ಸಂವಿಧಾನ: ಪ್ರಜಾಪ್ರಭುತ್ವದ ಕನಸಿಗೊಂದು ಜೀವಗನ್ನಡಿ

Update: 2024-11-26 06:35 GMT

ನಮಗೆ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ವಿದೆ. ಆದರೆ ಸ್ವತಃ ಅಂಬೇಡ್ಕರ್ ಅವರಿಗೆ ಇದ್ದಂತಹ ಸಂವಿಧಾನ ಯಾವುದು? ಅಂಬೇಡ್ಕರ್ ಅವರು ತಮ್ಮ ಜೀವನ, ಬರವಣಿಗೆ, ಹೋರಾಟ, ಸಿದ್ಧಾಂತ, ನೈತಿಕತೆಯ ಸಂದರ್ಭಗಳಲ್ಲಿ ಅವರ ಮೇಲೂ ಹಲವು ವ್ಯಕ್ತಿಗಳ ಚಿಂತನೆಗಳ ಸಾಹಿತ್ಯ ತತ್ವಜ್ಞಾನಗಳ ಪ್ರಭಾವಗಳು ಬೀರಿ ತಮ್ಮದೇ ಆದ ಒಂದು ಸಂವಿಧಾನಾತ್ಮಕ ವ್ಯಕ್ತಿತ್ವವನ್ನು ಅವರು ಕಟ್ಟಿಕೊಂಡಿದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳ ಸಂಪುಟಗಳನ್ನು ಓದಿದರೆ ಅವರ ಆಳವಾದ ಸಾಮಾಜಿಕ ಅಧ್ಯಯನದ ಜ್ಞಾನ ನಮಗೆ ತಿಳಿಯುತ್ತದೆ. ಅಂಬೇಡ್ಕರ್ ಅವರು ಕೇಳುವ ಪ್ರಶ್ನೆಗಳಂತೂ ಸಂವಿಧಾನದ ಚೌಕಟ್ಟಿನಲ್ಲಿಯೇ ನಡೆದು ಅವಕ್ಕೊಂದು ಸಾಮಾಜಿಕ ಉತ್ತರದಾಯಿತ್ವದ ನ್ಯಾಯವನ್ನು ನೀಡುವವರೆಗೂ ಅವು ವಿರಮಿಸುವುದಿಲ್ಲ. ಅವರೇ ಒಂದೆಡೆ ಹೇಳಿರುವಂತೆ,-‘‘ಸಂವಿಧಾನಾತ್ಮಕ ಪ್ರಶ್ನೆಗಳು ಮುಖ್ಯವಾಗಿ ಹಕ್ಕಿನ ಪ್ರಶ್ನೆಗಳಾಗಿರದೆ ಶಕ್ತಿಯ ಪ್ರಶ್ನೆಗಳಾಗಿರುತ್ತವೆ. ಪ್ರತ್ಯಕ್ಷವಾದ ಶಕ್ತಿ ಇದ್ದರೆ ಮಾತ್ರ ದೇಶದ ಸಂವಿಧಾನ ಬದುಕಬಲ್ಲದು ಆದುದರಿಂದ ಒಂದು ಸಮಾಜ ದಲ್ಲಿರುವ ಶಕ್ತಿಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಿದಲ್ಲಿ ಮಾತ್ರ ರಾಜಕೀಯ ಸಂವಿಧಾನಕ್ಕೆ ಮೌಲ್ಯ ಮತ್ತು ಸ್ಥಿರತೆ ಇರುತ್ತದೆ’’.

ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೃತ್ತಿ, ಸ್ಥಳೀಯ ಬದುಕಿನ ಸ್ವಾತಂತ್ರ್ಯಗಳು ಅಮೆರಿಕ ಸಂವಿಧಾನದ ರಾಜಕೀಯ ಮೂಲಭೂತ ಹಕ್ಕುಗಳಾಗಿರುವಂತೆ ಭಾರತದ ಸಂವಿಧಾನದಲ್ಲೂ ಈ ಅಂಶಗಳು ಪ್ರಧಾನ ಸ್ಥಾನ ಹೊಂದಿ ಜನತೆಯ ಬದುಕಿನ ಹಕ್ಕನ್ನು ಪ್ರಜಾಪ್ರಭುತ್ವವಾದಿ ಜಾಗತಿಕ ಸಂವಿಧಾನಗಳೊಂದಿಗೆ ಅನುಸಂಧಾನಗೊಳಿಸಿದ್ದು ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಹೆಗ್ಗಳಿಕೆ. ಬ್ರಿಟನ್, ಅಮೆರಿಕ, ಫ್ರಾನ್ಸ್, ಐರ್‌ಲ್ಯಾಂಡ್, ಕೆನಡಾ, ಸೋವಿಯತ್ ರಶ್ಯ ಸಂವಿಧಾನಗಳು ಭಾರತದ ಸಂವಿಧಾನದ ಆಶಯಗಳೊಂದಿಗೆ ಬೆರೆತಿರುವುದು ಪ್ರಜಾಪ್ರಭುತ್ವದ ಮತ್ತು ರಾಜಕೀಯ ಚರಿತ್ರೆಯ ಮುಖ್ಯ ಲಕ್ಷಣಗಳಲ್ಲೊಂದು. ಸಾಮಾಜಿಕ ಆರ್ಥಿಕ ಹಕ್ಕುಗಳು ಕುರಿತು ಹೇಳುವಾಗ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಈ ಪರಿಕಲ್ಪನೆಗಳು ಕೂಡ ಒಂದು ದೇಶ ಒಂದು ಸಂವಿಧಾನದಡಿಯಲ್ಲಿ ಮೈದಾಳಿಲ್ಲ, ಅದಕ್ಕೂ ಬಹುತ್ವದ ಜಾಗತಿಕ ಆಯಾಮಗಳಿವೆ. ಇಂತಹ ಅಪಾರ ಓದು, ತಿಳುವಳಿಕೆ ಸಮಷ್ಠಿ ಜ್ಞಾನದ ಜನ ಪರಿಕಲ್ಪನೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಇದ್ದ ಕಾರಣಕ್ಕಾಗಿಯೇ ಭಾರತದಲ್ಲಿ ಉತ್ಕೃಷ್ಟ ಸಂವಿಧಾನವೊಂದು ರೂಪ ಪಡೆಯಿತು. ಅದರೊಂದಿಗೆ ಗಣರಾಜ್ಯ ವ್ಯವಸ್ಥೆಯೂ ರೂಪುಗೊಂಡಿತು.

ಸಂವಿಧಾನದ ಚೌಕಟ್ಟು, ಅದರ ನಡವಳಿಕೆಯ ಮಾದರಿಗಳು ಲಿಖಿತಗೊಂಡು ಅದಕ್ಕೊಂದು ನಿಖರತೆ ಒದಗಿಸಿರುವುದೇನೋ ನಿಜ, ಆದರೆ ಕೆಲವೊಮ್ಮೆ ಸಂವಿಧಾನದಲ್ಲಿರುವ ಮುಖ್ಯಧಾರೆಗಳು ಬದಲಾಗುವ ಸನ್ನಿವೇಶಗಳು ನಡೆದು ರಾಜಕೀಯ ಅಸ್ಥಿರತೆಯೂ ತಲೆದೋರುವುದುಂಟು. ನಾವು ಬಾಳುತ್ತಲೇ ಬಂದಿರುವ ಧರ್ಮನಿರಪೇಕ್ಷತೆ, ಜಾತ್ಯತೀತತೆ ತತ್ವಗಳು ಇಂದು ಏನಾಗಿವೆ? ಧರ್ಮವು ವ್ಯಕ್ತಿಯ ಖಾಸಗಿ ಹಕ್ಕಾಗಿರಬೇಕು. ಧರ್ಮವನ್ನು ರಾಜಕಾರಣದಲ್ಲಿ ಬೆರೆಸಬಾರದೆಂಬುವ ಸಾಮಾನ್ಯ ತಿಳುವಳಿಕೆ ಇಂದು ಹೊರಟು ಹೋದಂತಿದೆ.

ಧರ್ಮ ಮತ್ತು ರಾಜಕಾರಣ ಎರಡೂ ಒಂದಾಗಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುತ್ತಿರುವುದನ್ನು ನೋಡಿದರೆ ಈ ದೇಶದ ಮುಂದಿನ ಭವಿಷ್ಯದ ಬಗೆಗೆ ಚಿಂತೆ ಮೂಡುವುದು ಸಹಜ. ಸಂವಿಧಾನದ ನಿಜವಾದ ಆಶಯವಾದ ಧಾರ್ಮಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯ ಭಿನ್ನ ಎನ್ನುವ ಮನೋಧರ್ಮವನ್ನು ಕಾಪಾಡಿಕೊಳ್ಳಬೇಕಾದುದರ ತುರ್ತೊಂದು ಇಂದು ಅಗತ್ಯವಿದೆ.

