ಬೀಫ್ ತಿನ್ನುವುದು ಅಪರಾಧ ಅಲ್ಲ , ಆಹಾರ ಪದ್ಧತಿ ಬಗ್ಗೆ ಕಾನೂನಿಲ್ಲ : ಮದ್ರಾಸ್ ಹೈಕೋರ್ಟ್

Update: 2016-03-26 15:34 GMT

" ಭಾರತೀಯ ದಂಡ ಸಂಹಿತೆಯಲ್ಲಿ ಎಲ್ಲಿಯೂ ಮಾಂಸಾಹಾರ ಸೇವನೆ ಅಪರಾಧ ಎಂದು ಹೇಳಿಲ್ಲ. ಯಾವುದೇ ಧರ್ಮದವರ ಆಹಾರ ಪದ್ಧತಿಯ ಬಗ್ಗೆ ಯಾವುದೇ ಕಾನೂನು ಇಲ್ಲ. ಹೀಗಿರುವಾಗ ಬೀಫ್ ತಿನ್ನುವುದು ಅಪರಾಧ ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ " 
- ಪಳನಿ ದೇವಸ್ಥಾನದ ಸುತ್ತ ಇರುವ ಮುಸ್ಲಿಮರ ಅಂಗಡಿಗಳನ್ನು ತೆಗೆಸಲು ಕೋರಿದ ಅರ್ಜಿ ತಿರಸ್ಕರಿಸಿದ  ತೀರ್ಪಿನ ಸಾಲು 

 

ಚೆನ್ನೈ,ಮಾ.26: ತಮಿಳುನಾಡಿನ ಪ್ರಸಿದ್ಧ ಯಾತ್ರಾಸ್ಥಳ ಪಳನಿ ದೇವಾಲಯದ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಇಸ್ಲಾಂ ಮತ್ತಿತರ ಧರ್ಮಗಳಿಗೆ ಸೇರಿದವರ ಅಂಗಡಿಗಳನ್ನು ತೆರವುಗೊಳಿಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ಶನಿವಾರ ತಿರಸ್ಕರಿಸಿದೆ. ಮುಸ್ಲಿಂ ಮತ್ತಿತರ ಧರ್ಮಗಳಿಗೆ ಸೇರಿದವರು ಗೋಮಾಂಸ ಸೇವಿಸುತ್ತಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಮುನ್ನೇತ್ರ ಕಳಗಂ ಅಧ್ಯಕ್ಷ ಗೋಪಿನಾಥ್ ಎಂಬವರು ಪಿಐಎಲ್ ಸಲ್ಲಿಸಿದ್ದರು.ಹಲವು ದಿನಗಳ ಉಪವಾಸ ವ್ರತ ಕೈಗೊಂಡ ಬಳಿಕ ಅನೇಕ ಭಕ್ತರು ಪಳನಿ ದೇಗುಲವಿರುವ ಗಿರಿವಾಳಪಾದೈಗೆ ಆಗಮಿಸುತ್ತಾರೆ. ಆದರೆ ಸುತ್ತಮುತ್ತಲಿರುವ ಅಂಗಡಿಗಳು ಇಸ್ಲಾಂ ಮತ್ತಿತರ ಧರ್ಮೀಯರಿಗೆ ಸೇರಿದ್ದಾಗಿದ್ದು, ಅವರು ಪಳನಿಬೆಟ್ಟದ ಮೆಟ್ಟಲುಗಳಲ್ಲಿ ಕುಳಿತು ಬೀಫ್ ಮತ್ತಿತರ ಮಾಂಸಹಾರಿ ತಿನಸುಗಳನ್ನು ಸೇವಿಸುತ್ತಿರುತ್ತಾರೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆಯೆಂದು ಅವರು ಆಪಾದಿಸಿದ್ದರು. ಇದನ್ನು ತಡೆಗಟ್ಟದಿದ್ದಲ್ಲಿ ಕೋಮುಸೌಹಾರ್ದತೆ ಹದಗೆಡುವ ಸಾಧ್ಯತೆಯಿದೆಯೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು. ತಮಿಳುನಾಡಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಅವರು ಪ್ರತಿವಾದಿಯಾಗಿ ಮಾಡಿದ್ದರು. ಇಂದು ಅರ್ಜಿಯ ಆಲಿಕೆ ನಡೆಸಿದ ನ್ಯಾಯಾಲಯವು ಗಿರಿವಾಳಪಾದೈಗೆ ತಾಗಿಕೊಂಡಿರುವ ದೇಗುಲದ ಜಮೀನಿನಲ್ಲಿ ಇಸ್ಲಾಂ ಮತ್ತಿತರ ಧರ್ಮಗಳವರು ಅಂಗಡಿಗಳನ್ನು ಹೊಂದಿರಬಾರದೆಂಬ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲವೆಂದು ಅಭಿಪ್ರಾಯಿಸಿತು. ಅಂಗಡಿಗಳನ್ನು ಹೊಂದಿರುವವವರು ಪಳನಿ ದೇಗುಲವಿರುವ ಬೆಟ್ಟದ ಮೆಟ್ಟಲುಗಳಲ್ಲಿ ಕುಳಿತು ಗೋಮಾಂಸ ಮತ್ತಿತರ ಮಾಂಸಹಾರಗಳನ್ನು ಸೇವಿಸುತ್ತಿದ್ದಾರೆಂಬ ಅರ್ಜಿದಾರರ ವಾದಕ್ಕೆ ಯಾವುದೇ ಪುರಾವೆಯಿಲ್ಲವೆಂದು ನ್ಯಾಯಮೂರ್ತಿಗಳಾದ ಎಸ್.ಮಣಿಕುಮಾರ್ ಹಾಗೂ ಸಿ.ಟಿ.ಸೆಲ್ವನ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.ಮಾಂಸಹಾರ ಸೇವನೆಯು ಅಪರಾಧವೆಂದು ಭಾರತೀಯ ದಂಡಸಂಹಿತೆಯಲ್ಲಿ ಎಲ್ಲೂ ಹೇಳಿಲ್ಲ. ಯಾವುದೇ ಧರ್ಮದವರ ಆಹಾರಸೇವನಾ ಹವ್ಯಾಸಗಳನ್ನು ಆಕ್ಷೇಪಿಸುವ ಯಾವುದೇ ಕಾನೂನು ನಮ್ಮಲ್ಲಿಲ್ಲ. ಗೋಮಾಂಸ ಸೇವನೆ ಅಪರಾಧವೆಂಬ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News