ಮಕ್ಕಳಲ್ಲಿ ವರ್ಗಭೇದ
ಕೆಲವೇ ಪೋಷಕರು ತಮ್ಮ ಮಕ್ಕಳಲ್ಲಿ ಇಂತಹ ಗುಣ ಲಕ್ಷಣಗಳನ್ನು ಗುರುತಿಸಿ ಅವರನ್ನು ಸಹಜವಾಗಿರಲು ಪ್ರೇರೇಪಿಸುತ್ತಾರೆ ಮತ್ತು ಪೋಷಕರ ಅಧಿಕಾರದ ಉನ್ಮತ್ತತೆಗಳನ್ನು ತಾವು ತಲೆಗೇರಿಸಿಕೊಳ್ಳುವುದನ್ನು ಖಂಡಿಸುತ್ತಾರೆ. ಮಕ್ಕಳು ಮಕ್ಕಳಂತೆ ಸಹಜವಾಗಿರುವ ವಾತಾವರಣ ನಿರ್ಮಾಣ ಮಾಡುತ್ತಾರೆ. ಇನ್ನು ಮಕ್ಕಳ ವ್ಯಾಮೋಹದಲ್ಲಿರುವ ಅಧಿಕಾರಿ ಕುಟುಂಬದವರಂತೂ ತಮ್ಮ ಮಕ್ಕಳು ಏನು ಮಾಡಿದರೂ ಸರಿ ಎಂಬಂತಹ ಮನಸ್ಥಿತಿಯಲ್ಲಿ ಅವರೆಲ್ಲಾ ಚಟುವಟಿಕೆ ಮತ್ತು ವರ್ತನೆಗಳಿಗೂ ಕುರುಡಾಗಿರುತ್ತಾರೆ.
ಮಕ್ಕಳಿಗೆ ಹೆಜ್ಜೆಹೆಜ್ಜೆಗೂ ಪೋಷಕರ, ಶಿಕ್ಷಕರ ಮತ್ತು ಬಂದು ಹೋಗುವ ವರದೆಲ್ಲಾ ಉಪದೇಶಾಮೃತ ಸದಾ ಜಿನುಗುತ್ತಿರುತ್ತದೆ. ಇನ್ನು ಈ ಮಧ್ಯೆ ಮಕ್ಕಳು ಎಂಬ ಕಾರಣಕ್ಕೆ ಲೇವಡಿ ಮಾಡುವುದು, ತಲೆಹರಟೆ ಮಾಡುವುದು ಇತ್ಯಾದಿಗಳಲ್ಲಂತೂ ಇದ್ದೇ ಇರುತ್ತದೆ. ಇದರಲ್ಲೂ ಮಕ್ಕಳ ಮನೆಯವರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ಥಾನಮಾನದ ಮೇಲೆ ಮಕ್ಕಳನ್ನು ನೋಡುವುದು. ಉಳ್ಳವರ ಮನೆಯವರ ಮಕ್ಕಳಾದರೆ ಅವರನ್ನು ಸತ್ಕರಿಸುವ ರೀತಿಯೇ ಬೇರೆಯದಾಗಿರುತ್ತದೆ. ರಾಜಕೀಯವಾಗಿಯೋ ಅಥವಾ ಇನ್ನಾವುದೇ ಸಾಮಾಜಿಕ ಸ್ಥಾನಮಾನ, ಅಧಿಕಾರ, ಹಕ್ಕುಗಳು ಇರುವಂತವರ ಮನೆಯವರ ಮಕ್ಕಳಾದರೆ ಅವರಿಗೇ ಮತ್ತೊಂದು ಬಗೆಯ ಗೌರವ. ಇನ್ನು ಸಾಧಾರಣ ಕಾರಕೂನ, ಶ್ರಮಿಕ ವರ್ಗದ ಮಕ್ಕಳಾದರೆ ಅವರನ್ನು ನೋಡುವ, ಮಾತಾಡಿಸುವ ಶೈಲಿಯೇ ಬೇರೆ. ಇದನ್ನು ಅನುಭವಿಸುವ ಮಕ್ಕಳಿಗೆ ಬಾಲ್ಯದಿಂದಲೇ ತಾರತಮ್ಯದ ಅನುಭವವಾಗುತ್ತದೆ.
