ಚಾಡಿಕೋರರಿಗೆ ದಂಡನೆ ಬೇಡ

Update: 2016-04-10 11:19 GMT

ಮಗುವಿನ ಒಳಗಿರುವ ಅಸಹನೆ ಮತ್ತು ನಕಾರಾತ್ಮಕವಾದ ಅಭಿಪ್ರಾಯವೇ ಕುದಿಕುದಿಯುತ್ತಾ ಚಾಡಿಯ ರೂಪದಲ್ಲಿ ನಮ್ಮ ಮುಂದೆ ಬಂದೆರಗಿರುತ್ತದೆ. ಅಂತಹ ಸಂದರ್ಭದಲ್ಲಿ ಬಹಳ ಸೂಕ್ಷ್ಮತೆಯಿಂದ ಕೆಲಸ ಮಾಡಬೇಕಾದ ಅಗತ್ಯ ಮತ್ತು ಕರ್ತವ್ಯ ಹಿರಿಯರ ಪಾಲಿಗಿದೆ.

ಚಾಡಿಕೋರ ಚಪ್ಪಲ್ ಚೋರ ಕುಪ್ಪೆ ತೊಟ್ಟಿಗಲಂಕಾರ ಎಂದು ಚಾಡಿ ಹೇಳುವವರನ್ನು ನಾವು ಹುಡುಗರಾಗಿದ್ದಾಗ ಬಲು ಅಪಮಾನಿಸು ತ್ತಿದ್ದೆವು. ನಾನು ಓದುತ್ತಿದ್ದ ಶಾಲೆಯಲ್ಲಿ ಚಾಡಿ ಹೇಳುವ ಹುಡುಗರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡುತ್ತಿದ್ದರು. ಅಂತಹ ಮಕ್ಕಳನ್ನು ದ್ರೋಹಿಗಳು, ದೊಡ್ಡ ವರಿಗೆ ಬಕೆಟ್ ಹಿಡಿಯುವವರು ಎಂದು ಪರಿಗಣಿಸುತ್ತಿದ್ದೆವು. ಅವರನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರನ್ನು ನಮ್ಮ ಸಾಮೂಹಿಕ ಮೋಜು ಮಸ್ತಿಗಳಲ್ಲಿ ಭಾಗವಹಿಸಲು ಅವಕಾಶ ಕೊಡುತ್ತಿರಲಿಲ್ಲ. ಅವರು ಯಾವ ವಿಷಯಕ್ಕೆ ಚಾಡಿ ಹೇಳುತ್ತಿದ್ದರೋ ಅದನ್ನು ಬೇಕೆಂದೇ ಹೆಚ್ಚು ಮಾಡುತ್ತಿದ್ದರು. ಈಗ ಸುಮ್ಮನೆ ಹೋಗಿ ಹೇಳಿದವರು, ಮುಂದೆ ಅಳುತ್ತಾ ಓಡುತ್ತಾ ಹೋಗಿ ಚಾಡಿ ಹೇಳಬೇಕು; ಅದು ಹಟ, ಅದು ಗುರಿ. ಸಾಧ್ಯವಾದಷ್ಟೂ ಅವರಿಗೆ ಕೀಟಲೆ ಮಾಡುತ್ತಿದ್ದರು. ಅವರನ್ನು ಚುಡಾಯಿಸುತ್ತಿದ್ದರು. ಒಟ್ಟಾರೆ ಚಾಡಿಕೋರರಿಗೆ ಮಕ್ಕಳ ರಾಜ್ಯದಿಂದ ಬಹಿಷ್ಕಾರ ತಪ್ಪಿದ್ದಲ್ಲ. ಅದು ಮಕ್ಕಳ ಪ್ರತಿಕ್ರಿಯೆಯ ಕಥೆಯಾಯಿತು. ಆದರೆ ಚಾಡಿಕೋರ ಮಕ್ಕಳೊಂದಿಗೆ ವರ್ತಿಸಬೇಕಾಗಿರುವುದು ಹೇಗೆ?

ಚಾಡಿ ಮತ್ತು ಛಡಿ

ಮಕ್ಕಳು ಚಾಡಿ ಹೇಳಿದಾಗ ಪೋಷಕರು ಮತ್ತು ಶಿಕ್ಷಕರು ಸಾಮಾನ್ಯವಾಗಿ ಎರಡು ಅತಿರೇಕಗಳಿಗೆ ಮೊರೆ ಹೋಗುತ್ತಾರೆ. ಒಂದು ಆ ಚಾಡಿ ಮಾತನ್ನು ಕೇಳಿ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾರೆ. ಅಥವಾ ಈ ರೀತಿ ಚಾಡಿ ಹೇಳಬಾರದು ಎಂದು ಬೈದೋ ಹೊಡೆದೋ ಕಳುಹಿಸಿಬಿಡುತ್ತಾರೆ.

