ಯುವಜನರಿಗಾಗಿ ಪ್ರಾದೇಶಿಕ ರಾಷ್ಟ್ರೀಯ ನೀತಿ ರೂಪಿಸಬೇಕು: ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ
ಜಾನಪದ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಸರಕಾರವು ಹೆಚ್ಚಿನ ನೆರವು ನೀಡಬೇಕು. ಈಗ ಆಗಿರುವ ಕೆಲಸಗಳು ಅಷ್ಟು ಸಮಾಧಾನ ತಂದಿಲ್ಲ. ಜಾನಪದ ಶಿಕ್ಷಣಕ್ಕಾಗಿ ಏಕಮಾತ್ರ ವಿಶ್ವವಿದ್ಯಾನಿಲಯ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರವೇ. ಜಾನಪದ ಶಿಕ್ಷಣ ಪಡೆದವರಿಗೆ ಉದ್ಯೋಗದ ಬಗ್ಗೆ ಭಯವಿದೆ. ಅದಕ್ಕಾಗಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಟ್ಟ ಹುದ್ದೆಗಳಿಗೆ ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಬೇಕು. -ಗೊ.ರು.ಚನ್ನಬಸಪ್ಪ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ
ಬೆಂಗಳೂರು : ‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಹಳ ದಿನಗಳ ಬೇಡಿಕೆಯಾಗಿದೆ. ಪ್ರಾದೇಶಿಕವಾಗಿ ಯುವಜನರಿಗೆ ಉದ್ಯೋಗ ಒದಗಿಸಲು ಕೇಂದ್ರ ಸರಕಾರ ಭರವಸೆಯಿಂದ ಕೂಡಿದ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಬೇಕು ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಂಡ್ಯದಲ್ಲಿ ನಡೆಸಲು ನಿರ್ಧರಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ವಿದ್ವಾಂಸರೂ ಆದ ಗೊ.ರು. ಚನ್ನಬಸಪ್ಪ ಅವರು ‘ಕನ್ನಡ ಕಟ್ಟುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಯಾವ ರೀತಿ ಪೂರಕವಾಗಲಿದೆ’ ಎನ್ನುವ ಹಲವು ವಿಷಯಗಳನ್ನು ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಾರ್ತಾ ಭಾರತಿ: ‘ನೀವು ಕಸಾಪ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ ಸಮ್ಮೇಳನ ನಡೆಸಿದ್ದೀರಿ, ಈಗ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವುದು ಹೇಗನಿಸುತ್ತಿದೆ?
ಗೊ.ರು.ಚ: ಮಂಡ್ಯ ಜಿಲ್ಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಉತ್ತಮ ಕೇಂದ್ರವಾಗಿದೆ. ಅಲ್ಲಿ ಸಾಹಿತ್ಯ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾರೆ. ಮಂಡ್ಯದಲ್ಲಿ ಈ ರೀತಿಯ ದೊಡ್ಡ ಕಾರ್ಯಕ್ರಮವಾಗಿ 30 ವರ್ಷಗಳಾಗಿವೆ. ಈಗ ಮಂಡ್ಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ನನಗೆ ಬಹಳ ಸಂತೋಷ ಮತ್ತು ಅಲ್ಲಿನ ಸಮ್ಮೇಳನಕ್ಕೆ ನಾನು ಅಧ್ಯಕ್ಷ ಆಗುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ.
ವಾ.ಭಾ.: ಕನ್ನಡ ಕಟ್ಟುವ ಕೆಲಸಕ್ಕೆ ನಿಮ್ಮ ಅಧ್ಯಕ್ಷತೆಯ ಸಮ್ಮೇಳನ ಯಾವ ರೀತಿ ಪೂರಕವಾಗುತ್ತದೆ?