ಮಕ್ಕಳಿಗೆ ಚಿಕ್ಕ ಬಕೆಟ್
ಶ್ರೀಮಂತರ ಮನೆಯ ಮಕ್ಕಳಿಗೆ ತಾವು ಉಳ್ಳವರು, ನಮ್ಮನ್ನು ಉಳಿದವರು ನೋಡುವ ಬಗೆ ಹೀಗೆ, ನಾವು ಹೀಗೆ ವರ್ತಿಸಬೇಕು ಎಂದೇನೂ ಉದ್ದೇಶಪೂರ್ವಕವಾಗಿ ವರ್ತಿಸದಿದ್ದರೂ ಅವರಿಗೇ ತಿಳಿಯದಂತೆ ತಮ್ಮ ಸಂಪತ್ತಿನ ಅಹಂಕಾರದ ಭಾವ ಬೆಳೆಯತೊಡಗುತ್ತದೆ. ತಮ್ಮ ಬಳಿ ಹೊಂದುವಂತಹ ಆರ್ಥಿಕ ಅಧಿಕಾರದಿಂದ ತಾವು ಯಾರನ್ನಾದರೂ ಮಣಿಸಬಹುದು ಎಂಬಂತಹ ಧೋರಣೆ ಬರತೊಡಗುತ್ತದೆ ಮತ್ತು ಅದು ಮುಂದೆ ಎಂದಿಗೂ ಅರಿವಿಗೇ ಬರದಷ್ಟು ಸಹಜ ಸ್ವಭಾವವಾಗಿ ಪರಿಣಮಿಸಿಬಿಡುತ್ತದೆ. ಸಾಲದಕ್ಕೆ ಅವರ ಸುತ್ತಮುತ್ತಲಿನ ಜನರೂ ಅವರ ಅನಿಸಿಕೆಯನ್ನು ಸರಿಯೆಂದು ನಿರೂಪಿಸುವಂತೆಯೇ ನಡೆದುಕೊಳ್ಳುತ್ತಿರುತ್ತಾರೆ. ಹಾಗೆಯೇ ಅಧಿಕಾರಿಗಳ, ಸಾಮಾಜಿಕ ಸ್ಥಾನಮಾನ (ಲೋಕದ ದೃಷ್ಟಿಯಲ್ಲಿ) ಹೊಂದಿರುವವರ ಮಕ್ಕಳನ್ನಂತೂ ಫಲಾಪೇಕ್ಷೆ ಉಳ್ಳವರು ನೋಡಿಕೊಳ್ಳವ ಬಗೆಯಂತೂ ವಾಕರಿಕೆ ಹುಟ್ಟಿಸುವಷ್ಟು ಕೆಟ್ಟದಾಗಿರುತ್ತದೆ. ಅತಿಯಾಗಿ ಅವರನ್ನು ಹೊಗಳುವುದು. ಅವರ ತಪ್ಪುಗಳನ್ನು ಕೂಡ ಸರಿಯೆನ್ನುವುದು. ಅವರು ಮಾಡುವುದನ್ನೆಲ್ಲಾ ಸಹಿಸಿಕೊಳ್ಳುವುದು. ಅನಗತ್ಯವಾಗಿ ಉಡುಗೊರೆಗಳನ್ನು ತಂದುಕೊಡುವುದು. ಬಹು ವಚನದಲ್ಲಿ ಸಂಬೋಧಿಸುವುದು. ಆ ಮಕ್ಕಳು ತಿಳುವಳಿಕೆ ಇಲ್ಲದೇ ಕೊಡುವ ಉಪಟಳಗಳನ್ನು ಸಹಿಸಿಕೊಳ್ಳುವುದು. ಕಿರುಕುಳಗಳನ್ನು ದೂರದೆಯೇ ಒಪ್ಪಿಕೊಳ್ಳುವುದು, ಕೆಲವೊಮ್ಮೆ ಆನಂದಿಸುವುದು. ಆ ಮಕ್ಕಳು ಆಜ್ಞಾಪಿಸುವ ಮುನ್ನವೇ ಗುಲಾಮರಂತೆ ಸೇವೆ ಮಾಡುವುದು; ಇತ್ಯಾದಿಗಳನ್ನು ನೋಡುತ್ತಾ ಅನುಭವಿಸುತ್ತಾ ಬರುವ ಮಕ್ಕಳು ಜನರನ್ನು ತಮ್ಮ ಸ್ಥಾನಬಲದಿಂದ ಅಧೀನದಲ್ಲಿಟ್ಟುಕೊಳ್ಳುವಂತಹ ಅಭ್ಯಾಸವನ್ನು ಸಣ್ಣದರಿಂದಲೇ ರೂಢಿ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ತಮ್ಮ ಕೆಲಸವಾಗಲು ಬಕೆಟ್ ಹಿಡಿವ ಜನರು ಅವರ ಕುಟುಂಬದ ಸಂಪರ್ಕಕ್ಕೆ ಬಂದರೆ ಹೀಗೆ ಅಧಿಕಾರಿಗಳ ಮಕ್ಕಳಿಗೂ ಒಂದು ಚಿಕ್ಕ ಬಕೆಟ್ ಹಿಡಿದುಕೊಂಡೇ ಇರುತ್ತಾರೆ. ತಮ್ಮ ಮಕ್ಕಳನ್ನು ಗೌರವದಿಂದ, ಅತ್ಯಾದರದಿಂದ ಕಾಣುವ ಅವರ ಮೇಲೆ ಅಧಿಕಾರಿಗಳಿಗೆ ಕೆಲಸ ಮಾಡಿಕೊಡುವ ಮನಸ್ಸಾಗುವುದು ಎಂದು ಅವರ ಗುಪ್ತ ಧೋರಣೆ.
