ಮೆಕ್ಯಾನಿಕ್ಗೆ ಸಂತೃಪ್ತಿಯ ಬದುಕು ನೀಡಿದ ಕೃಷಿ
ಮಣ್ಣನ್ನು ನಂಬಿದವನಿಗೆ ಎಂದೂ ಸೋಲಿಲ್ಲ’, ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಾತು ನಗರೀಕರಣದ ಇಂದಿನ ಸಂದರ್ಭಗಳಲ್ಲೂ ಪ್ರಸ್ತುತ. ಹಾಗಿದ್ದರೂ, ಯುವಕರು ಕೃಷಿಯಿಂದ ವಿಮುಖರಾಗಿ, ವೃತ್ತಿಪರ ಉದ್ಯೋಗವನ್ನು ಆಯ್ದು, ಅದರಿಂದ ಭ್ರಮನಿರಸನರಾಗಿ, ಮತ್ತೆ ಕೃಷಿಯನ್ನೇ ತಮ್ಮದಾಗಿಸಿ ಸಂತೃಪ್ತ ಬದುಕು ಕಂಡ ಹಲವು ಯುವಕರ ಉದಾಹರಣೆಗಳನ್ನು ನಾವು ಕಾಣಬಹುದು. ಅಂತಹ ಓರ್ವ ಯುವಕ ಬಂಟ್ವಾಳದ ಇಡ್ಕಿದು ಗ್ರಾಮದ ಕಂಬಳಬೆಟ್ಟು ನಿವಾಸಿ ಜಯಂತ್ ಬಿ. ಎಸೆಸ್ಸೆಲ್ಸಿವರೆಗೆ ಓದಿ ಬಳಿಕ ಮೆಕ್ಯಾನಿಕ್ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ, ನೆಮ್ಮದಿಯ ಜೀವನಕ್ಕಾಗಿ ಅವರು ಕಳೆದ 12 ವರ್ಷಗಳಿಂದೀಚೆಗೆ ಆಯ್ದುಕೊಂಡ ಕಾಯಕ ಕೃಷಿ. ತನ್ನ ತಂದೆ ತಿಮ್ಮಪ್ಪ ಸಪಲ್ಯ ಆದಿಯಾಗಿ ನೆಚ್ಚಿಕೊಂಡ, ಹಿರಿಯರಿಂದ ಬಳುವಳಿಯಾಗಿ ಬಂದ ತಮ್ಮ ಸುಮಾರು 10 ಎಕರೆ ಜಮೀನಿನಲ್ಲಿ ಪ್ರಸ್ತುತ ಅವರು ಬಹುವಿಧದ ಕೃಷಿ ಚಟುವಟಿಕೆಗಳ ಮೂಲಕ ಸಂತೃಪ್ತಿಯ ಜೀವನವನ್ನು ಸಾಗಿಸುತ್ತಿದ್ದಾರೆ.
ಒಂದೆಡೆ ಅಡಿಕೆ ತೋಟ, ಬಾಳೆ ಗಿಡ, ಕರಿಮೆಣಸು ಹಾಗೂ ತರಕಾರಿ ಬೆಳೆಯ ಜತೆಗೆ ಇವರು ಆಡು, ಮೀನು, ದನ, ಕೋಳಿ ಸಾಕಣೆಯ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ.
6 ದನಗಳು, ದಿನಕ್ಕೆ 50 ಲೀಟರ್ ಹಾಲು!
