ಆಧುನಿಕ ಭಾರತದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಾಭಿವೃದ್ಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರ ಪಾತ್ರ
ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಮಾತನಾಡುವಾಗ ಅಥವಾ ಅವರ ಬಗ್ಗೆ ಬರೆಯುವಾಗ ಹೆಚ್ಚಿನವರು ಅವರು ಸಾಮಾಜಿಕ ಅಸಮಾನತೆ ಬಗ್ಗೆ ಮಾಡಿದ ಹೋರಾಟ ಮತ್ತು ಸಂವಿಧಾನದಲ್ಲಿ ಮೀಸಲಾತಿ ಜಾರಿಗೆ ತಂದಿರುವ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿರುವುದು ಸಾಮಾನ್ಯ. ಆದರೆ ಆ ಎರಡು ವಿಚಾರಗಳನ್ನು ಹೊರತು ಪಡಿಸಿ ಆಧುನಿಕ ಭಾರತದ ಅಭಿವೃದ್ಧಿಯಲ್ಲಿ ಅದರಲ್ಲೂ ಪ್ರಮುಖವಾಗಿ ಭೂ ಸುಧಾರಣೆ, ಕೃಷಿ ಮತ್ತು ಕೈಗಾರಿಕಾಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯವಾದುದು.
ಅಂಬೇಡ್ಕರರು ಖ್ಯಾತ ಆರ್ಥಿಕ ತಜ್ಞರೂ ಆಗಿದ್ದುದರಿಂದ ಅರ್ಥಶಾಸ್ತ್ರದಲ್ಲಿ ಅವರು ವಿದೇಶದಿಂದ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಅವರು ಆಧುನಿಕ ಭಾರತದ ಅಭಿವೃದ್ಧಿಯ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಸದಾಕಾಲ ರಾಷ್ಟ್ರದ ಆರ್ಥಿಕತೆ, ಸಾಮಾಜಿಕತೆ, ಅಸಮಾನತೆ, ಶಿಕ್ಷಣ, ಸಾರ್ವಜನಿಕ ನೈರ್ಮಲ್ಯತೆ, ಸಮುದಾಯ ಆರೋಗ್ಯ, ವಸತಿ ಮೊದಲಾದ ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದರು. ಭೂ ಸುಧಾರಣೆ ಜಾರಿಗೆ ತಂದು ಭೂಮಿಯ ರಾಷ್ಟ್ರೀಕರಣ ಮತ್ತು ಸಣ್ಣ ರೈತರಿಗೆ ಭೂಮಿಯನ್ನು ಗುತ್ತಿಗೆ ನೀಡುವುದು, ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿ ಸಂಘಗಳನ್ನು ರಚಿಸುವುದು. ಆ ಮೂಲಕ ಕೃಷಿಕರಿಗೆ ಹೊಸ ತಂತ್ರಜ್ಞಾನದ ಹಾಗೂ ಇನ್ನಿತರ ಮಾಹಿತಿ, ರಸಗೊಬ್ಬರ ಪೂರೈಕೆ, ಹಣಕಾಸು ಸಾಲ ನೀಡುವಿಕೆ, ಹೀಗೆ ಅವಶ್ಯ ಮಾಹಿತಿ ಬಗ್ಗೆ ನೀಲ ನಕಾಶೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದರು. ಕೃಷಿಯಿಂದ ಎಲ್ಲರಿಗೂ ಉದ್ಯೋಗ ಲಭ್ಯತೆ ಸಾಧ್ಯವಿಲ್ಲ ಎಂದು ಅರಿತ ಅವರು ಹೆಚ್ಚುವರಿ ಕಾರ್ಮಿಕರ ಜೀವನಕ್ಕಾಗಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆಯ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಅದರಲ್ಲಿ ಪಿ.ಎಫ್., ಇ.ಎಸ್.ಐ., ಬೋನಸ್, ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ದುಡಿಮೆ ನಿಷೇಧ, ಬಾಲಕಾರ್ಮಿಕರ ನಿಷೇಧ, ಮಹಿಳಾ ಹಾಗೂ ಪುರುಷ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಮಾತ್ರವಲ್ಲದೆ ದುಡಿಮೆಯ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರರಿಗೆ ಸಲ್ಲುತ್ತದೆ. ಕಾರ್ಮಿಕರಿಗೆ ಕಾರ್ಖಾನೆಗಳಲ್ಲಿ ಆರೋಗ್ಯ ಮತ್ತು ಸುರಕ್ಷತಾ ತರಬೇತಿ ಜೊತೆಗೆ ಆ ಬಗ್ಗೆ ಸೂಕ್ತ ಕ್ಯಾಂಟೀನ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಕಾರ್ಮಿಕರ ಹಿತ ಕಾಯಲು ಕಾನೂನು ಜಾರಿಗೆ ತರುತ್ತಾರೆ. ಬಾಬಾ ಸಾಹೇಬರ ಈ ಕಾರ್ಮಿಕ ಕಲ್ಯಾಣ ಕಾಯ್ದೆಯು ಭಾರತದಲ್ಲಿ ಒಂದು ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದ್ದು ಮಾತ್ರವಲ್ಲದೆ, ನಮ್ಮ ದೇಶವು ಕೈಗಾರಿಕೆಯಲ್ಲಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಾಣಲು ಪೂರಕವಾಗುತ್ತದೆ. ಈ ಮೂಲಕ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಚೇತರಿಕೆಯನ್ನು ಕಂಡು ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಲು ಸಾಧ್ಯವಾಯಿತು.
