ಅಸ್ಸಾಮ್ ನ ಆರೆಸ್ಸೆಸ್ ಶಾಲೆಯ ವಿದ್ಯಾರ್ಥಿ ಸರ್ಫ಼ರಾಝ್ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಟಾಪರ್ !

Update: 2016-05-31 18:13 GMT

ಗುವಾಹಟಿ,ಮೇ 31: ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದಿರುವ ಬೆನ್ನಿಗೇ ಇದೀಗ ಮುಸ್ಲಿಮ ಬಾಲಕನೋರ್ವ ರಾಜ್ಯದಲ್ಲಿ ಆರೆಸ್ಸೆಸ್ ಮತ್ತೊಮ್ಮೆ ಸಂಭ್ರಮಿಸಲು ಕಾರಣನಾಗಿದ್ದಾನೆ.

ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ್ದ 10ನೇ ತರಗತಿಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಗರಿಷ್ಠ 600ರಲ್ಲಿ 590 ಅಂಕಗಳನ್ನು ಗಳಿಸುವ ಮೂಲಕ ಸರ್ಫರಾಝ್ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.

ಅಂದ ಹಾಗೇ ಇದಕ್ಕೂ ಮೊದಲು ಇತರರೂ ಹೀಗೆಯೇ ಅಂಕಗಳನ್ನು ಗಳಿಸಿದ್ದಾರೆ. ಆದರೆ ಸರ್ಫರಾಝ್ ಆರೆಸ್ಸೆಸ್‌ನ ಶಿಕ್ಷಣ ವಿಭಾಗ ವಿದ್ಯಾಭಾರತಿಯು ನಡೆಸುತ್ತಿರುವ ಶಂಕರದೇವ ಶಿಶು ನಿಕೇತನ ಶಾಲೆಯಿಂದ ತೇರ್ಗಡೆಗೊಂಡಿರುವ ಮೊದಲ ಮುಸ್ಲಿಮ ವಿದ್ಯಾರ್ಥಿ ಎನ್ನುವುದು ವಿಶೇಷ.

ಗುವಾಹಟಿಯ ಹೊರವಲಯದ ಬೆಟಕುಚಿಯಲ್ಲಿರುವ ಈ ಶಾಲೆಯಲ್ಲಿ 24 ಮುಸ್ಲಿಮ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಸರ್ಫರಾಝ್‌ನಂತೆ ಭಗವದ್ಗೀತಾ ಪಠಣದಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ವೌಲ್ಯಗಳ ಕುರಿತು ಜ್ಞಾನ ಮೂಡಿಸುವ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನಾವು ಒತ್ತು ನೀಡುತ್ತಿರುವುದರಿಂದ ನಾವಿಲ್ಲಿ ಏನು ಕಲಿಸುತ್ತಿದ್ದೆವೆಯೋ ಅದರ ಬಗ್ಗೆ ಯಾರೂ ದೂರಿಕೊಂಡಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯ ಅಕ್ಷಯ ಕಲಿಟಾ ಹೇಳಿದರು.
ಉಚಿತ ಶಿಕ್ಷಣ ಲಭ್ಯವಿದ್ದುದರಿಂದ ತಾನು ಮಗನನ್ನು ಈ ಶಾಲೆಗೆ ಸೇರಿಸಿದ್ದಾಗಿ ಸರ್ಫರಾಝ್‌ನ ತಂದೆ ಅಜ್ಮಲ್ ಹುಸೇನ್ ಹೇಳಿದರು. ಇಲ್ಲದಿದ್ದರೆ ಸಣ್ಣ ಹೋಟೆಲ್‌ನಲ್ಲಿ ವೇಟರ್ ಆಗಿಸಿರುವ ತನಗೆ ಮಗನ ಶಿಕ್ಷಣದ ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ತನ್ನ ಮಗನ ಕಠಿಣ ಪರಿಶ್ರಮ,ಶಾಲಾಶಿಕ್ಷಕರ ಬೆಂಬಲ ಮತ್ತು ಸರಸ್ವತಿಯ ಆಶೀರ್ವಾದ ಇವು ಆತನ ಸಾಧನೆಗೆ ಕಾರಣವೆಂದು ಅವರು ನುಡಿದರು. ಸರ್ಫರಾಝ್ ಶಾಲೆಯ ಸರಸ್ವತಿ ಪೂಜಾ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ.
ಶಾಲೆಯು ನನ್ನ ಜೀವನವನ್ನು ರೂಪಿಸಿದೆ.ನನ್ನ ಶಿಕ್ಷಕರ ನಿರೀಕ್ಷೆಯಂತೆ ಇನ್ನೂ ಹಿರಿದಾದ ಶೈಕ್ಷಣಿಕ ಗುರಿಗಳನ್ನು ಸಾಧಿಸುವ ವಿಶ್ವಾಸವಿದೆ ಎಂದ ಸರ್ಫರಾಝ್,ಒಂದಲ್ಲ ಒಂದು ದಿನ ಶಾಲೆಯಿಂದ ಪಡೆದಿದ್ದನ್ನು ಶಾಲೆಗೆ ಮರಳಿಸುವುದಾಗಿ ಹೇಳಿದ.
ಸರ್ಫರಾಝ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಆತನ ಉನ್ನತ ಶಿಕ್ಷಣಕ್ಕಾಗಿ ನಿರಖು ಠೇವಣಿಯ ರೂಪದಲ್ಲಿ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಶಾಲೆಯನ್ನು ಮೇಲ್ದರ್ಜೆಗೇರಿಸಲು 10 ಲ.ರೂ.ಗಳ ನೆರವನ್ನೂ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News