ಕಂಬಳಬೆಟ್ಟು ದೇವಸ್ಯ ನಿವಾಸಕ್ಕೆ ಹೋದರೆ ಅಲ್ಲಿ ಬಹುವಿಧದ ಕೃಷಿ ಚಟುವಟಿಕೆಗಳ ದಿವ್ಯ ದರ್ಶನ ನಮ್ಮನ್ನು ಎದುರುಗೊಳ್ಳುತ್ತಿದೆ. ಗೇಟಿನ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆಯೇ ಎಡಬದಿಯಲ್ಲಿ ಮನೆಗೆ ತಾಗಿಕೊಂಡು ದನಗಳ ಹಟ್ಟಿ. ಅದು ಸಾಮಾನ್ಯ ಹಟ್ಟಿಯಲ್ಲ. ಆ ಹಟ್ಟಿಯಲ್ಲಿ ಇರುವ ಆರು ದನ (ಒಂದು ಕರು)ಗಳಿಗಾಗಿ ಹಟ್ಟಿಗೆ ್ಯಾನ್‌ಗಳನ್ನು ಅಳವಡಿಸಲಾಗಿದೆ. ್ಯಾನ್‌ಗಳು ಹಗಲು ಹೊತ್ತಿನಲ್ಲೇ ತಿರುಗುತ್ತಿರುತ್ತವೆ. ಹಟ್ಟಿಯಲ್ಲಿ ದನಗಳಿಗೆ ಕಾಲಿನ ಗೊರಸಿಗೆ ತೊಂದರೆಯಾಗದ ರೀತಿಯಲ್ಲಿ ಸಿಮೆಂಟ್ ಹಾಕಲಾಗಿದೆ. ಹಸಿರು ಹುಲ್ಲು, ಬೈಹುಲ್ಲಿನ ರಾಶಿ. ಜಯಂತ್ ಅವರ ತಾಯಿ ರಾಜೀವಿ ಅಲ್ಲೇ ನಮ್ಮನ್ನು ಎದುರುಗೊಂಡು ದನಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ.
ಜಯಂತ್‌ರ ಪ್ರಕಾರ ಪ್ರಸ್ತುತ ದಿನವೊಂದಕ್ಕೆ 50 ಲೀಟರ್ (ಬೆಳಗ್ಗೆ ಮತ್ತು ಸಂಜೆಯ ಹೊತ್ತು) ಹಾಲನ್ನು ಸ್ಥಳೀಯ ಹಾಲು ಉತ್ಪಾದಕರ ಸಂಘದ ಮೂಲಕ ಕೆಎಂಎ್ಗೆ ನೀಡುತ್ತಾರೆ. ದನಕ್ಕೆ ಬೇಕಾದ ಮೇವು, ಅದರಲ್ಲೂ ರಸಮೇವನ್ನು ತಮ್ಮ ಜಮೀನಲ್ಲೇ ಇವರು ತಯಾರಿಸುವುದರಿಂದ ಅಂತಹ ಖರ್ಚೇನೂ ಇಲ್ಲ. ಹಟ್ಟಿಯ ಗಂಜಲ, ಸೆಗಣಿಯನ್ನು ತೋಟಕ್ಕೆ ಗೊಬ್ಬರದ ಜತೆಗೆ ಬಯೋ ಗ್ಯಾಸ್‌ಗೆ ಬಳಕೆ ಮಾಡುತ್ತಿದ್ದಾರೆ.
‘ಸ್ವಚ್ಛ-ಸುಂದರ’ ಆಡುಗಳ ಕೊಠಡಿ!
ಬಹುತೇಕವಾಗಿ ಕೋಣೆಗಳಲ್ಲಿ ಆಡುಗಳನ್ನು ಸಾಕುವಲ್ಲಿ ಅವುಗಳ ಹಿಕ್ಕೆ ಹಾಗೂ ಮೂತ್ರದ ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗುತ್ತದೆ. ಆದರೆ ಜಯಂತ್ ಅವರ ಆಡುಗಳ ಕೊಠಡಿ ಸ್ವಚ್ಛ ಹಾಗೂ ನೋಡಲು ಆಕರ್ಷಕವಾಗಿದೆ.
ನೆಲದಿಂದ ಸುಮಾರು ನಾಲ್ಕಡಿ ಎತ್ತರದಲ್ಲಿ ಊರು ಕಂಬಗಳನ್ನು ಹಾಕಿ ಮರದ ಆಕರ್ಷಕ ಗಾಳಿಯಾಡುವಂತಹ ವಿಶಾಲವಾದ ಕೊಠಡಿಯನ್ನು ಸ್ವತಃ ಜಯಂತ್ ಅವರೇ ನಿರ್ಮಿಸಿಕೊಂಡಿದ್ದಾರೆ. ಮರದ ಹಲಗೆಗಳನ್ನು ಜೋಡಿಸಿ ನೆಲಪಾಯ ನಿರ್ಮಿಸಲಾಗಿದ್ದು, ಮೇಲಿಂದ ಆಡುಗಳು ಹಾಕುವ ಹಿಕ್ಕೆ ಹಾಗೂ ಮೂತ್ರ ನೇರವಾಗಿ ಹಲಗೆಗಳ ನಡುವಿನ ಜಾಗದಿಂದ ಕೆಳಕ್ಕೆ ಸ್ವಲ್ಪ ಗುಂಡಿಯಾಕಾರದಲ್ಲಿರುವ ನೆಲಕ್ಕೆ ಬೀಳುತ್ತದೆ. ಆಡುಗಳಿರುವ ಜಾಗ ಸಂಪೂರ್ಣ ಸ್ವಚ್ಛ. ನೆಲದಡಿಯಲ್ಲಿ ಸಂಗ್ರಹವಾಗುವ ಆಡುಗಳ ಹಿಕ್ಕೆಯ ಗೊಬ್ಬರ ಇವರ ತೋಟಕ್ಕೆ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಉಪಯೋಗಿಸಲ್ಪಡುತ್ತದೆ.
