ಮಾಸ್ತಿ ಪರಂಪರೆ
ಜೂನ್ ತಿಂಗಳು ಮಾಸ್ತಿ ತಿಂಗಳು. ಕನ್ನಡದ ಅಸ್ತಿ ಎಂದೇ ಅನ್ವರ್ಥರಾದ ‘ಶ್ರೀನಿವಾಸ’ ಕಾವ್ಯನಾಮಾಂಕಿತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹುಟ್ಟಿದ್ದು ಜೂನ್ 6ರಂದು(1891), ಸ್ವರ್ಗವಾಸಿ ಗಳಾದದ್ದೂ ಜೂನ್ 6ರಂದು(1986). ಈ ತಿಂಗಳ ಉದ್ದಕ್ಕೂ ಕರ್ನಾಟಕದ ವಿವಿಧೆಡೆಗಳಲ್ಲಿ ಸಡಗರದಿಂದ ಮಾಸ್ತಿ ಹಬ್ಬವನ್ನು ಆಚರಿಸಲಾಗುತ್ತದೆ.ಇಂದು ಬೆಂಗಳೂರು ಮಹಾನಗರದಲ್ಲಿ ಕನ್ನಡದ ನಾಲ್ವರು ಗಣ್ಯ ಸಾಹಿತಿಗಳಿಗೆ ಮಾಸ್ತಿ ಪ್ರಶಸ್ತಿ ಪ್ರದಾನ ಮತ್ತು ಲೇಖಕ/ಪ್ರಕಾಶಕರಿಗೆ ಕಥಾ/ಕಾದಂಬರಿ ಬಹುಮಾನ ಕೊಡಮಾಡುವ, ತನ್ಮೂಲಕ ಮಾಸ್ತಿ ಪರಂಪರೆಯನ್ನು ಸ್ಮರಿಸಿ, ಬೆಳೆಸುವ ಸಂಭ್ರಮದ ಸಮಾರಂಭ.
ಮಾಸ್ತಿ ವೆಂಕಟೇಶ ಅಯ್ಯಂಗಾರರದು ‘ಪೆರಿಯಾತ್’ (ದೊಡ್ಡಮನೆ)ಮನೆತನ. ಅವರ ತಾತ ದಿವಾನರಾಗಿ ದ್ದವರು. ಆದರೆ ತಂದೆಯ ಕಾಲಕ್ಕೇ ಬಡತನ ಮನೆಯಲ್ಲಿ ಕಾಲೂರಿತ್ತು. ಮಾಸ್ತಿ ಮೈಸೂರಿನಲ್ಲಿ ವಾರಾನ್ನದ ಹುಡುಗನಾಗಿ, ಶಾಲೆಯ ಫೀ ಕಟ್ಟಲೂ ಕಷ್ಟಪಟ್ಟು, ಎಂ.ಎ., ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿದರು. ಮಾಸ್ತಿಯವರ ಕಾಯಕ-ಅಡಿಗರು ಹೇಳುವಂತೆ- ‘‘ಅಧಿಕಾರದಲ್ಲಿದ್ದಾಗ, ಲೆಕ್ಕಣಿಕೆ ಹಿಡಿದಾಗ ಶೋಧಿಸಿದ ಮಾನವತ್ವದ ಆಳ, ವಿಸ್ತಾರಗಳ ಹಿಂದಿನ ಜೀವನದ್ರವ್ಯ ಇದು.’’
ಮಾಸ್ತಿಯವರು ಕನ್ನಡ ಸಣ್ಣಕಥೆಯ ಜನಕ, ಮಾರ್ಗಪ್ರವರ್ತಕರು-ಇದು ಕನ್ನಡ ಸಹೃದಯ ವಿಮರ್ಶೆ ಮಾನ್ಯಮಾಡಿರುವ ಐತಿಹಾಸಿಕ ಮಹತ್ವದ ನಿರ್ಣಯ. ತಮ್ಮ ಸೃಜನಶೀಲತೆಯ ಬಹುಪಾಲು ಶಕ್ತಿ ಮತ್ತು ಮುಕ್ಕಾಲು ಶತಮಾನಕ್ಕೂ ಹೆಚ್ಚು ಕಾಲವನ್ನು ಸಣ್ಣಕಥೆಯ ರಚನೆಯಲ್ಲಿ ತೊಡಗಿಸಿದ್ದ ಮಾಸ್ತಿಯವರು, ಯಶವಂತ ಚಿತ್ತಾಲರು ಹೇಳುವಂತೆ ‘‘ಬರೀ ನೂರಾರು ಕತೆಗಳನ್ನು ಬರೆಯಲಿಲ್ಲ. ಬರೆಯುವ ಮೂಲಕವೇ ಈ ಮಾಧ್ಯಮದ ರೂಪುರೇಷೆಗಳನ್ನು ನಿಶ್ಚಯಿಸಿದರು’’, ಈ ಪ್ರಕಾರದ ಸಾಧ್ಯತೆಗಳನ್ನು ಕಂಡುಕೊಂಡರು. ಸಾಧ್ಯತೆಗಳನ್ನು ವಿಸ್ತರಿಸಿದರು. ಅವರ ಕತೆಗಳ ವಸ್ತು ವೈವಿಧ್ಯತೆಯಲ್ಲಿ, ಅಲ್ಲಿನ ಜೀವನಾನುಭವದ ಹರಹು- ಎತ್ತರಗಳಲ್ಲಿ, ಮಾನವೀಯ ಅಂತ:ಕರಣದ ಮಿಡಿತಗಳಲ್ಲಿ ಇದನ್ನು ಗಮನಿಸಬಹುದಾಗಿದೆ.
