ಎದೆಗೆ ಬಂದೂಕಿನ ನಳಿಕೆಯಿಟ್ಟು "ಪಾಸ್ ವರ್ಡ್" ಎಂದಾಗ…

Update: 2024-11-24 15:20 GMT

ಮಲೆನಾಡಿನ ಆದಿವಾಸಿ ನಾಯಕ ವಿಕ್ರಂ ಗೌಡ ಪೊಲೀಸರಿಂದ ಹತ್ಯೆಯಾದ ಮನೆಯಲ್ಲಿ ನಾವೆಲ್ಲಾ ನಿಂತಿದ್ದೆವು‌. ನಕ್ಸಲರು ಮತ್ತು ಪೊಲೀಸರ ಗುಂಡಿನ ಚಕಮಕಿಯ ಬಗ್ಗೆ ಪ್ರಾಕ್ಟಿಕಲ್ ಚರ್ಚೆ ನಡೆಸುತ್ತಿದ್ದೆವು.

ಎಡ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ನಮ್ಮಿಂದ ಪ್ರತ್ಯೇಕಗೊಂಡು ಪಕ್ಕದ ಮನೆಯ ಮಲೆಕುಡಿಯರನ್ನು ಮಾತನಾಡಿಸಲು‌ ಹೊರಟರು. ಪಕ್ಕದ ಮನೆಯ ಅಂಗಳದಲ್ಲಿ ನಿಂತು 'ಮನೆಯೊಳಗೆ ಯಾರಿದ್ದೀರಿ' ಎಂದು ಕರೆದರೂ ಯಾರೂ ಹೊರಬರಲಿಲ್ಲ. ಮನೆ ಖಾಲಿ ಮಾಡಿದ್ದಾರೆಯೇ ಎಂಬ ಗುಮಾನಿಯಲ್ಲಿ ಹೆಂಚಿನಿಂದ ಇಳಿಸಲಾಗಿದ್ದ ತಾರ್ಪಾಲನ್ನು ಸರಿಸಿ ಮನೆಯೊಳಗೆ ಇಣುಕಲು ಯತ್ನಿಸುತ್ತಿದ್ದಂತೆ, "ಪಾಸ್ ವರ್ಡ್ ...." ಎಂಬ ಬೊಬ್ಬೆಯೊಂದಿಗೆ ಎಎನ್ ಎಫ್ ಬಂದೂಕಿನ ನಳಿಗೆಯೊಂದು ಮುನೀರ್ ಕಾಟಿಪಳ್ಳ ಅವರ ಎದೆಯ ಮುಂದೆ ಇತ್ತು. ಮನೆಯೊಳಗಿಂದ ಎರಡು ಕಣ್ಣುಗಳು ಮತ್ತು ಬಂದೂಕಿನ ನಳಿಗೆ ಮಾತ್ರ ಕಾಣುತ್ತಿತ್ತು. ಅನಿರೀಕ್ಷಿತವಾಗಿ ಎದೆಯ ಮುಂದೆ ಬಂದ ಬಂದೂಕನ್ನು ಕಂಡು ವಿಚಲಿತರಾಗದ ಮುನೀರ್ ಕಾಟಿಪಳ್ಳ 'ಯಾವ ಪಾಸ್ ವರ್ಡ್ ? ನಾವು ಹೋರಾಟಗಾರರು' ಎಂದು ಹೇಳುತ್ತಾ ನಮ್ಮನ್ನೂ ಕರೆದರು.

 

ಎ ಆರ್ ರೈಫಲ್, ಎಕೆ 47 ರೈಫಲ್‌ಗಳು ಮತ್ತು ಎಕ್ಸಾಲಿಬರ್ ರೈಫಲ್‌ಗಳನ್ನು ಹೊಂದಿದ್ದ ಸುಮಾರು 15 ರಿಂದ 20 ಎಎನ್ಎಫ್ ಕಮಾಂಡೋಗಳು ಮಲೆ ಕುಡಿಯರ ಮನೆಯ ಒಳಗಿದ್ದರು.

