ಭಾರತದ ಸಂವಿಧಾನ-75: ಜಾಗೃತಿ ಮತ್ತು ಪ್ರಬುದ್ಧತೆಯ ಅಗತ್ಯ
ಇತ್ತೀಚೆಗಿನ ವರ್ಷಗಳಲ್ಲಿ ದೇಶದ ಸಂಸತ್ತಿನ ಹಕ್ಕುಗಳನ್ನು ಹೊಸಕುವ ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರಮುಖ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಮುಕ್ತ ಚರ್ಚೆಗಳಾಗುವುದೇ ಇಲ್ಲ. ಚರ್ಚೆ ನಡೆಯುವಾಗಲೂ ವಿಷಯವನ್ನು ಬದಿಗೆ ಸರಿಸಿ, ಪರಸ್ಪರ ದೋಷಾರೋಪ ಮಾಡುವುದರಲ್ಲಿ, ಹಿಂದಿನ ಸರಕಾರಗಳು ಏನೂ ಮಾಡಿಲ್ಲ ಎಂದು ಪುನಃ ಪುನಃ ಘೋಷಿಸುವುದರಲ್ಲಿ ಮತ್ತು ವಸ್ತುನಿಷ್ಠವಾಗಿ ಚರ್ಚೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳ ಮೇಲೆ ಅಪ್ರಸ್ತುತವಾದ ಆರೋಪಗಳನ್ನು ಹೊರಿಸಿ ಅವರನ್ನು ಸಂಸತ್ತಿನಿಂದ ಹೊರಹಾಕುವ ಮತ್ತು ಸದಸ್ಯರನ್ನು ಸಾಮೂಹಿಕವಾಗಿ ಅಮಾನತಿನಲ್ಲಿಡುವ ಕ್ರಮಗಳಲ್ಲಿ ಕಾಲಹರಣವಾಗುತ್ತದೆ. ಅಧಿವೇಶನದ ಅವಧಿಯನ್ನೂ ಕಡಿತಗೊಳಿಸುವ ಪ್ರವೃತ್ತಿ ಬೆಳೆದಿದೆ.
ಭಾಗ - 1
ಇಂದಿಗೆ ಭಾರತದ ಸಂವಿಧಾನಕ್ಕೆ 75 ವರ್ಷಗಳಾಗುತ್ತವೆ. ಸುದೀರ್ಘ ಹೋರಾಟದ ಪರಿಣಾಮವಾಗಿ ಎರಡು ವರ್ಷಗಳ ಹಿಂದೆಯಷ್ಟೆ ಸ್ವಾತಂತ್ರ್ಯವನ್ನು ಪಡೆದ ದೇಶದ ಜನತೆಯ ಆಶೋತ್ತರಗಳನ್ನು ಬಿಂಬಿಸುವ ಹೊಸ ಸಂವಿಧಾನವನ್ನು 1949 ನವೆಂಬರ್ 26ರಂದು, ದೇಶದ ಸಂವಿಧಾನ ರಚನಾ ಸಭೆಯು ಅಂಗೀಕರಿಸಿತ್ತು; ಅದರಂತೆ 1950, ಜನವರಿ 26ರಂದು ಭಾರತವು ಒಂದು ಸಾರ್ವಭೌಮ ಗಣತಂತ್ರವಾಗಿ ಹೊರಹೊಮ್ಮಿತು. ಈ ಸಂವಿಧಾನದ ಚೌಕಟ್ಟಿನಲ್ಲಿ ಮುಂದಿನ ಸುಮಾರು 65 ವರ್ಷಗಳಲ್ಲಿ ದೇಶವು ಅಭೂತಪೂರ್ವವಾದ ಸಾಧನೆಯನ್ನು ಮಾಡಿತು. ಭಾರತದಂತೆ 20ನೇ ಶತಮಾನದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಪ್ರಜಾತಂತ್ರದಿಂದ ವಿಮುಖವಾಗಿ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗೆ ಬಲಿಯಾದುದನ್ನು ಗಮನಿಸಿದರೆ ಭಾರತದ ಸಾಧನೆ ಅನನ್ಯವಾದುದು. ಇದರ ಶ್ರೇಯಸ್ಸು ಸಂವಿಧಾನವನ್ನು ರಚಿಸಿದ ಶಿಲ್ಪಿಗಳಿಗೆ ಮತ್ತು ಅವರ ಜೊತೆಗೆ ಸ್ವಾತಂತ್ರ್ಯ ಚಳವಳಿಯ ವಾತಾವರಣದಲ್ಲಿ ಬೆಳೆದು ಬಂದ ಅಂದಿನ ದೂರದೃಷ್ಟಿಯ ಮುತ್ಸದ್ದಿಗಳಿಗೆ ಸಲ್ಲಬೇಕು.