ಮಕ್ಕಳೂ ಅದರ ಆನಂದವನ್ನು, ಉನ್ಮತ್ತತೆಯನ್ನು ಮಜ ಮಾಡ್ತಿರ್ತಾರೆ. ತಾನು ಇಂಥವರ ಮನೆಯವನು ಅಥವಾ ಇಂತವರ ಮಗನೆಂದು ಅಧಿಕಾರ ಚಲಾಯಿಸುವುದು ಮತ್ತು ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು, ಇನ್ನೂ ಮುಂದಾಗಿ ನೇರವಾಗಿ ಅಂತಹ ಅಧಿಕಾರಸ್ಥ ಪೋಷಕರಿಗೆ ಸಣ್ಣ ವಿಷಯಕ್ಕೂ ತೀವ್ರವಾಗಿ ದೂರು ಸಲ್ಲಿಸುವುದು ಕೂಡ ಮಾಡುತ್ತಾರೆ. ಅಷ್ಟೇ ಅಲ್ಲ ಅಂತಹ ಮಕ್ಕಳು ಇತರ ಮಕ್ಕಳನ್ನು ಆಟದ ಜೊತೆಗಾರರಂತೆ ನೋಡುವುದಿಲ್ಲ. ಆಟಿಕೆಗಳಂತೆ ಬಳಸುತ್ತಾರೆ. ಅವರ ಮನೆಯ ಕೆಲಸದವರ ಮಕ್ಕಳನ್ನು ತಮ್ಮ ಕೆಲಸದವರಂತೆ ನೋಡುತ್ತಾರೆ. ಅಧಿಕಾರದಿಂದ ಅವರ ಮೇಲೆ ವರ್ತಿಸುತ್ತಾರೆ. ತಾವು ವರ್ಜಿಸುವ ವಸ್ತುಗಳನ್ನು ಕೊಡುತ್ತಾರೆ. ತಮಗಿಷ್ಟವಾದ ವಸ್ತುಗಳನ್ನು ಅವರಿಂದ ಕಸಿದುಕೊಳ್ಳುತ್ತಾರೆ.
ಕೆಲವೇ ಪೋಷಕರು ತಮ್ಮ ಮಕ್ಕಳಲ್ಲಿ ಇಂತಹ ಗುಣ ಲಕ್ಷಣಗಳನ್ನು ಗುರುತಿಸಿ ಅವರನ್ನು ಸಹಜವಾಗಿರಲು ಪ್ರೇರೇಪಿಸುತ್ತಾರೆ ಮತ್ತು ಪೋಷಕರ ಅಧಿಕಾರದ ಉನ್ಮತ್ತತೆಗಳನ್ನು ತಾವು ತಲೆಗೇರಿಸಿಕೊಳ್ಳುವುದನ್ನು ಖಂಡಿಸುತ್ತಾರೆ. ಮಕ್ಕಳು ಮಕ್ಕಳಂತೆ ಸಹಜವಾಗಿರುವ ವಾತಾವರಣ ನಿರ್ಮಾಣ ಮಾಡುತ್ತಾರೆ. ಇನ್ನು ಮಕ್ಕಳ ವ್ಯಾಮೋಹದಲ್ಲಿರುವ ಅಧಿಕಾರಿ ಕುಟುಂಬದವರಂತೂ ತಮ್ಮ ಮಕ್ಕಳು ಏನು ಮಾಡಿದರೂ ಸರಿ ಎಂಬಂತಹ ಮನಸ್ಥಿತಿಯಲ್ಲಿ ಅವರೆಲ್ಲಾ ಚಟುವಟಿಕೆ ಮತ್ತು ವರ್ತನೆಗಳಿಗೂ ಕುರುಡಾಗಿರುತ್ತಾರೆ.
ದೊಡವರ ಮನೆ ಮಕ್ಕಳು
ದೊಡ್ಡವರ ಮನೆ ಮಕ್ಕಳು ಎಂದು ಶ್ರಮಿಕ ಮತ್ತು ಕಾರ್ಮಿಕ ವರ್ಗದ ಮಕ್ಕಳಿಗೆ ಒಂದು ಪಾಠವಾಗುತ್ತದೆ. ಅದರ ಪ್ರಕಾರ ಈ ಮಕ್ಕಳು ದೊಡ್ಡವರ ಮನೆಯ ಮಕ್ಕಳೊಂದಿಗೆ ವರ್ತಿಸುವುದನ್ನು ರೂಢಿ ಮಾಡಿಕೊಳ್ಳುತ್ತವೆ. ಆ ಮಕ್ಕಳಿಗೆ ಅಧೀನವಾಗಿರು ವುದನ್ನು, ಅವರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುವುದನ್ನು, ಅವರನ್ನು ವಿರೋಧಿಸದಿ ರುವುದನ್ನು ಕಲಿತುಕೊಳ್ಳುತ್ತಾರೆ. ದೊಡ್ಡವರ ಮನೆ ಮಕ್ಕಳ ಮೇಲರಿಮೆಯನ್ನು ಪೋಷಿಸುತ್ತಾ ಹೋಗುವುದರ ಜೊತೆಗೆ ತಮ್ಮಲ್ಲಿ ಕೀಳರಿಮೆಯನ್ನೂ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಶ್ರಮಿಕ ಮತ್ತು ಕಾರ್ಮಿಕ ವರ್ಗದವರಾದರೂ ತಮ್ಮ ಮಕ್ಕಳಲ್ಲಿ ದೊಡ್ಡವರ ಮನೆ ಮಕ್ಕಳು ಎಂಬ ಭಾವವನ್ನು ಅವರಲ್ಲಿ ಖಂಡಿತ ತುಂಬಬಾರದು. ಆ ದೊಡ್ಡವರ ಮನೆ ಮಕ್ಕಳನ್ನು ವಿಶೇಷವಾಗಿ ತಾವೂ ಕಾಣಬಾರದು. ಎಲ್ಲಾ ಮಕ್ಕಳನ್ನೂ ನೋಡುವಂತೆ ಸಹಜವಾಗಿ ನೋಡಬೇಕು. ಕೆಲವರಿಗಂತೂ ಸ್ವಯಂಚಾಲಿತ ಯಂತ್ರದಂತೆ ಮಕ್ಕಳ ಮುಂದೆಯೂ ತಲೆ, ಬೆನ್ನು, ಸೊಂಟಬಾಗುವುದು. ಧ್ವನಿಯಲ್ಲಿ ವಿಶೇಷವಾದ ವಿನಯ, ಬಹು ವಚನ ಪ್ರಯೋಗ ಕಾಣುವುದು.
