ಶೂದ್ರ ಕಣ್ಣಲ್ಲಿ ಅನಂತಮೂರ್ತಿ

Update: 2016-04-08 18:00 GMT

ಶೂದ್ರ ಶ್ರೀನಿವಾಸ್ ಕನ್ನಡ ಸಾಹಿತ್ಯಲೋಕದಲ್ಲಿ ಅನನ್ಯ ಸ್ಥಾನವನ್ನು ಪಡೆದವರು. ಲಂಕೇಶ್, ಶರ್ಮಾ, ಅನಂತಮೂರ್ತಿ ಕಾಲಘಟ್ಟದ ಕೊಂಡಿ ಇವರು. ಅವರೆಲ್ಲರನ್ನೂ ತನ್ನೊಳಗಿಟ್ಟುಕೊಂಡು ಬರೆದವರು. ಅವರೆಲ್ಲರೊಳಗಿದ್ದೂ, ಅವರಿಂದ ತುಸು ದೂರದಲ್ಲಿ ನಿಂತು ಅವರನ್ನು ಗ್ರಹಿಸಲು ಪ್ರಯತ್ನಿಸುತ್ತಾ ಬಂದವರು ಶೂದ್ರ ಶ್ರೀನಿವಾಸ್. ಅವರ ಶೂದ್ರ ಪತ್ರಿಕೆಯೂ ಕನ್ನಡಕ್ಕೆ ವಿಭಿನ್ನವಾದ, ವಿಶಿಷ್ಟವಾದ ಗದ್ಯವೊಂದನ್ನು ಕೊಟ್ಟಿತು. ಇಂತಹ ಶೂದ್ರ ಶ್ರೀನಿವಾಸ್ ಅನಂತಮೂರ್ತಿ, ಲಂಕೇಶ್ ಮೊದಲಾದವರ ಬಗ್ಗೆ ಬರೆದರೆ ಹೇಗಿರುತ್ತದೆ? ಆ ಪ್ರಯತ್ನ ಖಂಡಿತವಾಗಿಯೂ ಹೊಸತನದಿಂದ ಕೂಡಿರುತ್ತದೆ ಎನ್ನುವುದಕ್ಕೆ ಅವರ ಹೊಸ ಕೃತಿ ‘ಯು. ಆರ್. ಎಂಬ ನೀವು’’ ಸಾಕ್ಷಿ. ಅನಂತಮೂರ್ತಿಯನ್ನು ಒಳಗಿನ ಕಣ್ಣಿನಿಂದ ನೋಡಿದ ಕೃತಿ ಇದು. ಅವರೇ ಹೇಳುವಂತೆ ‘ಲಾವ್‌ತ್ಸುವಿನ ದಾವ್ ದ ಜಿಂಗ್ ಕನ್ನಡಕದಲ್ಲಿ ಅನಂತಮೂರ್ತಿಯವರನ್ನು ನೋಡುವ ಪ್ರಯತ್ನ. ಬಹುಶಃ ಅನಂತಮೂರ್ತಿಯವರನ್ನು ಒಂದು ರೀತಿಯ ಲೌಕಿಕವಾಗಿದ್ದೂ ಅಲೌಕಿಕವಾಗಿರುವ ಕಣ್ಣಿನಲ್ಲಿ ಶೂದ್ರ ಅವರು ನೋಡಿದ್ದಾರೆ. ಒಂದು ರೀತಿಯಲ್ಲಿ ಇದೊಂದು ಸಾಹಿತ್ಯಕ ದಾಖಲೀಕರಣವು ಹೌದು. ಇದೇ ಸಂದರ್ಭದಲ್ಲಿ ಅನಂತಮೂರ್ತಿಯ ಕುರಿತಂತೆ ಕಥನ ಗುಣವುಳ್ಳ ಗದ್ಯವೂ ಹೌದು. ಇವೆರಡನ್ನು ಪದ್ಯದ ಲಯದಲ್ಲಿ ಕಟ್ಟಿಕೊಟ್ಟಿದ್ದಾರೆ ಶೂದ್ರ. ಆದುದರಿಂದಲೇ ಇದೊಂದು ಪುಟ್ಟ ಕೃತಿಯಾದರೂ ನಮ್ಮಾಳಗೆ ಬೆಳೆಯುತ್ತಾ ಹೋಗುವ ಕೃತಿ. ಇಲ್ಲಿ ಅನಂತ ಮೂರ್ತಿಯ ಮೂಲಕ ನಾವು ಸಾಹಿತ್ಯದ ವಿಸ್ಮಯವನ್ನು ನೋಡಬಹುದು.
ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಸುಂದರವಾಗಿ ಹೊರತಂದಿದೆ. ಮುಖಬೆಲೆ 80 ರೂ. ಆಸಕ್ತರು 9341234456ನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News