ಸಂವಿಧಾನಕ್ಕೆ 75 ವರ್ಷಗಳಾಗುವ ಸಂದರ್ಭ ದಲ್ಲಿ ಅದರ ಶಿಲ್ಪಿ ಬಿ.ಆರ್. ಅಂಬೇಡ್ಕರ್‌ರ ‘‘ಸಂವಿಧಾನವು ಎಷ್ಟೇ ಒಳ್ಳೆಯದಾಗಿರಲಿ, ಅದನ್ನು ಅನುಷ್ಠಾನಗೊಳಿಸು ವವರು ಒಳ್ಳೆಯವರಾಗಿಲ್ಲದಿದ್ದರೆ, ಅದು ಕೆಟ್ಟದಾಗುತ್ತದೆ.. ಸಂವಿಧಾನವು ಎಷ್ಟೇ ಕೆಟ್ಟದಾಗಿರಲಿ, ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ, ಅದೂ ಒಳ್ಳೆಯದಾಗುತ್ತದೆ’’ ಎಂಬ ಮಾತು ಮತ್ತೆ ಪ್ರಸ್ತುತವಾಗುತ್ತದೆ.
ಈ ಹೇಳಿಕೆಯ ತಥ್ಯವನ್ನು ಅರಿತುಕೊಳ್ಳಲು ಆಧುನಿಕ ಭಾರತದ ಎರಡು ಕಾಲಘಟ್ಟಗಳ ಕಡೆಗೆ ದೃಷ್ಟಿ ಹಾಯಿಸ ಬೇಕಾಗುತ್ತದೆ. ಮೊದಲನೆಯದು, 1975, ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ‘ಆಂತರಿಕ ತುರ್ತು ಪರಿಸ್ಥಿತಿ’ಯನ್ನು ಘೋಷಿಸಿ ಮುಂದಿನ 21 ತಿಂಗಳುಗಳಲ್ಲಿ ಸಂವಿಧಾನದಲ್ಲಿ ನೀಡಲಾಗಿದ್ದ ಮೂಲಭೂತ ಹಕ್ಕುಗಳನ್ನು ನೇರವಾಗಿ ಹೊಸಕಲು ಪ್ರಯತ್ನಿಸಿದ ಅವಧಿ. ಎರಡನೆಯ ಕಾಲಘಟ್ಟ 2014ರಿಂದ ಆರಂಭವಾಯಿತು. ಆ ವರ್ಷ ಗದ್ದುಗೆಗೆ ಏರಿದ ನರೇಂದ್ರ ಮೋದಿ ಸರಕಾರವು ಸಂವಿಧಾನದ ಆಶಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯದಲ್ಲಿ ತೊಡಗಿದೆ. ಇದನ್ನು ಮುಚ್ಚಿಹಾಕಲು, ಭೂತಕಾಲವನ್ನು ಆಗಾಗ ನೆನಪಿಸಿ, ಭವಿಷ್ಯದ ಬಗ್ಗೆ ಹೊಸ ಹೊಸ ಕನಸುಗಳನ್ನು ಜನತೆಯ ಮುಂದೆ ಪ್ರಸ್ತುತ ಪಡಿಸುವ ಕೆಲಸವನ್ನು ನಿರಂತರ ಮಾಡುತ್ತಿದೆ.