ಚಾಡಿ ಮಾತನ್ನು ಕೇಳುವುದು ಎಷ್ಟು ತಪ್ಪೋ, ಚಾಡಿ ಹೇಳಿದಾಗ ಮಕ್ಕಳನ್ನು ದಂಡಿಸುವುದೂ ತಪ್ಪೇ. ಚಾಡಿ ಹೇಳಿದಾಗ ಶಿಕ್ಷೆ ನೀಡಬಾರದು. ಛಡಿಯಿಂದ ಬೆದರಿಸಿ ಚಾಡಿಯನ್ನು ಹೇಳುವುದನ್ನು ನೀವು ನಿಲ್ಲಿಸಬಹುದು. ಆದರೆ ಅವರ ಮನಸ್ಸಿನಲ್ಲಿ ಉಂಟಾಗಿರುವ ಚಾಡಿಯ ಕಾರಣವನ್ನು ತೊಡೆದು ಹಾಕಲು ಸಾಧ್ಯವಾಗುವುದಿಲ್ಲ. ಶಿಕ್ಷೆಗೆ ಹೆದರಿ ಕಾನೂನನ್ನು ಪಾಲಿಸುವಂತಹ ವ್ಯವಸ್ಥೆ ಇರುವ ನಮ್ಮಲ್ಲಿ ಎಲ್ಲಕ್ಕೂ ಶಿಕ್ಷೆ, ದಂಡನೆಯೇ ಪರಿಹಾರವೆಂದು ಮಕ್ಕಳಿಗೂ ಅದರಂತೆಯೇ ನಡೆದುಕೊಳ್ಳುವ ಹಿರಿಯರಿದ್ದಾರೆ. ಶಿಕ್ಷೆಯ ಭಯದಿಂದ ಮನಪರಿವರ್ತನೆ ಎಂದಿಗೂ ಸಾಧ್ಯವಿಲ್ಲ. ಆ ಯಾವುದೋ ಒಂದು ಕೃತ್ಯವನ್ನು ನೇರವಾಗಿ ಮಾಡದೇ ಇರಬಹುದು ಹೊರತು, ಅದನ್ನು ಮಾಡಲು ಹಾತೊರೆಯುತ್ತಿದ್ದು ಶಿಕ್ಷೆಗೆ ಸಿಕ್ಕಿ ಹಾಕಿಕೊಳ್ಳದಂತೆ ಮಾಡುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅದೇ ಕೆಲಸ ಇಲ್ಲೂ ಆಗುವುದು. ಯಾವುದೋ ಬೇರೊಂದು ಮಗುವಿನ ಬಗ್ಗೆ, ಶಾಲೆಯ ಬಗ್ಗೆ, ಶಿಕ್ಷಕರ ಬಗ್ಗೆ, ಮನೆಯ ಬಗ್ಗೆ, ಪೋಷಕರ ಬಗ್ಗೆ ಮಗು ಚಾಡಿ ಹೇಳಿದಾಗ ಚಾಡಿ ಹೇಳುವುದು ತಪ್ಪು, ಹಾಗೆಲ್ಲಾ ಹೇಳಬಾರದು ಎಂದು ಬೈಯುವುದೋ ಅಥವಾ ಸಾತ್ವಿಕವಾಗಿ ಬುದ್ಧಿ ಹೇಳುವುದೋ ಮಾಡಬಾರದು. ಮಗುವಿನ ಒಳಗಿರುವ ಅಸಹನೆ ಮತ್ತು ನಕಾರಾತ್ಮಕವಾದ ಅಭಿಪ್ರಾಯವೇ ಕುದಿಕುದಿಯುತ್ತಾ ಚಾಡಿಯ ರೂಪದಲ್ಲಿ ನಮ್ಮ ಮುಂದೆ ಬಂದೆರಗಿರುತ್ತದೆ. ಅಂತಹ ಸಂದರ್ಭದಲ್ಲಿ ಬಹಳ ಸೂಕ್ಷ್ಮತೆಯಿಂದ ಕೆಲಸ ಮಾಡಬೇಕಾದ ಅಗತ್ಯ ಮತ್ತು ಕರ್ತವ್ಯ ಹಿರಿಯರ ಪಾಲಿಗಿದೆ. ಚಾಡಿ ಹೇಳುವ ಗುಣ ಬಾಲ್ಯದಲ್ಲಿ ಪ್ರಾರಂಭವಾಗುತ್ತದೆ. ಎಳೆಯ ವಯಸ್ಸಿನಲ್ಲಿ ಪ್ರಾರಂಭವಾಗುವ ಈ ರೋಗಕ್ಕೆ ಇರುವ ಒಂದೇ ಒಂದು ಔಷಧಿಯೆಂದರೆ ಸ್ವಪರೀಕ್ಷೆಯ ಅರಿವು. ಯಾರಿಗೆ ಸ್ವಪರೀಕ್ಷೆ ಮಾಡಿಕೊಳ್ಳುವ, ಆತ್ಮಾವಲೋಕನ ಮಾಡಿಕೊಳ್ಳುವ ಸಾಮರ್ಥ್ಯ ಬರುವುದೋ ಅವರು ಇಂತಹ ಚಾಡಿ ರೋಗದಿಂದ ಮುಕ್ತರಾಗುತ್ತಾರೆ. ಬಾಲ್ಯದಲ್ಲಿಯೇ ಆತ್ಮಾವಲೋಕನದ ಅರಿವನ್ನು ಮಕ್ಕಳಿಗೆ ನೀಡದೇ ಇರುವ ಪಕ್ಷದಲ್ಲಿ ಅವರು ಹಣ್ಣು ಹಣ್ಣು ಮುದುಕರಾದರೂ ಈ ಚಾಡಿ ಹೇಳುವ ಗೀಳಿನಿಂದ ಮುಕ್ತರಾಗುವುದೇ ಇಲ್ಲ. ಮನೆಯಲ್ಲಿ ಒಡಹುಟ್ಟುಗಳ ಮೇಲೆ, ಶಾಲೆಯಲ್ಲಿ ಹೊರಗೆಯವರ ಮೇಲೆ ಚಾಡಿ ಹೇಳುವ ಈ ಗುಣ ಮುಂದೆ ವಿಶ್ವವಿದ್ಯಾಲಯದಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಮದುವೆಯಾಗುವ ಸಂಬಂಧಗಳಲ್ಲಿ, ಬೀಗರಲ್ಲಿ, ವಯಸ್ಸಾದ ಮೇಲೆ ತಮ್ಮ ಮಕ್ಕಳ ಸಂಸಾರಗಳಲ್ಲಿ; ಹೀಗೆ ಎಲ್ಲೆಡೆಯೂ ತಮ್ಮನ್ನು ಪಾಪದವರೆಂದು ಬಿಂಬಿಸಿಕೊಂಡು, ತಾವು ದೂರುವ ವ್ಯಕ್ತಿಯು ತಮ್ಮನ್ನು ತುಳಿಯುತ್ತಿದ್ದಾನೆಂದು, ಅನ್ಯಾಯ ಮಾಡುತ್ತಿದ್ದಾನೆಂದು ಚಾಡಿ ಹೇಳುತ್ತಲೇ ಇರುತ್ತಾರೆ. ಏನೂ ನಡೆಯದೇ ಇದ್ದರೂ ಚಾಡಿ ಹೇಳುತ್ತಲೇ ಇರುವಂತಹ ಮನೋರೋಗಕ್ಕೂ ಇದು ಕಾರಣವಾಗಬಹುದು. ಚಾಡಿ ಹೇಳುವ ಮಕ್ಕಳ ಮತ್ತೊಂದು ದೊಡ್ಡ ದೌರ್ಬಲ್ಯವೆಂದರೆ ತಮ್ಮ ಸಂಗತಿಗಳನ್ನು ತಾವೇ ಗಮನಿಸಿಕೊಳ್ಳುತ್ತೇವೆಂಬ ಆತ್ಮವಿಶ್ವಾಸವಿಲ್ಲದೇ ಇರುವುದು. ಆತ್ಮವಿಶ್ವಾಸದ ಕೊರತೆಯೊಂದಿಗೆ ಮಾನ್ಯತೆ ಪಡೆಯುವ ಗೀಳು ಹತ್ತಿತೆಂದರೆ ಚಾಡಿಗೆ ಮೊರೆ ಹೋಗಿಬಿಡುತ್ತಾರೆ. ಹಾಗಾಗಿ ಆತ್ಮವಿಶ್ವಾಸ, ಆತ್ಮಾವಲೋಕನದ ಗುಣಗಳೊಂದಿಗೆ ಇತರರನ್ನು ಮನ್ನಿಸುವ ಗುಣದ ಸಂಸ್ಕಾರವನ್ನು ನೀಡುವ ಅಗತ್ಯವಿರುತ್ತದೆ.