ಗೊ.ರು.ಚ: ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಅಭಿವೃದ್ಧಿ, ಕನ್ನಡ ಭಾಷೆಯ ಸಂರಕ್ಷಣೆ, ಇತಿಹಾಸ, ಸಾಹಿತ್ಯ ಕ್ಷೇತ್ರದಲ್ಲಿ ನಡೆದಿರುವ ಕೆಲಸಗಳ ಕುರಿತು ಹಲವು ಗೋಷ್ಠಿಗಳಲ್ಲಿ ಚರ್ಚೆ ಆಗುತ್ತವೆ. ಈ ಕುರಿತು ಅನೇಕ ಅಭಿಪ್ರಾಯಗಳನ್ನು ಗೋಷ್ಠಿಯಲ್ಲಿ ಭಾಗವಹಿಸಿದವರು ನೀಡುತ್ತಾರೆ. ಬೇರೆ-ಬೇರೆ ವಿಷಯಗಳಿಗೆ ಸಂಬಂಧಪಟ್ಟ ಚರ್ಚೆ ನಡೆಯುವುದರಿಂದ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಪ್ರೇರಣೆಯಾಗುತ್ತದೆ. ಇದರಿಂದ ಯುವಜನರಿಗೆ ಹೊಸ ವಿಚಾರಗಳು ತಿಳಿದು ಆಸಕ್ತಿ ಮೂಡಲು ಸಹಕಾರಿಯಾಗುತ್ತದೆ.
ವಾ.ಭಾ.: ಕನ್ನಡ ಅನ್ನದ ಭಾಷೆಯಾಗಲು ಸರಕಾರ ಯಾವ ರೀತಿ ಕ್ರಮ ವಹಿಸಬಹುದು?
ಗೊ.ರು.ಚ: ಸರಕಾರಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಮುಖ್ಯವಾಗಿ ಜನಸಾಮಾನ್ಯರು ಆಸಕ್ತಿ ವಹಿಸಬೇಕು. ಸಾಹಿತಿಗಳು, ವಿದ್ವಾಂಸರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸರಕಾರದ ಕಾನೂನಿನಿಂದ ಯಾವುದೇ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ. ಆದರೆ ಸರಕಾರ ಇಂತಹ ಕೆಲಸಕ್ಕೆ ಬೇಕಾದ ಉತ್ತೇಜನ ಕೊಡಬೇಕು. ಈಗಾಗಲೇ ಸರಕಾರ ಅನೇಕ ಕೆಲಸಗಳನ್ನು ಮಾಡುತ್ತಿದೆ. ಇನ್ನೂ ಹೆಚ್ಚಿನ ಕೆಲಸಗಳನ್ನು ಬದ್ಧತೆಯಿಂದ ಮಾಡಿದರೆ ಕನ್ನಡ ಅನ್ನದ ಭಾಷೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ವಾ.ಭಾ.: ಕನ್ನಡಿಗರ ಉದ್ಯೋಗ ಮೀಸಲಾತಿಯ ಬಗ್ಗೆ ಚರ್ಚೆ ಆಗುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಗೊ.ರು.ಚ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಹಳ ದಿನದ ಬೇಡಿಕೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವುದು ಎಲ್ಲ ರಾಜ್ಯಗಳಲ್ಲೂ ಇರುವ ಬೇಡಿಕೆಯಾಗಿದೆ. ಹಲವು ಕಾರಣಗಳಿಂದ ಇದು ಜಾರಿಯಾಗಿಲ್ಲ. ಜಾರಿಗೊಳಿಸಲು ಆಯಾ ರಾಜ್ಯ ಸರಕಾರಗಳು ಪ್ರಯತ್ನ ಮಾಡಬೇಕು. ಇದು ಎಲ್ಲ ರಾಜ್ಯಗಳ ಸಮಸ್ಯೆಯಾಗಿರುವುದರಿಂದ ಎಲ್ಲ ಮುಖ್ಯಮಂತ್ರಿಗಳು ಒಗ್ಗೂಡಿ ಸಭೆ ನಡೆಸಿ, ನಿರ್ದಿಷ್ಟವಾದ ನಿಲುವು ತೆಗೆದುಕೊಳ್ಳಬೇಕು. ಈ ಕುರಿತು ರಾಷ್ಟ್ರೀಯ ನೀತಿ ಬಹಳ ಅಗತ್ಯವಾಗಿದೆ. ಪ್ರಾದೇಶಿಕವಾಗಿ ಯುವಜನರಿಗೆ ಉದ್ಯೋಗ ನೀಡಲು ಭರವಸೆಯ ನೀತಿಯನ್ನು ಕೇಂದ್ರ ಸರಕಾರ ರೂಪಿಸಬೇಕು. ಅದನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಬದ್ಧತೆ ವಹಿಸಬೇಕು.