ಪ್ರಜಾಪ್ರಭುತ್ವ ರಾಷ್ಟ್ರಗಳು ಅನುಸರಿಸಬೇಕಾದ ಹಲವು ಪ್ರಜಾತಾಂತ್ರಿಕ ಕನಸುಗಳಿಗಾಗಿಯೇ ಡಾ. ಬಿ.ಆರ್. ಅಂಬೇಡ್ಕರ್‌ರವರು ಶ್ರಮಿಸಿದ್ದು. ಈ ಕನಸಿಗಾಗಿಯೇ ‘ವಿ ದಿ ಪೀಪಲ್, ಬೈ ದಿ ಪೀಪಲ್’ ತತ್ವವನ್ನು ಜಗತ್ತಿನ ಪ್ರಜಾ ಪ್ರಭುತ್ವ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ತೆಲುಗಿನ ಮಹಾಕವಿಯೊಬ್ಬರು ಹೇಳಿರುವಂತೆ ‘‘ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು’’. ಭಾರತದ ಸಂವಿಧಾನವನ್ನು ಓದುವಾಗ ದೇಶದ ಭೌಗೋಳಿಕ, ಚಾರಿತ್ರಿಕ ಅಂಶಗಳಷ್ಟೇ ಅಲ್ಲ ದೇಶದ ಸಂಸ್ಕೃತಿ, ಜನರ ಇತಿಹಾಸ, ಆರ್ಥಿಕ, ಸಾಮಾಜಿಕ, ರಾಜಕೀಯ ಸಂಬಂಧದ ವ್ಯವಹಾರಗಳು, ವಿವಿಧ ಧರ್ಮ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಪರಂಪರೆ, ಜನರಾಡುವ ಭಾಷೆ, ಆಹಾರ ಪದ್ಧತಿ, ಕೃಷಿ ಪಶುಸಂಗೋಪನೆ ಇತ್ಯಾದಿ ಮನುಷ್ಯನ ಜೀವನಾವಶ್ಯಕ ಸಂಗತಿಗಳಿರುವುದನ್ನು ಕಾಣಬಹುದು. ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸುವಾಗ ಈ ಎಲ್ಲ ಅಂಶಗಳನ್ನು ಮನಗಂಡೇ ಅವರು ವೈವಿಧ್ಯಮಯ ಬಹುತ್ವದ ಸಂವಿಧಾನವನ್ನು ಈ ದೇಶಕ್ಕೆ ರೂಪಿಸಿಕೊಟ್ಟರು.

ದೇಶವೆಂದರೆ ಕೇವಲ ಮಣ್ಣಲ್ಲ ನಿಜ. ಆದರೆ ಮಣ್ಣನ್ನು ಅಸ್ಪಶ್ಯವೆಂದು, ಮೈಲಿಗೆಯೆಂದು, ತುಂಡು ಭೂಮಿಯೂ ಚೋಮನಂತಹ ಲಕ್ಷ ಲಕ್ಷ ಸಮುದಾಯಗಳಿಗೆ ದಕ್ಕದೇ ಹೋದ ಚಾರಿತ್ರ್ಯಿಕ ವ್ಯಂಗ್ಯಗಳೂ ಈ ಮಣ್ಣಿನಾಳದ ಚರಿತ್ರೆಯಲ್ಲಿವೆ. ಇನ್ನೂ ಮನುಷ್ಯ ಭೇದ ನೀತಿ, ಬಡವ-ಶ್ರೀಮಂತ, ಕಾರ್ಮಿಕ-ಮಾಲಕ, ಗುಲಾಮ-ಬಂಡವಾಳಶಾಹಿ ಹೀಗೆ ಅಸಮಾನ ಅಂತಸ್ತುಗಳ ಭಾರತೀಯ ಸಮಾಜದ ನಿರ್ಮಾಣ ಈ ಮೂಲಭೂತ ಕಟ್ಟಡವನ್ನೇ ಶಿಥಿಲಗೊಳಿಸಿದೆ. ಜಾತೀಯತೆ, ಮತೀಯತೆ, ವರ್ಗತಾರತಮ್ಯ ನೀತಿ ಇವೆಲ್ಲವುಗಳಿಂದ ಮನುಷ್ಯ ಸಮಾಜ ಇನ್ನೂ ಬಿಡುಗಡೆಗೊಂಡಿಲ್ಲ. ಸಂವಿಧಾನದಲ್ಲಿರುವ ಪ್ರತಿಯೊಂದು ಮೂಲಭೂತ ಹಕ್ಕುಗಳೂ ಕೂಡ ಇಂದು ನೈತಿಕವಾಗಿ ಜಾರಿಯಾಗದೆ ಸಾಂಕೇತಿಕವಾಗಿ ಶಿಥಿಲಾವಸ್ಥೆಯಲ್ಲಿರುವುದು ಒಂದು ದುರಂತದ ಸಂಗತಿ.

