ಆಫ್ರಿಕ ಪ್ರಜೆಗಳ ಮೇಲೆ ನಿರಂತರ ದಾಳಿ ಪ್ರಕರಣ: ಗೃಹ ಸಚಿವ ರಾಜ್‌ನಾಥ್ ಸಿಂಗ್ ತೀವ್ರ ಖಂಡನೆ

Update: 2016-05-29 07:48 GMT

 ಹೊಸದಿಲ್ಲಿ, ಮೇ 29: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ಸಮಯದಿಂದ ಆಫ್ರಿಕದ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಈ ಸಂಬಂಧ ದಿಲ್ಲಿಯ ಪೊಲೀಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಆಫ್ರಿಕ ಪ್ರಜೆಗಳ ಮೇಲಿನ ದಾಳಿಗೆ ಸಂಬಂಧಿಸಿ ಗೃಹ ಸಚಿವರು ಹಾಗೂ ದಿಲ್ಲಿಯ ರಾಜ್ಯಪಾಲ ನಜೀಬ್ ಜಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ತಮ್ಮ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಮಂಗಳವಾರ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಆಫ್ರಿಕದ ವಿದ್ಯಾರ್ಥಿಗಳು ಯೋಜನೆ ಹಾಕಿಕೊಂಡಿದ್ದಾರೆ. ಆಫ್ರಿಕದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ದಕ್ಷಿಣ ದಿಲ್ಲಿಯಲ್ಲಿ ಗುರುವಾರ ರಾತ್ರಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಆಫಿಕದ ಆರು ಪ್ರಜೆಗಳು ಗಾಯಗೊಂಡಿದ್ದಾರೆ.

ಗುರುವಾರದ ದಾಳಿಯಲ್ಲಿ ನೈಜೀರಿಯದ ಪ್ರಜೆ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರನೊಂದಿಗೆ ಮನೆಗೆ ವಾಪಸಾಗುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.

ನೈಜೀರಿಯದ ಇನ್ನೋರ್ವ ಪ್ರಜೆ ಗುರುವಾರ ರಾತ್ರಿ ರಿಕ್ಷಾವೊಂದರಲ್ಲಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿ ಬ್ಯಾಟ್ ಹಾಗೂ ಕಲ್ಲಿನಿಂದ ದಾಳಿ ಮಾಡಿವೆ. ದಾಳಿಗೆ ನಿರ್ದಿಷ್ಟ ಕಾರಣವೇನೆಂದು ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News