ಪ್ರಧಾನಿ ಮೋದಿ ಪತ್ನಿಯನ್ನು ಬಿಟ್ಟ ಬ್ರಹ್ಮಚಾರಿ

Update: 2016-05-27 04:55 GMT

ಭೋಪಾಲ್, ಮೇ 27: ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಹಾಗು ಹಾಲಿ ಗೃಹ ಸಚಿವ ಬಾಬುಲಾಲ್ ಗೌರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇಲ್ಲಿನ ರಾಯ್ ಸೇನ್ ನಲ್ಲಿ  ಸರಕಾರೀ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು " ದೇಶಸೇವೆಗಾಗಿ ತಮ್ಮ ಪತ್ನಿಯನ್ನು ಬಿಟ್ಟು ಪ್ರಧಾನಿ ಮೋದಿ ಅವರು ಬ್ರಹ್ಮಚಾರಿಯಾಗಿದ್ದಾರೆ " ಎಂದು ಗೌರ್ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. 

" ದೇಶದ ಪ್ರಧಾನಿ ಮೋದಿ ಅವರು ಬ್ರಹ್ಮಚಾರಿ. ಅವರಿಗೆ ಮಕ್ಕಳು, ಕುಟುಂಬ ಇಲ್ಲ. ದೇಶಸೇವೆಗಾಗಿ ಅವರು ತಮ್ಮ ಪತ್ನಿಯನ್ನೂ ಬಿಟ್ಟು ಬಿಟ್ಟರು. ಅವರು ಬಹಳ ಚಾಣಾಕ್ಷ, ಯೋಗಿ ಹಾಗು ತಪಸ್ವಿ ವ್ಯಕ್ತಿಯಾಗಿದ್ದಾರೆ " ಎಂದು ಗೌರ್ ಹೇಳಿದ್ದಾರೆ.

ಇದು ಪ್ರಧಾನಿ ಮೋದಿ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ. 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಾನು ವಿವಾಹಿತ ಎಂದು ನಮೂದಿಸಿದ್ದು ತನ್ನ ಪತ್ನಿ ಜಶೋದಾ ಬೆನ್ ಎಂದು ಒಪ್ಪಿಕೊಂಡಿದ್ದಾರೆ . ಆದರೆ ಈಗ ಅವರ ಪಕ್ಷದ ಹಿರಿಯ ನಾಯಕ ಗೌರ್ ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 

ಮಹಿಳಾ ಸಂಘಟನೆಗಳು ಗೌರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. "ಇವರಿಗೆ ಪ್ರಧಾನಿ ಬಗ್ಗೆಯಾಗಲಿ, ಮಹಿಳೆಯರ ಬಗ್ಗೆಯಾಗಲಿ ಗೌರವವಿಲ್ಲ. ಇದು ಆತಂಕಕಾರಿ ಹೇಳಿಕೆ " ಎಂದು  ಹೇಳಿವೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News