ಘೋಷಣೆಗಳು ಮತ್ತು ವಾಸ್ತವ:
ಈ ವರ್ಷ ಜುಲೈ ತಿಂಗಳಿನಲ್ಲಿ ಪ್ರತೀ ವರ್ಷದ ಜೂನ್ 25ನೇ ತಾರೀಕನ್ನು ‘ಸಂವಿಧಾನ ಹತ್ಯೆಯ ದಿನ’ ಎಂದು ಆಚರಿಸುವ ನಿರ್ಧಾರವನ್ನು ಮೋದಿಯವರು ಪ್ರಕಟಿಸಿದರು. ಅದರ ಉದ್ದೇಶ ವರ್ತಮಾನದಿಂದ ಜನರ ಗಮನವನ್ನು ದೂರ ಎಳೆಯುವುದಷ್ಟೆ. ಯಾಕೆಂದರೆ, 1975ರ ತುರ್ತು ಪರಿಸ್ಥಿತಿಯಲ್ಲಿ ಸಂಭವಿಸಿದ ಸಂವಿಧಾನ ವಿರೋಧಿ ಕೃತ್ಯಗಳಿಂದ ಬೇಸತ್ತ ಪ್ರಬುದ್ಧ ಮತದಾರರು ಇಂದಿರಾ ಗಾಂಧಿಯವರನ್ನು ಮಾರ್ಚ್ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಸಿದರು. ಮಾತ್ರವಲ್ಲ, ಮುಂದಿನ ದಶಕಗಳಲ್ಲಿ ಕಾಲಕಾಲಕ್ಕೆ ಚುನಾವಣೆಗಳು ನಡೆದು, ವಿಭಿನ್ನ ರಾಜಕೀಯ ಪಕ್ಷಗಳು ಸ್ವಂತಬಲದಿಂದ ಇಲ್ಲವೇ ಸಮ್ಮಿಶ್ರವಾಗಿ ಸರಕಾರವನ್ನು ರಚಿಸಿದವು. 2014ರ ತನಕ ಅಧಿಕಾರದಲ್ಲಿದ್ದ ಯಾವ ಸರಕಾರವೂ ಸಂವಿಧಾನದ ಮೇಲೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ದಾಳಿ ನಡೆಸಲಿಲ್ಲ ಎಂಬುದು ನೆನಪಿನಲ್ಲಿಡಬೇಕಾದ ವಾಸ್ತವ.
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೊದಲ ಬಾರಿ ಸಂಸದ್ಭವನವನ್ನು ಪ್ರವೇಶಿಸುವಾಗ ಅದರ ಮೆಟ್ಟಲುಗಳಿಗೆ ತಲೆಬಾಗಿಸಿ ವಂದಿಸಿದ್ದರು. ಆ ಮೇಲೆ 2015ರಲ್ಲಿ, ನವೆಂಬರ್ 26ರನ್ನು ‘ಸಂವಿಧಾನ ದಿನ’ವೆಂದು ಪ್ರತಿವರ್ಷವೂ ಆಚರಿಸುವುದಾಗಿ ಘೋಷಿಸಿದರು. ಅದೇ ವರ್ಷ ಮತ್ತೊಂದು ಸಂದರ್ಭದಲ್ಲಿ ಪ್ರಧಾನಿಯವರು ‘‘ಚರ್ಚೆಯು ಸಂಸತ್ತಿನ ಆತ್ಮ’’ ಎಂದು ಹೇಳಿದ್ದರು. ತಮ್ಮ ಸರಕಾರಕ್ಕೆ ಭಾರತದ ಸಂವಿಧಾನದ ಮೇಲೆ ಬಹಳ ಗೌರವವಿದೆ ಎಂಬ ಭಾವನೆಯನ್ನುಂಟು ಮಾಡುವುದು ಈ ಎಲ್ಲ ಕ್ರಮಗಳ ಉದ್ದೇಶ.
