ಯೋಗ ದಿನದಂದು ‘ಸೂರ್ಯ ನಮಸ್ಕಾರ’ ಇಲ್ಲ

Update: 2016-06-08 17:24 GMT

ಹೊಸದಿಲ್ಲಿ, ಜೂ.8:‘ಸೂರ್ಯ ನಮಸ್ಕಾರ’ ಆಸನವು ಈ ವರ್ಷದ ವಿಶ್ವ ಯೋಗ ದಿನಾಚರಣೆಯ ಭಾಗವಾಗಿರುವುದಿಲ್ಲ ಮತ್ತು ’ಓಂ’ ಪಠಣದ ಹೊರತು ಯೋಗವು ಅಪೂರ್ಣವಾದರೂ ಅದು ಕಡ್ಡಾಯವಾಗಿರುವುದಿಲ್ಲ ಎಂದು ಆಯುಷ್ ಸಚಿವ ಶ್ರೀಪಾದ ನಾಯ್ಕಾ ಅವರು ಬುಧವಾರ ಇಲ್ಲಿ ಹೇಳಿದರು. ಜೂ.21ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ನೂರಾರು ಕೋ.ರೂ.ಗಳ ವೆಚ್ಚವಾಗುವ ನಿರೀಕ್ಷೆಯಿದೆ.
ಹಿಂದಿನ ವರ್ಷವೂ ಸೂರ್ಯ ನಮಸ್ಕಾರವನ್ನು ನಾವು ಕೈಬಿಟ್ಟಿದ್ದೆವು. ಅದೊಂದು ಸಂಕೀರ್ಣ ಆಸನವಾಗಿದೆ. 45 ನಿಮಿಷಗಳ ಸೀಮಿತ ಅವಧಿಯಲ್ಲಿ ಮತ್ತು ಹೊಸಬರಿಗೆ ಅದನ್ನು ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಈ ವರ್ಷವೂ ಅದನ್ನು ಸೇರಿಸಲಾಗಿಲ್ಲ ಎಂದು ಅವರು ತಿಳಿಸಿದರು.
ಸೂರ್ಯ ನಮಸ್ಕಾರ ಆಸನದ ಕುರಿತು ವಿವಾದವಿದ್ದು, ಇದನ್ನು ತಮ್ಮ ಧರ್ಮವು ಅನುಮತಿಸುವುದಿಲ್ಲ ಎಂದು ಮುಸ್ಲಿಮ್ ಗುಂಪುಗಳು ಹೇಳಿವೆ.
ಅಂತಾರಾಷ್ಟ್ರೀಯ ಯೋಗ ದಿನವನ್ನು ಕಳೆದ ವರ್ಷದಿಂದ ಜೂ.21ರಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ಇದರ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಇಲ್ಲಿಯ ರಾಜಪಥ್‌ನಲ್ಲಿ ಯೋಗ ಮಾಡಿದ್ದ ಅವರು ಈ ಬಾರಿ ಅದಕ್ಕಾಗಿ ಚಂಡಿಗಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಯೋಗ ದಿನಾಚರಣೆ ಸಂದರ್ಭ ಓಂಕಾರಕ್ಕೆ ಸಂಬಂಧಿಸಿದ ವಿವಾದವನ್ನು ತಳ್ಳಿಹಾಕಿದ ಸಚಿವರು,ಅದನ್ನು ಕಡ್ಡಾಯ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News