ಚಿಲಿಯಲ್ಲಿ ಭೂಕಂಪ- ನೋವಿನ ಸಂಕಥನಗಳು

Update: 2016-04-12 18:37 GMT

  ‘‘ಒಂದು ಕಾಲಕ್ಕೆ ಕುತೂಹಲ ಬೆರಗು ಹಾಸ್ಯಗಳ ನೆಲೆಗಳಾಗಿದ್ದ ಕತೆಗಳು ಇಂದಿನ ಜಾಗತಿಕ ಸಂದರ್ಭದಲ್ಲಿ ವಿಷಾದದ ನೋವಿನ ಸಂಕಥನಗಳಾಗಿ ರೂಪಾಂತರಗೊಳ್ಳುತ್ತವೆ. ಬದುಕಿನ ಲೌಕಿಕ ಸಂದರ್ಭದಲ್ಲಿ ಎದುರಾಗುವ ಘಟನೆಯೊಂದು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಾ ಹೋದ ಹಾಗೆಲ್ಲ ಅದರೊಳಗಿನಿಂದ ಸಮಕಾಲೀನ ವಿಭಿನ್ನ ಧ್ವನಿಗಳು ಹೊರ ಹೊಮ್ಮಿ ಗಂಭೀರ ಚಿಂತನೆಯ ದಾರ್ಶನಿಕತೆಯ ನೋಟಗಳು ದೊರೆಯುತ್ತವೆ’’ ಲೇಖಕ ಬಿ. ಎ. ವಿವೇಕ ರೈ ಅವರ ಮೇಲಿನ ಮಾತುಗಳು ‘‘ಚಿಲಿಯಲ್ಲಿ ಭೂಕಂಪ-ಹದಿನೆಂಟು ಕಥನಗಳು’’ ಕೃತಿಯ ಮೂಲದ್ರವ್ಯವಾಗಿ ನಮ್ಮನ್ನು ತಟ್ಟುತ್ತವೆ. ‘ಚಿಲಿಯಲ್ಲಿ ಭೂಕಂಪ’ ಜರ್ಮನ್ ಕತೆಗಾರ ಹೀನ್ರಿಶ್ ಕ್ಲೆಯಿಸ್ಟ್‌ನ ಕತೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧಗಳು, ಜಗತ್ತನ್ನು ಪೊರೆಯುವ ಪ್ರೀತಿಯನ್ನು ಧರ್ಮದ ಕ್ರೌರ್ಯ ತನ್ನ ಉಗುರುಗಳಿಂದ ಸೀಳುವ ಹೊತ್ತಿನಲ್ಲಿ ಅದಕ್ಕೆ ಪ್ರಬಲ ಪ್ರತಿರೋಧವೋ ಎಂಬಂತೆ ಸಂಭವಿಸುವ ಭೂಕಂಪ ಈ ಕತೆಯ ಪ್ರಧಾನ ರೂಪಕವಾಗಿದೆ.

ಮನುಷ್ಯ ಸಂಬಂಧಗಳು ನೆಲಕಚ್ಚುವ ಸಂದರ್ಭವನ್ನು ಈ ಕತೆ ಹಿಡಿದಿಡುತ್ತದೆ. ಇಂತಹ ಹೃದಯಸ್ಪರ್ಶಿ ಹದಿನೆಂಟು ಕಥನಗಳನ್ನು ವಿವೇಕ ರೈ ಅವರು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಹೆರ್ತಾ ಮುಲ್ಲರ್‌ಳ ‘ಬೀದಿ ಗುಡಿಸುವ ಜಾಡಮಾಲಿಗಳು’ ಇಂತಹದೇ ವಿಷಾದವನ್ನು ಹೊದ್ದುಕೊಂಡ ಇನ್ನೊಂದು ಕತೆ. ವೈವಿಧ್ಯಮಯ ಕಥನದ ಮಾದರಿಗಳನ್ನು ಇಲ್ಲಿ ಲೇಖಕರು ಮುಖಾಮುಖಿಯಾಗಿಸಿದ್ದಾರೆ. ಈ ಕಾರಣದಿಂದಲೇ ಅವರು ತೆನಾಲಿರಾಮನ ಬದನೆ ಕದ್ದ ಕತೆ, ಗುಬ್ಬಚ್ಚಿ ಕತೆ, ಹಿಮಗೌರಿ ಮತ್ತು ಏಳು ಜನ ಕುಳ್ಳರಿಗೆ ಸಂಬಂಧಿಸಿದ ಕತೆಗಳನ್ನೂ ಸೇರಿಸಿದ್ದಾರೆ. ಇಲ್ಲಿರುವ ಕತೆಗಳು ದೇಶ, ಧರ್ಮ, ಭಾಷೆಯ ಗಡಿಗಳನ್ನು ಅಳಿಸಿ, ನಮ್ಮನ್ನು ಪರಸ್ಪರ ಬೆಸೆಯುವಂತೆ ಮಾಡುತ್ತದೆ. ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ ಮಂಗಳೂರು ಇವರು ಹೊರ ತಂದಿರುವ ಈ ಕೃತಿಯ ಮುಖಬೆಲೆ 75 ರೂ. ಆಸಕ್ತರು 0824 2443002 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News