ಕನ್ನಡದ ಜತೆಗೆ ಇಂಗ್ಲಿಷ್‌ಗೂ ಪ್ರಾಶಸ್ತ್ಯ: ನಕ್ಸಲ್‌ ಪೀಡಿತ ಮಾಳದಲ್ಲಿ ಹೊಸ ಪ್ರಯತ್ನ

Update: 2016-03-30 07:52 GMT

ಕಾರ್ಕಳ, ಮಾ. 30 : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪ್ರಕೃತಿ ರಮಣೀಯವಾದ ಪ್ರದೇಶವೇ  ನಕ್ಸಲ್‌ ಪೀಡಿತ ಮಾಳ.

ತೀರಾ ಗ್ರಾಮೀಣ ಪ್ರದೇಶವಾದರೂ, ಸಾಧನೆಯ ಮೂಲಕ ದೇಶದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಆಧುನಿಕತೆಯ ಬದಲಾವಣೆಗಳಿಗೆ ಒಗ್ಗಿಕೊಂಡು ಸಾಗಿದ ಈ ಪ್ರದೇಶ ಪ್ರಸ್ತುತ ಎಲ್ಲರ ಗಮನಸೆಳೆದಿದೆ.

ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿದ ಪ್ರಾಥಮಿಕ ಶಾಲೆ ಹೆಸರು ಎಲ್ಲರಿಗೂ ಚಿರಪರಿಚಿತ. ಕನ್ನಡ ಮಾಧ್ಯಮದ ಜತೆ ಇಂಗ್ಲಿಷ್‌ಗೂ ಸಮಾನ ಅವಕಾಶ ನೀಡಬೇಕೆನ್ನುವ ಉದ್ದೇಶದಿಂದ ನಕ್ಸಲ್ ಪೀಡಿತ ಮಾಳ ಗ್ರಾಮದ ಗುರುಕುಲ ಅನುದಾನಿತ ಶಾಲೆಯಲ್ಲಿ ಹೊಸ ಪ್ರಯೋಗ ಆರಂಭಗೊಂಡಿದ್ದಲ್ಲದೆ, ಯಶಸ್ಸನ್ನೇ ಸಾಧಿಸಿಕೊಂಡಿದೆ.

ಕನ್ನಡದ ಜತೆ ಜತೆಯಾಗಿ ಇಂಗ್ಲೀಷನ್ನು ಕೂಡಾ ಇಲ್ಲಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸ್ಪರ್ಧಾತ್ಮಕ ದಿನಗಳಲ್ಲಿ ನಾವೇನು ಕಡಿಮೆ ಇಲ್ಲ ಎನ್ನುವ ಹಂತದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬೆಳೆಯುತ್ತಿದ್ದಾರೆ. ಈ ಹೊಸ ಪ್ರಯೋಗದಲ್ಲಿ ಯಶಸ್ಸು ಕೂಡಾ ಕಂಡಿದ್ದಾರೆ.

ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸಬೇಕಾಗಿದೆ. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದು, ಅದನ್ನು ಸರಿದೂಗಿಸಬೇಕಾದರೆ ವಿನೂತನ ಪ್ರಯೋಗಳು ಅನಿವಾರ್ಯ. ಅದಕ್ಕಾಗಿ ಅಲ್ಲಿನ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕರು ಸೇರಿಕೊಂಡು ಶಾಲಾಭಿಮಾನಿಗಳ ಸಹಕಾರದಿಂದ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯ ಜತೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸಿ, ಶಿಕ್ಷಣ ನೀಡುತ್ತಿದ್ದಾರೆ.

ಪ್ರಸ್ತುತ ಈ ಶಾಲೆಯಲ್ಲಿ ಏಳು ತರಗತಿಗಳಿದ್ದು, ಸರಕಾರದಿಂದ ಇಬ್ಬರು ಹಾಗೂ ಐದು ಜನ ಗೌರವ ಶಿಕ್ಷಕರಿದ್ದಾರೆ. 127 ವಿದ್ಯಾರ್ಥಿಗಳಿದ್ದಾರೆ. ಮಾಳ ಎಂಬುವುದು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಶಿಕ್ಷಣ ಸಿಗಬೇಕೆಂಬ ಪ್ರಯತ್ನ ನಡೆದಿದೆ. ಶಾಲಾಭಿವೃದ್ದಿ ಸಮಿತಿ, ಮಕ್ಕಳ ಪೋಷಕರು ಹಾಗೂ ಶಿಕ್ಷಕರ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ ಎನ್ನುತ್ತಾರೆ ರಾಷ್ಟ್ರಪ್ರಶಸ್ತಿ ವಿಜೇತೆ ಮುಖ್ಯ ಶಿಕ್ಷಕಿ ವಸಂತಿ ಜೋಷಿ

ರಾಷ್ಟ್ರಪ್ರಶಸ್ತಿ ಗರಿ :

ತೀರಾ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕಿ ವಸಂತಿ ಜೋಷಿ ಅವರಿಗೆ ಕಳೆದ 2015-16ನೇ ಸಾಲಿನ ರಾಷ್ಟ್ರಪ್ರಶಸ್ತಿ ದೊರೆತಿದ್ದು, ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸುವ ಮೂಲಕ ಗ್ರಾಮೀಣ ಮಟ್ಟದ ಈ ಪ್ರಾಥಮಿಕ ಶಾಲೆಯು ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.