ಆದರೆ ಪ್ರಧಾನಿ ಹಾಗೂ ಅವರ ಅನುಯಾಯಿಗಳ ವರ್ತನೆ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಸಂವಿಧಾನವೇ ಹುಟ್ಟುಹಾಕಿದ ಚುನಾವಣಾ ಆಯೋಗ-ಇವುಗಳ ಕಾರ್ಯ ವೈಖರಿಯು, ಘೋಷಣೆ ಮತ್ತು ವಾಸ್ತವದ ನಡುವಿನ ವಿಶಾಲವೂ, ಆಳವೂ ಆದ ಕಂದಕವನ್ನು ತೆರೆದಿಡುತ್ತವೆ.
ಜನರ ಧ್ವನಿಯಾಗದ ಸಂಸತ್ತು:
ಭಾರತದ ಸಂಸತ್ತು ಸಂವಿಧಾನದ ವಿಧಿಗಳ ಪ್ರಕಾರ ಹುಟ್ಟಿದ ಪ್ರಮುಖ ಸಂಸ್ಥೆ. ಅದರ ಕೆಳಮನೆಯಾದ ಲೋಕಸಭೆಯು ಜನರಿಂದ ನೇರವಾಗಿ ಚುನಾಯಿತವಾಗುವ ಪ್ರತಿನಿಧಿ ಸಭೆ; ರಾಜ್ಯಸಭೆಯು ರಾಜ್ಯಗಳ ಶಾಸಕರು ಆಯ್ಕೆಮಾಡಿದ ಮೇಲ್ಮನೆ. ಜನಸಾಮಾನ್ಯರ ಜೀವನವನ್ನು ಸುಧಾರಿಸಲು ಅವರಿಗೆ ಅಗತ್ಯವಾದ ವಾತಾವರಣವನ್ನು ಕಲ್ಪಿಸಿಕೊಡುವ ಕಾನೂನುಗಳನ್ನು ಸಂಸತ್ತಿನಲ್ಲಿ ಚರ್ಚಿಸಿ ರೂಪಿಸುವ ಜವಾಬ್ದಾರಿ ಜನರಿಂದ ಆಯ್ದು ಬಂದ ಸಂಸತ್ತಿನದು. ಆ ದೃಷ್ಟಿಯಿಂದ ಸಂಸತ್ತು ಜನರ ಧ್ವನಿಯಾಗಬೇಕು. ಎರಡು ಸದನಗಳ ಅಧ್ಯಕ್ಷರೂ ತಮ್ಮ ಪಕ್ಷದ ಹಿನ್ನೆಲೆಯಿಂದ ಹೊರಬಂದು ಸಂಸತ್ತಿನ ಧ್ವನಿಯನ್ನು ಎತ್ತಿ ಹಿಡಿಯಬೇಕು.
ಶಾಸನಗಳನ್ನು ರೂಪಿಸುವಷ್ಟೇ ಅಗತ್ಯದ ಇನ್ನೊಂದು ಜವಾಬ್ದಾರಿ ಸಂಸತ್ತಿಗೆ ಇದೆ: ಅದು ಕಾಲಕಾಲಕ್ಕೆ ಶಾಸನಗಳ ಅನುಷ್ಠಾನದ ಕುರಿತಂತೆ ಕಾರ್ಯಾಂಗದ ಅಂದರೆ ಸರಕಾರದ ಧೋರಣೆಯನ್ನು ವಿಮರ್ಶಿಸುವುದು. ಇಲ್ಲಿಯೂ ಮುಕ್ತ ಚರ್ಚೆ ಆದರೆ ಮಾತ್ರ ವಾಸ್ತವವು ಬೆಳಕಿಗೆ ಬರುತ್ತದೆ. ಸರಕಾರದ ಉತ್ತರದಾಯಿತ್ವವನ್ನು ಬಲಪಡಿಸಲು ಈ ತರದ ಮುಕ್ತ ವಿಮರ್ಶೆ ಅತೀ ಅಗತ್ಯ.
