ಭಾರತದ ಪಾಸ್ ಪೋರ್ಟ್ ಇದ್ದರೆ ಸಾಕು ಈ 25 ದೇಶಗಳಿಗೆ ವೀಸಾ ಇಲ್ಲದೆಯೇ ಹೋಗಬಹುದು

Update: 2016-04-16 15:04 GMT

ವಿದೇಶಕ್ಕೆ ಪ್ರವಾಸ ಹೋಗುವ ಬಗ್ಗೆ ಯೋಚಿಸುವಾಗ ವೀಸಾ ಪಡೆಯುವುದು ಮತ್ತಿತರ ವಿಚಾರಗಳ ಬಗ್ಗೆಯೇ ಹೆಚ್ಚು ಚಿಂತೆಯಾಗಿರುತ್ತದೆ. ಬಹುತೇಕ ದೇಶಗಳಿಗೆ ವೀಸಾ ಬೇಕಾಗುವುದಿಲ್ಲ, ಮತ್ತು ಕೆಲವು ದೇಶಗಳಲ್ಲಿ ತಲುಪಿ ವೀಸಾ ಪಡೆಯಬಹುದು ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಅಂದರೆ, ಈ ದೇಶಗಳಿಗೆ ಪಾಸ್‌ಪೋರ್ಟ್ ಹಿಡಿದು ತಕ್ಷಣದ ಪ್ರವಾಸ ಹೋಗಬಹುದು. ಇದು ಹಣ ಮತ್ತು ಸಮಯವನ್ನು ಉಳಿಸುತ್ತದೆ. ಅಂತಹ 25 ದೇಶಗಳ ವಿವರ ಇಲ್ಲಿದೆ.

ನೇಪಾಳ

ಇಲ್ಲಿಗೆ ಪಾಸ್‌ಪೋರ್ಟ್ ಅಗತ್ಯವೂ ಇಲ್ಲ. ಸರ್ಕಾರದ ಗುರುತು ಚೀಟಿ ಇದ್ದರೆ ಸಾಕು. ರಸ್ತೆಯ ಮೇಲೂ ಇಲ್ಲಿಗೆ ಹೋಗಬಹುದು.

ಭೂತಾನ್

ಸಂತೋಷದ ನಾಡೆಂದು ಕರೆಯುವ ಭೂತಾನಿಗೆ ಹೋಗಲು ಭಾರತೀಯರಿಗೆ ವೀಸಾ ಬೇಕಿಲ್ಲ. ರಸ್ತೆ ಮೂಲಕ ಭೂತಾನಿಗೆ ತೆರಳಬಹುದು.

ಹಾಂಗ್ ಕಾಂಗ್ 

ಹಾಂಗ್ ಕಾಂಗ್ ಕೂಡ ವೀಸಾ ಇಲ್ಲದೆ ಭಾರತೀಯರಿಗೆ ಪ್ರವೇಶ ಕೊಡುತ್ತದೆ. 14 ದಿನ ಇಲ್ಲಿ ವೀಸಾ ಇಲ್ಲದೆ ಇರಬಹುದು. ಶಾಪಿಂಗ್ ಮಾಡುವವರಿಗೆ ಉತ್ತಮ ತಾಣ

ಮಾಲ್ಡಿವ್ಸ್

ಮಧುಚಂದ್ರ ಹೋಗುವವರಿಗೆ ಉತ್ತಮ ತಾಣ. ದ್ವೀಪಗಳು, ಕಡಲತೀರಗಳು ಮತ್ತು ನೀಲಿ ಸಮುದ್ರ ಇಲ್ಲಿನ ಆಕರ್ಷಣೆ. 30 ದಿನಗಳ ಕಾಲ ವೀಸಾ ಇಲ್ಲದೆ ಇರಬಹುದು. ಪಾಸ್‌ಪೋರ್ಟ್ ಮತ್ತು ವಾಪಾಸು ಬರುವ ಟಿಕೆಟು ಮುಂಗಡವಾಗಿ ಕಾದಿರಿಸಬೇಕು. ವಿಶ್ವದಲ್ಲೇ ಅತ್ಯುತ್ತಮ ಬೀಚ್ ರೆಸಾರ್ಟ್‌ಗಳು ಇಲ್ಲಿವೆ.

