‘ಇಂಡಿಯಾ’ ಒಕ್ಕೂಟದ ಮುಂದಿನ ದಾರಿ ಏನು?

ಬಿಜೆಪಿಯನ್ನು ಎದುರಿಸಲು ಎಲ್ಲರೂ ಒಂದಾಗುವುದು ಅಗತ್ಯ ಎಂಬ ನೆಲೆಯಲ್ಲಿ ರಚನೆಯಾಗಿದ್ದ ‘ಇಂಡಿಯಾ’ ಒಕ್ಕೂಟ ಬಹುಬೇಗ ಆ ಉದ್ದೇಶ ಮತ್ತು ಉತ್ಸಾಹವನ್ನು ಕಳೆದುಕೊಂಡಿದೆ. ಒಬ್ಬೊಬ್ಬರೂ ಒಂದೊಂದು ಸ್ವರದಲ್ಲಿ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಒಬ್ಬಂಟಿಯಾದ ಹಾಗೆ ತೋರುತ್ತಿದೆ.

Update: 2025-01-14 06:23 GMT
Editor : Thouheed | Byline : ವಿನಯ್ ಕೆ.

‘ಇಂಡಿಯಾ’ ಮೈತ್ರಿಕೂಟ ಅಗತ್ಯವಿತ್ತು ಎನ್ನುವಾಗಲೇ ಅದು ಬಾಳಲಾರದ ಸ್ಥಿತಿ ಮುಟ್ಟಿದೆ.

ಈಗಾಗಲೇ ಮಮತಾ ಬ್ಯಾನರ್ಜಿ ಮೈತ್ರಿಕೂಟದಿಂದ ಹೊರಗಿದ್ದಾರೆ ಎನ್ನುವ ಹಂತದಲ್ಲಿ ಈಗ ಶರದ್ ಪವಾರ್ ಕೂಡ ಹೊರಹೋಗುತ್ತಿರುವ ಸೂಚನೆಗಳು ಸಿಕ್ಕಿವೆ.

‘ಇಂಡಿಯಾ’ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ನಾಯಕಿಯಾಗಬೇಕು ಎಂದು ಶುರವಾದದ್ದು, ದಿಲ್ಲಿಯಲ್ಲಿ ಕಾಂಗ್ರೆಸ್ ಜೊತೆಗೆ ಎಎಪಿ ಮೈತ್ರಿ ಮಾಡಿಕೊಳ್ಳದೇ ಇರುವ ನಿರ್ಧಾರದವರೆಗೂ ಹೋಯಿತು.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವದ ವಿಚಾರವನ್ನು ಪ್ರಸ್ತಾವಿಸಿದ್ದರು.

‘‘ನಾನು ‘ಇಂಡಿಯಾ’ ಒಕ್ಕೂಟ ಕಟ್ಟುವ ಕೆಲಸವನ್ನೇನೋ ಮಾಡಿದ್ದೇನೆ. ಅದನ್ನು ನಿಭಾಯಿಸಬೇಕಿರುವುದು ನಾಯಕತ್ವ ವಹಿಸಿಕೊಂಡವರ ಜವಾಬ್ದಾರಿ. ಅವರು ಸಮರ್ಥವಾಗಿ ನಡೆಸದಿದ್ದರೆ ನಾನೇನು ಮಾಡಲಿ? ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು ಎಂದು ನಾನು ಹೇಳುತ್ತೇನೆ’’ ಎಂದಿದ್ದರು.

ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, ಅವಕಾಶ ನೀಡಿದರೆ ಅದಕ್ಕೆ ತಯಾರು ಎಂಬ ಮಾತನ್ನೂ ಆಡಿದ್ದರು.