ಭಾರತದ ಸ್ವಾತಂತ್ರ್ಯ ಸಾಂವಿಧಾನಿಕ ಚರಿತ್ರೆಯಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕೆಲವು ಸಲ ನ್ಯಾಯಾಂಗ ವ್ಯವಸ್ಥೆಯು ಉನ್ನತವಾದ ಆದರ್ಶಗಳನ್ನು ಇಲ್ಲಿ ಜಾರಿಗೆ ತಂದಿದೆ. ಆದರೆ ಇನ್ನೂ ಮನುಷ್ಯನಿಗಿರಬೇಕಾದ, ಅಂಬೇಡ್ಕರ್‌ರವರ ಹಾಗೆ ಮೂಲಭೂತ ಪ್ರಶ್ನೆಗಳನ್ನು ಮರುಶೋಧಿಸಿ ಕೇಳಿಕೊಳ್ಳಬೇಕಾದ ಧ್ವನಿಗೆ ಸ್ವಾತಂತ್ರ್ಯ ಸಿಗದೇ ಇರುವುದು ಈ ದೇಶದ ವ್ಯಂಗ್ಯ.ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರಗಳಿರುವಾಗ ಮನುಷ್ಯ ಹೀಗೆ ಸಂವಿಧಾನದ ಪರವಾಗಿ ನಿಂತು ತನ್ನ ಹಕ್ಕನ್ನು ಕೇಳುವುದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಧ್ಯವಾಗದೇ ಹೋಗುತ್ತಿರುವ ದಿನಮಾನಗಳಲ್ಲಿ ನಾವು ಬದುಕುತ್ತಿದ್ದೇವೆ. ಧರ್ಮ ಮತ್ತು ರಾಜಕಾರಣವನ್ನು ಬೆರೆಸಿ ಎರಡನ್ನೂ ಕಲುಷಿತಗೊಳಿಸಿ ಸಂವಿಧಾನವನ್ನು ದೂಷಿಸುವ ವ್ಯರ್ಥ ಪ್ರಯತ್ನವನ್ನು ನಾವೇ ಮಾಡುತ್ತೇವೆ.

ಚುನಾವಣೆಯ ನೀತಿಸಂಹಿತೆ, ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಜಾತಿ, ಧರ್ಮ, ಬಣ್ಣ, ಲಾಂಛನಗಳ ಆಧಾರದ ಮೇಲೆ ಮತವನ್ನು ಕೇಳುವ ಪರಿಪಾಟಲು ಇಂದು ಶುರುವಾಗಿದೆ. ಪ್ರತೀ ಮತಕ್ಕೂ ದೇವರ ಆಣೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ದೇಶಭಕ್ತಿ, ರಾಷ್ಟ್ರೀಯತೆ ಎಂಬ ಆಂತರಿಕ ಬದುಕಿನ ಸೌಂದರ್ಯದ ಬೆಳಕು ಬೆಂಕಿಯಾಗಿ ನಮ್ಮನ್ನಿಂದು ಸುಡುತ್ತಿದೆ. ‘ನಾನು ಮೊದಲು ಭಾರತೀಯ’ ಎಂದ ಅಂಬೇಡ್ಕರ್ ಅವರನ್ನು ಅನುಮಾನದಿಂದ ನೋಡುವ ವರ್ಗವೂ ಇದೆ. ಜಗತ್ತಿನ ಜ್ಞಾನದ ಯುಗದೊಳಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಬಹುದೊಡ್ಡದು. ಮಹಿಳೆಯ ಕುರಿತಾದ ಅವರ ನಿಲುವುಗಳು ಈಗಲೂ ಐತಿಹಾಸಿಕವೇ. 1914ರ ಜುಲೈ ತಿಂಗಳಿನಲ್ಲಿ ಜರುಗಿದ ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್‌ನಲ್ಲಿ ಸ್ವತಃ ಅಂಬೇಡ್ಕರ್ ಅವರೇ ಮುಖ್ಯವಾಗಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ್ದರು.