ಇತ್ತೀಚೆಗಿನ ವರ್ಷಗಳಲ್ಲಿ ದೇಶದ ಸಂಸತ್ತಿನ ಹಕ್ಕುಗಳನ್ನು ಹೊಸಕುವ ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರಮುಖ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಮುಕ್ತ ಚರ್ಚೆಗಳಾಗುವುದೇ ಇಲ್ಲ. ಚರ್ಚೆ ನಡೆಯುವಾಗಲೂ ವಿಷಯವನ್ನು ಬದಿಗೆ ಸರಿಸಿ, ಪರಸ್ಪರ ದೋಷಾರೋಪ ಮಾಡುವುದರಲ್ಲಿ, ಹಿಂದಿನ ಸರಕಾರಗಳು ಏನೂ ಮಾಡಿಲ್ಲ ಎಂದು ಪುನಃ ಪುನಃ ಘೋಷಿಸುವುದರಲ್ಲಿ ಮತ್ತು ವಸ್ತುನಿಷ್ಠವಾಗಿ ಚರ್ಚೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳ ಮೇಲೆ ಅಪ್ರಸ್ತುತವಾದ ಆರೋಪಗಳನ್ನು ಹೊರಿಸಿ ಅವರನ್ನು ಸಂಸತ್ತಿನಿಂದ ಹೊರಹಾಕುವ ಮತ್ತು ಸದಸ್ಯರನ್ನು ಸಾಮೂಹಿಕವಾಗಿ ಅಮಾನತಿನಲ್ಲಿಡುವ ಕ್ರಮಗಳಲ್ಲಿ ಕಾಲಹರಣವಾಗುತ್ತದೆ. ಅಧಿವೇಶನದ ಅವಧಿಯನ್ನೂ ಕಡಿತಗೊಳಿಸುವ ಪ್ರವೃತ್ತಿ ಬೆಳೆದಿದೆ.
ಸಂಸತ್ತು ಒಂದು ಗೌರವಾನ್ವಿತ ಸಂಸ್ಥೆ. ಅದರೊಳಗೆ ಮಾತನಾಡುವ ಪ್ರತಿನಿಧಿಗಳು ಪರಸ್ಪರರಿಗೆ ಗೌರವವನ್ನು ನೀಡಿ ವಿಷಯಗಳನ್ನು ವಸ್ತುನಿಷ್ಠವಾಗಿ ಚರ್ಚಿಸಬೇಕು. ಅಲ್ಲಿ ವೈಯಕ್ತಿಕ ಟೀಕೆಗಳಿಗೆ ಅವಕಾಶವಿಲ್ಲ, ಮಾಧ್ಯಮಗಳಲ್ಲಿ ವರದಿಯಾದಂತೆ ಅನೇಕ ಪ್ರತಿನಿಧಿಗಳು ಅದರಲ್ಲಿಯೂ- ಪ್ರಧಾನ ಮಂತ್ರಿಯೂ ಒಳಗೊಂಡಂತೆ-ಆಳುವ ಭಾರತೀಯ ಜನತಾ ಪಕ್ಷದ ಸದಸ್ಯರು ಬಳಸುವ ಭಾಷೆ ಮತ್ತು ಮಾತನಾಡುವ ಕ್ರಮವು ಆಗಾಗ ಹದಮೀರಿದೆ.
ಸಂಸತ್ತಿನ ಕಾರ್ಯಕಲಾಪವನ್ನು ಅರ್ಥಪೂರ್ಣವಾಗಿಸುವ ಮತ್ತು ಸದನಗಳ ಘನತೆಯನ್ನು ಎತ್ತಿ ಹಿಡಿದು, ಸದಸ್ಯರ ಗೌರವವನ್ನು ರಕ್ಷಿಸುವ ಜವಾಬ್ದಾರಿ ಸಭಾಧ್ಯಕ್ಷರದ್ದು. ಇತ್ತೀಚೆಗಿನ ವರ್ಷಗಳಲ್ಲಿ ಎರಡೂ ಸದನದ ಅಧ್ಯಕ್ಷರು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.ಎಂಬ ಭಾವನೆ ಬೇರೂರುತ್ತಿದೆ. ಹಿಂದಿನ ಎರಡು ಲೋಕಸಭೆಗಳ ಸ್ಪೀಕರುಗಳು (ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ) ಆಳುವ ಪಕ್ಷದ ಕೈಗೊಂಬೆಗಳಂತೆ ವರ್ತಿಸಿದ್ದರು. ಈಗಿನ ಲೋಕಸಭೆಯಲ್ಲಿಯೂ ಇದೇ ಧೋರಣೆಯನ್ನು ಕಾಣಬಹುದು. (2004-2009ರ ಅವಧಿಯಲ್ಲಿ ಲೋಕಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಅವರು ಸರಕಾರದ ಬೆಂಬಲದಿಂದ ಆಯ್ಕೆಯಾಗಿದ್ದರೂ ತಮ್ಮ ಮೂಲ ಪಕ್ಷವಾದ ಸಿಪಿಐಎಂನ ನಿರ್ದೇಶನಗಳನ್ನು ಕಡೆಗಣಿಸುವ ನೈತಿಕತೆಯನ್ನು ತೋರಿಸಿದ್ದರು.)
ದೇಶದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರ ವರ್ತನೆಯೂ ಸಂಸದೀಯ ಶಿಷ್ಟಾಚಾರವನ್ನು ಮೀರಿದೆ. ಅವರು ಸರಕಾರದ ಕೈಗೊಂಬೆಯಂತೆ ವರ್ತಿಸುವುದು ಮಾತ್ರವಲ್ಲ, ಹಿರಿಯ ಸದಸ್ಯರನ್ನು ಆಗಾಗ ಹೀನೈಸಿ ಮಾತನಾಡುತ್ತಾರೆ. ಉದಾಹರಣೆಗಾಗಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಜಯಾ ಬಚ್ಚನ್ ಬಗ್ಗೆ ಸದನದೊಳಗಿನ ಅವರ ಕೆಲವು ಹೇಳಿಕೆಗಳು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ದವು. ಸದನದ ಒಳಗೂ ಸಾರ್ವಜನಿಕವಾಗಿಯೂ ಅವರು ವಿಪಕ್ಷಗಳನ್ನು ತೆಗಳುವ ಮತ್ತು ಪ್ರಧಾನಿಯವರನ್ನು ಓಲೈಸುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ನಮ್ಮ ಸಂವಿಧಾನದ ಪ್ರಕಾರ ಪ್ರತಿಯೊಂದು ಹೊಸ ಕಾನೂನಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಸರಕಾರವು ಮಂಡಿಸಿ ಚರ್ಚೆಗೆ ಮುಕ್ತ ಅವಕಾಶ ನೀಡಬೇಕು. ಮಸೂದೆಯನ್ನು ಉಭಯಸದನಗಳು ಅಂಗೀಕರಿಸಿದ ಬಳಿಕ ಅದು ರಾಷ್ಟ್ರಪತಿಯವರ ಅನುಮೋದನೆ ಪಡೆದು ಕಾನೂನಾಗುತ್ತದೆ. ಇದಕ್ಕೆ ಅಪವಾದವೆಂದರೆ ಹಣಕಾಸಿಗೆ ಸಂಬಂಧಿಸಿದ ಮಸೂದೆ. ಹಣಕಾಸಿನ ಮಸೂದೆಯು ಲೋಕಸಭೆಯ ಒಪ್ಪಿಗೆ ಸಿಕ್ಕ ಮೇಲೆ ರಾಜ್ಯಸಭೆಯು ಒಪ್ಪಲಿ, ತಿರಸ್ಕರಿಸಲಿ ಕಾನೂನಾಗುತ್ತದೆ. ಹಣಕಾಸೇತರ ಮಸೂದೆಗಳು ಎರಡೂ ಸದನಗಳ ಅಂಗೀಕಾರದ ಬಳಿಕವೇ ಕಾನೂನುಗಳಾಗುತ್ತವೆ. ಭಾಜಪ ಸರಕಾರವು ಅನೇಕ ಶಾಸನಗಳನ್ನು ಹಣಕಾಸಿಗೆ ಸಂಬಂಧಿಸಿದ ಕಾನೂನುಗಳೆಂದು ಹೇಳಿ ಲೋಕಸಭೆಯಲ್ಲಿ ಮಾತ್ರ ಚರ್ಚೆಯಾಗಿ ಕಾರ್ಯರೂಪಕ್ಕೆ ತರುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ (ಉದಾ: ಆಧಾರ್ ಕಾರ್ಡಿಗೆ ಸಂಬಂಧಿಸಿದ ಕಾಯ್ದೆ). ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕೆ ಸ್ಪಷ್ಟ ಬಹಮತವಿಲ್ಲದ ಕಾರಣ ಅದರಲ್ಲಿ ಮಸೂದೆ ಬಿದ್ದು ಹೋಗುವ ಭಯದಿಂದ ಮಸೂದೆಯನ್ನು ಹಣಕಾಸಿನ ಮಸೂದೆ ಎಂದು ಹೆಸರಿಸಿ ಸಂಸದೀಯ ಪದ್ಧತಿಗೆ ಅಪಚಾರವನ್ನು ಎಸಗುತ್ತಾ ಇದೆ.
