ನಾಲ್ವರು ಉಗ್ರರನ್ನು ಹತ್ಯೆಗೈದು ಹುತಾತ್ಮನಾದ ದಾದಾ

Update: 2016-05-27 17:07 GMT

ಶ್ರೀನಗರ,ಮೇ 27: ಭಾರತೀಯ ಸೇನಾಪಡೆಯ ಯೋಧ 36 ವರ್ಷ ವಯಸ್ಸಿನ ಹವಾಲ್ದಾರ್ ಹಂಗ್‌ಪನ್ ದಾದಾ, ಉತ್ತರಕಾಶ್ಮೀರದ ಶಮ್ಸಾಬಾರಿ ಪರ್ವತದ ಮೇಲೆ ನಾಲ್ವರು ಶಸ್ತ್ರಸಜ್ಜಿತ ಉಗ್ರರೊಂದಿಗೆ ವೀರಾವೇಶದಿಂದ ಹೋರಾಡಿ,ಅವರೆಲ್ಲರನ್ನೂ ಹತ್ಯೆಗೈದ ಬಳಿಕ ವೀರಮರಣವನ್ನಪ್ಪಿದ್ದಾನೆ. ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಉತ್ತರಕಾಶ್ಮೀರದ ಗಡಿಯೊಳಗೆ ನುಗ್ಗಲು ಯತ್ನಿಸುತ್ತಿದ್ದಾಗ ಈ ಘರ್ಷಣೆ ಸಂಭವಿಸಿದೆ.
     ಹವಾಲ್ದಾರ್ ದಾದಾ ಅವರ ನೇತೃತ್ವದ 35ನೆ ರಾಷ್ಟ್ರೀಯ ರೈಫಲ್ಸ್ ತಂಡವು ಕಳೆದ ವರ್ಷದಿಂದ 13 ಸಾವಿರ ಅಡಿ ಎತ್ತರದ ಶಮ್ಸಾಬಾರಿ ಪರ್ವತಶ್ರೇಣಿಯಲ್ಲಿ ನಿಯೋಜಿಸಲ್ಪಟ್ಟಿತ್ತು. ದಾದಾ ಎಂದೇ ಹೆಸರಾದ, ಹಂಗ್‌ಪನ್ ಅವರ ತಂಡವು ಗುರುವಾರ ಗಡಿಪ್ರದೇಶದಲ್ಲಿ ಉಗ್ರರ ಚಲನವಲನಗಳನ್ನು ಪತ್ತೆಹಚ್ಚಿತು. ಕೂಡಲೇ ತಂಡವು ಗುಂಡಿನಕಾಳಗವನ್ನು ಆರಂಭಿಸಿದಾಗ ಭೀಕರ ಘರ್ಷಣೆ ಭುಗಿಲೆದ್ದಿತು. ಇಂದು ಬೆಳಗ್ಗಿನವರೆಗೂ ಕಾಳಗ ಮುಂದುವರಿದಿತ್ತು.
1997ರಲ್ಲಿ ಅಸ್ಸಾಂ ರೆಜಿಮೆಂಟ್‌ಗೆ ಸೇರ್ಪಡೆಗೊಂಡಿದ್ದ ದಾದಾ, ಪ್ರಸ್ತುತ ಉಗ್ರರ ದಮನಕ್ಕೆಂದು ವಿಶೇಷವಾಗಿ ರೂಪಿಸಲ್ಪಟ್ಟ 35 ರಾಷ್ಟ್ರೀಯ ರೈಫಲ್ಸ್ ಪಡೆಗೆ ನಿಯೋಜಿಸಲ್ಪಟ್ಟಿದ್ದರು.ಪಾಕ್ ಆಕ್ರಮಿತ ಕಾಶ್ಮೀರದ ಗಡಿದಾಟಿ ಬಂದಿದ್ದ ಉಗ್ರರು, ತುಸು ಎತ್ತರದ ಪ್ರದೇಶದಿಂದ ಭಾರತೀಯ ಯೋಧರೆಡೆಗೆ ಗುಂಡು ಹಾರಿಸತೊಡಗಿದರು. ಗುಂಡಿನ ಚಕಮಕಿಯಲ್ಲಿ ಗಂಭೀರ ಗಾಯಗೊಂಡ ಹವಾಲ್ದಾರ್ ದಾದಾ, ತನ್ನ ಜೀವದಹಂಗನ್ನೂ ಲೆಕ್ಕಿಸದೆ ಶತ್ರುಗಳ ವಿರುದ್ಧ ಕಾದಾಡಿದ್ದಾನೆ ಹಾಗೂ ದೇಶಕ್ಕೆ ಪರಮೋಚ್ಚ ತ್ಯಾಗವನ್ನು ಮಾಡಿದ್ದಾನೆಂದು, ಸೇನಾಪಡೆಯ ಅಧಿಕೃತ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News