ರಹಸ್ಯ ಪಾಸ್ ವರ್ಡ್ ಹೊಂದಿರುವ ಪೊಲೀಸರನ್ನು ಮಾತ್ರ ವಿಕ್ರಂ ಗೌಡ ಎನ್ ಕೌಂಟರ್ ಆಗಿರುವ ಪ್ರದೇಶ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂಬುದನ್ನು ಈ ಘಟನೆ ಹೇಳುತ್ತಿತ್ತು. ನವೆಂಬರ್ 22 ರಂದು ಪೊಲೀಸರೇ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಘಟನಾ ಸ್ಥಳವನ್ನು ವಿವರಿಸಿದ್ದು ಬಿಟ್ಟರೆ ಯಾವ ಸಾರ್ವಜನಿಕರಿಗೂ, ಸರ್ಕಾರಿ ಅಧಿಕಾರಿಗಳಿಗೂ, ಅಷ್ಟೇ ಯಾಕೆ, ಸ್ಥಳೀಯ ಮನೆಯವರಿಗೂ ಅವರ ಮನೆಯೊಳಗೆ ಪ್ರವೇಶ ನಿರಾಕರಿಸಲಾಗಿದೆ. ಎಎನ್ಎಫ್ ಕಮಾಂಡೋಗಳೇ ತುಂಬಿರುವ ಮನೆಯೊಳಗೆ ನಾವು ಪೊಲೀಸ್ ಅನುಮತಿ ಇಲ್ಲದೇ ಕಾಲಿಟ್ಟಿದ್ದೆವು. ಆದರೂ ಪೊಲೀಸರು ನಮ್ಮ ನಡೆಯನ್ನು ಆಕ್ಷೇಪಿಸಲಿಲ್ಲ ಮತ್ತು ಅಕ್ರಮ ಪ್ರವೇಶ ಎಂದು ಕೇಸು ದಾಖಲಿಸಲಿಲ್ಲ. ಯಾಕೆಂದರೆ ವಾಸ್ತವವಾಗಿ ಅಲ್ಲಿ ಎಎನ್ಎಫ್ ಕಮಾಂಡೋಗಳೇ ಅಕ್ರಮವಾಗಿ ಬಂದು ನೆಲೆಸಿದ್ದರು. ಎಎನ್ಎಫ್ ಪೊಲೀಸರು ಕಳೆದ ಒಂದು ವಾರದಿಂದ ವಾಸಿಸುತ್ತಿರುವ ಮನೆ ನಾರಾಯಣ ಮಲೆಕುಡಿಯರದ್ದು!

ನಾರಾಯಣ ಮಲೆಕುಡಿಯರ ತಂದೆಗೆ 11 ಜನ ಮಕ್ಕಳು. ಆ 11 ಮಕ್ಕಳ ಪೈಕಿ ಒಬ್ಬರೂ ಪೊಲೀಸರಿಲ್ಲ. ಆದರೆ ನಾರಾಯಣ ಮಲೆಕುಡಿಯರನ್ನು ಹೊರ ಹಾಕಿ ಅವರ ಮನೆಯಲ್ಲಿ ವಾಸಿಸುತ್ತಿರುವುದು ಪೊಲೀಸರು. ನಾರಾಯಣ ಮಲೆಕುಡಿಯರು ಸಧ್ಯ ಯಾರ‍್ಯಾರದ್ದೋ ಮನೆಯಲ್ಲಿ ಆಶ್ರಯ ಪಡೆಯಬೇಕಿದೆ.

ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮ ಪಂಚಾಯತ್ ನ ಪೀತಬೈಲ್ ನಲ್ಲಿ ಇರೋದೇ ಮೂರು ಮತ್ತೊಂದು ಮನೆ. ಪೀತಬೈಲ್ ಅನ್ನೋದು ಕೇವಲ ನಾಲ್ಕು ಮನೆಗಳದ್ದೇ ಒಂದು ಹಳ್ಳಿ! ಆ ನಾಲ್ಕೂ ಮನೆಗಳು ಪರಸ್ಪರ ಸಹೋದರರಿಗೆ ಸೇರಿದ್ದು. ಜಯಂತ ಮಲೆಕುಡಿಯರ ಮನೆಯಲ್ಲಿ ಎನ್ ಕೌಂಟರ್ ನಡೆದಿದೆ ಎಂದು ಪೊಲೀಸರು ಹೇಳುತ್ತಾರೆ. ಪಕ್ಕದ ಮನೆ ಜಯಂತ ಮಲೆಕುಡಿಯರ ಐದನೇ ತಮ್ಮ ನಾರಾಯಣ ಮಲೆಕುಡಿಯರಿಗೆ ಸೇರಿದ್ದು. ಪಕ್ಕದಲ್ಲೇ ಇರುವ ಮತ್ತೊಂದು ಮನೆ ಒಂಭತ್ತನೇ ತಮ್ಮ ಸುಧಾಕರ್ ಗೆ ಸೇರಿದ್ದು. ಈಗ ಈ ಮೂರು ಮನೆಗಳನ್ನು ಖಾಲಿ ಮಾಡಿಸಿರುವ ಪೊಲೀಸರು ನಾರಾಯಣ ಮಲೆಕುಡಿಯ ಮತ್ತು ಸುಧಾಕರ ಮಲೆಕುಡಿಯರ ಮನೆಯಲ್ಲಿ ಎಎನ್ಎಫ್ ಕಮಾಂಡೋಗಳು ವಾಸವಾಗಿದ್ದಾರೆ. ಮಲೆಕುಡಿಯರು ಸ್ವಂತ ಮನೆಯಿದ್ದರೂ ಹೋಗಲಾರದೇ ಕಾಡು ಮೇಡು, ಸಂಬಂಧಿಕರ ಮನೆ ಎಂದು ಅಲೆದಾಡುತ್ತಿದ್ದಾರೆ.