ನಮ್ಮ ಸಂವಿಧಾನದಲ್ಲಿ ಲೋಕಸಭೆಗೆ ಒಬ್ಬ ಅಧ್ಯಕ್ಷ ಮತ್ತು ಇನ್ನೊಬ್ಬ ಉಪಾಧ್ಯಕ್ಷರನ್ನು ಚುನಾಯಿತ ಪ್ರತಿನಿಧಿಗಳು ನೇಮಿಸುವ ನಿಯಮವಿದೆ. ಅಧ್ಯಕ್ಷ ಸ್ಥಾನಕ್ಕೆ ಆಳುವ ಪಕ್ಷದ ಸದಸ್ಯರನ್ನು ಮತ್ತು ಉಪಸಭಾಧ್ಯಕ್ಷ ಸ್ಥಾನಕ್ಕೆ ವಿರೋಧ ಪಕ್ಷದ ಒಬ್ಬ ಪ್ರತಿನಿಧಿಯನ್ನು ಚುನಾಯಿಸುವುದು 2014ರ ತನಕ ಸಾಮಾನ್ಯವಾಗಿ ಪಾಲಿಸಿಕೊಂಡು ಬರುತ್ತಿದ್ದ ಒಂದು ಸಂಪ್ರದಾಯ. ಪಕ್ಷಗಳು ಬೇರೆಯಾದರೂ ಅವರೆಲ್ಲರೂ ಜನರಿಂದ ಆರಿಸಿ ಬಂದ ಪ್ರತಿನಿಧಿಗಳಾಗಿರುವುದರಿಂದ ಜನಹಿತಕ್ಕೋಸ್ಕರ ಪರಸ್ಪರ ಸಹಕಾರ ಮತ್ತು ಗೌರವವನ್ನು ಭದ್ರಗೊಳಿಸುವ ಉದ್ದೇಶಕ್ಕೋಸ್ಕರ ಈ ಸಂಪ್ರದಾಯವು ಬೆಳೆದು ಬಂತು. ಆದರೆ 2019-24ರ ಅವಧಿಯಲ್ಲಿ ಉಪಾಧ್ಯಕ್ಷರನ್ನು ಚುನಾಯಿಸಲು ಸರಕಾರವು ಅವಕಾಶವನ್ನು ಮಾಡಿಕೊಡಲೇ ಇಲ್ಲ. ಪ್ರಸಕ್ತ ಲೋಕಸಭೆಯ ಉಪಾಧ್ಯಕ್ಷರ ಆಯ್ಕೆಯು ಇನ್ನೂ ನಡೆದಿಲ್ಲ.
