ಎಚ್ಚರ ! ವಾಟ್ಸ್ ಆಪ್ ಗೋಲ್ಡ್ ಎಂಬ ಹೊಸ ವಂಚನೆ
ಮತ್ತೊಂದು ವಾಟ್ಸ್ ಆಪ್ ಸಂಬಂಧಿತ ವಂಚನೆ ಇಂಟರ್ನೆಟ್ ನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಎಲ್ಲ ಬಳಕೆದಾರರು ಜಾಗೃತರಾಗಬೇಕಿದೆ.
ವೀಡಿಯೋ ಕಾಲಿಂಗ್, 100 ಫೋಟೋಗಳನ್ನು ಒಮ್ಮೆಲೇ ಕಳಿಸುವ ಸೌಲಭ್ಯ ಇತ್ಯಾದಿ ಇದೆ ಹಾಗು ಇದು ಕೇವಲ ಇನ್ವೈಟ್ ಸಿಕ್ಕಿದವರಿಗೆ ಮಾತ್ರ ಮೀಸಲು, ಗಣ್ಯರು ಮಾತ್ರ ಬಳಸುತ್ತಿದ್ದಾರೆ ಎಂದು ಹೇಳಲಾಗುವ ಇದನ್ನು ಹಾಕಿದರೆ ನಿಮ್ಮ ಸ್ಮಾರ್ಟ್ ಫೋನ್ ಮಾಲ್ವೇರ್ ನಿಂದ ದುಷ್ಪರಿಣಾಮ ಬೀರುವುದು ಖಚಿತ .
ಇದರಲ್ಲಿ ಬಳಕೆದಾರರು ಒಂದು ಮೆಸೇಜ್ ಅನ್ನು ಕ್ಲಿಕ್ ಮಾಡಲು ಹೇಳಲಾಗುತ್ತದೆ. ಅದು ಅವರನ್ನು www.goldenversion.com ವೆಬ್ ಸೈಟ್ ಗೆ ಕೊಂಡು ಹೋಗಿ ಆಪ್ ನ ಗೋಲ್ಡ್ ವರ್ಶನ್ ಡೌನ್ ಲೋಡ್ ಮಾಡಲು ಹೇಳುತ್ತದೆ.
ಆಗ ನೀವು ನಿರ್ಲಕ್ಷ್ಯದಿಂದ ಇದನ್ನು ನಂಬಿದರೆ ನಿಮ್ಮ ಫೋನ್ ನಲ್ಲಿರುವ ಖಾಸಗಿ ಮಾಹಿತಿ ಯಾರ್ಯಾರ ಪಾಲಾಗುತ್ತದೆ , ನಿಮ್ಮ ಲೋಕೇಶನ್ ಬೇರೆಯವರಿಗೆ ತಿಳಿಯುತ್ತದೆ. ಈ ಹಿಂದೆಯೂ ವಾಟ್ಸ್ ಆಪ್ ಪ್ಲಸ್ ಇತ್ಯಾದಿ ಹೆಸರುಗಳಲ್ಲಿ ಇದೇ ರೀತಿ ವಂಚಿಸುವ ಯತ್ನ ನಡೆದಿತ್ತು. ಆ ಬಗ್ಗೆ ವಾಟ್ಸ್ ಆಪ್ ಕೂಡ ಅದು ನಮ್ಮ ಆಪ್ ಅಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಎಚ್ಚರಿಕೆ ನೀಡಿತ್ತು.
ವಾಟ್ಸ್ ಆಪ್ ಹೊಸ ಅಪ್ ಗ್ರೇಡ್ ಬಂದಾಗ ಅಲ್ಲಿಂದಲೇ ನಿಮಗೆ ಇಮೇಲ್ ಅಥವಾ ಅಧಿಕೃತ ಮೆಸೇಜ್ ಮೂಲಕ ಅಪ್ ಗ್ರೇಡ್ ಮಾಡಲು ಹೇಳುತ್ತದೆ. ಅಲ್ಲೀವರೆಗೆ ಇಂತಹ ವಂಚನೆಯ ಬಲೆಗೆ ಬೀಳಬೇಡಿ.