ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಹಾನಿಗೊಂಡಿದೆಯೇ? ಗಾಬರಿಯಾಗದೇ ಹೀಗೆ ಮಾಡಿ

Update: 2016-07-27 18:31 GMT

ವಿಶ್ವದ ಮೊಟ್ಟಮೊದಲ ಸ್ಕ್ರೀನ್ ಒಡೆಯದ ಸ್ಮಾರ್ಟ್ ಫೋನ್ ಬಂದಿದೆ. ಆದರೆ ಅದನ್ನು ಎಲ್ಲರೂ ಹೊಂದಲು ಸಾಧ್ಯವೇ? ಸಹಜವಾಗಿಯೇ ಕೈಯಿಂದ ಬಿದ್ದರೆ ಮುಗಿಯಿತು. ಮುಂದಿನ ಒಂದು ಕ್ಷಣದಲ್ಲಿ ಏನಾಗುತ್ತದೆ ಎನ್ನುವುದು ನಮಗೆ ಚೆನ್ನಾಗಿ ಗೊತ್ತು. ಬಿದ್ದ ಫೋನ್ ಎತ್ತಿಕೊಂಡು ನಿಮಗೆ ನೀವೇ ಸಮಾಧಾನ ಹೇಳಿಕೊಳ್ಳಲು ಮುಂದಾಗುತ್ತೀರಿ. ಬಹುಶಃ ಮುಖ್ಯ ಸ್ಕ್ರೀನ್‌ಗೆ ಏನೂ ಆಗಿರಲಾರದು ಎಂದು ಸಂತೈಸಿಕೊಳ್ಳುತ್ತೀರಿ. ಮತ್ತೊಂದೆಡೆ ಹೊಸ ಸ್ಕ್ರೀನ್‌ಗೆ ಎಷ್ಟು ವೆಚ್ಚವಾಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿರುತ್ತೀರಿ. ಸ್ಕ್ರೀನ್ ಒಡೆದಿದೆ ಎಂದು ಖಚಿತವಾಗಿದ್ದರೆ ಹೀಗೆ ಮಾಡಿ.

1. ಶಾಂತಚಿತ್ತದಿಂದ ಎಚ್ಚರಿಕೆಯಿಂದ ಇರಿ

ಆರಂಭದಲ್ಲಿ ಸಣ್ಣ ಸೀಳು ಜೇಡನ ಬಲೆಯ ರೂಪದಲ್ಲಿ ಕಾಣಿಸಿಕೊಂಡು ಡಿಸ್‌ಪ್ಲೇ ವ್ಯತ್ಯಯವಾದ್ದನ್ನು ಕಾಣುತ್ತೀರಿ. ಇದನ್ನು ನೋಡಿದ ತಕ್ಷಣ ಎಚ್ಚರಿಕೆಯಿಂದಿದ್ದು ಮೇಲ್ಮೈಯನ್ನು ಬೆರಳಿನಿಂದ ಸವರಬೇಡಿ. ನಿಮ್ಮ ಬೆರಳಿಗೆ ಗಾಯವಾಗಬಹುದು. ಕರ್ಚೀಫ್ ಅಥವಾ ಟಿಶ್ಯೂ ಪೇಪರ್‌ನಿಂದ ಸುತ್ತಿಡಿ. ಕರೆಗಳನ್ನು ಸ್ವೀಕರಿಸುವಾಗಲೂ ಎಚ್ಚರಿಕೆಯಿಂದ ಇರಿ. ಕರೆ ಸ್ವೀಕರಿಸುವುದು ಅನಿವಾರ್ಯವಾಗಿದ್ದರೆ ಈಯರ್‌ಫೋನ್ ಬಳಸಿ.

2. ಹಾನಿ ಪ್ರಮಾಣ ಅಂದಾಜಿಸಿ


ಸಣ್ಣ ಬಿರುಕು ಕೂಡಾ ನಿಮ್ಮ ಸ್ಮಾರ್ಟ್ ಫೋನನ್ನು ನಿಷ್ಪ್ರಯೋಜಕಗೊಳಿಸಬಹುದು. ಎಲ್ಲ ಸಾಧನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕ್ಯಾಮೆರಾ, ಹೋಮ್ ಬಟನ್, ಸ್ಪರ್ಶ ಸ್ಪಂದನೆ ಹೀಗೆ.. ಸ್ಮಾರ್ಟ್‌ಫೋನ್‌ಗೆ ಗಾಜಿನ ಸುರಕ್ಷೆ ಇದ್ದರೆ ಅದನ್ನು ತೆಗೆದು, ಹೆಚ್ಚಿನ ಹಾನಿಯಾಗಿದೆಯೇ ಎಂದು ಪರಿಶೀಲಿಸಿ.

3. ಅಳವಡಿಸುವಿಕೆ

 


ದುರಸ್ತಿ ಕೌಶಲ ನಿಮಗಿದ್ದಲ್ಲಿ, ಮನೆಯಲ್ಲೇ ಹೊಸ ಡಿಸ್‌ಪ್ಲೇ ಅಳವಡಿಸಿ. ನಿಮ್ಮ ಸ್ಮಾರ್ಟ್ ಫೋನ್ ಮಾಡೆಲ್‌ಗೆ ಅಗುನುಣವಾದ ಸ್ಕ್ರೀನ್ ನೀವು ಖರೀದಿಸಬೇಕು. ಸೂಚನೆಗಳಿಗೆ ಅನುಗುಣವಾಗಿ ಡಿಸ್‌ಪ್ಲೇ ಬದಲಿಸಿ. ಇದು ರಿಪೇರಿಯವರ ಬಳಿಗೆ ಒಯ್ಯುವುದಕ್ಕಿಂತ ಅರ್ಧ ವೆಚ್ಚದಲ್ಲಿ ಆಗುತ್ತದೆ. ಆನ್‌ಲೈನ್ ಗೈಡ್ ನೆರವನ್ನೂ ಪಡೆಯಬಹುದು.

4. ದುರಸ್ತಿ


ಬಹುತೇಕ ಮಾರಾಟಗಾರರು ಹೊಸ ಫೋನ್‌ಗಳ ಮೇಲೆ ವಿಮಾ ಸುರಕ್ಷೆಯ ಭರವಸೆ ನೀಡುತ್ತಾರೆ. ನಿಮ್ಮ ಫೋನ್ ವಿಮಾಸುರಕ್ಷೆಗೆ ಒಳಪಟ್ಟಿದ್ದರೆ ನಿಮ್ಮ ಖರ್ಚು ತಪ್ಪುತ್ತದೆ. ಇಲ್ಲದಿದ್ದರೆ ಅಧಿಕೃತ ದುರಸ್ತಿಯವರಲ್ಲೇ ರಿಪೇರಿ ಮಾಡಿಸಿ.

5. ವಿನಿಮಯ ಅಥವಾ ಮೇಲ್ದರ್ಜೆಗೆ

ನಿಮ್ಮ ಫೋನ್ ತೀರಾ ಹಳೆಯದಾಗಿದ್ದರೆ ತಲೆ ಕೆಡಿಸಿಕೊಳ್ಳದೇ ವಿನಿಮಯ ಮಾಡಿಕೊಳ್ಳಿ ಅಥವಾ ಮೇಲ್ದರ್ಜೆಯದ್ದನ್ನು ಖರೀದಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News