ಅವರ ಮಾತುಗಳು ಚರ್ಚೆಯನ್ನು ಹುಟ್ಟುಹಾಕಿದ್ದವು. ಹಲವಾರು ಮಿತ್ರಪಕ್ಷಗಳು ತಮ್ಮ ಅಭಿಪ್ರಾಯ ಹೇಳಿದ್ದವು. ಸಮಾಜವಾದಿ ಪಕ್ಷ ಮಮತಾ ಹೇಳಿಕೆಯ ಬಗ್ಗೆ ಮೊದಲ ಬಾರಿಗೆ ಮೆಚ್ಚಿಕೊಂಡಿತ್ತು.

ಅಲ್ಲದೆ, ‘ಇಂಡಿಯಾ’ ಒಕ್ಕೂಟ ಲೋಕಸಭೆ ಚುನಾವಣೆಗಾಗಿ ರಚನೆಯಾಗಿತ್ತು. ಈಗ ಅದು ಅಸ್ತಿತ್ವದಲ್ಲಿಲ್ಲ ಎಂಬ ಮಾತು ಕೂಡ ಬಂದಿತ್ತು.

‘ಇಂಡಿಯಾ’ ಮೈತ್ರಿಕೂಟ ಈಗ ಅಸ್ತಿತ್ವದಲ್ಲಿಲ್ಲ ಎಂಬ ಮಾತನ್ನು ಉಮರ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್‌ರಂಥ ನಾಯಕರು ಹೇಳುತ್ತಿರುವ ಬಗ್ಗೆ ಚರ್ಚೆಯಾಗುತ್ತಲೇ ಇದೆ.

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು, ತಮ್ಮ ಪಕ್ಷ ತನ್ನ ನೆಲೆ ಬಲಪಡಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಬಯಸುತ್ತದೆ ಮತ್ತು ವಿಪಕ್ಷ ‘ಇಂಡಿಯಾ’ ಮೈತ್ರಿಕೂಟ ಅಥವಾ ಮಹಾ ವಿಕಾಸ್ ಅಘಾಡಿ (ಎಂವಿಎ) ವಿಸರ್ಜನೆಗೆ ತಾವೆಂದಿಗೂ ಹೇಳಿಲ್ಲ ಎಂದಿದ್ದಾರೆ. ಮೈತ್ರಿಕೂಟದ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಸಂಜಯ್ ರಾವುತ್ ಆಗ್ರಹಿಸಿದ್ಧಾರೆ.

‘‘ನಾವು ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಹೋರಾಡಿದ್ದೆವು ಮತ್ತು ಫಲಿತಾಂಶಗಳೂ ಸಹ ಉತ್ತಮವಾಗಿದ್ದವು. ಅದರ ಬಳಿಕ ‘ಇಂಡಿಯಾ’ ಮೈತ್ರಿಕೂಟವನ್ನು ಜೀವಂತವಾಗಿರಿಸಲು ಒಟ್ಟಿಗೆ ಕುಳಿತು ಚರ್ಚಿಸಿ ಮುಂದಿನ ಮಾರ್ಗವನ್ನು ತೋರಿಸುವುದು ನಮ್ಮೆಲ್ಲರ, ವಿಶೇಷವಾಗಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನ ಜವಾಬ್ದಾರಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯ ಬಳಿಕ ಈವರೆಗೆ ಇಂತಹ ಒಂದೇ ಒಂದು ಸಭೆ ನಡೆದಿಲ್ಲ’’ ಎಂದು ಅವರು ಹೇಳಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಅಧೋಗತಿಗೆ ಕಾಂಗ್ರೆಸನ್ನು ಅವರು ಹೊಣೆಯಾಗಿಸಿದ್ದಾರೆ.

ಮೈತ್ರಿಕೂಟದಲ್ಲಿ ಸಮನ್ವಯ, ಚರ್ಚೆ ಮತ್ತು ಮಾತುಕತೆಗಳ ಕೊರತೆಯಿದೆ. ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿದೆಯೇ ಎಂಬ ಬಗ್ಗೆ ಜನರಲ್ಲಿ ಶಂಕೆಗಳಿವೆ. ಈ ಮೈತ್ರಿಕೂಟ ಒಮ್ಮೆ ಒಡೆದರೆ ಇನ್ನೆಂದಿಗೂ ಮತ್ತೆ ರಚನೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಪ್ರತಿಪಕ್ಷ ಮೈತ್ರಿಕೂಟದಲ್ಲಿ ಸಮನ್ವಯದ ಕೊರತೆ ಇರುವುದರ ಬಗ್ಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೂಡ ಹೇಳಿದ್ದರು.

