ಹರ್ಯಾಣ: ಜಾಟ್ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ

Update: 2016-05-26 17:41 GMT

ಚಂಡಿಗಡ, ಮೇ 26: ಹೊಸದಾಗಿ ಸೃಷ್ಟಿಸಿದ ಹಿಂದುಳಿದ ಜಾತಿಗಳು (ಸಿ) ಪ್ರವರ್ಗದಲ್ಲಿ ಜಾಟರು ಹಾಗೂ ಇತರ ನಾಲ್ಕು ಸಮುದಾಯಗಳಿಗೆ ಹರ್ಯಾಣ ಸರಕಾರ ಒದಗಿಸಿದ್ದ ಮೀಸಲಾತಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ರಾಜ್ಯ ವಿಧಾನಸಭೆಯಲ್ಲಿ ಮಾ.29ರಂದು ಸರ್ವಾನಮತದಿಂದ ಮಂಜೂರು ಮಾಡಲಾಗಿದ್ದ ಹರ್ಯಾಣ ಹಿಂದುಳಿದ ವರ್ಗಗಳ (ಸೇವೆಗಳ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮೀಸಲಾತಿ) ಕಾಯ್ದೆ-2016 ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ತಡೆಯಾಜ್ಞೆ ವಿಧಿಸಿದೆ.

ಭಿವಾನಿಯ ಮುರಾರಿಲಾಲ್ ಗುಪ್ತಾ ಎಂಬವರು ಈ ಕಾಯ್ದೆಯನ್ನು ಪ್ರಶ್ನಿಸಿದ್ದರು. ಹೊಸದಾಗಿ ಸೃಷ್ಟಿಸಿರುವ ಹಿಂದುಳಿದ ವರ್ಗಗಳು (ಸಿ) ಪ್ರವರ್ಗದಲ್ಲಿ ಜಾಟರಿಗೆ ಮೀಸಲಾತಿ ಕಲ್ಪಿಸಿರುವ ಕಾಯ್ದೆಯ ಬ್ಲಾಕ್ ಸಿಯನ್ನು ರದ್ದುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಮೂರ್ತಿ ಕೆ.ಸಿ. ಗುಪ್ತಾ ಆಯೋಗದ ವರದಿಯ ಆಧಾರದಲ್ಲಿ ಹೊಸ ಕಾಯ್ದೆಯ ಮೂಲಕ ಜಾಟರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಆ ವರದಿಯನ್ನು ಸುಪ್ರೀಂಕೋರ್ಟ್ ಈಗಾಗಲೇ ರದ್ದುಪಡಿಸಿದೆಯೆಂದು ಗುಪ್ತಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News