ಮಾರಿಷಸ್

ವೀಸಾ ಇಲ್ಲದೆ ಹೋಗುವ ಭಾರತೀಯರು ಪಾಸ್‌ಪೋರ್ಟ್ ಮತ್ತು ವಾಪಾಸು ಬರುವ ಟಿಕೆಟು ಮುಂಗಡವಾಗಿ ಕಾದಿರಿಸಬೇಕು. ಹಾಗಿದ್ದಲ್ಲಿ 60 ದಿನ ಇಲ್ಲಿ ತಂಗಬಹುದು. ಸಮುದ್ರ ಆಹಾರಕ್ಕೆ ಹೇಳಿಮಾಡಿಸಿದ ಜಾಗವಿದು.

ಜೋರ್ಡಾನ್

10,000ಕ್ಕೂ ಅಧಿಕ ಭಾರತೀಯರು ಇಲ್ಲಿನ ವಸ್ತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಭಾರತೀಯರಿಗೆ ಇಲ್ಲಿ ತಲುಪಿದ ಮೇಲೆ ವೀಸಾ ಪಡೆದುಕೊಳ್ಳುವ ಅವಕಾಶವಿದೆ. ಮೃತ ಸಮುದ್ರ, ಪೆಟ್ರಾ ಮತ್ತು ಸುಂದರ ಮರುಭೂಮಿಯೂ ಇಲ್ಲಿದೆ.

ಕಾಂಬೋಡಿಯ

ತಲುಪಿದ ಮೇಲೆ ವೀಸಾ ಪಡೆದು 30 ದಿನ ತಂಗಬಹುದು. ಯುನೊಸ್ಕೊ ವಿಶ್ವ ಪಾರಂಪರಿಕ ತಾಣ ಆಂಗ್ಕೋರ್ ವಾಟ್ ಇಲ್ಲಿದೆ. ಇಲ್ಲಿ ಅರೆನಗ್ನ ಉಡುಗೆ ತೊಡುವಂತಿಲ್ಲ. ಸೆಲ್ಫಿ ತೆಗೆಯುವಂತಿಲ್ಲ. ಧೂಮಪಾನ ಸಲ್ಲದು. ಮಕ್ಕಳಿಗೆ ಚಾಕಲೇಟು ಅಥವಾ ಹಣ ಕೊಡಬಾರದು. ಧಾರ್ಮಿಕ ಸ್ಮಾರಕಗಳು ಅನೇಕ ಇವೆ. ಸಂಸ್ಕೃತಿ, ದೇವಾಲಯಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರದಿರಲು ಇದನ್ನು ಅನುಸರಿಸಲಾಗುತ್ತಿದೆ.

ಬೊಲಿವಿಯ

ಇಲ್ಲಿ ಆರು ಯುನೊಸ್ಕೊ ವಿಶ್ವ ಪಾರಂಪರಿಕ ತಾಣಗಳಿವೆ. ಇಲ್ಲೂ ಕೂಡ ಭಾರತೀಯ ಪಾಸ್‌ಪೋರ್ಟ್ ಇದ್ದರೆ ತಲುಪಿದ ಮೇಲೆ ವೀಸಾ ಪಡೆದು 30 ದಿನ ತಂಗಬಹುದು.

ಮಕಾವು

ವಿಶ್ವದ ಶ್ರೀಮಂತ ದೇಶವಾಗಿರುವ ಮಕಾವು ಭಾರತೀಯರನ್ನು ವೀಸಾ ಇಲ್ಲದೆ ತಲುಪಲು ಅವಕಾಶ ಕೊಡುತ್ತದೆ. ಮಕಾವು ಟವರ್ ಇಲ್ಲಿನ ಮುಖ್ಯ ಆಕರ್ಷಣೆ.

ಜಮೈಕಾ

ಇಲ್ಲಿಗೂ ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ರೆಗಾ ಸಂಗೀತದ ಜನ್ಮಸ್ಥಳವಾದ ಜಮೈಕ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮರಳು ತುಂಬಿದ ಕಡಲತೀರಗಳಲ್ಲಿ ಸಾಹಸ ಕ್ರೀಡೆ ಮತ್ತು ಜೀಪ್ ಸವಾರಿ ಮಾಡಬಹುದು.

ಫಿಜಿ

ಸೂರ್ಯ, ಮರಳು ಮತ್ತು ಕಡಲತೀರ ಬಯಸಿದಲ್ಲಿ ಇದು ಅತ್ಯುತ್ತಮ ಸ್ಥಳ. 300 ದ್ವೀಪಗಳು ಇಲ್ಲಿವೆ. ಭಾರತೀಯರಿಗೆ ವೀಸಾ ಅಗತ್ಯವಿಲ್ಲ.

ಹೈಟಿ

ಈ ಕೆರಿಬಿಯನ್ ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಬೇಕಾಗಿಲ್ಲ. ಕನಿಷ್ಠ ಮೂರು ತಿಂಗಳು ಪಾಸ್‌ಪೋರ್ಟ್ ಇದ್ದರೆ ಇಲ್ಲಿ ತಂಗಬಹುದು.

