ಹೈದರಾಬಾದ್ ನೀರಿನಲ್ಲಿ ಪೋಲಿಯೊ ವೈರಸ್ ಪತ್ತೆ

Update: 2016-06-15 05:27 GMT

ಹೈದರಾಬಾದ್, ಜೂ.15: ಹೈದರಾಬಾದ್ ನಗರದ ಅಂಬರ್‌ಪೇಟ್‌ನ ಕೊಳಚೆ ನೀರು ಸಂಸ್ಕರಣಾ ಘಟಕದ ನೀರಿನ ಸ್ಯಾಂಪಲ್‌ನಲ್ಲಿ ಪೋಲಿಯೊ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ತೆಲಂಗಾಣ ಸರಕಾರ ಮಂಗಳವಾರ ‘‘ಜಾಗತಿಕ ತುರ್ತು ಪರಿಸ್ಥಿತಿ’’ ಘೋಷಿಸಿದೆ.

ಮುಂಜಾಗರೂಕತಾ ಕ್ರಮವಾಗಿ ನಗರದ ಹಾಗೂ ರಂಗಾ ರೆಡ್ಡಿ ಜಿಲ್ಲೆಯ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬುಧವಾರದಿಂದ ಪೋಲಿಯೊ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವೈರಸ್ ಪತ್ತೆಯಾದ ಕೂಡಲೇ ಜಿನೀವಾದಿಂದ ಎರಡು ಲಕ್ಷ ಪೋಲಿಯೊ ಲಸಿಕೆಗಳನ್ನು ವಿಮಾನದಲ್ಲಿ ತರಿಸಲಾಯಿತು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ತಿಳಿಸಿದೆ.

‘‘ಜೂನ್ 20 ರಿಂದ 26 ರ ತನಕ ಹೈದರಾಬಾದ್ ಮತ್ತು ರಂಗಾ ರೆಡ್ಡಿ ಜಿಲ್ಲೆಯ ಕೆಲ ಭಾಗಗಳಲ್ಲಿ ಪೋಲಿಯೊ ವಿರುದ್ಧ ವಿಶೇಷ ಜನಜಾಗೃತಿ ಅಭಿಯಾನವನ್ನು ಸರಕಾರದ ವತಿಯಿಂದ ಆಯೋಜಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಶ್ವರ್ ತಿವಾರಿ ತಿಳಿಸಿದ್ದಾರೆ. ಹಿಂದೆ ಪೋಲಿಯೊ ವೈರಸ್ ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮತ್ತು ದಿಲ್ಲಿಯಲ್ಲಿ ಕೂಡ ಪತ್ತೆಯಾಗಿತ್ತು.

ಲಸಿಕಾ ಕಾರ್ಯಕ್ರಮಗಳನ್ನು ನಡೆಸುವಾಗ ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸುವ ಮಾನದಂಡಗಳನ್ನು ಅನುಸರಿಸಲಾಗುವುದೆಂದು ತೆಲಂಗಾಣ ರಾಷ್ಟ್ರೀಯ ಆರೋಗ್ಯ ಮಿಷನ್ ಇದರ ಮುಖ್ಯ ಕಾರ್ಯಕ್ರಮ ಅಧಿಕಾರಿ ಡಾ. ಜಿ. ಶ್ರೀನಿವಾಸ ರಾವ್ ತಿಳಿಸಿದ್ದಾರೆ. ಆರು ವಾರಗಳಿಂದ ಹಿಡಿದು ಮೂರು ವರ್ಷಗಳ ತನಕದ ಮಕ್ಕಳಿಗೆ ಹೆಚ್ಚುವರಿ ಡೋಸ್ ಲಸಿಕೆ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಯಾವುದೇ ಹೊಸ ಪೋಲಿಯೊ ಪ್ರಕರಣ ವರದಿಯಾಗದಿದ್ದರೂ ಹೈದರಾಬಾದ್‌ಗೆ ಸಂಬಂಧವಿರುವ ಪಶ್ಚಿಮ ಏಷ್ಯಾದಲ್ಲಿ ಕೆಲ ಪೋಲಿಯೊ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರದಿಂದಿರುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News