ಸಾಮಾಜಿಕ, ಪೌರಾಣಿಕ, ಐತಿಹಾಸಿಕ ವಸ್ತುವಿಷಯಗಳಿಂದಾಗಿ ಮಾಸ್ತಿಯವರ ಕತೆಗಳಿಗೆ ವೈವಿಧ್ಯತೆ ಪ್ರಾಪ್ತವಾಗಿದೆ. ಅಂತೆಯೇ ಕಥನತಂತ್ರ, ಶೈಲಿ, ಮನುಷ್ಯಚೇತನವನ್ನು ಶೋಧಿಸಿ ಪುಟಕ್ಕಿಡುವ ಮಾನವೀಯ ವೌಲ್ಯಗಳು, ನಿರೂಪಣೆಯೊಳಗಿನ ಸಂಯಮ, ಪ್ರಬುದ್ಧ ಜೀವನದೃಷ್ಟಿ ಇವುಗಳಿಂದಾಗಿ ಅವರ ಕತೆಗಳಿಗೆ ಯಥಾರ್ಥತೆ, ಪ್ರಾಮಣ್ಯಗಳೂ ಪ್ರಾಪ್ತವಾಗಿ ಬದುಕಿನ ಸೊಗಸು, ಸೂಕ್ಷ್ಮತೆ, ಸಂಕೀರ್ಣತೆಗಳ ಸಾಕ್ಷಾತ್ಕಾರವಾಗುತ್ತದೆ. ಮಾಸ್ತಿಯವರ ಬರವಣಿಗೆಯ ಉತ್ಸಾಹದ ಮೂಲ ಧಾರ್ಮಿಕ ಶ್ರದ್ಧೆಯಷ್ಟೇ ಶಕ್ತಿಯುತವಾದದ್ದು. ಈ ಉತ್ಸಾಹವೂ ವ್ಯಾಸ ಮಹರ್ಷಿಗಳಿಂದ ಸೂತಪುರಾಣಿಕರವರೆಗೆ ಬಂದ ಪರಂಪರೆಯದು. ಕತೆ ಹೇಳುವುದು-ಕೇಳುವುದು ಒಂದು ಪುಣ್ಯ ಕಾರ್ಯವೆಂಬ ಗಾಢನಂಬಿಕೆಯಿಂದ ಹುಟ್ಟಿದ್ದು. ಕನ್ನಡಕ್ಕೆ ‘ಸಣ್ಣಕತೆ’ ಎಂಬ ಹೊಸ ಪ್ರಕಾರವನ್ನು ಕೊಟ್ಟ ಮಾಸ್ತಿ ತಮ್ಮ ಸಮೃದ್ಧ ರಚನೆಗಳಲ್ಲಿ ಬದುಕಿನಲ್ಲಿನ ಕೇಡು-ಕೆಡಕು, ವಿಕೃತಿಗಳ ದರ್ಶನದ ಜೊತೆಗೆ ಅವಕ್ಕೆ ಎದುರಾಗಿ ಒಳಿತನ್ನು, ಪ್ರೀತಿ, ಕ್ಷಮೆ, ಕರುಣೆ, ಅಂತ:ಕರಣಗಳಂಥ ಶ್ರೇಯಸ್ಕರ ವೌಲ್ಯಗಳನ್ನು ಸೃಷ್ಟಿಸಿದರು. ಮಾಸ್ತಿಯವರ ಕತೆಗಳ ಹಿಂದೆ ಕೆಲಸಮಾಡಿರುವ ಮನಸ್ಸು ಧಾರ್ಮಿಕ ಶ್ರದ್ಧೆಯಿಂದ ಪರಿಪಕ್ವವಾದದ್ದು. ಈ ಧಾರ್ಮಿಕ ಧೋರಣೆಯ ಹಿಂದೆ ಬಲವಾದ ಜೀವನಪ್ರೀತಿ, ಶ್ರದ್ಧೆಗಳಿವೆ. ಮಾನವ ಚೈತನ್ಯದ ಶಕ್ತಿ, ಮನುಷ್ಯನ ಘನತೆಗಳ ಅರಿವಿದೆ. ಬದುಕನ್ನು