ಇಲ್ಲಿನ ಸೌಲಭ್ಯಗಳು :

*ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ

* ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ಶಿಕ್ಷಕಿ.

* ಉಚಿತ ಪಠ್ಯಪುಸ್ತಕ.

* ದಾನಿಗಳ ನೆರವಿನಿಂದ ಬ್ಯಾಗ್ ವಿತರಣೆ.

* ಸ್ಮಾರ್ಟ್ ಬೋರ್ಡ್ (ಡಿಜೆ ಮೂಲಕ ಪ್ರಾತ್ಯಕ್ಷಿಕೆ)

* ಕಂಪ್ಯೂಟರ್ ಶಿಕ್ಷಣ

* ಚಿಣ್ಣರ ಸಂತರ್ಪಣೆ ಉಡುಪಿಯಿಂದ ಬಿಸಿಯೂಟ, ಸಮವಸ್ತ್ರ.

* ದತ್ತಿನಿಧಿ ಮೂಲಕ ವಿದ್ಯಾರ್ಥಿವೇತನ (ಪ್ರತಿಭಾನ್ವಿತ ಹಾಗೂ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ).

* ಮಾಳ ಚೌಕಿ, ಪೇರಡ್ಕ, ಮೂಳೂರು, ಹೇರಿಂಜೆ ಕಡೆಗೆ ಬರುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ.

* ಸಂಗೀತ, ಯಕ್ಷಗಾನ ತರಬೇತಿ.

* ಸಂಪನ್ಮೂಲ ವ್ಯಕ್ತಿಗಳಿಂದ ಕರಕುಶಲ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿ.

* ಭೌತಿಕ ಸಲಕರಣೆ (ಮೈಕ್ ಸೆಟ್, ಬ್ಯಾಂಡ್ ಸೆಟ್).

* ಯೋಗ ಹಾಗೂ ಕ್ರೀಡಾ ತರಬೇತಿ.

ಸಾಧನೆಗಳೇನು ?:

* 2000 ಸಾಲಿನಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗರಿಷ್ಟ ಬಹುಮಾನ (ಪ್ರಸಕ್ತ ಸಾಲಿನಲ್ಲಿ ಪ್ರಥಮ, ದ್ವಿತೀಯ ಸೇರಿದಂತೆ 25 ಬಹುಮಾನ)

* 2008ರಲ್ಲಿ ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಬಹುಮಾನ.

* ಉಡುಪಿ ಚಿಣ್ಣರ ಮಾಸದಲ್ಲಿ ಸ್ಪರ್ಧಿಸಿ ಬಹುಮಾನ.

* 2004ರಲ್ಲಿ ಬೇಲಾಡಿ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಉತ್ತಮ ಅನುದಾನಿತ ಶಾಲೆ ಎಂಬ ಪ್ರಶಸ್ತಿ.

* ಮುಖ್ಯ ಶಿಕ್ಷಕಿ ವಸಂತಿ ಜೋಷಿ ಅವರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ.

* ಬೇಸಿಗೆ ರಜೆಯಲ್ಲಿ ಗ್ರಾಮದಲ್ಲಿರುವ ಮನೆಗಳಿಗೆ ಶಿಕ್ಷಕರೊಂದಿಗೆ ಭೇಟಿ ನೀಡಲಾಗುತ್ತಿದೆ. ಹೆತ್ತವರನ್ನು ಮನವರಿಕೆ ಮಾಡಿ, ಶಾಲೆಯಲ್ಲಿರುವ ಸವಲತ್ತುಗಳ ಬಗ್ಗೆ ಅವರಿಗೆ ತಿಳಿ ಹೇಳಿ ನಮ್ಮ ಶಾಲೆಗೆ ಬರುವಂತೆ ಪ್ರೇರೇಪಿಸುತ್ತೇವೆ. ಆಂಗ್ಲ ಮಾಧ್ಯಮ ಶಾಲೆಗೆ ಸರಿಸಾಟಿಯಾಗಿ ಎಲ್ಲಾ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದ್ದೇವೆ ಎಂದು  ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಗಜಾನನ ಮರಾಠೆ ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಶಿಕ್ಷಕಿ ಪ್ರಶಸ್ತಿ ಪಡೆದ ವಸಂತಿ ಜೋಷಿ

Writer - ಮುಹಮ್ಮದ್ ಶರೀಫ್ ಕಾರ್ಕಳ

contributor

Editor - ಮುಹಮ್ಮದ್ ಶರೀಫ್ ಕಾರ್ಕಳ

contributor

Similar News