ಬ್ರಿಟಿಷ್ ವರ್ಜಿನ್ ದ್ವೀಪಗಳು

ತಿಂಗಳವರೆಗೆ ಇಲ್ಲಿ ವೀಸಾ ಇಲ್ಲದೆ ಇರಬಹುದು. ಮೀನು ಹಿಡಿಯುವುದು, ಈಜುವುದರ ಜೊತೆಗೆ ಜಲ ತಾಣಗಳು, ರಾಷ್ಟ್ರೀಯ ಉದ್ಯಾನವನ ಮತ್ತು ಮ್ಯೂಸಿಯಂಗಳಿಗೆ ಭೇಟಿ ನೀಡಬಹುದು.

ಮೈಕ್ರೋನೇಷ್ಯಾ

ಇಲ್ಲಿ 607 ದ್ವೀಪಗಳಿವೆ. ಭೂಮಿಯ ಅತೀ ಸುಂದರ ಪ್ರಾಕೃತಿಕ ಪ್ರದೇಶಗಳಲ್ಲಿ ಒಂದು. ವೀಸಾ ಇಲ್ಲದೆ ಭಾರತೀಯರು ಇಲ್ಲಿ 30 ದಿನಗಳು ಇರಬಹುದು.

ಸೈಟ್ ಕಿಟ್ಸ್ & ನೆವಿಸ್

ವೆಸ್ಟ್ ಇಂಡೀಸ್‌ನ ಈ ಎರಡು ದ್ವೀಪಗಳು ಮಳೆಕಾಡುಗಳು, ಬೆಟ್ಟಗಳು, ನದಿಗಳು, ಸಮುದ್ರಕ್ಕೆ ಹೆಸರುವಾಸಿ. ಮಾನ್ಯತೆ ಪಡೆದ ಪಾಸ್‌ಪೋರ್ಟ್ ಹಿಡಿದು ವೀಸಾ ಇಲ್ಲದೆ ಭೇಟಿ ನೀಡಬಹುದು.

ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡಿನೆಸ್

ಈ ಕೆರಿಬಿಯನ್ ದೇಶದಲ್ಲಿ 32 ದ್ವೀಪಗಳಿವೆ. ಹವಳ ದ್ವೀಪಗಳು, ಕಡಲ ತೀರಗಳು ಮತ್ತು ಮಳೆಕಾಡುಗಳು ಇಲ್ಲಿನ ಆಕರ್ಷಣೆ. ದೋಣಿ, ಸ್ಕೂಬಾ ಡೈವಿಂಗ್ ಮತ್ತು ಇತರ ಸಾಹಸಕ್ಕೆ ಪ್ರಯತ್ನಿಸಬಹುದು. ವೀಸಾ ಬೇಕಾಗಿಲ್ಲ. ಇಲ್ಲಿಗೆ ತಲುಪಿದಾಗ ಅಂಗೀಕಾರ ಪತ್ರವನ್ನು ಪಡೆದು ಒಂದು ತಿಂಗಳು ಇರಬಹುದು.

ರಿಪಬ್ಲಿಕ್ ಆಫ್ ಟ್ರೆನಿಡಾಡ್ ಆಂಡ್ ಟೊಬಾಗೊ

ಸಸ್ಯ ಮತ್ತು ಪ್ರಾಣಿ ಪ್ರಬೇಧಕ್ಕೆ ಹೆಸರಾದ ದ್ವೀಪರಾಷ್ಟ್ರಕ್ಕೆ ವೀಸಾ ಇಲ್ಲದೆ ಭಾರತೀಯರು ಮೂರು ತಿಂಗಳು ಇರಬಹುದು.

ಕಾಮನ್‌ವೆಲ್ತ್ ಆಫ್ ಡೊಮಿನಿಕ

ವೀಸಾ ಇಲ್ಲದೆ ಆರು ತಿಂಗಳು ಇಲ್ಲಿರಬಹುದು. ಪ್ರಾಕೃತಿಕ ಸೌಂದರ್ಯ, ಸಸ್ಯ, ಮಳೆಕಾಡುಗಳು, ಪರ್ವತಗಳು ಮತ್ತು ಗಿಳಿಗಳು ಇಲ್ಲಿನ ಆಕರ್ಷಣೆ.