ಲೇಬರ್‌ಕ್ಲಾಸ್ ಮಕ್ಕಳು
ಅವರೊಬ್ಬರು ಸರಕಾರದ ಉನ್ನತ ಹುದ್ದೆಯಲ್ಲಿರುವವರು. ಅವರ ಮನೆಯಲ್ಲಿ ಕೆಲಸ ಮಾಡುವ ಒಂದು ತಂಡವೇ ಇತ್ತು. ಅಧಿಕಾರಿ ತಂದೆ ತನ್ನ ಮಗನಿಗೆ ಹೇಳುತ್ತಿದ್ದುದ್ದನ್ನು ನಾನೇ ಕೇಳಿದ್ದೇನೆ. ''ಅವರು ಲೇಬರ್ ಕ್ಲಾಸ್‌ನವರು. ಅವರನ್ನು ಎಲ್ಲಿಡಬೇಕೋ ಅಲ್ಲಿಡಬೇಕು. ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಇಟ್ಟುಕೊಳ್ಳಬೇಕು. ಅವರ ಹುಡುಗರನ್ನ ತೀರಾ ಒಳಗೆಲ್ಲಾ ಯಾಕೆ ಕರೆದುಕೊಂಡು ಬರುತ್ತೀಯಾ? ಅವರಿಗೆ ಸಲುಗೆ ಕೊಟ್ಟರೆ ಆಮೇಲೆ ನೀನೇ ಅನುಭವಿಸುತ್ತೀಯಾ. ಆಮೇಲೆ ನನ್ನ ಹತ್ತಿರ ಬಂದು ಹೇಳಬಾರದು, ಅವರು ಹಾಗಂದ್ರು ಹೀಗಂದ್ರು, ಅದ್ಯಾವುದನ್ನೋ ಎತ್ತಿಕೊಂಡು ಬಿಟ್ಟರು. ಅದು ಹೋಯ್ತು ಇದು ಹೋಯ್ತು ಅಂತ...'' ಈ ಎಚ್ಚರಿಕೆಯ ಹಿಂದೆ ಬಲವಾದ ವರ್ಗಬೇಧವಿದೆ. ಮಕ್ಕಳಲ್ಲಿ ಮಗುತನವನ್ನು ಆನಂದಿಸದಿರುವಂತಹ ಒಡಕಿನ ಸಂದೇಶವಿದೆ.
ಅಧಿಕಾರಿಗಳ ಬಹುಪಾಲು ಮಕ್ಕಳು ಈ ಲೇಬರ್ ಕ್ಲಾಸ್ ಮಕ್ಕಳನ್ನು ತಮ್ಮ ಲೇಬರ್‌ಗಳೆಂದೇ ಪರಿಗಣಿಸುತ್ತಾರೆ ಹಾಗೂ ಅಂತೆಯೇ ವರ್ತಿಸುತ್ತಾರೆ.
ಮುಂದೇನಾಗುವುದೆಂದರೆ, ಆ ಲೇಬರ್‌ಕ್ಲಾಸ್ ಮಗುವು ಧೈರ್ಯವಂತನಾಗಿ ಬೆಳೆದರೆ ಇವರನ್ನು ವಿರೋಧಿಸುತ್ತಾ ಬಂಡಾಯಗಾರನಾಗುತ್ತಾನೆ. ದೊಡ್ಡವರ ಮನೆ ಮಕ್ಕಳ ಎಲ್ಲಾ ವಿಷಯಗಳನ್ನೂ ವಿರೋಧಿಸುತ್ತಾ ಜಗಳ ತೆಗೆಯುತ್ತಾನೆ. ಇಲ್ಲವೇ ಗುಲಾಮನಂತೆಯೇ ವರ್ತಿಸುತ್ತಿರುತ್ತಾನೆ.