ಹದಿಹರೆಯದ ಮಕ್ಕಳ ಚಾಡಿ ಚಾವಡಿ

ಮಕ್ಕಳು ತೀರಾ ಎಳೆಯ ವಯಸ್ಸಿನಲ್ಲಿ ಚಾಡಿ ಹೇಳುವ ಸಮಸ್ಯೆಯನ್ನು ಸರಿಪಡಿಸದೇ ಹೋದರೆ ಹೈಸ್ಕೂಲು ಮತ್ತು ಕಾಲೇಜಿಗೆ ಕಾಲಿಡುವ ಹದಿಹರೆಯದವರಲ್ಲಿ ಈ ರೋಗ ಉಲ್ಬಣವಾಗಿ ಉಗ್ರರೂಪವನ್ನು ಪಡೆಯುತ್ತವೆ. ತಮ್ಮದೇ ಗೆಳೆಯ ಅಥವಾ ಗೆಳತಿ ತಮ್ಮದೇ ಮತ್ತೊಬ್ಬನ ಮೇಲೆ ಚಾಡಿ ಹೇಳಿದಾಗ, ದೂರನ್ನು ಕೇಳಿಸಿಕೊಂಡ ಅದೇ ವಯಸ್ಸಿನ ಮಗುವಿಗೆ ಎರಡು ವಿಷಯಗಳನ್ನು ಸಾಬೀತು ಮಾಡುವ ಅಗತ್ಯವಿದೆ ಎಂದೆನಿಸುತ್ತದೆ. ತನ್ನ ಬಳಿ ದೂರುತ್ತಿರುವವರನ್ನು ತಾನು ಮಾನ್ಯ ಮಾಡುತ್ತಿದ್ದೇನೆಂದೂ, ಪ್ರೀತಿಸುತ್ತಿದ್ದೇನೆಂದೂ ಹಾಗೂ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ಬದ್ಧನಾಗಿದ್ದೇನೆಂದೂ ತೋರಿಸಿಕೊಳ್ಳುವುದು ಒಂದಾದರೆ, ಯಾರ ವಿರುದ್ಧವಾಗಿ ಈ ಚಾಡಿ ಪ್ರಯೋಗವಾಗಿರುತ್ತದೆಯೋ ಅವರ ಮೇಲೆ ತನ್ನ ಸಾಮರ್ಥ್ಯ, ಶಕ್ತಿಯನ್ನು ಪ್ರಯೋಗಿಸುವುದು ಮತ್ತು ತನ್ನ ಬಲಪ್ರದರ್ಶನ ಮಾಡುವುದು ಮತ್ತೊಂದು. ಈ ಎರಡೂ ಕಾರಣಗಳಿಂದಾಗಿ ವಿವೇಚನೆಯನ್ನು ಕಳೆದುಕೊಂಡ ಮಕ್ಕಳು ಹೇಗಾದರೂ ವರ್ತಿಸಬಹುದು. ಅಲ್ಲಿರುವುದೋ ಸಮ ವಯಸ್ಸಿನ ಜೀವಗಳು. ಅವರುಗಳ ಬುದ್ಧಿಮಟ್ಟಗಳೂ, ವೈಚಾರಿಕ ವ್ಯಾಪ್ತಿಗಳೂ ಹೆಚ್ಚೂ ಕಡಿಮೆ ಅಷ್ಟಷ್ಟಕ್ಕೇ ಇರುತ್ತವೆ. ಹದಿಹರೆಯದಲ್ಲಿ ತಮ್ಮ ತಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಧಾವಂತವಿರುವುದರಿಂದಲೂ, ಜೊತೆಗೆ ತಾವೇ ಸಾಕಷ್ಟು ದೊಡ್ಡವರಾಗಿದ್ದೇವೆ ಎಂದೂ ಅನ್ನಿಸುವುದರಿಂದಲೂ ಆದಷ್ಟು ದೊಡ್ಡವರ ಬಳಿಗೆ ಚಾಡಿ ಮಾತುಗಳನ್ನು ಒಯ್ಯದೇ ತಮ್ಮತಮ್ಮಲ್ಲೇ ಸುಳಿದಾಡಿಸಿಕೊಳ್ಳುತ್ತಾರೆ. ತಾವೇ ಇತ್ಯರ್ಥ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆಗ ಎಂತಹ ಅನಾಹುತವೂ ಆಗಬಹುದು. ಎಂತಹ ಮಾನಸಿಕ ಪಲ್ಲಟಗಳು, ಭಾವನಾತ್ಮಕ ಪತನಗಳೂ ಉಂಟಾಗಬಹುದು. ಆದರೆ, ಬಾಲ್ಯದಲ್ಲಿಯೇ ಚಾಡಿ ಹೇಳುವ ತಮ್ಮ ಈ ಗುಣ ಅಸೂಯೆ ಮತ್ತು ಅಸಹನೆಯ ಕಾರಣದ್ದು ಎಂದು ಯಾವ ಮಗುವಿಗೆ ಅರಿವಾಗುತ್ತದೆಯೋ ಅದು ಅದನ್ನು ಮುಂದುವರಿಸುವುದಿಲ್ಲ. ಒಂದು ವೇಳೆ ಅದು ಹೆಡೆಯೆತ್ತಿದರೂ, ತಾವೇ ಅದನ್ನು ಅರಿತುಕೊಂಡು ಸ್ವವಿಮರ್ಶೆಯಿಂದ ಅದನ್ನು ನಿವಾರಿಸಿಕೊಳ್ಳುತ್ತಾರೆ.

