ಡೊಂಬಿವಿಲಿ ಕಾರ್ಖಾನೆ ಸ್ಫೋಟ: ಸತ್ತವರ ಸಂಖ್ಯೆ 12ಕ್ಕೇರಿಕೆ

Update: 2016-05-28 17:16 GMT

ಮುಂಬೈ, ಮೇ 28: ಶನಿವಾರ ಇನ್ನೊಂದು ಮೃತದೇಹ ಪತ್ತೆಯಾಗುವುದರೊಂದಿಗೆ ಥಾಣೆ ಜಿಲ್ಲೆಯ ಡೊಂಬಿವಿಲಿಯ ಕಾರ್ಖಾನೆಯೊಂದರಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 12ಕ್ಕೇರಿದೆ.

ಇದೇ ವೇಳೆ,ರಕ್ಷಣಾ ಕಾರ್ಯಾಚರಣೆಯು ಅಂತ್ಯಗೊಂಡಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ(ಎನ್‌ಡಿಆರ್‌ಎಫ್)ಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮೃತರಲ್ಲಿ ಪ್ರೊಬೇಸ್ ಎಂಟರ್‌ಪ್ರೈಸಸ್‌ನ ಮಾಲಕ ಡಾ.ವಿಶ್ವಾಸ ವಿ.ವಾಕಟ್‌ಕರ್ ಅವರ ಇಬ್ಬರು ಪುತ್ರರು ಮತ್ತು ಸೊಸೆ ಸೇರಿದ್ದಾರೆ.
ಗುರುವಾರ ಡೊಂಬಿವಿಲಿಯ ಶಿವಾಜಿ ಉದ್ಯಮ ನಗರದಲ್ಲಿಯ ಪ್ರೊಬೇಸ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಭಾರೀ ಬೆಂಕಿಯುಂಟಾಗಿದ್ದು , ನೆರೆಯ ಎರಡು ಫ್ಯಾಕ್ಟರಿಗಳಿಗೂ ಭಾರೀ ನಷ್ಟ ಸಂಭವಿಸಿತ್ತು. ಸುಮಾರು ಎರಡು ಕಿ.ಮೀ.ವ್ಯಾಪ್ತಿಯಲ್ಲಿನ 600ಕ್ಕೂ ಅಧಿಕ ಮನೆಗಳು,ಕಚೇರಿಗಳು ಮತ್ತು ಅಂಗಡಿಗಳಿಗೂ ಹಾನಿಯುಂಟಾಗಿತ್ತು.
ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸುರಕ್ಷತೆಯ ಪರಿಶೀಲನೆಗಾಗಿ ನಗರದಲ್ಲಿನ ಮತ್ತು ಆಸುಪಾಸಿನ ಎಲ್ಲ ರಾಸಾಯನಿಕ ಕಾರ್ಖಾನೆಗಳನ್ನು ಒಂದು ವಾರದ ಅವಧಿಗೆ ಮುಚ್ಚಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News