ಸಂಸದೀಯ ವ್ಯವಸ್ಥೆಯ ಒಂದು ಪ್ರಮುಖ ಪ್ರಕ್ರಿಯೆಯಾಗಿ ಸಂಸತ್ತಿನಲ್ಲಿ ಮಂಡನೆಯಾದ ವಿಶೇಷ ಮಸೂದೆಗಳನ್ನು, ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಂಸದೀಯ ಉಪಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಗುತ್ತದೆ. ಉಪಸಮಿತಿಗಳು ತಮ್ಮ ಸಭೆಯಲ್ಲಿ ಮಸೂದೆಯನ್ನು ಚರ್ಚಿಸಿ, ಅಗತ್ಯವಿದ್ದರೆ ವಿಷಯತಜ್ಞರನ್ನು ಸಭೆಗೆ ಆಹ್ವಾನಿಸಿ, ಬೇಕೆಂದಾದರೆ ಸೂಕ್ತವಾದ ತಿದ್ದುಪಡಿ ಮಾಡಿ ಮಸೂದೆಯ ಕರಡನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ರವಾನಿಸುತ್ತವೆ. ಆ ರೀತಿಯ ಪರಿಶೀಲನೆಯು ವಿಭಿನ್ನ ಅಭಿಪ್ರಾಯಗಳಿಗೆ ಅವಕಾಶ ನೀಡಿ ಹೊಸ ಕಾನೂನಿನಲ್ಲಿ ಬರಬಹುದಾದ ತೊಡಕುಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ, ಮಸೂದೆಯು ಆ ಬಳಿಕ ಸಂಸತ್ತಿನಲ್ಲಿ ಸುಗಮವಾಗಿ ಅಂಗೀಕಾರವಾಗುತ್ತದೆ.
ಸಂಸತ್ತಿನ ಸದಸ್ಯರ ವರ್ತನೆಯ ಕುರಿತಂತೆಯೂ ಸಮಿತಿಗಳು ಕಾರ್ಯವೆಸಗುತ್ತವೆ. ಈ ತರದ ಚರ್ಚೆಗಳು ಪರಸ್ಪರ ವಿಶ್ವಾಸ ಮತ್ತು ಗೌರವದಿಂದ ನಡೆದಾಗ ನಿರ್ಧಾರಗಳು ಸರ್ವಸಮ್ಮತವಾಗಿ ಹೊರಹೊಮ್ಮುತ್ತವೆ.
ಈ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಭಾಜಪ ಸರಕಾರವು ಹತ್ತು ವರ್ಷಗಳಲ್ಲಿ ಅನೇಕ ಮಸೂದೆಗಳನ್ನು ನೇರವಾಗಿ ಲೋಕಸಭೆಯಲ್ಲಿ ಮಂಡಿಸಿ ವಿಸ್ತೃತ ಚರ್ಚೆ ಇಲ್ಲದೆ ಬಹುಮತದ ಆಧಾರದಲ್ಲಿ ಮಂಜೂರು ಮಾಡಿಸಿಕೊಂಡಿದೆ. ಉಪಸಮಿತಿಗಳ ಭೂಮಿಕೆ ಬಹಳಷ್ಟು ಕುಗ್ಗಿದೆ. ಸಮಿತಿಯಲ್ಲಿರುವ ಬಹುಮತದ ಬಲವನ್ನು ಉಪಯೋಗಿಸಿ ಚರ್ಚೆಗಳನ್ನು ಹತ್ತಿಕ್ಕಿದೆ. ಬಂಗಾಳದ ಸಂಸದೆ ಮಹುವಾ ಮೊಯಿತ್ರಾರ ಮೇಲೆ ಮಾಡಲಾದ ಅಪವಾದಗಳ ಕುರಿತು ಹಿಂದಿನ ಅವಧಿಯ ಸಂಸದೀಯ ಸಮಿತಿಯು ನಡೆಸಿದ ವಿಚಾರಣೆಯೂ ಇದೇ ದಾರಿಯನ್ನು ಹಿಡಿದಿತ್ತು.
ಒಟ್ಟಿನಲ್ಲಿ ಹೋದ ದಶಕದ ಅವಧಿಯಲ್ಲಿ ಜನರ ಧ್ವನಿಯಾಗಬೇಕಾದ ಸಂಸತ್ತು ಸರಕಾರದ ಅಂಗಸಂಸ್ಥೆಯಾದಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಹೋದ ದಶಕದ ಅವಧಿಯಲ್ಲಿ ಜನರ ಧ್ವನಿಯಾಗಬೇಕಾದ ಸಂಸತ್ತು ಸರಕಾರದ ಅಂಗಸಂಸ್ಥೆಯಾದಂತೆ ಭಾಸವಾಗುತ್ತದೆ.