ತಾಯಿಯ ಮಮತೆ- ಮಗುವಿನ ಮುಗ್ಧತೆಯಲ್ಲಿ ಮಿಂದೆದ್ದ ಬರಹಗಳು...

Update: 2016-05-06 17:25 GMT

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಬಂಧಗಳ ಸೊಗಸು ಇಳಿಮುಖವಾಗುತ್ತಿದೆ. ಕತೆ, ಕವನ ಸಂಕಲನಗಳು ಹೊರ ಬರುವಷ್ಟು ಭರದಲ್ಲಿ ಪ್ರಬಂಧಗಳು ಬರುತ್ತಿಲ್ಲ. ಹಾಸ್ಯ ಪ್ರಬಂಧಗಳ ನಡುವೆ, ಬದುಕಿನ ಸಣ್ಣ ಸಣ್ಣ ಹೊಳಹುಗಳನ್ನು ಕಟ್ಟಿಕೊಡುವ ಪ್ರಬಂಧ ಗಳು ಹೆಚ್ಚು ಹೆಚ್ಚು ಬರಬೇಕಾದ ಸಂದರ್ಭ ಇದೆ. ಈ ಹೊತ್ತಿನಲ್ಲಿ ಈ ಕಾರಣಕ್ಕಾಗಿಯೇ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿರುವ ‘ಅಮ್ಮನ ಜೋಳಿಗೆ’ ಹೆಚ್ಚು ಇಷ್ಟವಾಗುತ್ತದೆ. ಆತ್ಮೀಯ ಎನಿಸುತ್ತದೆ. ‘‘ಇಲ್ಲಿರುವ ಕಿರು ಪ್ರಬಂಧಗಳನ್ನು ಓದಿದಾಗ ನನ್ನ ಮನಸ್ಸು ಇಬ್ಬನಿಯಲ್ಲಿ ತೊಯ್ದ ಚಿಗುರೆಲೆಯಂತೆ ಒದ್ದೆಯಾಗಿ ಹೋಯಿತು.

ಅಂಥ ಸುಕುಮಾರ ಶಕ್ತಿ ಅವರ ಬರವಣಿಗೆಗಿದೆ...’’ ಎನ್ನುವ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮಾತುಗಳಲ್ಲಿ ನಿಜವಿದೆ. ತಾಯಿ ಮತ್ತು ಮಗುವಿನ ಸಂಬಂಧಗಳನ್ನು ವಸ್ತುವಾಗಿಟ್ಟುಕೊಂಡ ಇಲ್ಲಿನ ಪ್ರಬಂಧಗಳಿಗೆ ಕಥನ ಶಕ್ತಿಯೂ ಇದೆ. ಒಬ್ಬ ತಾಯಿ ಹೇಗೆ ತಾನು ತನ್ನ ಮಗುವಿನ ಮೂಲಕ ಬೆಳೆಯುತ್ತಾ ಹೋದೆ ಎನ್ನುವುದನ್ನು ನಿರೂಪಿಸುತ್ತಾ ಹೋಗುವ ಬರಹಗಳು ಇವು. ‘ತಾಯ್ತನದ ಧಾರಣ ಶಕ್ತಿ, ಅಪರಿಮಿತ ವಾತ್ಸಲ್ಯ ಈ ಎಲ್ಲವನ್ನೂ ಹೆಗ್ಗಳಿಕೆಯ ಗುಣಗಳಾಗಿ ನಾವು ಯಾವಾಗಲೂ ಮೆರೆಸುತ್ತಿರುತ್ತೇವೆ.

ನಿಜವೆಂದರೆ ಈ ಎಲ್ಲ ಗುಣಗಳನ್ನೂ ನಮಗೆ ಕಲಿಸಿಕೊಡುವ ಮಹಾಗುರು ಮಗು’’ ಎನ್ನುವ ಆಶಾದೇವಿಯವರ ಮಾತುಗಳು ಇಲ್ಲಿನ ಪ್ರತಿ ಪ್ರಬಂಧದಲ್ಲೂ ಮರು ಜೀವ ಪಡೆಯುತ್ತದೆ. ಒಂದು ಮಗು ಹುಟ್ಟುವಾಗ ಅದರ ಜೊತೆ ಜೊತೆಗೇ ಒಬ್ಬ ತಂದೆ ಅಥವಾ ಒಬ್ಬ ತಾಯಿ ಕೂಡ ಹುಟ್ಟುತ್ತಾಳೆ. ಇಲ್ಲಿ ಮಗು ಬೆಳೆಯುತ್ತಾ ಹೋದ ಹಾಗೆ, ಆ ತಂದೆ ಅಥವಾ ತಾಯಿ ಕೂಡ ಬೆಳೆಯಬೇಕು. ಈ ಹೊಣೆಗಾರಿಕೆಯನ್ನು ಸೂಚ್ಯವಾಗಿ ಪ್ರಬಂಧಗಳು ನಮಗೆ ತಿಳಿಸಿಕೊಡುತ್ತದೆ. ತಾಯಿಯ ಮಮತೆ, ಮಗುವಿನ ಮುಗ್ಧತೆಯಲ್ಲಿ ಮಿಂದೆದ್ದ ಬರಹಗಳು ನಿಮ್ಮನ್ನು ಹಿತವಾಗಿ ಆವರಿಸಿಕೊಳ್ಳುತ್ತಾ ಹೋಗುವ ಬಗೆಯನ್ನು ಓದಿಯೇ ಅನುಭವಿಸಬೇಕು. ಅಭಿನವ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 75 ರೂ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News