ಶುಚಿಗೊಳಿಸಿ, ಸಹನೀಯವಾಗಿಸಿ, ಭವಿಷ್ಯದಲ್ಲಿ ಆಶಾಭಾವನೆ ಮೂಡಿಸಿವಂತಿರಬೆಕು ಎಂಬ ಸಾಹಿತ್ಯಕ ಜವಾಬ್ದಾರಿಯ ಪ್ರಜ್ಞಾಪೂರ್ವಕ ತಿಳಿವಳಿಕೆಯಿದೆ. ಮೇಲ್ನೋಟಕ್ಕೆ ಮಾಸ್ತಿಯವರ ಬರವಣಿಗೆ ಸಂಪ್ರದಾಯಶರಣವೆನಿಸಿದರೂ ಆಳದಲ್ಲಿ ಜುಳುಜುಳು ಹರಿವ ಮಾನವೀಯ ಅಂತ:ಕರಣದ ಅಂತರಗಂಗೆಯಿದೆ. ಇದೆಲ್ಲದರ ಮೊತ್ತವೇ ಮಾಸ್ತಿ ಕಥಾ ಪರಂಪರೆ. ಸಣ್ಣ ಕತೆಯಂತೆಯೇ ಮಾಸ್ತಿಯವರ ಕಾವ್ಯ, ಕಾದಂಬರಿ, ನಾಟಕ ಮೊದಲಾದವುಗಳಲ್ಲೂ ಶ್ರೇಷ್ಠ ಲೇಖಕನೊಬ್ಬನ ಗುಣಲಕ್ಷಣಗಳಾದ ಸಮೃದ್ಧಿ, ವೈವಿಧ್ಯ ಮತ್ತು ಪ್ರತಿಭಾ ಸಾಮರ್ಥ್ಯಗಳು ಮೇಳೈಸಿರುವುದನ್ನು ನೋಡಬಹುದು. ಸಣ್ಣ ಕತೆಗಳ ಜನಕರೆಂದು ಪ್ರಸಿದ್ಧರಾದರೂ ಮಾಸ್ತಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಮೃದ್ಧ ಕೃಷಿಮಾಡಿರುವ ಧೀಮಂತ ಲೇಖಕರು.
‘ಆದಿಕವಿ ವಾಲ್ಮೀಕಿ’ಯಂಥ ರಚನೆಯಿಂದ, ‘ಶ್ರೀರಾಮ ಪಟ್ಟಾಭಿಷೇಕ’ದಂಥ ಮಹಾಕಾವ್ಯದಿಂದ ಕನ್ನಡ ಮನಸ್ಸುಗಳನ್ನು ಪಾವನ-ಗೊಳಿಸಿದರು.‘ಕಾಕನ ಕೋಟೆ’, ‘ಮಾಸತಿ’, ‘ಯಶೋಧರಾ’ ನಾಟಕಗಳಿಂದ ಕನ್ನಡ ರಂಗಭೂಮಿಯನ್ನು ಉಜ್ವಲಗೊಳಿಸಿದರು.ಮೂರು ಸಂಪುಟಗಳಲ್ಲಿರುವ ‘ಭಾವ’ ಆತ್ಮಕಥೆ ಸಾರ್ಥಕ ಬದುಕಿನ ಆದರ್ಶವಾಗಿ, ಮೇಲ್ಪಂಕ್ತಿಯಾಗಿ ಕಾಣುತ್ತದೆ. ‘‘ಮುಖ್ಯವಾಗಿ ನಾನು ಹಳೆಯ ಹೊಸ ಯೋಚನೆಗಳ ಸಮನ್ವಯದಲ್ಲಿ ತೊಡಗಿರುವ ಸಾಹಿತಿ’’ ಎಂದು ತಮ್ಮನ್ನು ವರ್ಣಿಸಿಕೊಂಡಿರುವ ಮಾಸ್ತಿಯವರ ಬಗ್ಗೆ ಯು.