ರಸ್ತೆ ಅತಿಕ್ರಮಿಸಿದ ಎಲ್ಲ ಧಾರ್ಮಿಕ ಕಟ್ಟಡಗಳ ತೆರವಿಗೆ ಹೈಕೋರ್ಟ್ ಆದೇಶ

Update: 2016-06-11 15:34 GMT

ಲಕ್ನೋ, ಜೂ.11: ರಾಜ್ಯದಲ್ಲಿ ರಸ್ತೆ ಅತಿಕ್ರಮಿಸಿ ಮತ್ತು ರಸ್ತೆ ಬದಿಗಳಲ್ಲಿ ನಿರ್ಮಿಸಿದ ಎಲ್ಲ ಧಾರ್ಮಿಕ ಕಟ್ಟಡಗಳನ್ನು ಅವರು ಯಾವುದೇ ಬಗೆಯದ್ದಾಗಿದ್ದರೂ ತಕ್ಷಣ ತೆರವುಗೊಳಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಆದೇಶ ನೀಡಿದೆ.

 ಹೆದ್ದಾರಿ, ಬೀದಿ ಅಥವಾ ಪಾದಚಾರಿ ರಸ್ತೆಗಳು ಅಥವಾ ಲೇನ್‌ಗಳಲ್ಲಿ ಯಾವುದೇ ಬಗೆಯ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸುವ ಹೊಣೆ ರಾಜ್ಯ ಸರಕಾರದ್ದು. ಈ ಬಗೆಯ ಕಟ್ಟಡ ನಿರ್ಮಿಸುವ ಮೂಲಕ ಆದೇಶದ ಉಲ್ಲಂಘನೆ ಮಾಡುವ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಕ್ರಮವನ್ನು ಅಪರಾಧ ಹಾಗೂ ನಿಂದನೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸುಧೀರ್ ಅಗರ್‌ವಾಲ್ ಹಾಗೂ ರಾಜೇಶ್ ಶ್ರೀವಾಸ್ತವ ಅವರನ್ನು ಒಳಗೊಂಡ ವಿಭಾಗೀಯ ಪೀಠ, 2011ರ ಬಳಿಕ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ನಿರ್ಮಾಣವಾದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ವರದಿಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ರಾಜ್ಯ ಸರಕಾರಕ್ಕೆ ಎರಡು ತಿಂಗಳ ಒಳಗಾಗಿ ಸಲ್ಲಿಸಬೇಕು ಎಂದು ಸೂಚಿಸಿದೆ. ಇದಕ್ಕೂ ಮೊದಲು ನಿರ್ಮಾಣವಾದ ಕಟ್ಟಡಗಳನ್ನು ಆರು ತಿಂಗಳ ಒಳಗಾಗಿ ಖಾಸಗಿ ಜಮೀನಿಗೆ ಸ್ಥಳಾಂತರಿಸಬೇಕು ಅಥವಾ ತೆರವುಗೊಳಿಸಬೇಕು ಎಂದು ಆದೇಶ ನೀಡಿದೆ.

ಲಕ್ನೋದ ಮೊಹಲ್ಲಾ ದೌಡಾ ಖೇರಾ ಪ್ರದೇಶದಲ್ಲಿ ಸಾರ್ವಜನಿಕ ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿ ದೇವಾಲಯ ಕಟ್ಟಡ ನಿರ್ಮಿಸಲಾಗಿದೆ ಎಂದು ಆಪಾದಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಿಲೇವಾರಿ ಮಾಡಿ ಈ ಆದೇಶ ಹೊರಡಿಸಲಾಗಿದೆ.

ಪ್ರತಿಯೊಬ್ಬ ನಾಗರಿಕರಿಗೆ ಚಲನೆಯ ಮೂಲಭೂತ ಹಕ್ಕು ಇದ್ದು, ಇದನ್ನು ಕೆಲವರು ಸಾರ್ವಜನಿಕವಾಗಿ ಉಲ್ಲಂಘಿಸುವಂತಿಲ್ಲ; ರಾಜ್ಯ ಸರಕಾರಿ ಅಧಿಕಾರಿಗಳು ಕೂಡಾ ಇದನ್ನು ನಿರ್ಲಕ್ಷಿಸುವಂತಿಲ್ಲ. ಇದರ ಜೊತೆಗೆ ರಾಜ್ಯ ಸರಕಾರ ಸಾರ್ವಜನಿಕ ರಸ್ತೆಗಳು ಅತಿಕ್ರಮಣವಾಗದಂತೆ ತಡೆಯಲು ಯೋಜನೆಯನ್ನು ಹಮ್ಮಿಕೊಳ್ಳುವಂತೆಯೂ ಹೈಕೋರ್ಟ್ ಆದೇಶ ನೀಡಿದೆ. ಧಾರ್ಮಿಕ ಚಟುವಟಿಕೆಗಳಿಗಾಗಿ ಸಾರ್ವಜನಿಕ ರಸ್ತೆಗಳು ಒತ್ತುವರಿಯಾಗದಂತೆ ತಡೆಯಬೇಕು ಎಂದು ಸೂಚಿಸಿದೆ.

ಇಂಥ ಚಟುವಟಿಕೆಗಳು ಸುಗಮ ವಾಹನ ಸಂಚಾರಕ್ಕೆ ತಡೆಯಾಗಲಿದ್ದು, ಸಾರ್ವಜನಿಕ ಓಡಾಟಕ್ಕೂ ಇದರಿಂದ ತೊಂದರೆಯಾಗುತ್ತಿದೆ. ಧಾರ್ಮಿಕ ಕಾರ್ಯಗಳಿಗೆ ನಿಗದಿಪಡಿಸಿದ ಜಾಗಗಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಮಾತ್ರ ಇಂಥ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಒಂದು ನಿರ್ದೇಶನವನ್ನು ಹೊರಡಿಸಿ, ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಹೆದ್ದಾರಿಯೂ ಸೇರಿದಂತೆ ಎಲ್ಲ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಆದೇಶಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News