‘ಇಂಡಿಯಾ’ ಒಕ್ಕೂಟದ ನಾಯಕತ್ವ ಅಥವಾ ಅಜೆಂಡಾದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅದು ಕೇವಲ ಕಳೆದ ವರ್ಷದ ಲೋಕಸಭಾ ಚುನಾವಣೆಗಾಗಿ ರಚನೆಯಾಗಿದ್ದರೆ, ಅದನ್ನು ವಿಸರ್ಜನೆ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದ್ದು ಅಚ್ಚರಿಗೆ ಕಾರಣವಾಗಿತ್ತು.

‘ಇಂಡಿಯಾ’ ಒಕ್ಕೂಟದ ಕಾರ್ಯವೈಖರಿ ಬಗ್ಗೆಯೂ ಅವರು ಕಿಡಿಕಾರಿದ್ದರು.

‘‘ಬಿಜೆಪಿಯನ್ನು ಸೋಲಿಸುವುದು ಹೇಗೆ ಎಂದು ಎಎಪಿ, ಕಾಂಗ್ರೆಸ್ ಸೇರಿ ಇತರ ಪಕ್ಷಗಳು ಯೋಚನೆ ಮಾಡಬೇಕು. ಆದರೆ ‘ಇಂಡಿಯಾ’ ಒಕ್ಕೂಟಕ್ಕೆ ಯಾವುದೇ ಟೈಮ್ ಲೈನ್ ಇಲ್ಲ. ಲೋಕಸಭೆ ಚುನಾವಣೆಗೆ ಮಾತ್ರ ಅದು ಸೀಮಿತವಾಗಿದ್ದಿದ್ದರೆ ವಿಸರ್ಜಿಸುವುದು ಒಳ್ಳೆಯದು’’ ಎಂದು ಅವರು ಹೇಳಿದ್ದರು.

ಆದರೆ ‘ಇಂಡಿಯಾ’ ಮೈತ್ರಿಕೂಟ ವಿಸರ್ಜಿಸಬೇಕು ಎಂಬ ಉಮರ್ ಅಬ್ದುಲ್ಲಾ ಮಾತಿಗೆ ತಂದೆ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿರುಗೇಟು ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪ್ರಾಮುಖ್ಯತೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘‘ಮೈತ್ರಿಗಳು ಕೇವಲ ಚುನಾವಣೆಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ದೇಶವನ್ನು ಬಲಪಡಿಸಲು ಮತ್ತು ದ್ವೇಷ ಹರಡುವವರನ್ನು ಮಟ್ಟ ಹಾಕಲು ಉದ್ದೇಶ ಹೊಂದಲಾಗಿದೆ’’ ಎಂದು ಅವರು ಹೇಳಿರುವುದು ಮಹತ್ವ ಪಡೆದಿದೆ.

‘ಇಂಡಿಯಾ’ ಮೈತ್ರಿಕೂಟವನ್ನು ಕೇವಲ ಲೋಕಸಭೆ ಚುನಾವಣೆಗಾಗಿ ರಚಿಸಲಾಗಿದೆ ಎಂದು ಭಾವಿಸುವವರು ಆ ತಪ್ಪುಕಲ್ಪನೆಯಿಂದ ಹೊರಬರಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.

