ಬಿಪಿಎಲ್ ಕಾರ್ಡ್ ಅರ್ಹರಿಗೆ ಸಿಗಲಿ, ಅನರ್ಹರಿಗೆ ರದ್ದಾಗಲಿ

Update: 2024-11-25 04:49 GMT

ರಾಜ್ಯ ಸರಕಾರವು ಬಡವರಿಗಾಗಿಯೇ ರೂಪಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವು ಜಾರಿಯಾದ ದಿನದಿಂದಲೂ ಗೇಲಿ ಮಾಡುತ್ತಲೇ ಬಂದಿವೆ. ಈಗಲೂ ಇದು ನಿಂತಿಲ್ಲ. ಇದರ ಜೊತೆಗೆ ವಕ್ಫ್‌ಬೋರ್ಡ್ ಆಸ್ತಿ ವಿಚಾರವಾಗಿ ‘ರೈತರ ಭೂಮಿ ಜಿಹಾದ್’ ಎಂದು ಗುಲ್ಲೆಬ್ಬಿಸಿ ಇಡೀ ರೈತ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತಿವೆ. ಮತ್ತೊಂದೆಡೆ ರಾಜ್ಯ ಸರಕಾರವು ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಪಡಿಸಲು ಕಠಿಣ ಕ್ರಮ ಕೈಗೊಳ್ಳಲು ಮುಂದಾದಾಗ ಅದನ್ನೂ ಸಹ ತಮ್ಮ ರಾಜಕಾರಣಕ್ಕೆ ದಾಳವಾಗಿ ಬಳಸಿಕೊಂಡು ‘ಕಾಂಗ್ರೆಸ್ ಸರಕಾರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಉಚಿತ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಬಿಪಿಎಲ್ ಕಾರ್ಡ್‌ಗಳನ್ನೇ ರದ್ದುಗೊಳಿಸುತ್ತಿದೆ’ ಎಂದು ಬೊಬ್ಬೆ ಹಾಕತೊಡಗಿದರು. ಈಗಲೂ ಇದು ನಿರಂತರವಾಗಿ ಚರ್ಚೆಯಾಗುತ್ತಲೇ ಇದೆ. ಈ ನಡುವೆ ಬಿಜೆಪಿ ಮುಖಂಡ ಸಿ.ಟಿ. ರವಿಯವರು ‘ಕಾಂಗ್ರೆಸ್ ಈ ವರೆಗೆ 11 ಲಕ್ಷ ಬಿಪಿಎಲ್ ಕಾರ್ಡ್

ಗಳನ್ನು ರದ್ದು ಮಾಡಿದೆ’ ಎಂದೂ, ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರವರು ‘12 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ, ಗುಡಿಸಲಿನಲ್ಲಿ ವಾಸಿಸುವ ಬಡವರ ಪಡಿತರ ಚೀಟಿಯನ್ನು ಕೂಡ ರದ್ದು ಮಾಡಿದ್ದಾರೆ’ ಎಂದೂ ಆರೋಪಿಸಿದ್ದಾರೆ.

ಈ ಚರ್ಚೆ ತಾರಕಕ್ಕೇರಿದಾಗ ಆಹಾರ ಸಚಿವ ಕೆ.ಎಚ್. ಮುನಿಯಪ್ಪನವರು ಸ್ಪಷ್ಟನೆ ನೀಡಿ ‘ಕೇಂದ್ರ ಸರಕಾರದ ನಿಯಮದ ಪ್ರಕಾರ ಪಡಿತರ ಚೀಟಿಗಳನ್ನು ಪರಿಷ್ಕರಿಸಲಾಗುತ್ತಿದೆ. ಸರಕಾರದ ನಿಯಮಗಳನ್ನು ಮೀರಿರುವವರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಅಂಥವರನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ. ಒಂದು ವೇಳೆ ಬಿಪಿಎಲ್‌ಗೆ ಅರ್ಹರಿದ್ದೂ