ನಾನು ಇನ್ನೂ ಒಂದು ಗಮನಿಸಿದ್ದೇನೆ. ಕೆಲವು ಅಧಿಕಾರಿಗಳು ತಮ್ಮ ಅಧೀನದಲ್ಲಿರುವವರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆಲ್ಲ್ಲ ಹೋಗುವುದನ್ನೇನೂ ಅಷ್ಟು ಇಷ್ಟಪಡುವುದಿಲ್ಲ. ''ಸುಮ್ಮನೆ ಅವೆಲ್ಲ್ಲ ಯಾಕೆ? ಡಿಪ್ಲೊಮೋ ಮಾಡಿಸಿಬಿಡಿ, ಅದನ್ನು ಓದಲು ಹೋದರೆ ಸುಮ್ಮನೆ ಖರ್ಚು'' ಎಂದೂ ಅಡ್ಡಗಾಲು ಹಾಕುತ್ತಾರೆ. ತಮ್ಮ ಕೆಳಗೆ ಕೆಲಸ ಮಾಡುವವರ ಮಕ್ಕಳು ತಮ್ಮ ಮಕ್ಕಳಿಗಿಂತ ಹೆಚ್ಚಿನ ವಿದ್ಯಾವಂತರಾಗುವ ಅಥವಾ ಉನ್ನತ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಿಗೆ ಹೋಗುವುದನ್ನು ಸಹಿಸುವುದಿಲ್ಲ. ಇದು ಒಂದಾನೊಂದು ಕಾಲದ ಕಥೆಗಳಲ್ಲ. ಈಗಲೂ ಇಂತಹ ಧೋರಣೆಗಳಿರುವ ವ್ಯಕ್ತಿಗಳನ್ನು ಮತ್ತು ಸಂಗತಿಗಳನ್ನು ನಾನು ನೋಡುತ್ತಲೇ ಇದ್ದೇನೆ.
ಸಹವಾಸದಿಂದ ಪರಿವರ್ತನೆ
ಮಕ್ಕಳು ಸಹವಾಸಗಳ ಪ್ರಭಾವಕ್ಕೆ ಬಹು ಬೇಗ ಒಳಗಾಗುತ್ತವೆ. ಅದು ನಿಜ. ಆದರೆ ಸಕಾರಾತ್ಮಕವಾದ ಪ್ರಭಾವವನ್ನು ಉಂಟು ಮಾಡಲು ಒಂದು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಪೋಷಕರು, ಸಾಮಾಜಿಕವಾಗಿ ಒಂದು ಹಂತದ ಶ್ರೇಣಿಯಲ್ಲಿ ಗುರುತಿಸಿಕೊಂಡ ಪ್ರಜ್ಞಾವಂತರು ಮಕ್ಕಳಲ್ಲಿ ವರ್ಗಭೇದ ಹೋಗಲಾಡಿಸಲು ಯತ್ನಿಸಬೇಕು. ನೈರ್ಮಲ್ಯ ಮತ್ತು ಸಮಾನತೆಯನ್ನು ಮಕ್ಕಳಲ್ಲಿ ರೂಢಿ ಮಾಡಿಸಿದರೆ ಸಹಜವಾಗಿ ವರ್ಗ ಧೋರಣೆ ಇಲ್ಲವಾಗುತ್ತದೆ.
ನಾನು ಎಷ್ಟೋ ಉದಾಹರಣೆಗಳನ್ನು ಗಮನಿಸಿದ್ದೇನೆ. ಸಾರಥಿ, ಭುವನೇಶ್ವರಿ ಮತ್ತು ಮೀನಾಕ್ಷಿ ತಮಿಳುನಾಡಿನ ಮೂಲದ ಕಟ್ಟಡ ಕಾರ್ಮಿಕರ ಮಕ್ಕಳು. ಅವರು ನಮ್ಮ ಮಕ್ಕಳು ಆಡುವಾಗ ಬದಿಯಲ್ಲಿ ನಿಂತು ನೋಡುತ್ತಿದ್ದರು. ನಾವು ಆ ಮಕ್ಕಳನ್ನೂ ಜೊತೆಗೂಡಿ ಆಡಲು ಕರೆದಾಗ ಅವರು ಸಂತೋಷವಾಗಿ ಪಾಲ್ಗೊಂಡರು. ಹೌದು, ಅವರು ತೀರಾ ಕೊಳಕಾಗಿದ್ದರು. ಧೂಳು ತುಂಬಿಕೊಂಡಿದ್ದರು. ಹಳೆಯ ಕೊಳೆ ಕರೆ ಕಟ್ಟಿತ್ತು. ಅಂದು ಆಟವಾಡಿದ ಮೇಲೆ ನನ್ನ ಹೆಂಡತಿ ಆ ಮಕ್ಕಳನ್ನು ಕೈ ಕಾಲು ತೊಳೆಸಿ ಒಳ ಕೂರಿಸಿ ತಿಂಡಿಗಳನ್ನು ಕೊಟ್ಟು ಇನ್ನು ಮುಂದೆ ನೀವು ಯಾವಾಗಲೂ ಸ್ವಚ್ಛವಾಗಿರಬೇಕು, ಬಟ್ಟೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದಳು. ಗಲೀಜಾಗಿ ಬಂದರೆ ಸೇರಿಸುವುದಿಲ್ಲವೆಂದೂ ಎಚ್ಚರಿಸಿದ್ದಳು.