ನಕ್ಕು ಕ್ಷಮಿಸಿದೊಡೆ ಅರಿವು ಮತ್ತು ಸಂಕೋಚ

ನಾವು ನಮ್ಮ ಮನೆಯ ಮತ್ತು ನೆರೆಹೊರೆಯ ಮಕ್ಕಳಲ್ಲಿ ಒಂದು ಪ್ರಯೋಗ ಮಾಡಿದ್ದೇವೆ. ಅದು ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಯಾವುದೇ ಒಂದು ಮಗುವು ತಾನು ಆಡುವಾಗ ಮತ್ತೊಂದು ಮಗುವು ಹಾಗೆ ಮಾಡಿತು, ಹೀಗೆ ಮಾಡಿತು ಎಂದು ಆವೇಗದಿಂದ, ಆವೇಶದಿಂದ, ಅಳುತ್ತಾ ಬಂದು, ಮತ್ತೊಂದು ಮಗುವಿನ ಬಗ್ಗೆ ಚಾಡಿ ಹೇಳುವಾಗ, ಆ ಮಗುವನ್ನು ರಮಿಸಿ, ಮುದ್ದಿಡುತ್ತಾ ಯಾಕೆ? ಆಟದಲ್ಲಿ ಸೋತುಬಿಟ್ಟಾ? ಎಂದು ಕೇಳಿದರೆ, ಅದು ಮತ್ತೆ ಚಾಡಿಯನ್ನೇ ಹೇಳುತ್ತಿರುತ್ತದೆ. ನಾವು ಬಿಡದೇ ನಸು ನಗುತ್ತಾ, ಅದರ ಬಗ್ಗೆ ಅನುಕಂಪದಿಂದ ಆಟದಲ್ಲಿ ಸೋತೆಯಾ? ಎಂದು ಕೇಳಿದರೆ, ಅದು ಹೌದೆಂದು ಹೇಳುತ್ತದೆ. ತಾನು ಸೋತಾಗ ಅವರು ನಕ್ಕರು ಎಂದು ತನಗೆ ಅಪಮಾನವಾದ ಭಾವತೀವ್ರತೆಯಲ್ಲಿ ದೂರುತ್ತದೆ. ಅವರು ಆಟದಲ್ಲಿ ಮೋಸದಿಂದ ಗೆದ್ದರು ಎಂದು ಚಾಡಿ ಹೇಳುತ್ತದೆ. ನಾವು ನಗುತ್ತಾ, ಸೋತಾಗ ಗೆದ್ದವರನ್ನು ಹೀಗೆ ನೋಡುತ್ತೇವೆ. ಪರವಾಗಿಲ್ಲ ಬಿಡು. ಆಮೇಲೆ ನೀನು ಗೆದ್ದಾಗ ಇನ್ನಾರಾದರೂ ನೀನು ಆಡುವ ಹಾಗೇ ನಮ್ಮ ಬಳಿಯೋ ಇನ್ನಾರ ಬಳಿಯೋ ಆಡುತ್ತಿರುತ್ತಾರೆ ಎಂದು ನಗುವಾಗ ಆ ಮಗುವೂ ತನ್ನ ನಗುವನ್ನು ನಮ್ಮ ಜೊತೆ ಸೇರಿಸುತ್ತದೆ. ಆಟದಲ್ಲಿ ಸೋತಾಗ ಉಂಟಾಗುವ ಹತಾಶೆಯಿಂದಾಗಿ ತಾನು ಹಾಗೆ ಆಡುತ್ತಿದ್ದೇನೆ ಎಂಬ ಅರಿವು ಅಲ್ಲಿ ಮಗುವಿಗೆ ಉಂಟಾಗುವುದರೊಂದಿಗೆ, ಮತ್ತೊಬ್ಬರು ಹಾಗೆ ಆಡಿದಾಗ ಇದನ್ನು ಸ್ಮರಣೆಗೆ ತಂದುಕೊಳ್ಳಲು, ಅವರನ್ನು ಮನ್ನಿಸಲು ಸಾಧ್ಯವಾಗುತ್ತದೆ.