ಎಪಿಎಲ್‌ಗೆ ಬದಲಾವಣೆ ಆಗಿದ್ದರೆ ಅಂಥವರನ್ನು ಮತ್ತೆ ಬಿಪಿಎಲ್‌ಗೆ ಮರುನೋಂದಾವಣೆ ಮಾಡಿಕೊಂಡು ಒಂದು ವಾರದ ಒಳಗೆ ಬಿಪಿಎಲ್ ಕಾರ್ಡ್

ಗಳನ್ನು ಮರುಹಂಚಿಕೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯವಾಗುವುದಿಲ್ಲ’ ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಇಂತಹ ಆರೋಪಗಳಿಂದ ರಾಜ್ಯದ ನೆಮ್ಮದಿಯನ್ನು ಹಾಳುಗೆಡವಲು ಯಾಕಿಷ್ಟು ಯತ್ನಿಸುತ್ತಿದ್ದಾರೆ. ಈ ಕೋಮುವಾದಿಗಳಿಗೆ ಬಡವರು ನೆಮ್ಮದಿಯಿಂದ ಬದುಕುವುದು ಬೇಕಾಗಿಲ್ಲ. ಆದುದ್ದರಿಂದಲೇ ‘ಎಲ್ಲ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ನಿಲ್ಲಿಸುತ್ತದೆ, ಖಜಾನೆ ಖಾಲಿಯಾಗಿದೆ, ರೈತರ ಭೂಮಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ. ಈಗ 11 ಲಕ್ಷ, 12 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ’ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಅಂದರೆ ಬಡವರು, ರೈತರನ್ನು ಸದಾ ಆತಂಕದಲ್ಲಿಡುವುದು ಅವರಿಗೆ ಸಂತೋಷ. ಯಾವುದೇ ನಿಖರ ಅಂಕಿ ಅಂಶಗಳಿಲ್ಲದೆ ಯಾಕೆ ಹೀಗೆ ಆರೋಪಿಸುತ್ತಾರೆ? ‘ಈವರೆಗೆ ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳು 1,02,509 ಮಾತ್ರ. ಇವುಗಳೆಲ್ಲವೂ ಸರಕಾರಿ ನೌಕರರು ಮತ್ತು ಸರಕಾರಕ್ಕೆ ತೆರಿಗೆ ಪಾವತಿಸುವವರವು’ ಎಂದು ಆಹಾರ ಸಚಿವರಾದ ಕೆ.ಎಚ್. ಮುನಿಯಪ್ಪನವರು ಸ್ಪಷ್ಟನೆ ನೀಡಿದ್ದಾರೆ. ಸರಕಾರಿ ನೌಕರರು ಮತ್ತು ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವುದು ಸರಿಯಲ್ಲವೇ?

24.8.2012 ರಲ್ಲಿ ಬಿಜೆಪಿ ಸರಕಾರವು ಬಿಪಿಎಲ್ ಕಾರ್ಡಿಗೆ ಯಾರು ಅನರ್ಹರು ಎಂದು ಪಟ್ಟಿ ಬಿಡುಗಡೆ ಮಾಡಿದೆ. ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು, ಸರಕಾರಿ ಸ್ವಾಮ್ಯದ ಉದ್ಯಮ, ಮಂಡಲಿ, ನಿಗಮಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿ ನೌಕರರು, ಸಹಕಾರ ಸಂಘಗಳ ಖಾಯಂ ಸಿಬ್ಬಂದಿ, ವೈದ್ಯರು, ವಕೀಲರು, ಲೆಕ್ಕ ಪರಿಶೋಧಕರು, ಮೂರು ಹೇಕ್ಟರ್(7.5 ಎಕರೆ) ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು, ಒಂದು ಆಟೋರಿಕ್ಷಾವನ್ನು ಹೊಂದಿ ಸ್ವಂತ ಓಡಿಸುತ್ತಿದ್ದು ಬೇರೆ ಆದಾಯದ ಮೂಲವಿಲ್ಲದವರನ್ನು ಹೊರತುಪಡಿಸಿ ಮಿಕ್ಕವರು, 100 ಸಿಸಿಗೆ ಮೇಲಿನ ಇಂಧನ ಚಾಲಿತ ವಾಹನಗಳನ್ನು ಹೊಂದಿರುವ ಸದಸ್ಯರನ್ನು ಒಳಗೊಂಡಿರುವ ಕುಟುಂಬ, ಅನುದಾನಿತ ಸಂಸ್ಥೆ ನೌಕರರು, ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್‌, ಬೀಜ ಗೊಬ್ಬರ ಡೀಲರ್ಸ್‌, ಮನೆ, ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುತ್ತಿರುವವರು, ಪ್ರತೀ ತಿಂಗಳಿಗೆ ಸರಾಸರಿ 450 ರೂ.ಗಳಿಗಿಂತ ಮೇಲ್ಪಟ್ಟು ವಿದ್ಯುತ್ ಬಿಲ್ ಪಾವತಿಸುವ ಕುಟುಂಬಗಳು, ಬಹುರಾಷ್ಟ್ರೀಯ ಕಂಪೆನಿ, ಕೈಗಾರಿಕೆಗಳ ನೌಕರರು ಬಿಪಿಎಲ್ ಕಾರ್ಡ್‌ಗೆ ಅನರ್ಹರು ಎಂದು ಸ್ಪಷ್ಟವಾಗಿ ಅಂದಿನ ಬಿಜೆಪಿ ಸರಕಾರ ನಿಯಮಗಳನ್ನು ರೂಪಿಸಿದೆ.

