ದಿಲ್ಲಿ: ಕಾಂಗೊ ಪ್ರಜೆಯ ಥಳಿಸಿ ಕೊಲೆ
ಹೊಸದಿಲ್ಲಿ, ಮೇ 21: ದಕ್ಷಿಣ ದಿಲ್ಲಿಯ ವಸಂತಕುಂಜ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು 23ರ ಹರೆಯದ ಕಾಂಗೊ ದೇಶದ ಪ್ರಜೆಯನ್ನು ಹೊಡೆದು ಕೊಂದಿದ್ದಾರೆಂದು ಪೊಲೀಸರಿಂದು ತಿಳಿಸಿದ್ದಾರೆ.
ಎಂಟಿ. ಒಲಿವಾ ಎಂಬ ಈ ನತದೃಷ್ಟ ವ್ಯಕ್ತಿ ನಿನ್ನೆ ರಾತ್ರಿ ಸುಮಾರು 11:45ರ ವೇಳೆ ಮನೆಗೆ ಮರಳುತ್ತಿದ್ದಾಗ ಕಿಶನ್‌ಗಡ ಪ್ರದೇಶದಲ್ಲಿ ಮೂವರು ವ್ಯಕ್ತಿಗಳೊಂದಿಗೆ ಜಗಳ ನಡೆದಿತ್ತು. ರಿಕ್ಷಾ ಒಂದನ್ನು ಬಾಡಿಗೆಗೆ ಪಡೆಯುವ ವಿಚಾರದಲ್ಲಿ ಈ ಜಗಳ ನಡೆದಿತ್ತು. ವಾಗ್ವಾದದ ಬಳಿಕ ಆ ಮೂವರು ವ್ಯಕ್ತಿಗಳು ಒಲಿವಾರ ಮೇಲೆ ದಾಳಿ ನಡೆಸಿದರು. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸುಮಾರು 20 ಮೀಟರ್ ದೂರ ಬೆನ್ನಟ್ಟಿ ಹಿಡಿದ ದುಷ್ಕರ್ಮಿಗಳು ಆತನನ್ನು ಕಲ್ಲು ಹಾಗೂ ಇಟ್ಟಿಗೆಗಳಿಂದ ಥಳಿಸಿದ್ದಾರೆ.
ಇನ್ನೊಂದು ಸ್ಥಳೀಯ ಗುಂಪು ಒಲಿವಾರನ್ನು ರಕ್ಷಿಸಿ, ಪೊಲೀಸರನ್ನು ಕರೆಸಿತು. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಬಳಿಕ ಅವರು ಕೊನೆಯುಸಿರೆಳೆದರು.
ಘಟನೆಗೆ ಸಂಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸುತ್ತಿದ್ದೇವೆಂದು ಹಿರಿಯ ಪೊಲೀಸ್ ಅಧಿಕಾರಿ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಪ್ರಕರಣವನ್ನು ದರೋಡೆ ಹಾಗೂ ಸಂಭಾವ್ಯ ಜನಾಂಗೀಯ ದಾಳಿ ಸಹಿತ ಎಲ್ಲ ಮಗ್ಗುಲುಗಳಲ್ಲಿ ತನಿಖೆ ನಡೆಸಲಾಗುವುದೆಂದು ಪೊಲೀಸರು ಹೇಳಿದ್ದಾರೆ. ಕಾಂಗೊ ದೂತಾವಾಸಕ್ಕೆ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ.
ಒಲಿವಾ ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ವಿದೇಶಿ ಭಾಷೆಗಳನ್ನು ಕಲಿಸುತ್ತಿದ್ದರು. ಅವರು ದಿಲ್ಲಿಯ ದಕ್ಷಿಣ ಬಡಾವಣೆಯಲ್ಲಿ ವಾಸಿಸುತ್ತಿದ್ದರು.
ಕೆಲವು ಸ್ಥಳೀಯರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.