‘‘ಮೂರು ವರ್ಷಗಳ ಹಿಂದೆ ಎರಡು ಆಡು ಗಳನ್ನು ಖರೀದಿಸಿ ಸಾಕಣೆ ಆರಂಭಿಸಿದೆ. ಬಳಿಕ ಮತ್ತೆರಡು ಮರಿಗಳನ್ನು ಖರೀದಿಸಿ ಇದೀಗ ಅವುಗಳ ಮರಿಗಳಿಂದಲೇ ಸುಮಾರು 20 ಆಡುಗಳಿವೆ. ಹಿಂದೆ ಅವುಗಳಿಗಾಗಿ ನೆಲದ ಮೇಲೆಯೇ ಒಂದು ಸಣ್ಣ ಕೊಠಡಿ ನಿರ್ಮಿಸಿದ್ದೆ. ಆದರೆ ಅದನ್ನು ಸ್ವಚ್ಛಗೊಳಿಸುವುದು ತ್ರಾಸದಾಯಕವಾದ ಕಾರಣ ಈ ರೀತಿಯ ಕೊಠಡಿ ನಿರ್ಮಿಸಿದೆ’’ ಎನ್ನುತ್ತಾರೆ ಜಯಂತ್.
ಕೋಳಿ ಸಾಕಣೆ: ಸರಾಸರಿ 35 ಸಾವಿರ ರೂ. ಆದಾಯ
ಕಂಪೆನಿಯೊಂದರಿಂದ ಕೋಳಿ ಮರಿಗಳನ್ನು ತಂದು ಅದಕ್ಕಾಗಿಯೇ ನಿರ್ಮಿಸಲಾದ ಸ್ವಚ್ಛ ಹಾಗೂ ವಿಶಾಲವಾದ ಕೊಠಡಿಯಲ್ಲಿ ಅದನ್ನು ಸಾಕಲಾಗುತ್ತದೆ. ಅದಕ್ಕೆ ಬೇಕಾದ ಆಹಾರವನ್ನು ಕಂಪೆನಿಯವರೇ ನೀಡುತ್ತಾರೆ.
‘‘ಒಮ್ಮೆಗೆ 3,500 ಕೋಳಿ ಮರಿಗಳನ್ನು ಮನೆಯ ಫಾರ್ಮ್‌ಗೆ ತಂದು ಸಾಕಲಾಗುತ್ತದೆ. 40 ದಿನಗಳಲ್ಲಿ ಮರಿಗಳು ದೊಡ್ಡದಾಗಿರುತ್ತವೆ. ಅವುಗಳನ್ನು ವಾಹನಕ್ಕೆ ತುಂಬಿಸಿ ಸಾಗಿಸುವ ಕಾರ್ಯಕ್ಕಾಗಿ ಕೂಲಿಯಾಳುಗಳನ್ನು ಬಳಸಲಾಗುತ್ತದೆ. ಉಳಿದಂತೆ ವಿದ್ಯುತ್ ಖರ್ಚು. ಇದರಿಂದ ಒಮ್ಮೆಗೆ ಸರಾಸರಿ 30ರಿಂದ 35 ಸಾವಿರ ಆದಾಯವನ್ನು ಪಡೆಯಲಾಗುತ್ತಿದೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ಕೋಳಿ ಸಾಕುವುದನ್ನು ಆರಂಭಿಸಿದ್ದೇನೆ’’ ಎಂದು ಜಯಂತ್ ಹೇಳುತ್ತಾರೆ.
ಸಿಮೆಂಟ್ ತೊಟ್ಟಿಯಲ್ಲಿ ಮೀನು ಸಾಕಣೆ!