ಆದರೆ ಈ ಪಟ್ಟಿಯಲ್ಲಿ ಗಮನಿಸುವ ಅಂಶವೆಂದರೆ 100 ಸಿಸಿಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬದವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುತ್ತದೆ. ಈ ಹೊತ್ತು ಒಂದು ಕುಟುಂಬ, ಒಂದು ಬೈಕ್ ಹೊಂದಿರುವುದು ಸಾಮಾನ್ಯ ಸಂಗತಿಯಾಗಿದೆ. ಇದು ಇಂದಿನ ದಿನಮಾನಗಳಲ್ಲಿ ಅಗತ್ಯವೂ ಆಗಿದೆ. ಚಾಕು ಸಾಣೆ ಹಿಡಿಯುವವರು, ಹಳೆ ಇಲೆಕ್ಟ್ರಿಕ್ ಸಾಮಾನು ರಿಪೇರಿ ಮಾಡುವವರು, ಬಲೂನ್ ಮಾರುವವರು, ಸಣ್ಣಪುಟ್ಟ ಪಾತ್ರೆ ಸಾಮಾನು ಮಾರುವವರು, ಪ್ಲಾಸ್ಟಿಕ್ ಸಾಮಾನು ಮಾರುವವರು, ಬಟ್ಟೆ ಮಾರುವವರು ಇವರೆಲ್ಲರೂ ಸಾಮಾನ್ಯವಾಗಿ ದ್ವಿಚಕ್ರವಾಹನವನ್ನು ಅವಲಂಬಿಸಿಯೇ ತಮ್ಮ ಬದುಕಿನ ಬಂಡಿ ನೂಕುತ್ತಿದ್ದಾರೆ. ವಾಸ್ತವವಾಗಿ ಇವರೆಲ್ಲರೂ ಹೊತ್ತಿನ ಊಟಕ್ಕೂ ಪರದಾಡುವವರಾಗಿದ್ದಾರೆ. ಜೊತೆಗೆ ಅಲೆಮಾರಿ, ಬುಡಕಟ್ಟು ಹಾಗೂ ಸಮಾಜದ ಅಂಚಿನ ಸಮುದಾಯಗಳಿಗೆ ಸೇರಿದವರಾಗಿರುತ್ತಾರೆ. ಹಳ್ಳಿಗಳಲ್ಲಿ ಕೂಲಿನಾಲಿ ಮಾಡುವವರು ಕೂಡ ಒಂದು ಬೈಕ್ ಇಟ್ಟುಕೊಂಡಿರುತ್ತಾರೆ. ಇವರೆಲ್ಲರೂ ಬಿಜೆಪಿ ಸರಕಾರ ರೂಪಿಸಿರುವ ನಿಯಮದ ಪ್ರಕಾರ ಎಪಿಎಲ್ ಗೆ ಬರುತ್ತಾರೆ.