ಚುನಾವಣೆ ಉದ್ದೇಶಗಳನ್ನೂ ಮೀರಿ ‘ಇಂಡಿಯಾ’ ಒಕ್ಕೂಟ ರಾಷ್ಟ್ರೀಯ ಏಕತೆ ಮೇಲೆ ಕೇಂದ್ರೀಕೃತವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಈ ನಡುವೆ, ನಾಯಕತ್ವ ವಹಿಸಿಕೊಳ್ಳಲು ಸಿದ್ಧ ಎಂಬ ಮಮತಾ ಮಾತಿಗೆ ‘ಇಂಡಿಯಾ’ ಒಕ್ಕೂಟದ ನಾಯಕರಿಂದಲೇ ಬೆಂಬಲವೂ ವ್ಯಕ್ತವಾಗಿತ್ತೆಂಬುದನ್ನು ಗಮನಿಸಬೇಕು.

‘‘ಮಮತಾ ಬ್ಯಾನರ್ಜಿ ಅವರು ಸಂಪೂರ್ಣವಾಗಿ ‘ಇಂಡಿಯಾ’ ಮೈತ್ರಿಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಬಯಸಿದರೆ ತುಂಬಾ ಸಂತೋಷವಾಗುತ್ತದೆ’’ ಎಂದು ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ ಎರಡೂ ಬಿಜೆಪಿಯನ್ನು ಹೊಗಳುವುದರಲ್ಲಿ ಬ್ಯುಸಿಯಾಗಿದ್ದನ್ನೂ ನೋಡಿದ್ದೇವೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಶುರುವಾದ ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವದ ಚರ್ಚೆ ವಿಪಕ್ಷ ಮೈತ್ರಿಯನ್ನು ತೀವ್ರವಾಗಿ ವಿಭಜಿಸುತ್ತಿದೆ.

ಆರ್‌ಜೆಡಿ ನಾಯಕ ಮತ್ತು ಗಾಂಧಿ ಕುಟುಂಬದ ದೀರ್ಘಕಾಲದ ಬೆಂಬಲಿಗ ಲಾಲೂ ಪ್ರಸಾದ್ ಯಾದವ್ ಈಗಾಗಲೇ ಮಮತಾ ಬ್ಯಾನರ್ಜಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಅವರಿಂದ ಸಾಧ್ಯವಾಗದಿದ್ದರೆ ನಾನು ‘ಇಂಡಿಯಾ’ ಬ್ಲಾಕ್ ಅನ್ನು ನಡೆಸಬಲ್ಲೆ ಎಂಬ ಬ್ಯಾನರ್ಜಿಯವರ ಟೀಕೆಗಳ ಬಗ್ಗೆ ಕೇಳಿದಾಗ, ಲಾಲು ಸುದ್ದಿಗಾರರಲ್ಲಿ ಮಾತನಾಡುತ್ತಾ,‘‘ಸರಿಯಾಗಿಯೇ ಇದೆ. ಅವರಿಗೆ ಜವಾಬ್ದಾರಿಯನ್ನು ನೀಡಬೇಕು. ನಮ್ಮ ಒಪ್ಪಿಗೆ ಇದೆ’’ ಎಂದು ಹೇಳಿದ್ದರು.

ಕಾಂಗ್ರೆಸ್ ಆಕ್ಷೇಪಿಸಬಹುದೇ ಎಂಬ ಬಗ್ಗೆ ಪ್ರಶ್ನಿಸಿದಾಗ, ಅದು ಪರವಾಗಿಲ್ಲ. ಮಮತಾ ಅವರಿಗೆ ಜವಾಬ್ದಾರಿಯನ್ನು ನೀಡಿ ಎಂದು ಲಾಲು ಹೇಳಿದ್ದರು.

ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಮತಾ ಬಾನರ್ಜಿ ಅವರನ್ನು ಸಮರ್ಥ ನಾಯಕಿ ಎಂದು ಕರೆದ ಬಳಿಕ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ.