‘‘ಮಂಗಳೂರಿನ ಮೀನುಗಾರಿಕಾ ಕಾಲೇಜಿಗೆ ತರಬೇತಿಗೆಂದು ಹೋಗಿದ್ದ ಸಂದರ್ಭ ಮೀನು ಸಾಕಣೆಯ ಹವ್ಯಾಸ ಬೆಳೆಸುವ ಮನಸ್ಸಾಯಿತು. ಹಾಗೆ ಮನೆಯ ಜಮೀನನಲ್ಲಿ ಸಿಮೆಂಟ್ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿ ಮೀನು ಸಾಕಣೆ ಆರಂಭಿಸಿದ್ದೇನೆ. ರೋಹು, ಕಾಟ್ಲಾ ಮೊದಲಾದ ಮೀನುಗಳನ್ನು ಸಾಕುತ್ತಿದ್ದೇನೆ. ಒಂದು ಸಾವಿರ ಮೀನು ಮರಿಗಳನ್ನು ತಂದು ಸಾಕಲಾರಂಭಿಸಿದ್ದೇನೆ. ನಾಲ್ಕು ಬಾರಿ ಬೆಳೆದ ಮೀನುಗಳನ್ನು ಸ್ಥಳೀಯವಾಗಿ ಮಾರಿದ್ದೇನೆ. ಒಳ್ಳೆಯ ಬೇಡಿಕೆಯೂ ಇದೆ. ಆದರೆ ಮೀನು ಸಾಕಣೆಯನ್ನು ನಾನು ವೃತ್ತಿಯಾಗಿಸಿಕೊಂಡಿಲ್ಲ’’ ಎನ್ನುವುದು ಜಯಂತ್ ಅವರ ಮಾತು.
ಕೆ.ಎಂ.ಎಫ್ ಸಬ್ಸಿಡಿಯಲ್ಲಿ ರಸಮೇವು ತಯಾರಿ
ಮುಸುಕಿನ ಜೋಳ, ಬೆಲ್ಲದ ದ್ರಾವಣ, ಮಜ್ಜಿಗೆ ಹಾಗೂ ಲವಣಾಂಶದಿಂದ ಕೂಡಿದ ಪಶು ಆಹಾರವನ್ನು ರಸಮೇವು ಅನ್ನಲಾಗುತ್ತದೆ. ಇದು ಪಶುಗಳಿಗೆ ಪೌಷ್ಟಿಕ ಆಹಾರ. ಇದನ್ನು ಸೇವಿಸುವ ದನಗಳಲ್ಲಿ ಹಾಲಿನ ಇಳುವರಿಯೂ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇಂತಹ ರಸಮೇವು ತಯಾರಿಕೆಗಾಗಿ ಘಟಕಗಳ ನಿರ್ಮಾಣಕ್ಕಾಗಿ ಸ್ವತಃ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎ್)ದಿಂದ ಸಬ್ಸಿಡಿಯನ್ನೂ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರಳೆಣಿಕೆಯ ರೈತರು ಸ್ವತಃ ತಮ್ಮ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದು ಈ ರಸಮೇವನ್ನು ತಯಾರಿಸುತ್ತಿದ್ದಾರೆ. ಅಂತಹ ಯಶಸ್ವಿ ರೈತರಲ್ಲಿ ಒಬ್ಬರು ಜಯಂತ್. ಕಳೆದ ಮೂರು ವರ್ಷಗಳಿಂದ ರಸಮೇವನ್ನು ಇವರು ತಯಾರಿಸುತ್ತಿದ್ದಾರೆ.