ಮಹಿಳೆಯರ ಮುಂಚೂಣಿ ನಾಯಕತ್ವ ಮತ್ತು ಅದರ ಮಹತ್ವದ ಕುರಿತು, ಹುಡುಗ ಹುಡುಗಿಯರ ಮಧ್ಯದ ಸಮಾನತೆಯ ಕುರಿತು, ಸಾಂಪ್ರದಾಯಿಕ ಅರಿವನ್ನು ಮೀರಿ ಶಿಕ್ಷಣದ ಅರಿವನ್ನು ಅವರು ಪಡೆಯುವುದರ ಕುರಿತು ತುಂಬಾ ಜವಾಬ್ದಾರಿಯ ಮಾತುಗಳನ್ನು ಅವರಂದು ಆಡಿದ್ದರು. ಕುಟುಂಬವೆಂದರೆ ಸಮುದಾಯದ ಕಣ್ಣೆಂದು ಪ್ರತಿಪಾದಿಸುತ್ತಲೇ, ಗಂಡು-ಹೆಣ್ಣು ಕೂಡಿ ಸಾಗಬೇಕಾದ ಭಾರತೀಯ ಲಿಂಗ ಸಮಾನತೆಯ ಸಾಮಾಜಿಕ ಪರಿಕಲ್ಪನೆಯನ್ನು ನಮ್ಮ ಮುಂದೆ ಅಂಬೇಡ್ಕರ್‌ರವರು ಯಾವತ್ತೂ ಇರಿಸಿರುವರು. ಇದನ್ನು ಅನುಸರಿಸಿ ಸಾಂವಿಧಾನಿಕ ಗೌರವವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವ ಮೂಲಕ ಅವರ ಸಾಂವಿಧಾನಿಕ ವ್ಯಕ್ತಿತ್ವದ ಕನಸುಗಳನ್ನು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಇಂಬಾಗಬೇಕಿದೆ. ಮಹಿಳೆಯರ ಮುಂಚೂಣಿ ನಾಯಕತ್ವ ಮತ್ತು ಅದರ ಮಹತ್ವದ ಕುರಿತು, ಹುಡುಗ ಹುಡುಗಿಯರ ಮಧ್ಯದ ಸಮಾನತೆಯ ಕುರಿತು, ಸಾಂಪ್ರದಾಯಿಕ ಅರಿವನ್ನು ಮೀರಿ ಶಿಕ್ಷಣದ ಅರಿವನ್ನು ಅವರು ಪಡೆಯುವುದರ ಕುರಿತು ತುಂಬಾ ಜವಾಬ್ದಾರಿಯ ಮಾತುಗಳನ್ನು ಅವರಂದು ಆಡಿದ್ದರು. ಕುಟುಂಬವೆಂದರೆ ಸಮುದಾಯದ ಕಣ್ಣೆಂದು ಪ್ರತಿಪಾದಿಸುತ್ತಲೇ, ಗಂಡು-ಹೆಣ್ಣು ಕೂಡಿ ಸಾಗಬೇಕಾದ ಭಾರತೀಯ ಲಿಂಗ ಸಮಾನತೆಯ ಸಾಮಾಜಿಕ ಪರಿಕಲ್ಪನೆಯನ್ನು ನಮ್ಮ ಮುಂದೆ ಅಂಬೇಡ್ಕರ್‌ರವರು ಯಾವತ್ತೂ ಇರಿಸಿರುವರು. ಇದನ್ನು ಅನುಸರಿಸಿ ಸಾಂವಿಧಾನಿಕ ಗೌರವವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವ ಮೂಲಕ ಅವರ ಸಾಂವಿಧಾನಿಕ ವ್ಯಕ್ತಿತ್ವದ ಕನಸುಗಳನ್ನು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಇಂಬಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ನಿಂಗಪ್ಪ ಮುದೇನೂರು

contributor

Similar News