ಮರುದಿನ ಮೂರೂ ಮಕ್ಕಳು ಶುಭ್ರವಾಗಿ ಬಂದು ನಿಂತಿದ್ದರು. ಮುಂದೆ ಬರೀ ಆಟಿಕೆಗಳನ್ನಷ್ಟೇ ಅಲ್ಲ, ತಮ್ಮ ಬಟ್ಟೆಗಳನ್ನು, ಸ್ಕೂಲ್ ಬ್ಯಾಗ್‌ಗಳನ್ನು ಪರಸ್ಪರ ಹಂಚಿಕೊಳ್ಳುವಷ್ಟು ನಮ್ಮ ಮಕ್ಕಳ ಹೊಂದಾಣಿಕೆ ವಿಸ್ತರಿಸಿಕೊಂಡಿತು. ಅವರ ಷೆಡ್‌ನಲ್ಲಿ ಘಮಘಮಿಸುವ ರಸಂ ಅಥವಾ ಸಾರಿನ ವಾಸನೆಗೆ ಮೂಗು ಅರಳಿಸಿ ನಾವು ಆ ಮಕ್ಕಳ ಕೈಯಲ್ಲಿ ಅದನ್ನು ತರಿಸಿಕೊಂಡು ಊಟ ಮಾಡಿದಾಗ ಅವರಿಗೋ ತಾವು ಕೂಡ ಕೊಡುತ್ತಿದ್ದೇವೆ ಎಂಬ ಸಮಾಧಾನ ಮತ್ತು ಸಂತೋಷ.
''ನೋಡು ಅವರು ಹೇಗಿರುತ್ತಾರೆ. ಅವರ ಮನೆಗೆ ಹೋಗುವಾಗ ನೀಟಾಗಿ ಹೋಗಿ'' ಎಂದು ಈ ಮೊದಲು ನೈರ್ಮಲ್ಯಕ್ಕೆ ಅಷ್ಟಾಗಿ ಗಮನ ಕೊಡದಿದ್ದ ತಾಯಿಯೇ ತನ್ನ ಒತ್ತಡದ ಕೆಲಸದ ನಡುವೆ ಬಿಡುವು ಮಾಡಿಕೊಂಡು ಈಗ ಮಕ್ಕಳ ಸ್ವಚ್ಛತೆ ಕಡೆಗೆ ಆಸಕ್ತಿವಹಿಸುತ್ತಿದ್ದರು. ಅವರು ನಮ್ಮ ಮಕ್ಕಳ ಜೊತೆ ಆಡುವುದು, ಶಾಲೆಯಲ್ಲಿ ಕೊಟ್ಟಿರುವ ಮನೆಪಾಠ ಮಾಡುವುದು, ಒಟ್ಟೊಟ್ಟಿಗೆ ಮನೆಯಾಟ ಆಡುವುದು, ಅಂಗಡಿ, ಪಾರ್ಕಿಗೆ ಹೋಗುವುದು, ಪರಸ್ಪರ ಸಹಕರಿಸುವುದು ಇತ್ಯಾದಿಗಳು ನಡೆಯುತ್ತಿದ್ದವು.
ಈಗ ಅವರಿಲ್ಲ. ಕಟ್ಟಡ ನಿರ್ಮಾಣ ಪೂರ್ತಿಯಾಗಿ ಬೇರೆ ಕಡೆ ಹೊರಟು ಹೋಗಿದ್ದಾರೆ. ಆದರೆ ಆಗಾಗ ತಾಯಂದಿರು ಫೋನ್‌ನಲ್ಲಿ ಮಾತಾಡಿಕೊಳ್ಳುವಾಗ ಮಕ್ಕಳೂ ಪರಸ್ಪರ ವಿಚಾರಿಸಿಕೊಳ್ಳುತ್ತಾರೆ. ಆ ಮಕ್ಕಳ ತಂದೆ ಇತ್ತ ಕಡೆ ಬಂದಾಗ ಮಕ್ಕಳಿಗೆ ಅಂತ ಹಣ್ಣುಗಳನ್ನು, ಅಕ್ಕನಿಗೆ ಅಂತ ತರಕಾರಿಗಳನ್ನು ಮಾರ್ಕೆಟ್ಟಲ್ಲಿ ಕಡಿಮೆಗೆ ಸಿಗತ್ತೆ ಅಂತ ತರುತ್ತಾರೆ. ಈ ಮಕ್ಕಳು ಅವರ ಮಕ್ಕಳಿಗೆಂದು ರಾಗಿ ಬಿಸ್ಕತ್ ಅಥವಾ ವಿಶೇಷವಾದ ಪೆನ್ ಪೆನ್ಸಿಲ್ ಮತ್ತೊಂದೇನನ್ನೋ ಕಳುಹಿಸಿಕೊಡುತ್ತಾರೆ. ಮಕ್ಕಳಿಗೆ ತಮ್ಮ ಸ್ಥಿತಿಗತಿಗಳ ಬಗ್ಗೆ ಸಾಮಾಜಿಕ ಅರಿವು ಇರುವುದಿಲ್ಲ. ತಮ್ಮ ಬಳಿ ಏನಿದೆ, ಏನಿಲ್ಲ ಎಂಬ ವಸ್ತುಸ್ಥಿತಿಯ ಅರಿವಿರುತ್ತದೆ. ಇರುವುದನ್ನು ಕೊಟ್ಟು ಇಲ್ಲದೇ ಇರುವುದನ್ನು ಪಡೆಯುವಂತಹ ಪರಸ್ಪರ ಹಂಚಿಕೊಳ್ಳುವಿಕೆ ಸಹಜವಾಗುತ್ತಾ ಹೋದಂತೆ ವರ್ಗಬೇಧ ಸ್ವಾಭಾವಿಕವಾಗಿ ಇಲ್ಲವಾಗುತ್ತದೆ. ಸಮಾಜದಲ್ಲಿ ಬೇಧಗಳು ಹುಟ್ಟಿ ಹಾಕಿರುವ ಕಾರಣ ನಾವೇ ಆಗಿರುವುದರಿಂದ ಅದರ ಪರಿಣಾಮವನ್ನೂ ನಾವೇ ಅನುಭವಿಸುತ್ತಿರುವುದು. ಇನ್ನು ಅದನ್ನು ತೊಡೆದು ಹಾಕುವುದು ನಮ್ಮ ಬಾಧ್ಯತೆಯೇ ಆಗಿರುವುದರಿಂದ ಮಕ್ಕಳಿಂದಲೇ ಆ ಜವಾಬ್ದಾರಿಯನ್ನು ನಿರ್ವಹಿಸುವುದು ಅಗತ್ಯ