ಆರ್. ಅನಂತ ಮೂರ್ತಿಯವರು ಹೇಳುತ್ತಾರೆ: ‘‘ಶೇಕ್ಸ್‌ಪಿಯರ್, ವರ್ಡ್ಸವರ್ತ್ ಮತ್ತು ವಾಲ್ಮೀಕಿಯರನ್ನು ಒಟ್ಟಾಗಿ ಮೆಚ್ಚಿಕೊಂಡಿದ್ದ ಮಾಸ್ತಿ ಕೂತಿದ್ದ ಜಾಗ ಕೇವಲ ಹೊಂದಾಣಿಕೆಯದಲ್ಲ, ರಾಜಿಯ ಅಗತ್ಯಕ್ಕಾಗಿ ಹುಡುಕಿಕೊಂಡ ಅನುಕೂಲಸಿಂಧುವಲ್ಲ; ಭಾರತೀಯ ಪರಂಪರೆಯ ಜೀರ್ಣಾಗ್ನಿ ಕನ್ನಡದಲ್ಲಿ ಆರೋಗ್ಯದಾಯಕವಾಗಿ ಉರಿಯುತ್ತಿದೆ ಎಂಬುದನ್ನು ತೋರಿಸಿಕೊಡುವಂಥದು.’’-ಇಂಥ ವಿಶಾಲದೃಷ್ಟಿ, ಜೀವನದರ್ಶನಗಳ ಮಾಸ್ತಿಯವರು ಸಣ್ಣಕತೆಯಲ್ಲಿ ಹೊಸ ಪರಂಪರೆ ಸೃಷ್ಟಿಸಿದಂತೆಯೇ ತಮ್ಮ ಆದರ್ಶಪ್ರಾಯವಾದ ನಡೆಯಿಂದಲೂ ಕನ್ನಡ ಬದುಕಿನಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದವರು. ಸ್ಟ್ರಾಂಡ್ ಮ್ಯಾಗ್ಸೈನ್‌ನಿಂದ ಪ್ರೇರಿತರಾಗಿ ನಮ್ಮ ಜನಕ್ಕೆ ಇಂಥ ಕತೆ ಇದ್ದರೆ ಚೆನ್ನ ಆದೀತಲ್ಲ ಎಂದುಕೊಂಡು ಸ್ವತ: ಕತೆಗಳನ್ನು ಬರೆಯಲಾರಂಭಿಸಿದ್ದಷ್ಟೇ ಅಲ್ಲದೆ ಸೋದರ ಲೇಖಕರ ಕೃತಿಗಳ ಪ್ರಕಟನೆೆಗೆ, ಲೇಖಕರ ನೆರವಿಗೆ ‘ಲೇಖಕ ಸಾಹ್ಯ ನಿಧಿ’ ಸ್ಥಾಪಿಸಿದರು. ಕನ್ನಡಿಗರಿಗೆ ಬೆಳಕಾಗುವಂಥ ಕುವೆಂಪು ಅವರ ‘ಕೊಳಲು’, ಬೇಂದ್ರೆಯವರ ‘ಗರಿ’, ಪುತಿನ ಅವರ ‘ಹಣತೆ’, ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಹಳ್ಳಿಯ ಚಿತ್ರಗಳು’, ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಮೊದಲಾದ ಕೃತಿಗಳನ್ನು ಈ ನಿಧಿಯಿಂದ ಪ್ರಕಟಿಸಿದರು. ಕನ್ನಡದ ಕೆಲಸಕ್ಕೆ ಮಾಸ್ತಿಯವರು ಹುಟ್ಟುಹಾಕಿದ ಹೊಸ ಪರಂಪರೆ ಇದು.
