ಗುಜರಾತ್: ನಿರಾಶಾದಾಯಕ ವರದಿಯಿಂದ ಕಂಗೆಟ್ಟಿರುವ ಬಿಜೆಪಿ

Update: 2016-05-16 12:09 GMT

ಹೊಸದಿಲ್ಲಿ,ಮೇ 16: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ ಶಾ ಅವರು ಮುಂದಿನ ವರ್ಷ ನಡೆಯಲಿರುವ ತವರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರವೊಂದನ್ನು ರೂಪಿಸುತ್ತಿದ್ದು, ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಿಸುವ ಬಗ್ಗೆ ಬಿಜೆಪಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷದ ಭಾರೀ ಪ್ರತಿಷ್ಠೆಯ ಚುನಾವಣೆಯಲ್ಲಿ ಹೋರಾಟಕ್ಕೆ ಸಿದ್ಧತೆಗಾಗಿ ಮೇಲಿಂದ ಮೇಲೆ ಸಭೆಗಳು ನಡೆಯುತ್ತಲೇ ಇವೆ. ನೂತನ ಮುಖ್ಯಮಂತ್ರಿ ನೇಮಕಕ್ಕೆ ಮಾರ್ಗವನ್ನು ಸುಗಮಗೊಳಿಸಲು ಆನಂದಿ ಬೆನ್ ಅವರನ್ನು ಯಾವುದಾದರೊಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗುಜರಾತ್‌ನಲ್ಲಿ ಆರೋಗ್ಯ ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ಹೊಂದಿರುವ ನಿತಿನ್‌ಭಾಯಿ ಪಟೇಲ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಮುಂಚೂಣಿಯಲ್ಲಿದ್ದಾರೆನ್ನಲಾಗಿದ್ದು, ಕಳೆದ ವಾರ ದಿಲ್ಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿದ್ದರು.
ಎರಡು ವರ್ಷಗಳ ಹಿಂದೆ ಪ್ರಧಾನಿ ಗಾದಿಯನ್ನೇರುವ ಮುನ್ನ ಖುದ್ದು ಮೋದಿಯವರೇ ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದ ಆನಂದಿ ಬೆನ್ ರಾಜ್ಯದಲ್ಲಿ ಮೀಸಲಾತಿಗಾಗಿ ನಡೆದ ಪಟೇಲ್ ಸಮುದಾಯದ ಭಾರೀ ಪ್ರತಿಭಟನೆಯನ್ನು ನಿಭಾಯಿಸುವಲ್ಲಿ ಹೈರಾಣಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಆರಂಭಗೊಂಡ ಈ ಮುಷ್ಕರದಿಂದಾಗಿ ಬಿಜೆಪಿಯು ತನ್ನ ಅತ್ಯಂತ ಪ್ರಬಲ ಮತ್ತು ಅತ್ಯಂತ ನಿಷ್ಠ ವೋಟ್‌ಬ್ಯಾಂಕ್‌ನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.
ಪಟೇಲ್ ಪ್ರತಿಭಟನೆಯ ನಾಯಕ ಹಾರ್ದಿಕ ಪಟೇಲ್ ಅವರು ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿ 200 ದಿನಗಳೇ ಕಳೆದು ಹೋಗಿವೆ. 2017ರ ಚುನಾವಣೆ ಸಮೀಪಿಸುತ್ತಿರುವುದರಿಂದ ತನ್ನ ರಾಜಕೀಯ ಬೆಂಬಲದ ಬುನಾದಿಯನ್ನು ಗಟ್ಟಿ ಮಾಡಿಕೊಳ್ಳಲು ಮತ್ತು ತನ್ನ ಎರಡು ದಶಕಗಳ ಆಡಳಿತದಲ್ಲಿ ಯಾವುದೇ ಆಡಳಿತ ವಿರೋಧಿ ಭಾವನೆಯನ್ನು ಕಿತ್ತು ಹಾಕಲು ಬಿಜೆಪಿ ಬಯಸಿದೆ.
 ಮೋದಿಯವರ ನಿಕಟವರ್ತಿ ಓಂ ಮಾಥುರ್ ರಾಜ್ಯದಲ್ಲಿಯ ರಾಜಕೀಯ ಸ್ಥಿತಿ ಕುರಿತು ಸಲ್ಲಿಸಿರುವ ವರದಿಯು ಗುಜರಾತ್ ಬಿಜೆಪಿಯ ಕಳವಳಕ್ಕೆ ಮೂಲಕಾರಣವಾಗಿದೆ. ಪಟೇಲ್ ಚಳುವಳಿಯನ್ನು ನಿರ್ವಹಿಸುವಲ್ಲಿ ಆನಂದಿ ಬೆನ್ ವಿಫಲರಾಗಿದ್ದಾರೆ ಎಂದು ಬೆಟ್ಟು ಮಾಡಿರುವ ವರದಿಯು, ರಾಜ್ಯ ಘಟಕದಲ್ಲಿಯ ಒಳಜಗಳಕ್ಕೆ ತುರ್ತಾಗಿ ಅಂತ್ಯ ಹಾಡಬೇಕಾದ ಅಗತ್ಯವಿದೆ ಎಂದು ಹೇಳಿದೆಯೆನ್ನಲಾಗಿದೆ.
ರಾಜ್ಯ ಸರಕಾರ ಮತ್ತು ಬಿಜೆಪಿ ನಡುವೆ ಸಂವಹನ ಮತ್ತು ಸಮನ್ವಯದಲ್ಲಿ ಸುಧಾರಣೆಯಾಗಬೇಕಾದ ಅಗತ್ಯವಿದೆ ಎಂದಿರುವ ವರದಿಯು, ಸರಕಾರ ಮತ್ತು ಪಕ್ಷದ ಸ್ವರೂಪದಲ್ಲಿ ಬದಲಾವಣೆಯಾಗಬೇಕು ಎಂದಿದೆ.
ಮಾಥುರ್ ಅವರು ಶಾಗೆ ತನ್ನ ವರದಿ ಸಲ್ಲಿಸಿದ ನಂತರ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ವರದಿ ಸ್ವೀಕರಿಸಿದ ಬಳಿಕ ಶಾ ಅವರು ರಾಜ್ಯದ ಎಲ್ಲ ಶಾಸಕರು ಮತ್ತು ಹಿರಿಯ ಬಿಜೆಪಿ ನಾಯಕರ ಸಭೆಯನ್ನು ಕರೆದಿದ್ದರು.
 ಗುಜರಾತ್‌ನಲ್ಲಿ ನೀರಿನ ಲಭ್ಯತೆಯ ಕುರಿತು ಚರ್ಚಿಸಲು ಇಂದು ಮೋದಿಯವರನ್ನು ಭೇಟಿಯಾಗಿದ್ದ ಆನಂದಿ ಬೆನ್ ಇನ್ನು ಕೆಲವೇ ತಿಂಗಳಲ್ಲಿ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಮೋದಿಯವರು ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಿಗೆ ವಯೋಮಿತಿಯನ್ನು ನಿಗದಿಗೊಳಿಸಿರುವುದರಿಂದ ಆನಂದಿ ಬೆನ್ ಅವರನ್ನು ಎತ್ತಂಗಡಿ ಮಾಡಲು ಬಿಜೆಪಿಗೆ ಇದು ಉತ್ತಮ ಕಾರಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News