ವಾ.ಭಾ.: ಇಂದಿನ ತಲೆಮಾರಿಗೆ ಜಾನಪದ ಪ್ರಜ್ಞೆ ಮೂಡಿಸುವುದು ಹೇಗೆ?
ಗೊ.ರು.ಚ: ಇತ್ತೀಚೆಗೆ ಎಲ್ಲವನ್ನೂ ಆರ್ಥಿಕ ಲಾಭದ ದೃಷ್ಟಿಯಿಂದ ನೋಡುವುದು ಹೆಚ್ಚಾಗಿದೆ. ಜಾನಪದ ನಮ್ಮ ಸಂಸ್ಕೃತಿಯ ಮೂಲ. ಆಧುನಿಕ ಬೆಳವಣಿಗೆಗೆ ಜಾನಪದ ತುಂಬಾ ಸ್ಫೂರ್ತಿ ಕೊಟ್ಟಿದೆ ಎನ್ನುವುದನ್ನು ಯುವಜನಾಂಗದ ಗಮನಕ್ಕೆ ತರಬೇಕು. ಸಾಹಿತ್ಯದ ಪರಿಚಯ, ಜಾನಪದ ಕಲೆಗಳ ಪರಿಚಯ ಆಗಬೇಕು. ಇತ್ತೀಚೆಗೆ ಯುವಜನರು ಜಾನಪದ ಕಲೆಗಳನ್ನು ಆಸಕ್ತಿಯಿಂದ ನೋಡುತ್ತಿದ್ದಾರೆ. ಅವಕಾಶಗಳು ಹೆಚ್ಚು ಸಿಗುತ್ತಿವೆ, ಇದು ಇನ್ನೂ ಹೆಚ್ಚಾಗಬೇಕು. ಶಾಸ್ತ್ರೀಯ ಕಲೆಗಳಿಗೆ ಕೊಟ್ಟ ಪ್ರೋತ್ಸಾಹವನ್ನು ಜಾನಪದಕ್ಕೂ ಕೊಡಬೇಕು. ಆ ಉದ್ದೇಶದಿಂದ ಕರ್ನಾಟಕ ಜಾನಪದ ವಿವಿ ಸ್ಥಾಪನೆಗೆ ಪ್ರಯತ್ನ ಮಾಡಿದೆವು. ಈಗ ಜಾನಪದ ವಿವಿಯೂ ಇದೆ. ಆದರೆ ನಮ್ಮ ನಿರೀಕ್ಷೆಯೆಂತೆ ಬೆಳೆದಿಲ್ಲ ಎನ್ನುವ ವ್ಯಥೆಯಿದೆ.
ವಾ.ಭಾ.:ಈ ಬಾರಿ ಮಹಿಳಾ ಸಾಹಿತಿ ಸಮ್ಮೇಳನದ ಅಧ್ಯಕ್ಷರಾಗಬೇಕು ಎನ್ನುವ ಬೇಡಿಕೆ ಇತ್ತು. ಇದರ ಬಗ್ಗೆ ನಿಮ್ಮ ಅಭಿಪ್ರಾಯ? ಗೊ.ರು.ಚ: ಈ ಹಿಂದೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಮಹಿಳಾ ಸಾಹಿತಿ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಮಹಿಳೆಯರೇ ಆಗಿದ್ದರೆ ಸಂತೋಷ ಪಡುತ್ತಿದ್ದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ನನ್ನನ್ನು ಸಮ್ಮೇಳನಾಧ್ಯಕ್ಷರನನ್ನಾಗಿ ಆಯ್ಕೆ ಮಾಡಿದೆ.