ಬ್ರಿಟಿಷ್ ಸಂಸದೆ ಹತ್ಯೆ ಆರೋಪಿ ನವ-ನಾಝಿ ಗುಂಪಿನ ಬೆಂಬಲಿಗ
ಲಂಡನ್, ಜೂ. 17: ಬ್ರಿಟಿಷ್ ಸಂಸದೆ ಜೋ ಕಾಕ್ಸ್ ಹತ್ಯೆಯ ಆರೋಪಿಯು ಅಮೆರಿಕದಲ್ಲಿರುವ ನವ-ನಾಝಿ ಗುಂಪೊಂದರ ‘‘ಶ್ರದ್ಧಾಳು ಬೆಂಬಲಿಗ’’ನಾಗಿದ್ದನು ಎಂದು ‘ಸದರ್ನ್ ಪವರ್ಟಿ ಲಾ ಸೆಂಟರ್’ ಎಂಬ ನಾಗರಿಕ ಹಕ್ಕುಗಳ ಸಂಘಟನೆಯೊಂದು ಗುರುವಾರ ವರದಿ ಮಾಡಿದೆ.
ಆರೋಪಿ ಎಂಬುದಾಗಿ ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿರುವ ಥಾಮಸ್ ಮಯರ್ ‘‘ಬಿಳಿಯ ರಾಷ್ಟ್ರೀಯತೆ’’ ಚಳವಳಿಯೊಂದಿಗೆ ಸುದೀರ್ಘ ನಂಟು ಹೊಂದಿದ್ದನು ಎಂದು ಅದು ಹೇಳಿದೆ. ‘‘ಸದರ್ನ್ ಪವರ್ಟಿ ಲಾ ಸೆಂಟರ್‌ಗೆ ಲಭಿಸಿದ ದಾಖಲೆಗಳ ಪ್ರಕಾರ, ಮಯರ್ ದಶಕಗಳ ಕಾಲ ‘ನ್ಯಾಶನಲ್ ಅಲಯನ್ಸ್’ ಎಂಬ ಅಮೆರಿಕದ ಒಂದು ಕಾಲದ ಪ್ರಮುಖ ನವ-ನಾಝಿ ಸಂಘಟನೆಯ ಅನುಯಾಯಿಯಾಗಿದ್ದನು’’ ಎಂದು ಅದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ಪ್ರತಿಪಕ್ಷ ಲೇಬರ್ ಪಕ್ಷದ 41 ವರ್ಷದ ಸಂಸದೆ ಕಾಕ್ಸ್ ನಿರಾಶ್ರಿತರ ಹಕ್ಕುಗಳಿಗಾಗಿನ ಹೋರಾಟದ ಮುಂಚೂಣಿಯಲ್ಲಿದ್ದರು.
ಅವರನ್ನು ಹಾಡಹಗಲೇ ಉತ್ತರ ಇಂಗ್ಲೆಂಡ್‌ನಲ್ಲಿರುವ ಆಕೆಯ ಮತ ಕ್ಷೇತ್ರ ಯಾರ್ಕ್‌ಶಯರ್‌ನಲ್ಲಿ ಗುರುವಾರ ಹತ್ಯೆ ಮಾಡಲಾಗಿದೆ.
ಹತ್ಯೆಯ ಉದ್ದೇಶವನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಉಳಿಯಬೇಕೇ ಬೇಡವೇ ಎಂಬ ಕುರಿತು ಬ್ರಿಟನ್‌ನಲ್ಲಿ ನಡೆಯಲಿರುವ ಜನಮತಗಣನೆಗೆ ಒಂದು ವಾರ ಮುಂಚೆ ಹತ್ಯೆ ಸಂಭವಿಸಿರುವ ಹಿನ್ನೆಲೆಯಲ್ಲಿ, ಪ್ರಚಾರ ಕಾರ್ಯ ಸ್ಥಗಿತಗೊಂಡಿದೆ. ನಿರಾಶ್ರಿತರನ್ನು ಸ್ವೀಕರಿಸುವ ವಿಷಯದಲ್ಲಿ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕೆ ಎನ್ನುವ ಚರ್ಚೆಯಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ನ್ಯಾಶನಲ್ ಅಲಯನ್ಸ್‌ನಿಂದ ಪಡೆದ ಓದುವ ಸಾಮಗ್ರಿಗಳಿಗಾಗಿ ಮಯರ್ 620 ಡಾಲರ್‌ಗಿಂತಲು ಹೆಚ್ಚು ಖರ್ಚು ಮಾಡಿದ್ದಾನೆ ಎಂದು ಸದರ್ನ್ ಪವರ್ಟಿ ಲಾ ಸೆಂಟರ್ ಹೇಳಿದೆ. ಸರ್ವ ಬಿಳಿಯರ ತಾಯ್ನೆಲವನ್ನು ರಚಿಸುವ ಹಾಗೂ ಅದರಿಂದ ಯಹೂದಿಗಳನ್ನು ಹೊರಹಾಕುವ ಯೋಜನೆಯನ್ನು ಈ ನವ-ನಾಝಿ ಸಂಘಟನೆ ಹೊಂದಿತ್ತು.
ಜೀವ ಬೆದರಿಕೆಯಿತ್ತು
ಲಂಡನ್, ಜೂ. 17: ಹತ ಬ್ರಿಟಿಶ್ ಸಂಸದೆ ಜೋ ಕಾಕ್ಸ್ ತನಗೆ ಜೀವ ಬೆದರಿಕೆಯಿರುವ ಬಗ್ಗೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಇದಕ್ಕೆ ಸಂಬಂಧಿಸಿ ಪೊಲೀಸರು ಮಾರ್ಚ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು ಎಂದು ವರದಿಗಳು ತಿಳಿಸಿವೆ. ಪೊಲೀಸರು ಆಗ ಬಂಧಿಸಿದ್ದ ವ್ಯಕ್ತಿ, ಹತ್ಯೆಗೆ ಸಂಬಂಧಿಸಿದಂತೆ ಈಗ ಪೊಲೀಸರ ವಶದಲ್ಲಿರುವ 52 ವರ್ಷದ ವ್ಯಕ್ತಿಯಲ್ಲ ಎಂದು ಪೊಲೀಸರು ತಿಳಿಸಿದರು. ಆ ವ್ಯಕ್ತಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿತ್ತು. ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಉಳಿಯುವುದರ ಪರವಾಗಿ ಕಾಕ್ಸ್ ಪ್ರಚಾರ ಮಾಡುತ್ತಿದ್ದರು. ಆರೋಪಿಯು ಆಕೆಗೆ ಮೊದಲು ಗುಂಡು ಹಾರಿಸಿ ಬಳಿಕ ಪದೇ ಪದೇ ಇರಿದನು ಹಾಗೂ ‘‘ಬ್ರಿಟನ್ ಮೊದಲು’’ ಎಂಬುದಾಗಿ ಘೋಷಣೆ ಕೂಗಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.