ರಘುರಾಮ್ ರಾಜನ್ ಭಾರತದ ಆರ್ಥಿಕತೆಗೆ ಟೈಂಬಾಂಬ್ ಇಟ್ಟಿದ್ದಾರಂತೆ!

Update: 2016-06-10 04:58 GMT

ಹೊಸದಿಲ್ಲಿ: ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಮತ್ತೆ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಕಿಡಿ ಕಾರಿದ್ದಾರೆ. ಐಎಂಎಫ್ ನ ಈ ಮಾಜಿ ಅರ್ಥಶಾಸ್ತ್ರಜ್ಞ ದೇಶದ ಆರ್ಥಿಕತೆಗೆ ಟೈಂಬಾಂಬ್ ಇಟ್ಟಿದ್ದಾರೆ. ಇದು ಡಿಸೆಂಬರ್ ನಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ ಎಂಬ ಆರೋಪ ಮಾಡಿದ್ದಾರೆ.
ಬಡ್ಡಿದರವನ್ನು ಹೆಚ್ಚಿನ ಪ್ರಮಾಣದಲ್ಲೇ ಇಟ್ಟ ರಘುರಾಮ್ ರಾಜನ್ ಅವರನ್ನು ತಕ್ಷಣ ಪದಚ್ಯುತಿಗೊಳಿಸುವಂತೆ ಆಗ್ರಹಿಸಿ ಕಳೆದ ತಿಂಗಳು ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಸ್ವಾಮಿ, ಟ್ವಿಟ್ಟರ್ ಮೂಲಕವೂ ಆರ್ ಬಿಐ ಮುಖ್ಯಸ್ಥರ ವಿರುದ್ಧ ಚಾಟಿ ಬೀಸಿದ್ದಾರೆ.
ರಘುರಾಮ ರಾಜನ್ 2013ರಲ್ಲೇ ದೇಶದ ಹಣಕಾಸು ವ್ಯವಸ್ಥೆಗೆ ಟೈಂಬಾಂಬ್ ಇಟ್ಟಿದ್ದಾರೆ. 2016ರ ಡಿಸೆಂಬರ್ನಲ್ಲಿ ಅದು ಸ್ಫೋಟವಾಗುವಂತೆ ಸಮಯ ನಿಗದಿಪಡಿಸಿದ್ದಾರೆ. ದೇಶದ ಬ್ಯಾಂಕ್ಗಳು 24 ಶತಕೋಟಿ ಡಾಲರ್ಗಳ ಎಫ್.ಇ. ನೀಡುವುದು ಅನಿವಾರ್ಯವಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ವಿವರ ನೀಡಲು ಹೋಗಿಲ್ಲ. ಎಫ್.ಇ ಎಂದರೆ ವಿದೇಶಿ ವಿನಿಮಯವಾಗಿರುವ ಸಾಧ್ಯತೆ ಇದೆ.
ಈ ಬಗ್ಗೆ ಕೇಳಿದ ಸ್ಪಷ್ಟನೆಗೆ ಆರ್ಬಿಐ ವಕ್ತಾರ ಅಲ್ಪನಾ ಕಿಲ್ಲವಾಲಾ ಯಾವ ಪ್ರತಿಕ್ರಿಯೆಯನ್ನೂ ತಕ್ಷಣಕ್ಕೆ ನೀಡಿಲ್ಲ.
ಕಳೆದ ತಿಂಗಳ 26ರಂದು ಸ್ವಾಮಿ, ರಾಜನ್ ವಿರುದ್ಧ ಆರು ಗಂಭೀರ ಆರೋಪಗಳನ್ನು ಮಾಡಿದ್ದರು. ಇದರಲ್ಲಿ ರಾಜನ್ ಅವರು ಗುಪ್ತ ಹಾಗೂ ಸೂಕ್ಷ್ಮ ಹಣಕಾಸು ಮಾಹಿತಿಗಳನ್ನು ವಿಶ್ವಕ್ಕೆ ಸೋರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಸೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News