ಹೊಸ ದಂತವೈದ್ಯಕೀಯ ಕಾಲೇಜಿಗೆ ಅವಕಾಶವಿಲ್ಲ

Update: 2016-05-18 03:24 GMT

ಮುಂಬೈ, ಮೇ 18: ಆರೋಗ್ಯ ಕ್ಷೇತ್ರದಲ್ಲೂ ಇದೀಗ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಅಧಿಕ ಸಂಖ್ಯೆಯಲ್ಲಿ ದಂತವೈದ್ಯರು ಇರುವುದರಿಂದ ದಂತವೈದ್ಯ ಪದವೀಧರರಿಗೆ ಬೇಡಿಕೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಎಲ್ಲ ಹೊಸ ದಂತ ವೈದ್ಯಕೀಯ ಕಾಲೇಜು ಸ್ಥಾಪನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹೊಸ ದಂತ ವೈದ್ಯ ಸಂಸ್ಥೆಗಳಿಗೆ ಅನುಮತಿ ನೀಡುವುದನ್ನು ಸ್ಥಗಿತಗೊಳಿಸುವ ದೃಢ ನಿರ್ಧಾರವನ್ನು ಇತ್ತೀಚೆಗೆ ನಡೆದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸರ್ವಸದಸ್ಯರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಲಿ ಅಸ್ತಿತ್ವದಲ್ಲಿರುವ ದಂತವೈದ್ಯ ಕಾಲೇಜುಗಳ ಮನವಿ ಮೇರೆಗೆ ಮತ್ತು ದಂತವೈದ್ಯ ಪದವೀಧರರಿಗೆ ವ್ಯಾಪಕ ನಿರುದ್ಯೋಗದ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ದೇಶದಲ್ಲಿ ಇದೀಗ 309 ದಂತವೈದ್ಯ ಕಾಲೇಜುಗಳಿದ್ದು, ಪ್ರತಿ ವರ್ಷ 26 ಸಾವಿರ ದಂತವೈದ್ಯರು ಹೊರಬರುತ್ತಾರೆ. ಈ ಪ್ರಮಾಣ 2010ರಲ್ಲಿ ಅತ್ಯಧಿಕ ಎಂದರೆ 30570 ಇತ್ತು. 1970ರಲ್ಲಿ ಪ್ರತಿ ವರ್ಷ ಕೇವಲ 8 ಸಾವಿರ ದಂತವೈದ್ಯರಷ್ಟೇ ಸೃಷ್ಟಿಯಾಗುತ್ತಿದ್ದರು.

ಹಾಲಿ ಇರುವ ಸಂಖ್ಯೆಯನ್ನು ಈ ಪ್ರಮಾಣದಲ್ಲೇ ಉಳಿಸಿಕೊಂಡು, ಸಂಸ್ಥೆಗಳನ್ನು ಬಲಪಡಿಸುವುದು ಒಳ್ಳೆಯ ಯೋಚನೆ ಎಂದು ಡಿಸಿಐ ಸದಸ್ಯ ಹಾಗೂ ಸರ್ಕಾರಿ ದಂತವೈದ್ಯ ಕಾಲೇಜಿನ ಡೀನ್ ಡಾ.ಮಾನ್‌ಸಿಂಗ್ ಪವಾರ್ ಹೇಳುತ್ತಾರೆ. ಆದರೆ ಈಶಾನ್ಯ ರಾಜ್ಯಗಳಿಗೆ ಇದರಿಂದ ವಿನಾಯ್ತಿ ನೀಡಬಹುದು ಎನ್ನುವುದು ಅವರ ಅಭಿಮತ.

ದೇಶದಲ್ಲಿ ಸುಮಾರು ಮೂರು ಲಕ್ಷ ದಂತವೈದ್ಯರಿದ್ದು, ಇವರ ಹಂಚಿಕೆ ಮಾತ್ರ ಸಮ ಪ್ರಮಾಣದಲ್ಲಿಲ್ಲ. ಭಾರತದ ನಗರ ಪ್ರದೇಶಗಳಲ್ಲಿ 10 ಸಾವಿರ ಮಂದಿಗೆ ಒಬ್ಬ ದಂತವೈದ್ಯರಿದ್ದರೆ, ಗ್ರಾಮೀಣ ಭಾಗಗಳಲ್ಲಿ 2.5 ಲಕ್ಷ ಮಂದಿಗೆ ಒಬ್ಬರಂತೆ ದಂತ ವೈದ್ಯರಿದ್ದಾರೆ. ದೇಶದಲ್ಲಿ 2020ರ ವೇಳೆಗೆ ಒಂದು ಲಕ್ಷ ದಂತ ವೈದ್ಯರು ಹೆಚ್ಚುವರಿಯಾಗಿ ಉಳಿಯಲಿದ್ದಾರೆ ಎಂಬ ಅಂದಾಜು ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News