ನಮ್ಮ ಮಗುವು ಮತ್ತೊಂದು ಮಗುವಿನ ಸಾಮಾನ್ಯ ಸಾಧನೆಯ ಬಗ್ಗೆ ನಕಾರಾತ್ಮಕವಾಗಿ ಮಾತಾಡತೊಡಗಿದಾಗ, ಆ ಅಂಕವೋ, ಬಹುಮಾನವೋ ಬಹಳ ಕ್ಷುಲ್ಲಕವಾಗಿ ಬಂತೆಂದೋ, ಆ ಮಗು ಆ ಬಹುಮಾನಕ್ಕೆ ಅರ್ಹವಿಲ್ಲದಿದ್ದರೂ ಪಕ್ಷಪಾತದಿಂದ, ಯಾರೂ ಬೇರೆ ಸ್ಪರ್ಧಿಗಳಿರದಿದ್ದ ಕಾರಣದಿಂದ ಬಂತೆಂದೋ ಹೇಳತೊಡಗುವಾಗ, ನಾನು ನಗತೊಡಗುತ್ತೇನೆ. ಮಗುವು ಯಾಕೆಂದು ಕೇಳಿದರೆ, ಜೆ, ಮಿಸ್ ಜೆ, ಅಥವಾ ಮಿಸ್ಟರ್ ಜೆ ಎಂದು ಹಾಸ್ಯ ಮಾಡುತ್ತೇನೆ. ಲಘುವಾಗಿ ಛೇಡಿಸುತ್ತೇನೆ. ಜೆ ಎಂದರೆ ಜೆಲಸ್. ಆ ಛೇಡಿಸುವಿಕೆಯ ಹಿಂದೆ, ಇಂತಹ ಅಸೂಯೆಯು ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಬರುತ್ತವೆ. ಅದರ ಬಗ್ಗೆ ಎಚ್ಚರಿಕೆಯನ್ನು ತಾಳಬೇಕು ಎಂಬಂತಹ ಧ್ವನಿಯೂ ಅಲ್ಲಿ ಮೊಳಗುತ್ತದೆ. ಕೆಲವೊಮ್ಮೆ ಸಮತೋಲನ ಕಾಯ್ದುಕೊಳ್ಳುವ ನಿನ್ನಂತಹ ಜಾಣ ಮಗುವಿಗೆ ಈ ಅಸೂಯೆ ಬಂತೆಂದರೆ...! ಈ ಪ್ರಶ್ನೆಯೇ ಅವರಿಗೆ ನಾಚಿಕೆಯನ್ನೂ, ಚಾಡಿ ಹೇಳಿದ್ದಕ್ಕೆ ಸಂಕೋಚವನ್ನೂ ತರುತ್ತದೆ. ಇದೇ ರೀತಿಯಲ್ಲಿ ಯಾವುದೋ ಒಂದು ಮಗುವು ಹೆಚ್ಚು ವಸ್ತುಗಳನ್ನು ಹೊಂದಿದೆಯೆಂದು, ಅದರ ಬಗ್ಗೆ ದೂರಲು ತೊಡಗಿ, ತನಗೇ ಅದು ಬೇಕೆಂದು ಚಾಡಿ ಪ್ರಯೋಗ ಮಾಡಲು ತೊಡಗಿದಾಗ ಆ ಮಗುವಿಗೆ, ದುರಾಸೆಯೆಂಬುದು ಬಂತು ಎನ್ನುವ ನಮ್ಮ ಲಘು ಚಟಾಕಿಯೊಂದಿಗಿನ ಅರಿವು ಅದಕ್ಕೆ ಸಂಕೋಚವನ್ನು ಉಂಟುಮಾಡುತ್ತದೆ. ಅಸೂಯೆ, ಅತ್ಯಾಸೆ, ಅಪಮಾನದ ಭಾವ, ಅಮಾನ್ಯತೆ; ಇವುಗಳಿಂದ ಹುಟ್ಟುವ ಅಸಹನೆಯೇ ಚಾಡಿಕೋರರನ್ನಾಗಿಸುವುದು. ಆತ್ಮತೃಪ್ತಿ, ಆತ್ಮಾವಲೋಕನ, ಸ್ವಪರೀಕ್ಷೆಗಳಿಂದ ಹುಟ್ಟುವ ಆತ್ಮಾಭಿಮಾನವು ಚಾಡಿ ಹೇಳಲು ಸಂಕೋಚವನ್ನು ಹುಟ್ಟಿಸುತ್ತದೆ. ಅನಗತ್ಯವಾಗಿ ಯಾರನ್ನೇ ದೂರಲು, ತನ್ನನ್ನು ತಾನು ಪಾಪ ಎನಿಸಿಕೊಂಡು ಇತರರನ್ನು ದುಷ್ಟರೆಂದು ಬಿಂಬಿಸಲು ಹೆಣಗಾಡುವ ಪ್ರಯತ್ನಗಳು ಎಷ್ಟು ಕ್ಷುಲ್ಲಕವೆಂದು ಅರಿವಾಗುತ್ತದೆ. ವಸ್ತುನಿಷ್ಠವಾಗಿ ದೂರುವುದಕ್ಕೂ, ವಿಷಯಾಧಾರಿತವಾಗಿ ಆರೋಪಿಸುವುದಕ್ಕೂ, ತನ್ನ ದೌರ್ಬಲ್ಯದಿಂದ ಚಾಡಿ ಹೇಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಂಡರೆ ಅಲ್ಲಿಗೆ ಒಂದು ಹಂತದ ಜ್ಞಾನೋದಯವಾಯಿತೆಂದೇ ಅರ್ಥ. 

ಚಾಡಿ ಹೇಳಿದಾಗ ಮಾಡಬೇಕಾದುದೇನು?

1.ಮಗುವಿನ ಮಾತನ್ನು ಪೂರ್ತಿ ಕೇಳಿಸಿಕೊಳ್ಳಬೇಕು.

2.ಸಾಧ್ಯವಾದರೆ, ಹೌದಾ? ಆಮೇಲೆ? ಅದಕ್ಕೆ ನೀನೇನು ಮಾಡಿದೆ? ಇತ್ಯಾದಿ ಮಾತುಗಳಿಂದ ಮಗುವು ನಾವು ಅದರ ಮಾತಿಗೆ ಕಿವಿಗೊಟ್ಟಿರುವುದನ್ನು ಮತ್ತು ಒಪ್ಪುತ್ತಿರುವುದನ್ನು ಖಾತ್ರಿ ಮಾಡಿಕೊಂಡು ಸಂಪೂರ್ಣವಾಗಿ ಹೇಳುತ್ತದೆ.