‘‘ಅವರು ಸಮರ್ಥ ನಾಯಕಿ ಮತ್ತು ಅದನ್ನು ಹೇಳುವ ಹಕ್ಕನ್ನು ಹೊಂದಿದ್ದಾರೆ. ಅವರು ಸಂಸತ್ತಿಗೆ ಕಳುಹಿಸಿರುವ ಸಂಸದರು ಶ್ರಮಜೀವಿಗಳು ಮತ್ತು ಅರಿವುಳ್ಳವರಾಗಿದ್ದಾರೆ’’ ಎಂದು ಪವಾರ್ ಹೇಳಿದ್ದುದು ವರದಿಯಾಗಿತ್ತು.

ಇವೆಲ್ಲದರ ಬಳಿಕ ದಿಲ್ಲಿಯಲ್ಲಿ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಉದ್ಧವ್ ಠಾಕ್ರೆ ಪಕ್ಷಗಳು ಎಎಪಿಗೆ ಬೆಂಬಲ ಸೂಚಿಸಿ, ಕಾಂಗ್ರೆಸನ್ನು ಹೊರಗಿಡುವ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಕೂಡ ವಿಚಿತ್ರವಾಗಿದೆ.

ಹರ್ಯಾಣ ಚುನಾವಣೆ ಹೊತ್ತಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು.

ಉಳಿದೆಲ್ಲ ಪಕ್ಷಗಳು ಸೇರಿ ಕಾಂಗ್ರೆಸ್‌ಗೆ ಕೈಕೊಡುತ್ತಿವೆಯೆ? ಕಾಂಗ್ರೆಸ್ ಒಬ್ಬಂಟಿಯಾಗುತ್ತಿದೆಯೆ? ಎಂಬ ಪ್ರಶ್ನೆಗಳೂ ಎದ್ದಿವೆ.

‘ಶೀಶ್ ಮಹಲ್’ ಸೇರಿದಂತೆ ವಿವಿಧ ಹಗರಣಗಳನ್ನು ಪ್ರಸ್ತಾಪಿಸಿ ಎಎಪಿ ಮೇಲೆ ಕಾಂಗ್ರೆಸ್ ಮುಗಿಬಿದ್ದಿರುವುದೂ ನಡೆದಿದೆ.

ಬಿಜೆಪಿಯೊಂದಿಗೆ ಶಾಮೀಲಾಗಿ ದಿಲ್ಲಿ ಕಾಂಗ್ರೆಸ್ ಇದನ್ನೆಲ್ಲ ಮಾಡುತ್ತಿದೆ ಎಂದು ಈಗಾಗಲೇ ಎಎಪಿ ಆರೋಪಿಸಿ, ಹೈಕಮಾಂಡ್‌ಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದೂ ವರದಿಯಾಗಿತ್ತು.

ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೆರೆಮರೆಯಲ್ಲಿ ತಮ್ಮನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಎಎಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದ್ದವು ಮತ್ತು ಎರಡೂ ‘ಇಂಡಿಯಾ’ ಮೈತ್ರಿಯ ಭಾಗವಾಗಿಯೇ ಇವೆ. ಆದರೆ, ಈ ಮೈತ್ರಿ ರಾಷ್ಟ್ರಮಟ್ಟದಲ್ಲಿಯೇ ಹೊರತು ವಿಧಾನಸಭೆ ಚುನಾವಣೆಗೆ ಅಲ್ಲ ಎಂದು ಎರಡೂ ಪಕ್ಷಗಳು ಈಗಾಗಲೇ ಸ್ಪಷ್ಟಪಡಿಸಿದ್ದವು.

ಆದರೆ ಹೀಗೆ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿರುವ ಬಗ್ಗೆ ಅಂತಿಮವಾಗಿ ‘ಇಂಡಿಯಾ’ ಮೈತ್ರಿಕೂಟವೇ ಇಲ್ಲವಾಗಿ ಹೋಗುವ ಹಂತವನ್ನು ಮುಟ್ಟುತ್ತಿದೆಯೇ ಎಂಬ ಕಳವಳಗಳು ಎದ್ದಿವೆ.

