)

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News