ಇದರ ಜೊತೆಗೆ ಪ್ರತೀ ತಿಂಗಳು 450 ರೂ.ಗಳಿಗಿಂತ ಮೇಲ್ಪಟ್ಟು ವಿದ್ಯುತ್ ಬಿಲ್ ಪಾವತಿಸುವವರು ಬಿಪಿಎಲ್ ಕಾರ್ಡ್‌ಗೆ ಅನರ್ಹರು ಎನ್ನುತ್ತದೆ. ಸಾಮಾನ್ಯವಾಗಿ ಇಂದಿನ ವಿದ್ಯುತ್ ದರದಲ್ಲಿ ಎಂತಹ ಬಡವರು ಕೂಡ 500 ರೂ.ಗಳಿಗಿಂತ ಜಾಸ್ತಿ ವಿದ್ಯುತ್ ಬಿಲ್ ಪಾವತಿ ಮಾಡುವವರಿದ್ದಾರೆ. ಇದೂ ಕೂಡ ಅತ್ಯಂತ ಅವೈಜ್ಞಾನಿಕ ಹಾಗೂ ಬಡವರ ವಿರೋಧಿಯಾದ ನಿಯಮ.

ಆದರೆ ಈಗಿನ ಕಾಂಗ್ರೆಸ್ ಸರಕಾರವು ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಈ ಹಿಂದೆ ಬಿಜೆಪಿ ಸರಕಾರ 100 ಸಿಸಿ ಗಿಂತ ಮೇಲ್ಪಟ್ಟ ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನಗಳನ್ನು ಹೊಂದಿರುವವರು ಬಿಪಿಎಲ್ ಪಡಿತರ ಚೀಟಿ ಪಡೆಯುವಂತಿಲ್ಲ ಎಂದು ನಿಯಮ ರೂಪಿಸಿತ್ತು. ಈಗ ಕಾಂಗ್ರೆಸ್ ಸರಕಾರ ಅದನ್ನು ಮಾರ್ಪಡಿಸಿ ಸ್ಕೂಟರ್, ಬೈಕ್, ಆಟೊ, ಕಾರು, ಒಂದು ಮ್ಯಾಕ್ಸಿ ಕ್ಯಾಬ್, ಬಾಡಿಗೆ ಓಡಿಸುವ ಟ್ರಾಕ್ಟರ್ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಬಹುದೆಂದು ಬದಲಾವಣೆ ಮಾಡಿದೆ. ಹಾಗೂ 450 ರೂ.ಗಳಿಗಿಂತ ಮೇಲ್ಪಟ್ಟು ವಿದ್ಯುತ್ ಬಿಲ್ ಪಾವತಿ ಮಾಡುವವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಎಂದು ಬಿಜೆಪಿ ಸರಕಾರ ಮಾಡಿದ್ದ ನಿಯಮವನ್ನು ಬದಲಾಯಿಸಿ ಕಾಂಗ್ರೆಸ್ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಭಾಗವಾಗಿ 200 ಯುನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಉಪಯೋಗಿಸುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರೆಂದು ಮಾರ್ಪಾಡು ಮಾಡಿದೆ. ಈಗ ನಾವು ಯೋಚಿಸಬೇಕಾಗಿರುವುದು, ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿ ಜನಪರವಾಗಿತ್ತೋ, ಕಾಂಗ್ರೆಸ್ ಜನಪರವಾಗಿದೆಯೋ ಎನ್ನುವುದನ್ನು. ಯಾವುದೇ ಪಕ್ಷದವರೂ ಒಳಿತು ಮಾಡಿದರೆ ಅದನ್ನು ಒಳಿತೆಂದು, ಜನ ವಿರೋಧಿ ಕೆಲಸ ಮಾಡಿದರೆ ಅದನ್ನು ಜನ ವಿರೋಧಿ ಕೆಲಸವೆಂದು ಹೇಳುವ ಕನಿಷ್ಠ ಪ್ರಾಮಾಣಿಕತೆಯನ್ನು ಇಂದಿನ ಮಾಧ್ಯಮಗಳು, ಅಧಿಕಾರಿ ವರ್ಗದವರು, ಚಿಂತಕರು ಹಾಗೂ ಜನಸಾಮಾನ್ಯರು ರೂಢಿಸಿಕೊಳ್ಳಬೇಕಲ್ಲವೇ?