ಗಲೀಜು ಮಕ್ಕಳು
ಇನ್ನು ಮನೆಗಳನ್ನು ಕಟ್ಟುವಾಗ ಕೂಲಿ ಕಾರ್ಮಿಕರ ಮಕ್ಕಳು ರಸ್ತೆಯಲ್ಲಿ ಆಡುತ್ತಿರುತ್ತಾರೆ. ನೆಲೆ ನಿಂತವರ, ನಯ ನಾಜೂಕಿನ ಜನರೆಂದೆನಿಸಿಕೊಳ್ಳುವ ಕುಟುಂಬದ ಮಕ್ಕಳು ಕೂಡ ರಸ್ತೆಗೆ ತಮ್ಮ ಆಟಿಕೆಗಳೊಂದಿಗೆ, ಸೈಕಲ್ ಅಥವಾ ಸ್ಕೇಟ್ ಬೋರ್ಡ್ ಗಳೊಂದಿಗೆ ಇಳಿಯುತ್ತಾರೆ. ಆದರೆ ಅವರಿಗೆ ಕಟ್ಟಡ ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳ ಜೊತೆಗೆ ತಮ್ಮ ಆಟಿಕೆಗಳನ್ನು ಹಂಚಿಕೊಳ್ಳುವುದು ಇಷ್ಟವೇನಿರುವುದಿಲ್ಲ. ಅವರು ಸಹಜವಾಗಿ ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ಇಲ್ಲಿಯೂ ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಪೋಷಕರು ತಮ್ಮ ಮಕ್ಕಳು ಅವರ ಆಟಿಕೆಗಳನ್ನು ಅವರ ಜೊತೆಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು. ಆದರೆ ನಾನು ನೋಡುವಂತೆ ಎಷ್ಟೋ ಜನ ಪೋಷಕರು ಒಂದು ವೇಳೆ ಮಕ್ಕಳು ಮುಂದಾದರೂ ಕೂಡ ತಾವೇ ಹಿಂದಕ್ಕೆಳೆಯುತ್ತಾರೆ. ಅವರು ಕೊಡುವ ಕಾರಣಗಳೇನೆಂದರೆ:
1.ಆ ಮಕ್ಕಳು ಗಲೀಜಾಗಿರುತ್ತಾರೆ.
2.ಆ ಮಕ್ಕಳು ಒರಟಾಗಿರುತ್ತಾರೆ. ನಮ್ಮ ಮಕ್ಕಳು ನಾಜೂಕಿನವರು. ಹೊಂದುವುದಿಲ್ಲ.
3.ಆ ಮಕ್ಕಳು ಗಲೀಜಾಗಿರುವುದರಿಂದ ನಮ್ಮ ಮಕ್ಕಳಿಗೆ ಇಂಫೆಕ್ಷನ್ ಆಗುತ್ತದೆ. ಕೆಲವೊಮ್ಮೆ ಅವರು ಆರೋಗ್ಯದ ಬಗ್ಗೆ ನಿಗಾ ವಹಿಸದೇ ಇರುವುದರಿಂದ ಅವರಿಗೆ ಇರುವಂತಹ ರೋಗವೇನಾದರೂ ಇವರಿಗೂ ಸೋಂಕು ತಗಲಬಹುದು.
4.ನಮ್ಮ ಮಕ್ಕಳು ಅವರಂತೆಯೇ ಕೆಲವು ಗಲೀಜು ವಿದ್ಯೆಗಳನ್ನು ಕಲಿತುಕೊಂಡು ಬಿಡುತ್ತಾರೆ. ಉದಾಹರಣೆಗೆ, ಕೈ ತೊಳೆಯದೇ ತಿಂದುಬಿಡುವುದು. ಬಟ್ಟೆಗಳನ್ನು ಗಲೀಜು ಮಾಡಿಕೊಳ್ಳುವುದು. ಎಲ್ಲೆಂದರಲ್ಲಿ ಕುಳಿತುಕೊಂಡುಬಿಡುವುದು.
5.ಅವರು ಕೂಲಿ ಕಾರ್ಮಿಕರ ಮಕ್ಕಳು. ಅವರೆಲ್ಲಿರಬೇಕೋ ಅಲ್ಲಿರಬೇಕು. ಹೆಚ್ಚು ಸದರ ಕೊಟ್ಟರೆ ತಲೆ ಮೇಲೆ ಹತ್ತಿ ಕುಳಿತುಕೊಳ್ತಾರೆ. ಮನೆಯೊಳಗೆಲ್ಲಾ ಪ್ರವೇಶಿಸಿ ಅದೂ ಇದೂ ಮುಟ್ಟುತ್ತಾರೆ. ವಸ್ತುಗಳನ್ನು ನಾಶ ಮಾಡುತ್ತಾರೆ. ಕೆಲವೊಮ್ಮೆ ಕದಿಯುತ್ತಾರೆ.