ಕನ್ನಡದ ಕೆಲಸದ ಬಗ್ಗೆ ಅವರು ಆಡಿರುವ ಈ ಮಾತುಗಳು-
‘‘ನಾನು ಕನ್ನಡದ ಕೆಲಸ ಪ್ರಾರಂಭ ಮಾಡಿದಾಗ ಇನ್ನೂ ನಮಗೆ ಇಂಗ್ಲಿಷಿನ ವ್ಯಾಮೋಹ ಹೋಗಿರಲಿಲ್ಲ.ನನ್ನ ಮಾತನ್ನು ಜನ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ ಎಂದು ನಾನು ಬೇಸರಪಟ್ಟುಕೊಳ್ಳುವುದಿಲ್ಲ. ಮುಸ್ಲಿಮರಲ್ಲಿ ಮುಅದ್ದಿನ್ ಎಂಬೊಬ್ಬ ಮನುಷ್ಯ ಇರುತ್ತಾನಂತೆ. ಬೆಳಗಾದಾಗ ಜನರನ್ನು ಪ್ರಾರ್ಥನೆಗೆ ಕೂಗಿ ಎಬ್ಬಿಸುವುದು ಅವನ ಕೆಲಸ. ನಾನು ಕೂಗಿದಾಗ ಹೆಚ್ಚು ಜನ ಕೇಳಲಿಲ್ಲ ಎನ್ನುವ ಮಾತನ್ನು ಅವನು ಆಡುವಂತಿಲ್ಲ. ಇತರರು ಮಲಗಿದ್ದಾಗ ಕೂಗಿ ಎಬ್ಬಿಸುವ ಕೆಲಸ ಅವನದು. ಕನ್ನಡ ದಲ್ಲಿ ನಾನು ಮಾಡಿದುದು ಈ ಮುಅದ್ದಿನ್‌ನ ಕೆಲಸ’’
ಇಂದಿಗೂ ಮನನೀಯವಾದುವು. ಈ ಮುಅದ್ದಿನ್‌ವ್ಯಕ್ತಿತ್ವದ ವಿನಯ ಸ್ವತಃ ಮಾಸ್ತಿಯವರಲ್ಲದೆ ಅವರು ಸೃಷ್ಟಿಸಿರುವ ಪಾತ್ರಗಳಲ್ಲೂ ಬಿಂಬಿತ. ಮಾಸ್ತಿಯವರ ಈ ಪರಂಪರೆಯನ್ನು ನಾವು ಎಷ್ಟರಮಟ್ಟಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ? ನೋಡೋಣ.
ಮಾಸ್ತಿಯವರ ಕಥನ ಪರಂಪರೆಯ ಅತ್ಯುತ್ತಮ ಮಾದರಿ ಮಾಸ್ತಿಯವರೇ ಎಂಬ ಮಾತೂ ಇದೆ. ಆದರೆ ಮಾಸ್ತಿಯವರ ನಂತರದ ತಲೆಮಾರಿನ ಸಣ್ಣ ಕತೆಯನ್ನು ಗಮನಿಸಿದಾಗ ಮಾಸ್ತಿ ಕಥನ ಪರಂಪರೆ ಗುಪ್ತಗಾಮಿನಿಯಾಗಿ ಯಶವಂತ ಚಿತ್ತಾಲರಿಂದ ಹಿಡಿದು ಇಂದಿನ ಕೆ.ಸತ್ಯನಾರಾಯಣ ಮೊದಲಾದವರ ಕತೆಗಳಲ್ಲಿ ಹರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಕೆ.ಸತ್ಯನಾರಾಯಣ ಅವರ ಕತೆಗಳಲ್ಲಂತೂ ಅದು ಢಾಳವಾಗಿಯೇ ಕಾಣಿಸುತ್ತದೆ. ಮಾಸ್ತಿಯವರೇ ಹೇಳಿರುವಂತೆ, ಅವರ ಬರವಣಿಗೆ ಉದ್ದೇಶ ‘‘ಜನಜೀವನವನ್ನು ತಿಳಿಸಬೇಕು, ಜನರಿಗೆ ಒಳ್ಳೆಯುದನ್ನು ಕೊಡಬೇಕು, ಜೀವನ ಪ್ರೀತಿ ಬೆಳೆಸಬೇಕು’’ ಎಂಬುದೇ ಆಗಿದ್ದು ಇದನ್ನು ನಾವು ಹೊಸತಲೆಮಾರಿನ ಕಥೆಗಾರರಲ್ಲಿ ಕಾಣುತ್ತಿದ್ದೇವೆ. ಮಾಸ್ತಿಯವರ ಕಥನ ನಿರೂಪಣಾ ತಂತ್ರದೊಂದಿಗೆ ಬದುಕಿನ ಘನತೆಯನ್ನು ಎತ್ತಿಹಿಡಿಯುವ, ವರ್ತಮಾನದ ಸಹನೀಯತೆ ಹೆಚ್ಚಿಸಿ ಭವಿಷ್ಯದಲ್ಲಿ ಆಸೆ, ಜೀವನ ಪ್ರೀತಿ ಮೂಡಿಸುವಂಥ ಸಾಹಿತ್ಯಕ ಜವಾಬು- ದಾರಿಗಳನ್ನು ತರುವಾಯದ ತಲೆಮಾರಿನ ಲೇಖಕರು ತೋರುತ್ತಿರುವುದು ಮಾಸ್ತಿಯವರಿಗೆ ಸಂದಿರುವ ದೊಡ್ಡ ಗೌರವವಾಗಿದೆ.