3.ಸಾಮಾನ್ಯವಾಗಿ ಚಾಡಿ ಹೇಳುವಾಗ ಸುಳ್ಳಿನ ಉತ್ಪ್ರೇಕ್ಷೆಗಳು ಹೆಚ್ಚು ಬಳಕೆಯಾಗುತ್ತದೆ. ತಾವೂ ಸುಳ್ಳು ಹೇಳಿದ್ದು, ಇಂತಹ ಸುಳ್ಳುಗಳನ್ನು ಮಕ್ಕಳಲ್ಲಿ ಸಾಕಷ್ಟು ಕಂಡಿರುವ ಅನುಭವಿ ಹಿರಿಯರಿಗೆ ಇಂತಹ ಸುಳ್ಳುಗಳು ತಿಳಿಯುತ್ತವೆ. ನಿಜವನ್ನು ಮತ್ತು ಸುಳ್ಳನ್ನು ಎಚ್ಚರಿಕೆಯಿಂದ ಬೇರ್ಪಡಿಸಬೇಕು.

4.ಹಿರಿಯರು ಕ್ರಮ ತೆಗೆದುಕೊಳ್ಳುವ ಸೂಚನೆಗಳು ಕಾಣದೇ ಹೋದರೆ ಮಕ್ಕಳು ತಮ್ಮ ಚಾಡಿಯನ್ನು ಹೆಚ್ಚು ತೀಕ್ಷ್ಣಗೊಳಿಸುತ್ತಾರೆ. ಸುಳ್ಳುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಉತ್ಪ್ರೇಕ್ಷೆಯು ಗಾಢವಾಗುತ್ತಾ ಹೋಗುತ್ತದೆ. ಆದ್ದರಿಂದ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಬೇಕು.

5.ಚಾಡಿ ಹೇಳುವ ಮಗುವು ಎಷ್ಟೇ ಸುಳ್ಳು ಹೇಳಲಿ, ಉತ್ಪ್ರೇಕ್ಷಿಸಿ ತನ್ನ ವಿರೋಧಿಯ ಬಗ್ಗೆ ಕೆಟ್ಟದಾಗಿ ಹೇಳಲಿ ಅಲ್ಲಿಂದಲ್ಲೇ ಬೈದು ಮುಖಕ್ಕೆ ಹೊಡೆದಂತೆ ಹೇಳಬೇಡಿ. ಇದರಿಂದ ಮಗುವಿನ ಒಳಗೆ ಮಡುಗಟ್ಟಿರುವ ರೋಷ ಮತ್ತು ದ್ವೇಷ ಮತ್ತಷ್ಟು ಹೆಚ್ಚಾಗುತ್ತದೆ.

6.ಮಗುವಿನ ಚಾಡಿ ಮಾತನ್ನು ಪೂರ್ಣ ಕೇಳದೇ ಅದನ್ನು ಭಂಗಿಸಿ, ಅಪೂರ್ಣಗೊಳಿಸುವಂತೆ ಮಾಡಿ ಮಗುವನ್ನು ಕಳುಹಿಸಿಬಿಟ್ಟರೆ ಆ ಮಗು ತಾನು ದೂರುವ ಮಗುವಿಗೆ ಹಾನಿ ಮಾಡುವ ಸಾಧ್ಯತೆಗಳಿರುತ್ತದೆ. ಹೊಡೆಯುವುದು, ಚುಚ್ಚುವುದು, ತಿವಿಯುವುದು, ಕಚ್ಚುವುದು, ತಳ್ಳಿಬಿಡುವುದು, ಅದರ ವಸ್ತುಗಳನ್ನು ಎಸೆದುಬಿಡುವುದು ಅಥವಾ ನಾಶ ಮಾಡಿಬಿಡುವುದು; ಹೀಗೆ ಏನಾದರೂ ಮಾಡಬಹುದು. ಚಾಡಿ ಹೇಳುವ ಮಗುವಿನ ಅಸಹನೆ ಮತ್ತು ಅಸೂಯೆಯು ಶಮನಗೊಳ್ಳದೇ, ಅದರ ಕುದಿತದಿಂದ, ಯಾರೂ ತನ್ನ ಕಡೆಗೆ ಗಮನ ಕೊಡುತ್ತಿಲ್ಲ, ತನ್ನ ಮನ್ನಿಸುತ್ತಿಲ್ಲ ಎಂಬ ಅಸಹಾಯಕತೆಯಿಂದ ತಾನು ದೂರುವ ಮಗುವಿಗೆ ಕೇಡನ್ನುಂಟು ಮಾಡಬಹುದು. ಆದ್ದರಿಂದ ಹಿರಿಯರು ಎಚ್ಚರಿಕೆಯಲ್ಲಿರಬೇಕು.