ಇನ್ನು ಈ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಗಮನಿಸಿದರೆ ಈ ಅನ್ಯಾಯದಲ್ಲಿ ನಿಜವಾದ ಫಲಾನುಭವಿಗಳು ವಂಚಿತರಾಗುತ್ತಿದ್ದು, ಅನರ್ಹರು ಇದರ ಫಲಾನುಭವಿಗಳಾಗುತ್ತಿರುವುದು ನಿಜಕ್ಕೂ ದುರಂತ. 2021ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ರಾಜ್ಯದ ಜಿಲ್ಲಾವಾರು ಬಡತನದ ಅಂಕಿಅಂಶಗಳನ್ನು ಗಮನಿಸಿದರೆ ಅತೀ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆ ರಾಮನಗರವಾಗಿದೆ. ಅಂದರೆ ರಾಮನಗರದಲ್ಲಿ ಬಡವರ ಸಂಖ್ಯೆ ಶೇ. 0.88 ಮಾತ್ರ. ಅಂದರೆ ಶೇ. 1 ಕೂಡ ಬಡವರಿಲ್ಲ. ಹಾಗಾದರೆ ಬಿಪಿಎಲ್ ಕಾರ್ಡುಗಳ ಸಂಖ್ಯೆ ಕೂಡ ಅಷ್ಟೇ ಇರಬೇಕಲ್ಲವೇ? ಆದರೆ ಶೇ. 1 ರಷ್ಟೂ ಬಡವರನ್ನು ಹೊಂದಿಲ್ಲದ ರಾಮನಗರ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡುಗಳ ಸಂಖ್ಯೆ ಶೇ. 88.6 ರಷ್ಟಿದೆ. ಇದು ನ್ಯಾಯ ಸಮ್ಮತವೇ? ಹಾಗಾದರೆ ಅರ್ಹರಲ್ಲದ ಈ ಶೇ. 89 ರಷ್ಟು ಜನರು ಯಾರು? ಬೆಂಗಳೂರು ರೂರಲ್ ಜಿಲ್ಲೆಯಲ್ಲಿ ಕೂಡ ಬಡವರ ಸಂಖ್ಯೆ ಶೇ. 0.99 ಇದೆ. ಇಲ್ಲೂ ಕೂಡ ಶೇ. 1 ಪರ್ಸೆಂಟ್ ಬಡವರಿಲ್ಲ. ಆದರೆ ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 70.9 ರಷ್ಟಿದೆ. ಮಂಡ್ಯದಲ್ಲಿ ಬಡವರ ಪ್ರಮಾಣ ಶೇ. 2.47 ರಷ್ಟಿದೆ. ಆದರೆ ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 90.5 ರಷ್ಟಿದೆ. ಹಾಸನದಲ್ಲಿ ಬಡವರ ಪ್ರಮಾಣ ಶೇ. 2.43 ರಷ್ಟಿದೆ. ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 86.9 ರಷ್ಟಿದೆ. ಮೈಸೂರಿನಲ್ಲಿ ಬಡವರ ಪ್ರಮಾಣ ಶೇ. 2.30 ರಷ್ಟಿದೆ. ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 69.5 ರಷ್ಟಿದೆ. ಚಿಕ್ಕಮಗಳೂರಿನಲ್ಲಿ ಬಡವರ ಪ್ರಮಾಣ ಶೇ. 3.74 ರಷ್ಟಿದೆ. ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 86.7 ರಷ್ಟಿದೆ. ತುಮಕೂರಿನಲ್ಲಿ ಬಡವರ ಪ್ರಮಾಣ ಶೇ. 4.69 ರಷ್ಟಿದೆ. ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 85.5ರಷ್ಟಿದೆ. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಶೇ. 25.3 ರಷ್ಟು ಅತೀ ಹೆಚ್ಚು ಬಡತನವನ್ನು ಹೊಂದಿರುವ ಯಾದಗಿರಿಯಲ್ಲಿ ಬಿಪಿಎಲ್ ಕಾರ್ಡುಗಳ ಸಂಖ್ಯೆ 72.2ರಷ್ಟಿದೆ. ಶೇ. 20.19 ರಷ್ಟು ಬಡವರನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ. 73.2 ರಷ್ಟಿದೆ.