ಮಾಸ್ತಿ ಪರಂಪರೆ ಎಂದಾಗ ಅವರು ಕನ್ನಡಕ್ಕಾಗಿ ಮಾಡಿದ ಮುಅದ್ದಿನ್ ಕೆಲಸ ನೆನಪಾಗುತ್ತದೆ. ಅವರು ರೂಪಿಸಿದ ‘ಲೇಖಕ ಸಾಹ್ಯ ನಿಧಿ’ ತುಂಬ ಮುಖ್ಯವಾದದ್ದು. ಈ ನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳೆಸಿದರು, ಕನ್ನಡ ಭಾಷೆ ಬೆಳೆಸಿದರು. ಮಾಸ್ತಿಯವರ ಈ ‘ಮುಅದ್ದಿನ್’ ಪರಂಪರೆಯನ್ನು ಸಂಘಟನೆಯ ರೂಪದಲ್ಲಲ್ಲವಾದರೂ ವೈಯಕ್ತಿಕ ನೆಲೆಯಲ್ಲಿ ಮುಂದುವರಿಸಿಕೊಂಡು ಬಂದಿರುವವರಲ್ಲಿ ಖ್ಯಾತ ಕಥಾ ಲೇಖಕ ಮಾವಿನಕೆರೆ ರಂಗನಾಥನ್ ಮುಖ್ಯರು. ಮಾವಿನಕರೆ ರಂಗನಾಥನ್ ವಿದ್ಯಾರ್ಥಿ ದಿನಗಳಲ್ಲೇ ಮಾಸ್ತಿಯವರಿಂದ ಆಕರ್ಷಿತರಾಗಿ ಅವರ ಪ್ರೀತಿಗೆ ಪಾತ್ರರಾದವರು, ಆಪ್ತವಲಯಕ್ಕೆ ಸೇರಿದವರು. ಲೇಖಕ ಸಾಹ್ಯ ನಿಧಿಯ ಕಾರ್ಯದರ್ಶಿಯಾಗಿದ್ದವರು. ಕೊನೆಯ ದಿನಗಳಲ್ಲಿ ಮಾಸ್ತಿ ಈ ನಿಧಿಯಲ್ಲಿ ಉಳಿದಿದ್ದ ಮೊತ್ತವನ್ನು ಅಂದು ನೆರವಿನ ಅಗತ್ಯವಿದ್ದ ಕನ್ನಡ ಲೇಖಕರಿಗೆ ಮಾವಿನಕೆರೆಯವರ ಮೂಲಕವೇ ಮುಟ್ಟಿಸಿದರು. ಇಲ್ಲಿಗೆ ನಿಧಿ ಮುಗಿಯಿತು ಎನಿಸಿದರೂ ಹಾಗಾಗಲಿಲ್ಲ.ಅದನ್ನು ಬೇರೊಂದು ರೂಪದಲ್ಲಿ ಮಾವಿನಕೆರೆ ಮುಂದುವರಿಸಿದರು.
1992ರಲ್ಲಿ ಮಾವಿನಕೆರೆಯವರು ಪ್ರೊ.ಎಲ್.ಎಸ್.ಎಸ್, ಪ್ರೊ.ಜಿ.ಎಸ್.ಎಸ್ ಅವರುಗಳ ಹಿರಿತನದಲ್ಲಿ ಮಾಸ್ತಿ ಜನ್ಮ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸಿದರು. ಆ ಸಂದರ್ಭದಲ್ಲಿ ಮಾಸ್ತಿಯವರ ನೂರನೆ ಹುಟ್ಟು ಹಬ್ಬದ ಸವಿನೆನಪಾಗಿ ಕನ್ನಡದ ಶ್ರೇಷ್ಠ ಸಾಹಿತಿಗಳನ್ನು ಸನ್ಮಾನಿಸುವ ಮಾಸ್ತಿ ಪ್ರಶಸ್ತಿಯನ್ನು ಮಾವಿನಕೆರೆ ಸ್ಥಾಪಿಸಿದರು. ಈ ಮಾಸ್ತಿ ಪ್ರಶಸ್ತಿ ಸಮಿತಿಗೆ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಪ್ರಥಮಾಧ್ಯಕ್ಷರು. 2000ದ ನಂತರ ಮಾವಿನಕೆರೆ ರಂಗನಾಥನ್ ಅಧ್ಯಕ್ಷರು. ಈ ಮಹತ್ಕಾರ್ಯದಲ್ಲಿ ಮಾವಿನಕೆರೆಯವರಿಗೆ ಬೆಂಬಲವಾಗಿ ನಿಂತವರು ಮಾಸ್ತಿಯವರ ಮೊಮ್ಮಕ್ಕಳಾದ ಡಾ. ಲಕ್ಷ್ಮಣ್ ಮತ್ತು ಶ್ರೀಮತಿ ಉಷಾ ಕೇಸರಿ. ಮಾಸ್ತಿ ಪ್ರಶಸ್ತಿ ಕನ್ನಡದ ಜ್ಞಾನಪೀಠ. ಕನ್ನಡ ಲೇಖಕರಿಗೆ ಬಲು ಆದರಣೀಯವಾದ ಪ್ರತಿಷ್ಠಿತ ಪ್ರಶಸ್ತಿ. ಮಾಸ್ತಿಯವರು ಜನಿಸಿದ-ಗತಿಸಿದ ದಿನವಾದ ಜೂನ್ 6ರಂದು ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭ ಮನೆಯ ಹಬ್ಬದಂತೆ ನಡೆಯುತ್ತದೆ. ಇದುವರೆಗೆ ನಲವತ್ತು ಮಂದಿ ಲೇಖಕರು ಈ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಮುಂದಿನ ವರ್ಷ ಮಾಸ್ತಿ ಪ್ರಶಸ್ತಿ ರಜತೋತ್ಸವ ಆಚರಿಸಲಿದೆ.