ಜೊತೆಗೆ ಇನ್ನಿತರ ಪ್ರಮುಖವಾದ ರಾಷ್ಟ್ರೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾದ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಮೊದಲೇ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆರ್ಥಿಕ ತಜ್ಞರಾದ ಬಾಬಾ ಸಾಹೇಬರು, ಭಾರತದ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ 1942 ರಿಂದ 1946ರವರೆಗೆ ಸರಿಯಾದ ಅಧ್ಯಯನವನ್ನು ಮಾಡಿ ಬ್ರಿಟಿಷ್ ಇಂಡಿಯಾ ಸರಕಾರಕ್ಕೆ ತನ್ನ ಅಧ್ಯಯನ ವರದಿಯನ್ನು ನೀಡುತ್ತಾರೆ. ಭಾರತದ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕಾದರೆ ಕೃಷಿ ಮತ್ತು ಕೈಗಾರಿಕೆಗೆ ಉತ್ತೇಜನವನ್ನು ಕೊಡಬೇಕು, ಕೃಷಿಗೆ ಹಣ ಹೂಡಿಕೆ ಮಾಡಿದರೆ ಅದು ಪ್ರಾಥಮಿಕ ಕೈಗಾರಿಕೆಯನ್ನು ಬೆಳೆಸಿದಂತೆ ಎಂದು ಮನಗಂಡಿದ್ದರು. ಅದಕ್ಕಾಗಿ ದೇಶದಲ್ಲಿ ನದಿ ನೀರಿನ ಯೋಜನೆಯನ್ನು ಜಾರಿ ತಂದು ಅಣೆಕಟ್ಟುಗಳನ್ನು ನಿರ್ಮಿಸಿದರೆ, ಆ ಮೂಲಕ ಕೃಷಿಗೆ ಬೇಕಾದಷ್ಟು ನೀರಿನ ಲಭ್ಯತೆ ಹಾಗೂ ಜಲ ವಿದ್ಯುತ್ ಉತ್ಪಾದನೆಯಿಂದ ಕೈಗಾರಿಕೆಗೆ ಅವಶ್ಯವಿರುವ ನೀರು ಹಾಗೂ ವಿದ್ಯುತ್ ಪೂರೈಕೆಯಾಗುತ್ತದೆ. ಇದರಿಂದ ಕೈಗಾರಿಕೆ ಬೆಳವಣಿಗೆಯಾಗುತ್ತದೆ. ಅದರಲ್ಲೂ ಸಾರ್ವಜನಿಕ ಉದ್ದಿಮೆಯನ್ನು ಸ್ಥಾಪನೆ ಮಾಡಿದರೆ ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯತೆಯಿಂದ ಅವರ ಜೀವನ ಮಟ್ಟದ ಜೊತೆಗೆ ದೇಶದ ಆರ್ಥಿಕತೆ ಕೂಡಾ ಸುಧಾರಣೆಯಾಗಬಹುದು ಎಂಬುದು ಆಂಬೇಡ್ಕರ್ ಅವರ ಯೋಚನೆಯಾಗಿತ್ತು.
ಅದಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರರು 1942-46ರ ಅವಧಿಯಲ್ಲಿ ಯುಎಸ್‌ಎಯ ಟಾನಿಸ್ ನದಿ ಕಣಿವೆ ಯೋಜನೆಯ ಬಗ್ಗೆ ಅಧ್ಯಯನ ಕೈಗೊಂಡು ಅವರು ಆ ಯೋಜನೆಯಲ್ಲಿ ಕೈಗೊಂಡ ಈ ತಾಂತ್ರಿಕತೆ ಮತ್ತು ಆರ್ಥಿಕ ವೆಚ್ಚ ಹಾಗೂ ಯೋಜನೆಯಿಂದ ಆಗುವ ಪ್ರಯೋಜನ ಈ ಎಲ್ಲಾ ವಿಷಯದ ಬಗ್ಗೆ ಸವಿವರವಾದ ವರದಿಯನ್ನು ತಯಾರು ಮಾಡಿ ಸರಕಾರಕ್ಕೆ ಸಲ್ಲಿಸುತ್ತಾರೆ. ಮುಂದೆ ಭಾಕ್ರಾನಂಗಲ್, ಹಿರಾಕುಡ್, ಕೋಸಿ, ಸೋನಿ ನದಿ, ಮಹಾನದಿ ಯೋಜನೆ, ದಾಮೋದರ್ ಕಣಿವೆ ಯೋಜನೆ, ಮೊದಲಾದ ಯೋಜನೆಗಳನ್ನು ಕೈಗೊಂಡರೆ ಇದರಿಂದ ಆಗುವ ಆರ್ಥಿಕ ಲಾಭ ಮತ್ತು ಉದ್ಯೋಗ ಲಭ್ಯತೆ ಬಗ್ಗೆ ರೂಪುರೇಷೆ ಸಿದ್ಧಪಡಿಸಿ
1943ರಲ್ಲಿ ನಡೆದ ಭಾರತದ ನೀರಾವರಿ ಮತ್ತು ಜಲ ವಿದ್ಯುತ್ ನೀತಿ ಸಭೆಯ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯುತ್ ಅಭಿವೃದ್ಧಿ ಮತ್ತು ಅಂತಿಮ ಉದ್ದೇಶದ ಬಗ್ಗೆ ಸರಕಾರಕ್ಕೆ ಸರಿಯಾದ ಮಾರ್ಗ ಸೂಚಿಯನ್ನು ನೀಡಿ ಯೋಜನೆಯನ್ನು ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.
ಸರಕಾರ ಹೊಸ ಜಲನೀತಿಯನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಮತ್ತು ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸಿದ್ದರು. 1943-1946ರ ಮಧ್ಯೆ ಅವರು ಹಲವಾರು ನದಿ ನೀರಾವರಿ ಯೋಜನೆ ಮತ್ತು ಜಲ ನೀತಿ ಕಾಯ್ದೆ ಬಗ್ಗೆ ಸಮ್ಮೇಳನಗಳಲ್ಲಿ ಭಾಗವಹಿಸಿ ಮಾತನಾಡುತ್ತಾರೆ. ಅದರಲ್ಲಿ ದಾಮೋದರ ಕಣಿವೆ ಯೋಜನೆಯ ಎರಡು ಸಮ್ಮೇಳನಗಳು ಕೋಲ್ಕತಾದಲ್ಲಿ ನಡೆದಿದ್ದವು. ಇದು ದೇಶದ ಜಲ ಸಂಪನ್ಮೂಲ ಅಭಿವೃದ್ಧಿ ಬಗ್ಗೆ ಚಿಂತನೆಯನ್ನು ಒಳಗೊಂಡಿದೆ. ಅವರು ನದಿ ನೀರು ಯೋಜನೆ ಬಗ್ಗೆ ಎಲ್ಲಾ ಚರ್ಚೆಗಳಲ್ಲಿ ಭಾಗವಹಿಸಿ ತನ್ನ ಸಲಹೆ ಸೂಚನೆಗಳನ್ನು ನೀಡಿ ಅದರ ಯಶಸ್ಸಿಗೆ ಕಾರಣ ಕರ್ತರಾಗಿದ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಪಡಿಸಿದ ಜಲ ಸಂಪನ್ಮೂಲಗಳ ಸಂರಕ್ಷಣೆಯು ಹೊಸ ಜಲನೀತಿಯ ಪ್ರಮುಖ ಅಂಶಗಳ ಉಲ್ಲೇಖ ಈ ರೀತಿ ಇದೆ.
1. ನದಿ ಕಣಿವೆ ಜಲಾನಯನ ಪ್ರದೇಶದ ಆಧಾರದ ಮೇಲೆ ಜಲ ಸಂಪನ್ಮೂಲಗಳ ಅಭಿವೃದ್ಧಿಗೆ ಬಹು ಉದ್ದೇಶದ ವಿಧಾನವನ್ನು ಅಳವಡಿಸಿಕೊಳ್ಳುವುದು.