ವನೌಟು

80 ದ್ವೀಪಗಳಿವೆ. ಹೈಕಿಂಗ್, ಜ್ವಾಲಾಮುಖಿಗಳು, ಆಳವಾದ ಸಮುದ್ರ ಮೀನುಗಾರಿಕೆ, ಕೇಕಿಂಗ್ ಮತ್ತು ಸಮುದ್ರದಡಿ ಪ್ರಯಾಣ ಇತ್ಯಾದಿ ಆಕರ್ಷಣೆಗಳಿವೆ. ಭಾರತೀಯರು ವೀಸಾ ಇಲ್ಲದೆ 30 ದಿನ ಇರಬಹುದು.

ಟರ್ಕಿಷ್ ರಿಪಬ್ಲಿಕ್ ಆಫ್ ನಾರ್ತನ್ ಸೈಪ್ರಸ್

ಡಿಸ್ಕೊಗಳು, ಶಾಪಿಂಗ್, ಮನೋರಂಜನೆ ಮತ್ತು ಕಡಲತೀರಗಳು ಇಲ್ಲಿನ ಆಕರ್ಷಣೆ. ಭಾರತೀಯರು ಮೂರು ತಿಂಗಳ ಕಾಲ ವೀಸಾ ಇಲ್ಲದೆ ಇರಬಹುದು. ಆದರೆ ಪಾಸ್‌ಪೋರ್ಟ್ ಮತ್ತು ರಿಟರ್ನ್ ಟಿಕೆಟು ಮತ್ತಿತರ ದಾಖಲೆಗಳು ಬೇಕು.

ಟರ್ಕ್ಸ್ ಆಂಡ್ ಕೈಕೊಸ್ ದ್ವೀಪ

ರೆಸಾರ್ಟ್‌ಗಳು, ಕಡಲ ತೀರಗಳು, ಮಳಿಗೆಗಳು ಮತ್ತು ಸ್ಕೂಬಾ ಡೈವಿಂಗ್. 40 ದ್ವೀಪಗಳು ಇಲ್ಲಿವೆ. ನೀರಿನಡಿ ಓಡಾಡುವ ಅವಕಾಶವಿದೆ. ಭಾರತೀಯರಿಗೆ ವೀಸಾ ಅಗತ್ಯವಿಲ್ಲ.

ಕಿಶ್ ದ್ವೀಪ

ಜಗತ್ತಿನ 10 ಸುಂದರ ದ್ವೀಪಗಳಲ್ಲಿ ಒಂದೆಂದು ಹೇಳಲಾಗಿದೆ. ಶಾಪಿಂಗಿಗೆ ಉತ್ತಮ ಜಾಗ. ವೀಸಾ ಅಗತ್ಯವಿಲ್ಲ.

ಕುಕ್ ದ್ವೀಪಗಳು

ವೀಸಾ ಇಲ್ಲದೆ ಇಲ್ಲಿಗೆ ಹೋಗಬಹುದು. 31 ದಿನಗಳ ಕಾಲ ವೀಸಾ ಇಲ್ಲದೆ ಇರಬಹುದು. ನೀಲಿ ಸಮುದ್ರ, ಸ್ಕೂಬಾ ಡೈವಿಂಗ್ ಮತ್ತು ಪ್ರಕೃತಿ ಇಲ್ಲಿನ ಆಕರ್ಷಣೆ.

ಪಿಟಿಕೈರ್ನ್‌ ದ್ವೀಪ

ಶಾಂತ ರಜಾ ಬೇಕೆಂದರೆ ಇಲ್ಲಿಗೆ ಭೇಟಿ ನೀಡಬಹುದು. ವೀಸಾ ಅಗತ್ಯವಿಲ್ಲದೆ 14 ದಿನ ಇರಬಹುದು. ದ್ವೀಪರಾಷ್ಟ್ರದಲ್ಲಿ ಸಸ್ಯ ಮತ್ತು ಪ್ರಾಣಿಗಳ ಆಕರ್ಷಣೆಯಿದೆ. ಸಾಹಸ ಚಟುವಟಿಕೆಗಳಿಗೂ ಅವಕಾಶವಿದೆ.

ಮಾಂಟೆಸೆರಾಟ್

ಪಾಸ್‌ಪೋರ್ಟ್ ಇದ್ದರೆ ಇಲ್ಲಿಗೆ ವೀಸಾ ಇಲ್ಲದೆ ಭೇಟಿ ನೀಡಬಹುದು. ಜ್ವಾಲಾಮುಖಿಯನ್ನೂ ನೋಡಬಹುದು. ಹೆಲಿಕಾಪ್ಟರ್ ಮತ್ತು ದೋಣಿ ಪ್ರಯಾಣಕ್ಕೆ ಅವಕಾಶವಿದೆ.

Courtesy: http://travel.india.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News