‘‘10 ಅಡಿ ಉದ್ದ, 10 ಅಡಿ ಅಗಲ ಹಾಗೂ ಸುಮಾರು 8 ಅಡಿ ಆಳದ ಸಿಮೆಂಟ್‌ನ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ ಕೆಎಂಎ್ 55 ಸಾವಿರ ರೂ. ಸಬ್ಸಿಡಿಯನ್ನೂ ನೀಡುತ್ತದೆ. ಇದರಲ್ಲಿ ಸಣ್ಣದಾಗಿ ಹೆಚ್ಚಿದ ಮುಸುಕಿನ ಜೋಳದ ಹಸಿ ಹುಲ್ಲು, ಬೆಲ್ಲದ ದ್ರಾವಣ, (ಸುಮಾರು 5 ಟನ್ ಜೋಳದ ಹುಲ್ಲಿಗೆ 10 ಕೆಜಿ ಬೆಲ್ಲ) ಸ್ವಲ್ಪ ಮಜ್ಜಿಗೆ, ಸುಮಾರು 20 ಕೆಜಿಯಷ್ಟು ಲವಣ ಮಿಶ್ರಣವನ್ನು ಪದರ ಪದರವಾಗಿ ಗುಂಡಿಯಾಕಾರದ ಟ್ಯಾಂಕ್‌ನಲ್ಲಿ ಪ್ಲಾಸ್ಟಿಕ್ ಹೊದಿಕೆಯ ಮೇಲೆ ಹಾಕಲಾಗುತ್ತದೆ. ಬಳಿಕ ಸುಮಾರು 15ರಿಂದ 20 ದಿನಗಳ ಕಾಲ ಗಾಳಿ, ನೀರು ಸೇರದಂತೆ ಭದ್ರವಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ಮುಚ್ಚಿ ಇಡಲಾಗುತ್ತದೆ. ಬಳಿಕ ಅದನ್ನು ಪಶುಗಳಿಗೆ ನೀಡಬಹುದು’’ ಎಂದು ಕೆಎಂಎ್ ಮಂಗಳೂರು ಘಟಕದ ಉಪ ವ್ಯವಸ್ಥಾಪಕ ಪ್ರಭಾಕರ್ ‘ವಾರ್ತಾಭಾರತಿ’ಗೆ ವಿವರ ನೀಡಿದ್ದಾರೆ. ‘‘ನಾನು ರಸಮೇವು ತಯಾರಿಸಿ ದನಗಳಿಗೆ ಹಾಕಲು ಆರಂಭಿಸಿದ ಬಳಿಕ ಹಾಲಿನ ಇಳುವರಿಯಲ್ಲಿ ಹೆಚ್ಚಳವಾಗಿದೆ. ಮಾತ್ರವಲ್ಲದೆ ಆಡುಗಳು ಹಾಗೂ ದನಗಳು ಇದನ್ನು ಖುಷಿಯಿಂದ ತಿನ್ನುತ್ತವೆ. ಇದು ತೃಪ್ತಿ ನೀಡಿದೆ. ಒಟ್ಟಾರೆಯಾಗಿ ಕೃಷಿ ಬದುಕು ನನಗೆ ನೆಮ್ಮದಿಯ ಬದುಕು ನೀಡಿದೆ. ಯಾವುದೇ ಕಿರಿ ಕಿರಿ ಇಲ್ಲ. ನನ್ನ ಪತ್ನಿ ಶಮಿತಾ ಸೇರಿದಂತೆ ಮನೆಯವರೆಲ್ಲ ಕೃಷಿ ಚಟುವಟಿಕೆಗಳಲ್ಲಿ ನನಗೆ ಕೈಜೋಡಿಸುವುದರಿಂದ ಕೂಲಿ ಕಾರ್ಮಿಕರ ಅಗತ್ಯವಿಲ್ಲದೆ ಸ್ವಂತವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ನಮ್ಮ ತಂದೆ ತಾಯಿಗೆ ಕೃಷಿಯ ಬಗ್ಗೆ ಅಪಾರ ಜ್ಞಾನವಿರುವುದು ನನಗೆ ಸಹಕಾರಿಯಾಗಿದೆ. ಕಳೆದ 12 ವರ್ಷಗಳಲ್ಲಿ ನಾನು ಕೃಷಿಯಿಂದ ಸಂತೃಪ್ತಿಯ ಜೀವನವನ್ನು ಕಂಡುಕೊಂಡಿದ್ದೇನೆ’’ ಎನ್ನುತ್ತಾರೆ ಜಯಂತ್.
‘‘ನನ್ನ ಹಿಂದಿನ ತಲೆಮಾರಿನವರೂ ಕೃಷಿ ಮಾಡುತ್ತಿದ್ದವರು. ಹಿಂದೆ ಭತ್ತವನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಕೆಲಸದವರು ಸಿಗದ ಕಾರಣ ಗದ್ದೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ. ಎರಡು ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆಯನ್ನು ತೋಟ ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಈಗ ಮಗ ಜಯಂತ್ ಎಲ್ಲ ಜವಾಬ್ಧಾರಿಯನ್ನು ನೋಡಿಕೊಳ್ಳುತ್ತಿದ್ದಾನೆ’’ ಎನ್ನುತ್ತಾರೆ ಹಿರಿಯ ಕೃಷಿಕ ತಿಮ್ಮಪ್ಪ ಸಪಲ್ಯ.