ಹೀಗೆಂದು ಪೋಷಕರು ತಮ್ಮ ಮಕ್ಕಳನ್ನು ಬಡ, ಕಟ್ಟಡ ಕಾರ್ಮಿಕರ ಅಥವಾ ಯಾವುದೇ ರೀತಿಯಲ್ಲಿ (ಲೋಕದಲ್ಲಿ ರೂಢಿಯಿರುವಂತ ಅಸಮಾನತೆಯ ದೃಷ್ಟಿಯಿಂದ) ಕೆಳ ವರ್ಗದ ಮಕ್ಕಳೊಂದಿಗೆ ಬೆರೆಯಲು ಬಿಡದಿದ್ದರೆ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುವವು. 1.ಮಕ್ಕಳಲ್ಲಿ ವರ್ಗಬೇಧ ಗಾಢವಾಗುತ್ತಾ ಹೋಗುವವು. ಮುಂದಿನ ಗಂಭೀರ ವರ್ಗ ಸಂಘರ್ಷಕ್ಕೆ ಇದು ಕಾರಣವೂ ಆಗುತ್ತದೆ.
2.ಆ ಮಕ್ಕಳಲ್ಲಿ ಸ್ಥಿತಿವಂತ ಮಕ್ಕಳ ಬಗ್ಗೆ ಅಸೂಯೆಯೂ ಮತ್ತು ದ್ವೇಷವೂ ಉಂಟಾಗುತ್ತಾ ಬಂದು, ಸಹಿಸಲಾರದೇ ಹೋದಾಗ ವಿಧ್ವಂಸಕ ಕೃತ್ಯಗಳಿಗೆ ತೊಡಗುತ್ತಾರೆ.
3.ಸ್ಥಿತಿವಂತ ಮಕ್ಕಳಿಗೆ ಹಂಚಿಕೊಳ್ಳುವಂತಹ ಗುಣವು ಕ್ಷೀಣಿಸುತ್ತಾ ಅದು ಸಮಸ್ಥಿತಿಯ ಮಕ್ಕಳೊಂದಿಗೂ ವಿಸ್ತರಿಸುತ್ತದೆ ಹಾಗೂ ಅದೊಂದು ಗುಣವೇ ಆಗಿರುವಂತಹ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.
4.ಮಕ್ಕಳಲ್ಲಿ ಪರಸ್ಪರ ನಕಾರಾತ್ಮಕ ಅಂಶಗಳನ್ನು ಗುರುತಿಸಿಕೊಂಡು ಒಬ್ಬರನ್ನೊಬ್ಬರು ದೂರುವುದರಲ್ಲಿ ಅಥವಾ ಕಾದಾಡುವುದರಲ್ಲಿ ಈ ಅಂತರವು ಮುಂದುವರಿಯುತ್ತದೆ.
ಸ್ಥಿತಿವಂತ ಮಕ್ಕಳು ಮತ್ತು ಬಡಮಕ್ಕಳು ಯಾವ ಕಾರಣಗಳಿಗೆ ಒಂದಾಗಬೇಕು, ಯಾವ್ಯಾವ ಪರಿಣಾಮಗಳು ಉಂಟಾಗುತ್ತವೆ ಎಂದು ಹೆದರಬೇಕು ಎಂದೆಲ್ಲಾ ವಿವರಿಸುವ ಅಗತ್ಯವೇ ಇಲ್ಲ. ಅವರು ಮಕ್ಕಳು. ಕೇವಲ ಮಕ್ಕಳು. ಅವರ ಸ್ಥಿತಿಗತಿಗಳಿಗೆ ಅವರು ಕಾರಣರಲ್ಲ. ಮಕ್ಕಳನ್ನು ಮಕ್ಕಳಂತೆಯೇ ನೋಡುವ ಯಾವುದೇ ಪೋಷಕರು ತಮ್ಮ ಸ್ಥಿತಿಗತಿಗಳ ಅರಿಮೆಯನ್ನು ಹೊಂದಿರುವುದಿಲ್ಲ. ಮಕ್ಕಳನ್ನು ಮಕ್ಕಳಂತೆಯೇ ನೋಡಿ ಉಪಚರಿಸುವ ಹಿರಿಯರಿಂದ ಆ ಮಕ್ಕಳು ಮನುಷ್ಯರನ್ನು ಮನುಷ್ಯರಂತೆಯೇ ನೋಡುವ ಪಾಠ ಕಲಿಯುತ್ತಾರೆ. ಇಷ್ಟರ ಮಟ್ಟಿಗೆ ನಾವು ಪ್ರಜ್ಞಾವಂತರಾದರೆ ಮಕ್ಕಳಲ್ಲಿ ವರ್ಗಬೇಧ ತೊಡೆಯಲು ಸಾಧ್ಯವಾಗುತ್ತದೆ. ಸಮಾಜದ ಕುರಿತಾಗಿಯೂ ಇದು ಅಡಿಗಲ್ಲಾಗುತ್ತದೆ