2. ನದಿ ಕಣಿವೆ ಯೋಜನೆಯ ಪರಿಕಲ್ಪನೆಯ ಪರಿಚಯ ಅಂದರೆ ಅಣೆಕಟ್ಟು ನಿರ್ಮಾಣಕ್ಕೆ ಬೇಕಾಗಿರುವ ಆರ್ಥಿಕ ವೆಚ್ಚ, ಜನರನ್ನು ಈ ಪ್ರದೇಶದಿಂದ ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕೇಂದ್ರ ನಿರ್ಮಾಣ ಮತ್ತು ಅವರು ಕಳೆದುಕೊಳ್ಳುವ ಜಮೀನಿಗೆ ನೀಡಬೇಕಾದ ಪರಿಹಾರ ಹೀಗೆ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ.
3. ನೀರು ಮತ್ತು ವಿದ್ಯುತ್ ಸಂಪನ್ಮೂಲಗಳನ್ನು ಉತ್ತೇಜಿಸಲು ಕೇಂದ್ರದಲ್ಲಿ ತಾಂತ್ರಿಕ ತಜ್ಞರ ಸಂಸ್ಥೆಯನ್ನು ರಚಿಸುವುದು.
4. ಸೋನಿ ನದಿ ಯೋಜನೆಯನ್ನು ಬಹು ಉದ್ದೇಶಿತ ಯೋಜನೆಯನ್ನಾಗಿ ಕೈಗೊಳ್ಳುವುದು. ಇಲ್ಲಿ ಕೃಷಿಗೆ ನೀರಾವರಿ ಒದಗಿಸುವ ಯೋಜನೆ ಮಾತ್ರವಾಗಿರದೆ ಕಾಲುವೆಗಳ ನಿಯಂತ್ರಣಕ್ಕೆ ಕೂಡ ಮಹತ್ವವನ್ನು ಕೊಟ್ಟಿದ್ದಾರೆ. ಈ ಯೋಜನೆನ್ನು ಉತ್ತರ ಪ್ರದೇಶ, ಬಿಹಾರ ಮತ್ತು ದೇಶದ ಇತರ ಕೆಲವು ರಾಜ್ಯಗಳ ಅಭಿವೃದ್ಧಿಗೆ ಕೂಡ ಬಳಸಿಕೊಳ್ಳಬಹುದೆಂದು ಮನವರಿಕೆ ಮಾಡಿ ಕೊಟ್ಟಿದ್ದರು. ಹಾಗೆಯೇ ಮಹಾನದಿ ಯೋಜನೆಯ ಅನುಷ್ಠಾನದಲ್ಲಿ ಕೂಡ ಅಂಬೇಡ್ಕರ್ ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದರು.
5. ಒಡಿಶಾದಲ್ಲಿ ಮಳೆಗಾಲ ಸಮಯದಲ್ಲಿ ನದಿ ನೀರಿನಿಂದ ಆಗುತ್ತಿದ್ದ ಅನಾಹುತಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕಾದರೆ ಅಮೆರಿಕದಲ್ಲಿ ಟಾನಿಸ್ ನದಿ ಕಣಿವೆ ಯೋಜನೆಯ ತಾಂತ್ರಿಕ ಯೋಜನೆಯನ್ನು ಅಳವಡಿಸಿದರೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬ ವಿವರವಾದ ಮಾಹಿತಿಯನ್ನು ಸರಕಾರಕ್ಕೆ ನೀಡುತ್ತಾರೆ. ಈ ಯೋಜನೆ ಕೂಡಾ ಅನುಷ್ಠಾನಗೊಂಡು ಒಡಿಶಾದ ನದಿ ನೀರಿನಿಂದ ಆಗುತ್ತಿದ್ದ ಅನಾಹುತ ತಪ್ಪಿ ಹೋಯಿತು.
ಹೀಗೆ ಆಧುನಿಕ ಭಾರತ ನಿರ್ಮಾಣದಲ್ಲಿ ವಿವಿಧ ಕ್ಷೇತ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರ ಕೊಡುಗೆ ಅಪಾರವಾದುದು. ಅವರು ಮೊದಲು ಪ್ರತಿಯೊಂದು ಸಮಸ್ಯೆಗಳ ಮೂಲ ಹುಡುಕಿ ಆಮೇಲೆ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಆದರೆ ಬಾಬಾಸಾಹೇಬರು ಪರಿಶಿಷ್ಟ ಜನಾಂಗದಲ್ಲಿ ಹುಟ್ಟಿದ ಮಾತ್ರಕ್ಕೆ ಈ ಎಲ್ಲಾ ವಿಚಾರಗಳು ಪ್ರಚಲಿತದಲ್ಲಿ ಇಲ್ಲವೆನ್ನುವುದು ಸಹಜ.