‘ಇಂಡಿಯಾ’ ಮೈತ್ರಿಕೂಟ ಹುಟ್ಟಿಕೊಂಡದ್ದೇ ಸೈದ್ಧಾಂತಿಕ ಹೋರಾಟದ ಹಿನ್ನೆಲೆಯಲ್ಲಿ. ಆದರೆ ಈಗಿನ ಬೆಳವಣಿಗೆಗಳು ಮಾತ್ರ ಅಪಾಯಕಾರಿ ಎನ್ನಿಸುವ ಹಾಗಿವೆ.

ಮಮತಾ ಸೇರಿದಂತೆ ಎಲ್ಲರೂ ರಾಹುಲ್ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಬಿಜೆಪಿಯನ್ನು ಸೋಲಿಸುವುದಕ್ಕೆ ಎಂದು ವಿಪಕ್ಷ ಒಕ್ಕೂಟದ ಉದ್ದೇಶದ ಬಗ್ಗೆ ಹೇಳಿದ್ದ ತೇಜಸ್ವಿ ಯಾದವ್ ಕೂಡ ಈಗ ಅದನ್ನು ಮರೆತೇಬಿಟ್ಟಿರುವ ಹಾಗೆ ಮಾತನಾಡುತ್ತಿದ್ದಾರೆ.

ಈಗಿನ ಸನ್ನಿವೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮಾತ್ರವೇ ‘ಇಂಡಿಯಾ’ ಒಕ್ಕೂಟದ ಪರವಾಗಿ ಗಟ್ಟಿ ದನಿಯಿಂದ ಮಾತನಾಡುತ್ತಿದ್ಧಾರೆ. ಸ್ವತಃ ಅವರ ಪುತ್ರ ಉಮರ್ ಅಬ್ದುಲ್ಲಾ ಕೂಡ ಮೈತ್ರಿಕೂಟದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಶಿವಸೇನೆ ಉದ್ಧವ್ ಬಣ, ಶರದ್ ಪವಾರ್ ಪಕ್ಷ ಎಲ್ಲವೂ ಬೇರೆ ಹಾದಿಯತ್ತ ತಿರುಗಿರುವ ಸನ್ನಿವೇಶ ಕಾಣಿಸುತ್ತಿದೆ.

ಬಿಜೆಪಿಯನ್ನು ಎದುರಿಸಲು ಎಲ್ಲರೂ ಒಂದಾಗುವುದು ಅಗತ್ಯ ಎಂಬ ನೆಲೆಯಲ್ಲಿ ರಚನೆಯಾಗಿದ್ದ ‘ಇಂಡಿಯಾ’ ಒಕ್ಕೂಟ ಬಹುಬೇಗ ಆ ಉದ್ದೇಶ ಮತ್ತು ಉತ್ಸಾಹವನ್ನು ಕಳೆದುಕೊಂಡಿದೆ. ಒಬ್ಬೊಬ್ಬರೂ ಒಂದೊಂದು ಸ್ವರದಲ್ಲಿ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಒಬ್ಬಂಟಿಯಾದ ಹಾಗೆ ತೋರುತ್ತಿದೆ.

ಇಂಥ ಹೊತ್ತಲ್ಲಿ ಈಗ ಕಾಂಗ್ರೆಸ್ ಕಡೆಯಿಂದ ‘ಇಂಡಿಯಾ’ ಒಕ್ಕೂಟವನ್ನು ಉಳಿಸಿಕೊಳ್ಳುವ ಮತ್ತು ಬಲಪಡಿಸುವ ಪ್ರಸ್ತಾವ ದೃಢವಾಗಿ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅದಾಗದೇ ಹೋದರೆ ದಿಲ್ಲಿ ಚುನಾವಣೆ ಮುಗಿಯುವುದರೊಂದಿಗೆ ‘ಇಂಡಿಯಾ’ ಒಕ್ಕೂಟವೂ ಭಂಗವಾಗಿ ಹೋಗುವುದೇ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅದಕ್ಕೂ ಸಿದ್ಧವಾಗಿದ್ದಾರೆಯೇ? ಅದನ್ನು ಕಾಲವೇ ಹೇಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News