ಮಾಸ್ತಿ, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಒಂದು ಹಳ್ಳಿ. ಈ ಗ್ರಾಮದಲ್ಲಿನ ಮಾಸ್ತಿಯವರು ಹುಟ್ಟಿದ ಮನೆ ಪಾಳುಬಿದ್ದು ‘ಹಾವು ಹೊಕ್ಕ’ಮನೆಯಾದುದನ್ನು ಕಂಡು, ಕೆಲವರು ಇದರ ಜೀರ್ಣೋದ್ಧಾರಕ್ಕೆ ಪ್ರಯತ್ನಿಸಿದರು. ಇಂಥ ಪ್ರಯತ್ನದ ಫಲವಾಗಿ ಕರ್ನಾಟಕ ಸರಕಾರ 1997ರಲ್ಲಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಸ್ಥಾಪಿಸಿ, ಮಾವಿನಕೆರೆ ರಂಗನಾಥನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಮಾವಿನಕೆರೆ ಮಾಸ್ತಿ ಮನೆ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಂತರು. ಅದೊಂದು ಪ್ರಾಚೀನ ಕಾಲದ ತೊಟ್ಟಿಮನೆ. ಹಳೆಯ ವಾಸ್ತು ವಿನ್ಯಾಸದಲ್ಲೇ ಈ ತೊಟ್ಟಿಮನೆಯನ್ನು ಪುನರ್‌ನಿರ್ಮಿಸಲಾಯಿತು. ಈಗ ಮಾಸ್ತಿ ಹುಟ್ಟಿದ ಮನೆ 15 ಸಾವಿರ ಪುಸ್ತಕಗಳನ್ನೊಳಗೊಂಡ ಸುಸಜ್ಜಿತ ಗ್ರಂಥ ಭಂಡಾರ, ಯುವಜನಾಂಗಕ್ಕೆ ಜ್ಞಾನನಿಧಿ. ಮಾಸ್ತಿಯವರ ಸಾಹಿತ್ಯ ಸಾಧನೆಯ ಸಮಗ್ರ ವಿಮರ್ಶೆಯ ಎರಡು ಬೃಹತ್ ಸಂಪುಟಗಳ ಪ್ರಕಟನೆ, ಟ್ರಸ್ಟ್ ಮಾಡಿರುವ ಮತ್ತೊಂದು ಘನಕಾರ್ಯ. ಮುಂದಿನ ತಲೆಮಾರುಗಳ ಮಾಸ್ತಿ ಸಾಹಿತ್ಯ ಅಧ್ಯಯನಕ್ಕೆ ಇದೊಂದು ಅಪೂರ್ವ ಆಕರ ಗ್ರಂಥ. ಪ್ರತಿವರ್ಷ ಕನ್ನಡದ ಅತ್ಯುತ್ತಮ, ಕಥಾ ಸಂಕಲನ ಮತ್ತು ಅತ್ಯುತ್ತಮ ಕಾದಂಬರಿಗೆ ಪುರಸ್ಕಾರ ನೀಡುವ ಟ್ರಸ್ಟಿನ ಯೋಜನೆ ಮಾಸ್ತಿಯವರ ಲೇಖಕ ಸಾಹ್ಯ ನಿಧಿಯ ಪರಿಕಲ್ಪನೆಗೆ ಹತ್ತಿರವಾದದ್ದು. ಕಥಾ ಪುರಸ್ಕಾರದ ಮೊತ್ತ 20 ಸಾವಿರ ರೂ., ಕಾದಂಬರಿ ಪುರಸ್ಕಾರದ ಮೊತ್ತ 25 ಸಾವಿರ ರೂ. ಆಯ್ಕೆಯಾದ ಈ ಪುಸ್ತಕಗಳ ಪ್ರಕಾಶನ ಸಂಸ್ಥೆಗೂ 15 ಸಾವಿರ ರೂ ಪುರಸ್ಕಾರ ನೀಡುತ್ತಿರುವುದು ಪುಸ್ತಕ ಪ್ರಕಟನೋದ್ಯಮಕ್ಕೆ ಸಲ್ಲುತ್ತಿರುವ ಗೌರವ/ಪ್ರೋತ್ಸಾಹವಾಗಿದೆ.
