ಕಟ್ಟಡ ಪೂರ್ಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ವಸತಿ ನಿಲಯ; ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು

Update: 2025-01-14 06:29 GMT

ಬೀದರ್ : ನಗರದಿಂದ ಸುಮಾರು 10 ಕಿ. ಮೀ. ದೂರ ಇರುವ ಘೋಡಂಪಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ಸುಸಜ್ಜಿತವಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಸತಿ ನಿಲಯದ ಕಟ್ಟಡ ಪೂರ್ಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆಯಾಗದೆ ಪಾಳು ಬಿದ್ದಿದೆ.

ಹಳ್ಳಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಸರಕಾರ ಈ ವಸತಿ ಕಾಲೇಜು ಪ್ರಾರಂಭ ಮಾಡಿದೆ. ಕಾಲೇಜು ಪ್ರಾರಂಭವಾಗಿ ನಾಲ್ಕು ವರ್ಷ ಕಳೆದಿವೆ. ಕಾಲೇಜು ಮತ್ತು ವಸತಿ ನಿಲಯದ ಹೊಸ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದಿದೆ. ಆದರೆ ಹೊಸ ಕಟ್ಟಡದಲ್ಲಿ ಕಾಲೇಜು ಪ್ರಾರಂಭವಾದರೂ ಸಹ ವಸತಿ ನಿಲಯ ಪ್ರಾರಂಭವಾಗದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಕಟ್ಟಡದಲ್ಲಿ ನೀರಿನ ವ್ಯವಸ್ಥೆ, ಕಂಪ್ಯೂಟರ್ ವ್ಯವಸ್ಥೆ ಹಾಗೂ ಕಟ್ಟಡ ವ್ಯವಸ್ಥೆ ಎಲ್ಲವೂ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

ಈ ಕಾಲೇಜು ಮತ್ತು ವಸತಿ ನಿಲಯದ ಕಟ್ಟಡ ಸುಮಾರು 10 ಎಕರೆ ಭೂ ಪ್ರದೇಶದಲ್ಲಿ ಕೋಟ್ಯಾಂತರ ದುಡ್ಡಿನಿಂದ ನಿರ್ಮಾಣಗೊಂಡಿದೆ. ಇಲ್ಲಿ ಬಿ. ಎ, ಬಿ.ಎಸ್ಸಿ ಹಾಗೂ ಬಿ.ಕಾಂ ಪದವಿ ಕೋರ್ಸ್‌ಗಳಿವೆ. ಪ್ರಸ್ತುತ ಕಾಲೇಜಿನಲ್ಲಿ 10 ಖಾಯಂ ಉಪನ್ಯಾಸಕರು ಹಾಗೂ 12 ಅತಿಥಿ ಉಪನ್ಯಾಸಕರಿದ್ದಾರೆ.

ಕಾಲೇಜಿಗೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ. ಬೀದರ್ ನಗರದಿಂದ ಸುಮಾರು 10 ಕಿ. ಮೀ ದೂರ ಇರುವ ಈ ಕಾಲೇಜಿಗೆ ಬಸ್ಸಿನ ವ್ಯವಸ್ಥೆಯು ಇಲ್ಲದಾಗಿದೆ. ಅತ್ತ ಬಸ್ಸಿನ ವ್ಯವಸ್ಥೆಯು ಇಲ್ಲ, ಇತ್ತ ವಸತಿ ನಿಲಯದ ಉದ್ಘಾಟನೆಯು ಕಾಣದ ಕಾರಣದಿಂದಾಗಿ ಈ ಕಾಲೇಜಿಗೆ ವಿದ್ಯಾರ್ಥಿಗಳು ಬರುದಾದರೂ ಹೇಗೆ?

ಘೋಡಂಪಳ್ಳಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗುವುಕ್ಕಿಂತ ಮೊದಲ ಎರಡು ವರ್ಷ ನೌಬಾದ್ ನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಗಿತ್ತು. ಆವಾಗ ಈ ಕಾಲೇಜಿನಲ್ಲಿ 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಎರಡು ವರ್ಷದಿಂದ ಘೋಡಂಪಳ್ಳಿಯಲ್ಲಿ ನಿರ್ಮಾಣವಾದ ನೂತನ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಂಡಿದ್ದರಿಂದಾಗಿ ಅಲ್ಲಿ ವಸತಿ ನಿಲಯ ಹಾಗೂ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಸಂಪೂರ್ಣವಾಗಿ ಇಳಿಮುಖವಾಗಿದ್ದು, ಸುಮಾರು 250 ಕ್ಕೆ ಬಂದು ತಲುಪಿದೆ.

ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್ ಹಾಗೂ ಔರಾದ್ ತಾಲ್ಲೂಕಿನ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ದಿನಾಲು ವಿದ್ಯಾರ್ಥಿಗಳು ಅವರ ಊರಿನಿಂದ ಕಾಲೇಜಿಗೆ ಅಷ್ಟೊಂದು ದೂರದಿಂದ ಬರುವುದು ಅಸಾಧ್ಯವಾಗಿದೆ. ಕಾರಣ ಬಸ್ಸಿನ ಕೊರತೆ. ಹಾಗೆಯೇ ಹಳ್ಳಿಯಿಂದ ಇಲ್ಲಿವರೆಗೆ ಸಮಯಕ್ಕೆ ಬರಬೇಕು ಎಂದರೆ ಆಗುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಇದ್ದಾಗ ಮಾತ್ರ ಬಂದು, ಪರೀಕ್ಷೆ ಬರೆದು ತೆರಳುವ ದುಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅವರ ಶಿಕ್ಷಣದ ಗತಿ ಏನಾಗಿರಬೇಕು? ವಸತಿ ನಿಲಯ ಉದ್ಘಾಟನೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಯಾವ ವಿದ್ಯಾರ್ಥಿಯು ಇತ್ತ ಸುಳಿಯದೆ, ಕಾಲೇಜು ಮುಚ್ಚುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಹೇಳಬಹುದು.

ಒಟ್ಟು 600 ವಿದ್ಯಾರ್ಥಿಗಳ ಸಾಮರ್ಥ್ಯವಿರುವ (ಬಾಲಕಿಯರ ವಸತಿ ನಿಲಯವು 300 ಹಾಗೂ ಬಾಲಕರ ವಸತಿ ನಿಲಯದಲ್ಲಿ 300) ವಸತಿ ನಿಲಯವು ಸಂಪೂರ್ಣವಾಗಿ ಪಾಳು ಬಿದ್ದಿರುವ ಪರಿಸ್ಥಿತಿಯಲ್ಲಿ ಕಂಡು ಬರುತ್ತಿದೆ. ಕಟ್ಟಡದ ಕಿಟಕಿಗಳು ಒಡೆದು ಹೋಗಿದ್ದು, ಇಡೀ ಕಟ್ಟಡ ನಾಶವಾಗುವ ಹಂತಕ್ಕೆ ತಲುಪುತ್ತಿದೆ.

ನಗರದ ಗುಂಪಾವರೆಗೆ ಬರುವ ಬಸ್ಸುಗಳು ಈ ಕಾಲೇಜಿನವರೆಗೂ ಬರಬೇಕು ಎಂದು ಬಸ್ ಡಿಪೋದಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್ ಗಳ ಕೊರತೆ ಇರುವುದರಿಂದ ಅಲ್ಲಿವರೆಗೆ ಬಸ್ಸು ಓಡಿಸಲು ಸಾಧ್ಯವಿಲ್ಲ ಎಂದು ಬಸ್ ಡಿಪೋದವರು ಹೇಳುತ್ತಿದ್ದಾರೆ. ಕಾಲೇಜಿನವರೆಗೆ ರಸ್ತೆ ನಿರ್ಮಿಸುವುದಕ್ಕಾಗಿ ಮನವಿ ಪತ್ರ ಸಲ್ಲಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇವಾಗ ಪ್ರೈವೇಟ್ ಲೇಔಟ್ ನ ಒಳಗಡೆಯಿಂದ ಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳುತ್ತಿದ್ದಾರೆ.

ಸರಕಾರ ಇತ್ತ ಗಮನ ಹರಿಸದೇ ಇದ್ದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವಲ್ಲಿ ಯಾವುದೇ ಸಂಶಯವಿಲ್ಲ. ಕೋಟ್ಯಂತರ ದುಡ್ಡು ಸುರಿದು ಕಟ್ಟಿದ ಕಾಲೇಜು, ವಸತಿ ನಿಲಯದ ಕಟ್ಟಡ ಸಂಪೂರ್ಣವಾಗಿ ನಾಶವಾಗುತ್ತದೆ. ಹಾಗಾಗಿ ಸರಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಿ ವಿದ್ಯಾರ್ಥಿಗಳ ಉತ್ತಮವಾದ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು.

ವಸತಿ ನಿಲಯದ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಉಪಯೋಗಕ್ಕೆ ಬಾರದಾಗಿದೆ. ಹೆಸರಿಗೆ ಮಾತ್ರ ಇದು ವಸತಿಯುಕ್ತ ಕಾಲೇಜು. ಇಲ್ಲಿ ವಸತಿಯ ವ್ಯವಸ್ಥೆ ಇಲ್ಲ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನಿಂದ ಬರುವ ನಮಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ನಮ್ಮ ಪದವಿ ಶಿಕ್ಷಣವೇ ಹಾಳಾಗುತ್ತಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಬೇಕು.

- ಬಾಲಾಜಿ, 5ನೇ ಸೆಮಿಸ್ಟರ್ ವಿದ್ಯಾರ್ಥಿ.


ಬೀದರ್ ನಗರದಿಂದ 9-10 ಕಿ. ಮೀ ದೂರವಿರುವ ಈ ಕಾಲೇಜು ಸಂಪೂರ್ಣವಾಗಿ ವಸತಿ ನಿಲಯದ ಮೇಲೆ ಅವಲಂಬಿತವಾಗಿದೆ. ವಸತಿ ನಿಲಯದ ಕಟ್ಟಡವಿದ್ದರೂ ಅದನ್ನು ಪ್ರಾರಂಭ ಮಾಡದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಪ್ರಾರಂಭ ಮಾಡಬೇಕಾದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಸರಕಾರದ ಕೈಯಲ್ಲಿದೆ. ಸರಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು.

- ವೇದಪ್ರಕಾಶ್ ಆರ್ಯ, ಪ್ರಾಂಶುಪಾಲರು.




Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News