7.ಚಾಡಿಯ ಹಿಂದೆ ಲಘುವಾಗಿಯಾದರೂ ಅಥವಾ ಸೂಕ್ಷ್ಮವಾಗಿಯಾದರೂ ಏನೋ ಒಂದು ಇರುತ್ತದೆ. ಅದು ಚಾಡಿಯ ಸ್ವರೂಪ ಪಡೆದಾಗ ಉತ್ಪ್ರೇಕ್ಷೆ ಮತ್ತು ಸುಳ್ಳುಗಳಿಂದ ಅಲಂಕೃತಗೊಂಡಿರುತ್ತದೆ. ಆದ್ದರಿಂದ ಆ ಸೂಕ್ಷ್ಮವಾಗಿರುವ ಮೂಲವನ್ನು ಕಂಡು ಹಿಡಿದು ಆ ಮತ್ತೊಂದು ಮಗುವಿಗೂ ಅಗತ್ಯವಾದ ತಿಳುವಳಿಕೆಯ ಸಂದೇಶವನ್ನು ರವಾನಿಸಬೇಕು. ನಂತರ ಚಾಡಿ ಹೇಳುವ ಮಗುವಿಗೂ ಉತ್ಪ್ರೇಕ್ಷೆ ಮತ್ತು ಸುಳ್ಳುಗಳನ್ನು ಬಿಡಿಸಿದ ಆ ವಿಷಯವನ್ನಷ್ಟೇ ತಿಳಿಸಿ ಅದರ ಅಸಹನೆಯನ್ನು ನಿವಾರಿಸಬಹುದು.

8.ಮಗುವು ಚಾಡಿ ಹೇಳುತ್ತಾ ಸುಳ್ಳು ಹೇಳುವಾಗ ತಾನೇ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಬಹುದು. ಸಾಮಾನ್ಯವಾಗಿ ಮಗುವಿನ ಸುಳ್ಳಿನ ಅಥವಾ ದೂರಿನ ಸರಣಿ ತರ್ಕಬದ್ಧವಾಗಿರುವುದಿಲ್ಲ. ಕೆಲವು ಅಡ್ಡ ಪ್ರಶ್ನೆಗಳನ್ನು ಕೇಳುವ ಮೂಲಕ ಮಗುವು ತಡಬಡಾಯಿಸುತ್ತದೆ ಮತ್ತು ತಾನು ಸಿಕ್ಕಿ ಹಾಕಿಕೊಳ್ಳುತ್ತಿರುವುದು ಅರ್ಥವಾಗುತ್ತದೆ. ಆಗಲೂ ಅದನ್ನು ನಿಂದಿಸದೇ, ಖಂಡಿಸದೇ ಅದರ ಮೂರ್ಖತನವನ್ನು ಮತ್ತು ಅವೈಚಾರಿಕ ದೂರನ್ನು ಕ್ಷಮಿಸಿ, ಅದು ದೂರು ಕೊಟ್ಟಿರುವುದನ್ನು ಗಮನಿಸುವುದಾಗಿ ಹೇಳಿ ಕಳುಹಿಸಬೇಕು.

9.ಮಗುವು ಸುಳ್ಳು ಹೇಳಿ ಅಥವಾ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಅದನ್ನು ಕ್ಷಮಿಸುವ ಹಿರಿಯರನ್ನು ಕಂಡರೆ ಅದಕ್ಕೆ ವಿಶೇಷವಾದ ಅಕ್ಕರೆಯೂ ಮತ್ತು ನೈತಿಕವಾದ ಭಯವೂ ಉಂಟಾಗುತ್ತದೆ. ಆ ಹಿರಿಯರು ಮುಂದೆ ಮಗುವಿನ ವಿಷಯದಲ್ಲಿ ಏನಾದರೂ ಹೇಳಿದರೆ ಅದು ಕೇಳಲು ಸಿದ್ಧವಿರುತ್ತದೆ ಮತ್ತು ಅವರ ತೀರ್ಮಾನಗಳ ಬಗ್ಗೆ ತನ್ನ ಒಲವನ್ನು ತೋರುತ್ತದೆ.

10.ಪ್ರೀತಿ ಮತ್ತು ಮಾನ್ಯತೆಯ ಕೊರತೆಯೇ ಚಾಡಿಕೋರರ ಹೆಚ್ಚುವರಿಗೆ ಕಾರಣ. ಎಲ್ಲಿ ಚಾಡಿಕೋರತನ ಕಾಣುವುದೋ ತಕ್ಷಣವೇ ಪ್ರೀತಿ ಮತ್ತು ವ್ಯಕ್ತಿಗಳ ವ್ಯಕ್ತಿಗತ ಮಾನ್ಯತೆಯ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಸಮದೂಗಿಸುವ ಕೆಲಸ ಮಾಡಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News