ಎನ್ ಕೌಂಟರ್ ಕಾರ್ಯಾಚರಣೆ ನಡೆಯುವಾಗ ಮಲೆಕುಡಿಯರನ್ನು ಅವರ ಮನೆಯಿಂದ ಮಲೆಕುಡಿಯರ ರಕ್ಷಣೆಯ ದೃಷ್ಟಿಯಿಂದ ತೆರವುಗೊಳಿಸಬಹುದು. ಆದರೆ ಎಲ್ಲಾ ಕಾರ್ಯಾಚರಣೆ ಮುಗಿದ ಬಳಿಕ ಪೊಲೀಸರಿಗೆ ವಾಸಿಸಲೆಂದೇ ಮಲೆಕುಡಿಯರನ್ನು ಮನೆಯಿಂದ ಹೊರ ಹಾಕಿಸಲು ಅಧಿಕಾರ ನೀಡಿದವರು ಯಾರು? ಮಲೆಕುಡಿಯರು ಸಾಕಿದ್ದ ಕೋಳಿಗಳನ್ನೇ ಕುಯ್ದು ಮಧ್ಯಾಹ್ನದ ಊಟವನ್ನು ಮಲೆಕುಡಿಯರ ಮನೆಯಲ್ಲಿ ಸಿದ್ದಪಡಿಸುತ್ತಾರೆ. ಆದರೆ ಮನೆಯಲ್ಲಿ ಮಲೆಕುಡಿಯರಿಲ್ಲ.

 

ಜಯಂತ ಮಲೆಕುಡಿಯರ ಮನೆಯನ್ನು ಪೊಲೀಸ್ ಪಟ್ಟಿ ಹಾಕಿ ಘಟನಾ ಸ್ಥಳವನ್ನು ಸಂರಕ್ಷಿಸಿದ್ದರೆ, ನಾರಾಯಣ ಮಲೆಕುಡಿಯರ ಮನೆಯಲ್ಲಿ 15 ರಿಂದ 20 ಪೊಲೀಸರು ವಾಸಿಸುತ್ತಿದ್ದಾರೆ. ಸುಧಾಕರ್ ಮಲೆಕುಡಿಯ ಅವರ ಮನೆಯಲ್ಲಿ ಪೊಲೀಸ್ ಅಧಿಕಾರಿಗಳ ಬೆಲೆಬಾಳುವ ಕೋಟುಗಳು, ಅಂಗಿಗಳು, ಬ್ರಾಂಡೆಡ್ ಪ್ಯಾಂಟುಗಳು ನೇತಾಡುತ್ತಿದೆ. ಕಾಡಿನೊಳಗಿನ ಮಲೆಕುಡಿಯರು ಊಹಿಸಲೂ ಸಾದ್ಯವಾಗದ ಬ್ರಾಂಡ್ ಬಟ್ಟೆಗಳು ಈಗ ಮಲೆಕುಡಿಯರ ಮನೆಯಲ್ಲಿದೆ. ಆದರೆ ಮಲೆಕುಡಿಯರು ಮನೆಯಲ್ಲಿ ಇಲ್ಲ.

►ವಿಕ್ರಂ ಗೌಡ ಬರಲೇ ಇಲ್ಲ?