ಈ ಅಂಕಿಅಂಶಗಳನ್ನು ಗಮನಿಸಿದರೆ ಮೇಲ್‌ನೋಟಕ್ಕೆ ಅನ್ನಿಸುವುದೇನೆಂದರೆ ಪ್ರತೀ ಜಿಲ್ಲೆಯಲ್ಲಿರುವ ಬಡವರ ಸಂಖ್ಯೆಗೂ, ಬಿಪಿಎಲ್ ಕಾರ್ಡುಗಳ ಪ್ರಮಾಣಕ್ಕೂ ಅಜಗಜಾಂತರವಿದೆ. ಹಾಗೆ ನೋಡಿದರೆ ಬಡತನ ಜಾಸ್ತಿ ಇರುವ ಯಾದಗಿರಿ, ರಾಯಚೂರು, ಗುಲ್ಬರ್ಗ, ಕೊಪ್ಪಳ, ಗದಗ, ಬಿಜಾಪುರ ಜಿಲ್ಲೆಗಳಲ್ಲಿ ಜಾಸ್ತಿ ಬಿಪಿಎಲ್ ಕಾರ್ಡುಗಳಿರಬೇಕಿತ್ತು. ಆದರೆ ಅತೀ ಕಡಿಮೆ ಬಡವರನ್ನು ಹೊಂದಿರುವ ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಹಾಸನ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡುಗಳ ಪ್ರಮಾಣ ಗಣನೀಯವಾಗಿ ಜಾಸ್ತಿಯಾಗಿದೆ. ಹಾಗಾದರೆ ಈ ಅಸಮಾನತೆಯನ್ನು ಸರಿದೂಗಿಸುವುದಾದರೂ ಹೇಗೇ? ಹಾಗೆ ಮಾಡುವುದು ತಪ್ಪೇ?

ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಇರುವ ನಿಯಮಗಳನ್ನು ಮೀರಿ ಲಕ್ಷಾಂತರ ಜನರು ಅನಧಿಕೃತವಾಗಿ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ಅವರಲ್ಲಿ ಸರಕಾರಿ ನೌಕರರು, ತೆರಿಗೆ ಪಾವತಿದಾರರು, ವ್ಯಾಪಾರಸ್ಥರು, ಶ್ರೀಮಂತರು, ಗುತ್ತಿಗೆದಾರರು, ಮನೆಬಾಡಿಗೆ ಪಡೆಯುವವರು ಇವರೆಲ್ಲರೂ ಸೇರಿದ್ದಾರೆ. ಇಂತಹವರೆಲ್ಲರನ್ನು ಪತ್ತೆ ಹಚ್ಚಿ ಅನರ್ಹಗೊಳಿಸುವುದು ಸರಿಯಲ್ಲವೇ? ನಿಜವಾಗಿಯೂ ಸರಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕಲ್ಲವೇ? ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವವರನ್ನು ಪರಿಶೀಲನೆಗೆ ಒಳಪಡಿಸಿ ಅರ್ಹರಾದವರನ್ನು ಉಳಿಸಿ ಅನರ್ಹರಾದವರನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟು ಎಪಿಎಲ್ ಪಟ್ಟಿಗೆ ವರ್ಗಾವಣೆ ಮಾಡುವುದು ಒಳಿತು. ಅಂದರೆ ಬಿಪಿಎಲ್ ಕಾರ್ಡ್ ಎನ್ನುವುದು ಅರ್ಹರಾದವರಿಗೆ ಸಿಗಲಿ, ಅನರ್ಹರಾದವರಿಗೆ ರದ್ದಾಗಲಿ. ಸರಕಾರ ಈ ನಿಟ್ಟಿನಲ್ಲಿ ದಿಟ್ಟತನವನ್ನು ಪ್ರದರ್ಶಿಸಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ರವಿಕುಮಾರ್ ಬಾಗಿ

contributor

Similar News