ಪ್ಲಾಸ್ಟಿಕ್ ಬಾಟಲ್ ಕೊಟ್ಟರೆ ಉಚಿತ ನೀರು ನೀಡುವ ಯಂತ್ರವಿದು !

Update: 2016-04-11 05:41 GMT

ಬಡವರ ನೀರಿನ ಅಗತ್ಯ ಪೂರೈಸುವ ಯಂತ್ರ ಇಲ್ಲಿದೆ ನೋಡಿ. ಮುಂಬೈ ಐಐಟಿಯ ಇಬ್ಬರು ವಿದ್ಯಾರ್ಥಿಗಳು ಈ ಪವಾಡಸದೃಶ ಯಂತ್ರದ ಶೋಧಕರು.

ಪ್ಲಾಸ್ಟಿಕ್ ಬಾಟಲಿ ಅಥವಾ ಅಲ್ಯೂಮೀನಿಯಂ ಟಿನ್‌ಗಳನ್ನು ಈ ಯಂತ್ರಕ್ಕೆ ನೀಡಿದರೆ, ನಿಮಗೆ ಶುದ್ಧ, ಸುರಕ್ಷಿತ ಕುಡಿಯುವ ನೀರನ್ನು ಈ ಯಂತ್ರ ಕೊಡುತ್ತದೆ.

ಪ್ರತಿ 300 ಮಿಲಿಲೀಟರ್ ನೀರಿಗೆ ಒಂದು ಬಾಟಲಿ ಕೊಡಬೇಕು. ಅನುರಾಗ್ ಮೀನಾ ಹಾಗೂ ಸತ್ಯೇಂದ್ರ ಮೀನಾ ಎಂಬ ಮುಂಬೈ ಐಐಟಿ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಯಂತ್ರ ಅಭಿವೃದ್ಧಿಗೆ 95 ದಿನ ಶ್ರಮ ವಹಿಸಿದ್ದಾರೆ.

ಇದು ಬಡವರಿಗೆ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆ ಎನ್ನಬಹುದು. ಛತ್ತೀಸ್‌ಗಢ ಮೂಲದ ಟ್ರೆಸಾರ್ಟ್ ಎಂಬ ಸಂಸ್ಥೆ ಈ ಯಂತ್ರವನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಇದು ಆರೋಗ್ಯಕರ ಪರಿಸರಕ್ಕೆ ಸಹಕಾರಿ. ಇದಕ್ಕೆ ಸ್ವಚ್ಛ ಮಿಷಿನ್ ಎಂದು ಹೆಸರಿಸಲಾಗಿದೆ. ಇದು ಭಾರತದ ಸ್ವಚ್ಛ ಭಾರತ ಪರಿಕಲ್ಪನೆಗೆ ಪೂರಕ ಎಂದು ಟ್ರೆಸ್ಟೋರ್‌ನ ಕುನಾಲ್ ದೀಕ್ಷಿತ್ ಹೇಳುತ್ತಾರೆ.

"ಸ್ವಚ್ಛತೆಗೆ ಒತ್ತು ನೀಡುವ ಸಲುವಾಗಿ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ಮೂಡಿಸಲು ಇದು ಅಸ್ತ್ರವಾಗಲಿದೆ. ಬಳಸಿದ ಬಾಟಲಿ ಅಥವಾ ಅಲ್ಯೂಮೀನಿಯಂ ಟಿನ್‌ಗಳನ್ನು ಅವರು ಯಂತ್ರಕ್ಕೆ ನೀಡಿದರೆ, ಅವರಿಗೆ ಟ್ರೆಸ್ಟ್ ಹೆಸರಿನ ಡಿಜಿಟಲ್ ವ್ಯಾಲ್ಯೂ ಟೋಕನ್ ನೀಡಲಾಗುತ್ತದೆ. ಇದನ್ನು 300 ಮಿಲಿಲೀಟರ್ ನೀರಿನ ಬಾಟಲಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಈಗಾಗಲೇ ಮುಂಬೈ ಹಾಗೂ ಚಂಡೀಗಢದಲ್ಲಿ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಐಐಟಿ ಕ್ಯಾಂಪಸ್‌ನಲ್ಲೇ ಈ ಯಂತ್ರ ವಾರಕ್ಕೆ 10 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News