ಎನ್ ಕೌಂಟರ್ ಘಟನೆ ನಡೆದಿದೆ ಎಂದು ಪೊಲೀಸರು ಹೇಳುವ ಸಮಯದಲ್ಲಿ ಈ ಮೂರೂ ಮನೆಗಳಲ್ಲಿ ಯಾರೂ ಇರಲಿಲ್ಲ. ಯಾರೂ ಇಲ್ಲದ ಮನೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಇದ್ದರು ಎನ್ನುವುದು ಪೊಲೀಸರ ಹೇಳಿಕೆ. ರೇಷನ್ ಸಾಮಾಗ್ರಿ ತರಲು ವಿಕ್ರಂ ಗೌಡರು ಜಯಂತ್ ಮಲೆಕುಡಿಯರ ಮನೆಗೆ ಬಂದಿದ್ದರು. ಆದರೆ ಯಾರೂ ಇಲ್ಲದ ಮನೆಗೆ ವಿಕ್ರಂ ಗೌಡ ರೇಷನ್ ಗಾಗಿ ಬರುವುದಾದರೂ ಯಾಕೆ? ನಕ್ಸಲ್ ಚಳವಳಿಯ ಹಿನ್ನಲೆ ಗೊತ್ತಿರುವ ಯಾರೂ ಕೂಡಾ ಈ ಕತೆಯನ್ನು ಒಪ್ಪಲು ಸಾಧ್ಯವಿಲ್ಲ. ನಕ್ಸಲರು ಬಂದೂಕು ಹಿಡಿದು ಯಾವುದಾದರೂ ಮನೆಗೆ ರೇಷನ್ನಿಗೋ, ಊಟ, ನೀರು, ಮೊಬೈಲ್ ಚಾರ್ಜ್ ಮಾಡಲೆಂದು ಬರುತ್ತಾರೆ ಎಂದರೆ ಅದು ಪೂರ್ವನಿರ್ಧರಿತವಾಗಿರುತ್ತದೆ. ಯಾರೂ ಇಲ್ಲದ ಮನೆಯಲ್ಲಿ, ಸಿಗದೇ ಇರುವ ರೇಷನ್, ಊಟಕ್ಕಾಗಿ ನಕ್ಸಲರು ವ್ಯರ್ಥ ಪ್ರಯತ್ನ ಮಾಡುವುದಿಲ್ಲ. ʼTry and errorʼ ಸಿದ್ದಾಂತವನ್ನು ನಕ್ಸಲರು ಪಾಲಿಸುವುದೇ ಇಲ್ಲ.

"ನಾನು ಮತ್ತು ನನ್ನ ಪತ್ನಿ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟರೆ ವಾಪಸ್ ಬರೋದು ಸಂಜೆ 7 ಗಂಟೆಗೆ. ಮನೆಯಿಂದ 8 ಕಿಮಿ ನಡೆದು ಕೂಲಿ ಕೆಲಸಕ್ಕೆ ಹೋಗಿ ಬರಬೇಕು. ಸಂಜೆ ಬಂದಾಗ ಮನೆಯಿಂದ ಕೂಗಳತೆಯ ದೂರದಲ್ಲಿ ಪೊಲೀಸರು ನನ್ನನ್ನೂ, ನನ್ನ ಹೆಂಡತಿಯನ್ನು ತಡೆದು ನಿಲ್ಲಿಸಿ ಮನೆಗೆ ಹೋಗಬಾರದು ಎಂದರು. ಅಂದಿನಿಂದ ಇಂದಿನವರೆಗೆ ಮನೆಗೆ ಹೋಗಿಲ್ಲ. ಜಯಂತ ಮಲೆಕುಡಿಯರ ಮಗನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರು ರಾತ್ರಿ ಮಾತ್ರ ಮನೆಗೆ ಬಂದು ಹೋಗುತ್ತಿದ್ದರು. ಘಟನೆ ನಡೆದಾಗ ಅವರೂ ಮನೆಯಲ್ಲಿ ಇರಲಿಲ್ಲ" ಎಂದು ನಾರಾಯಣ ಮಲೆಕುಡಿಯರು ಹೇಳಿದರು.

ಜನರಿಲ್ಲದ ಮನೆಗೆ ನಕ್ಸಲರು ಸಹಾಯ ಕೇಳಿಕೊಂಡು ಬರುವ ಪ್ರಯತ್ನ ಮಾಡುವುದಿಲ್ಲ ಎಂಬುದು ಒಂದು ವಾದವಾದರೆ, ನಕ್ಸಲರು ಯಾವುದಾದರೂ ಹಳ್ಳಿಗೆ ಹೋಗುವಾಗ ಅಲ್ಲಿ ಅವರದ್ದೇ ರೀತಿಯಲ್ಲಿ ಭದ್ರತೆಯನ್ನು ಪರಿಶೀಲಿಸುತ್ತಾರೆ. ಆ ಹಳ್ಳಿಯಲ್ಲಿ ಕಾರ್ಯಕ್ರಮವಿದೆಯೇ? ಹಳ್ಳಿಯ ಪರಿಚಿತರನ್ನು ಹೊರತುಪಡಿಸಿ ಅಪರಿಚಿತರು ಹಳ್ಳಿಯಲ್ಲಿ ಇದ್ದಾರೆಯೇ? ಪೊಲೀಸ್ ಓಡಾಟ ಇದೆಯೇ ಎಂದು ನೋಡುತ್ತಾರೆ.