ಮಾಸ್ತಿ ಸ್ಮಾರಕ ಭವನ ನಿರ್ಮಾಣ ಟ್ರಸ್ಟಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದಕ್ಕಾಗಿ ಟ್ರಸ್ಟ್ ಬೆಂಗಳೂರು ವಿಶ್ವವಿದ್ಯಾನಿಲಯದ ಸಮೀಪ ಉಲ್ಲಾಳದಲ್ಲಿ 120-220 ಅಡಿ ಅಳತೆಯ ನಿವೇಶನ ಖರೀದಿಸಿದೆ. ಎಂಟು ಕೋಟಿ ರೂ ಅಂದಾಜು ವೆಚ್ಚದಲ್ಲಿ ಮಾಸ್ತಿ ಸ್ಮಾರಕ ಭವನ ನಿರ್ಮಾಣವಾಗಲಿದೆ. ಮೂರು ಅಂತಸ್ತಿನ ಈ ಭವನದಲ್ಲಿ ಸುಸಜ್ಜಿತ ಸಭಾಂಗಣ, ಎರಡನೆ ಅಂತಸ್ತಿನಲ್ಲ್ಲಿ ಆಕರ ಗ್ರಂಥ ಭಂಡಾರ ಮತ್ತು ಮೂರನೆ ಅಂತಸ್ತಿನಲ್ಲಿ ಸಂಶೋಧನೆ, ಅಧ್ಯಯನ ಮತ್ತು ಬರವಣಿಗೆಗಳಿಗೆ ಅನುಕೂಲವಾಗುವಂತೆ ಲೇಖಕರ ವಸತಿಗೆ ಕೊಠಡಿಗಳು ಇರುತ್ತವೆ. ಮಾಸ್ತಿಯವರ 125ನೇ ಜನ್ಮೋತ್ಸವ ವರ್ಷದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭಿಸಿ ಮುಂದಿನ ಜನ್ಮೋತ್ಸವವನ್ನು ಸ್ಮಾರಕ ಭವನದಲ್ಲೇ ಆಚರಿಸಬೇಕೆನ್ನುವುದು ಮಾವಿನಕೆರೆಯವರ ಆಶಯ. ಕಾರ್ಪೋರೆಟ್ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಗೆ ಮೀಸಲಿಡುವ ಹಣದಲ್ಲಿ ಒಂದು ಪಾಲನ್ನು ಈ ಸಾಂಸ್ಕೃತಿಕ ಕಾರ್ಯದತ್ತ ಹರಿಸಿದರೆ ಅವರ ಆಶಯದ ಹಾದಿ ಸುಗಮವಾದೀತು. ಮಾಸ್ತಿಯವರಿಗೆ ಶಾಶ್ವತ ಸ್ಮಾರಕ ಇಲ್ಲವೆಂಬ ಅಭಿಮಾನಿಗಳ ಕೊರಗು ಇನ್ನಿಲ್ಲವಾದೀತು.
ಭರತ ವಾಕ್ಯ: ಕಣ್ಗೆ ಕಾಣುವ ಒಡಲು ಈಗಿಲ್ಲ ನಿಜ, ನಮ್ಮ
ನಿಮ್ಮ ಮಾಸ್ತಿಗೆ ಈಗ ಜ್ವಲಂತ ಕೀರ್ತಿಶರೀರ.
ಯಾವಾಗಲೂ ನೀವು ಕನ್ನಡದ ಆಸ್ತಿಯೇ. ಈ ಇಲ್ಲೆ
ಹುಟ್ಟಿಬರುವುದು ನಿಮ್ಮ ಸಾಹಿತ್ಯ ಸಂತಾನ.