ಸ್ಮಾರ್ಟ್‌ಫೋನ್; ಕೆಲಸಕ್ಕೆ ಸಹಕಾರಿ, ಆರೋಗ್ಯಕ್ಕೆ ಮಾರಿ

Update: 2016-04-09 09:58 GMT

ತೈಪೆ: ಸ್ಮಾರ್ಟ್ ಫೋನ್ ನಮಗೆ ನಿರಂತರ ಇಂಟರ್‌ನೆಟ್ ಲಭ್ಯತೆಗೆ ಕಾರಣವಾಗಿರಬಹುದು. ಆದರೆ ಇದನ್ನೇ ಅತಿಯಾಗಿ ಅವಲಂಬಿಸಿದ ಬಹಳಷ್ಟು ಮಂದಿಗೆ ಪ್ರಯಾಣದ ವೇಳೆ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡರೆ ಅದು ಕಿರಿ ಕಿರಿ ಹಾಗೂ ಉದ್ವಿಗ್ನತೆಗೂ ಕಾರಣವಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಇಂಟರ್‌ನೆಟ್‌ನ ಅತಿಯಾದ ಅವಲಂಬನೆ, ವೆಬ್ ಅವಲಂಬಿಸುವ ಆತಂಕ ಎಂಬ ವಿಚಿತ್ರ ಕಾಯಿಲೆಗೆ ಕಾರಣವಾಗುತ್ತದೆ.

ಯುವಕರು ಹಾಗೂ ಸುಶಿಕ್ಷಿತರು ಅಥವಾ ಹೆಚ್ಚು ಮಾಹಿತಿ ಸಾಕ್ಷರರು ಸ್ಮಾರ್ಟ್ ಫೋನ್ ವೆಬ್ ಅವಲಂಬನೆ ಉದ್ವಿಗ್ನತೆಯನ್ನು ಅತಿಯಾಗಿ ಹೊಂದಿರುತ್ತಾರೆ. ಸಾಕಷ್ಟು ವೇಗ ಅಥವಾ ವಿಶ್ವಾಸಾರ್ಹ ಇಂಟರ್‌ನೆಟ್ ಲಭ್ಯತೆ ಇಲ್ಲದಿದ್ದರೆ ಈ ಉದ್ವಿಗ್ನತೆ ಹೆಚ್ಚಬಹುದು ಎನ್ನುತ್ತಾರೆ ತೈವಾನ್‌ನ ತಿಯಾಚಂಗ್ ನ್ಯಾಷನಲ್ ಚಿನ್ ಯಿ ತಾಂತ್ರಿಕ ವಿಶ್ವವಿದ್ಯಾನಿಲಯದ ಹ್ಯೂ ಜೆನ್ ಯಾಂಗ್.

ಈ ಅಂಶವನ್ನು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ನಿಯತಕಾಲಿಕದಲ್ಲಿ ಬಹಿರಂಗಪಡಿಸಲಾಗಿದೆ. ಇದು ತಂತ್ರಜ್ಞಾನ ಕುರಿತ ಮನಃಶಾಸ್ತ್ರದ ಜತೆ ನೇರ ಸಂಬಂಧವನ್ನು ಹೊಂದಿದೆ. ಇದನ್ನು ಸಂಬಂಧ ಸಿದ್ಧಾಂತದ ಜತೆಗೂ ಸಂಪರ್ಕ ಕಲ್ಪಿಸಲಾಗಿದೆ. ಇದರ ಪ್ರಕಾರ, ಕೆಲ ವ್ಯಕ್ತಿಗಳು ಇತರರ ಜತೆಗೆ ಇದ್ದಾಗ ಸುರಕ್ಷಿತ ಎಂಬ ಭಾವನೆ ಹೊಂದಿದ್ದು, ಒಬ್ಬಂಟಿಯಾಗಿದ್ದಾಗ ಆತಂಕಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ ದೊಡ್ಡ ಗುಂಪಿನಲ್ಲಿ ಪೋಷಕರು ಮತ್ತು ಮಕ್ಕಳು ಪರಸ್ಪರ ಬೇರ್ಪಟ್ಟಾಗ ಅನಗತ್ಯ ಆತಂಕ ಇಬ್ಬರಲ್ಲೂ ಸೃಷ್ಟಿಯಾಗುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇದೇ ಸಂಬಂಧ ಸಿದ್ಧಾಂತ ಜನ ಹಾಗೂ ಸ್ಮಾರ್ಟ್ ಫೋನ್ ಸಂಬಂಧಕ್ಕೂ ಅನ್ವಯಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News