ನವೆಂಬರ್ 18 ರಂದು ಸೋಮವಾರ ಸಂಜೆ 6 ಗಂಟೆಯ ವೇಳೆಗೆ ಎನ್ ಕೌಂಟರ್ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸರ ವಾಹನಗಳು ರಾಜಾರೋಷವಾಗಿ ನವೆಂಬರ್ 17 ರವಿವಾರ ಸಂಜೆಯೇ ಹಳ್ಳಿಯಲ್ಲಿ ಓಡಾಡುತ್ತಿತ್ತು. "ರವಿವಾರ ಸಂಜೆ ಪೊಲೀಸ್ ವಾಹನಗಳು ಬಂದಿತ್ತು" ಎಂದು ಆನಂದ ಮಲೆಕುಡಿಯ ಅವರು ಹೇಳುತ್ತಾರೆ. "ಸೋಮವಾರ ಬೆಳಿಗ್ಗೆಯೂ ತುಂಬಾ ಸಂಖ್ಯೆಯ ಪೊಲೀಸ್ ವಾಹನಗಳು ಜಯಂತ್ ಮಲೆಕುಡಿಯರ ಮನೆಗೆ ಹೋಗುವ ರಸ್ತೆಯಲ್ಲಿ ಹೋಗಿದ್ದವು" ಎಂದು ಜಯಂತ ಮಲೆಕುಡಿಯರ ತಮ್ಮನ ಮಗ ಸತೀಶ್ ಮಲೆಕುಡಿಯ ಹೇಳುತ್ತಾರೆ. ರವಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನವರೆಗೂ ಪೊಲೀಸ್ ವಾಹನಗಳ ಓಡಾಟವಿದ್ದ ಹಳ್ಳಿಗೆ ಸೋಮವಾರ ಸಂಜೆ ನಕ್ಸಲರು ಬರುವ ಮನಸ್ಸು ಮಾಡಿದ್ದಾದರೂ ಹೇಗೆ?

 

ಜಯಂತ ಮಲೆಕುಡಿಯರ ಮನೆಯಲ್ಲಿ ವಿಕ್ರಂ ಗೌಡ ಮತ್ತು ಪೊಲೀಸರ ಮುಖಾಮುಖಿಯಾಯಿತು ಎಂದು ಪೊಲೀಸರು ಹೇಳುತ್ತಾರೆ. ಪೊಲೀಸರು ಪೊದೆಗಳಲ್ಲಿ ಅಡಗಿ ಕೂತು ಪೈರಿಂಗ್ ಮಾಡಿದರು ಎನ್ನುತ್ತಾರೆ. ಆದರೆ ಜಯಂತ ಮಲೆಕುಡಿಯರ ಮನೆಯ ಎದುರು ತೋಟವಿದೆ, ಗದ್ದೆ ಇದೆ. ಅಡಗಿ ಕೂರುವಂತಹ ಪೊದೆಗಳು ಇಲ್ಲ. ಅಡಗಿ ಕೂರುವಂತಹ ಪೊದೆಗಳಿಂದ ಘಟನಾ ಸ್ಥಳಕ್ಕೆ ಓಡಿ ಬರಬೇಕು ಎಂದರೂ ಒಂದಷ್ಟು ಸಮಯ ಬೇಕಾಗುತ್ತದೆ. ವಾಹನದಲ್ಲಿ ಪೊಲೀಸರು ಬಂದು ದಾಳಿ ನಡೆಸಿದರೂ ವಾಹನ ಬರುವುದರಿಂದ ಹಿಡಿದು ಪೊಲೀಸ್ ಕಾರ್ಯಾಚರಣೆಯ ವಿಷಯಗಳೆಲ್ಲವೂ ಜಯಂತ ಮಲೆಕುಡಿಯರ ಮನೆಗೆ ಖುಲ್ಲಂ ಖುಲ್ಲ ಕಾಣಿಸುತ್ತದೆ. ಪೊಲೀಸರು ವಿಕ್ರಂ ಗೌಡ ಮನೆ ತಲುಪುವಷ್ಟರಲ್ಲಿ ಓಡಿ ತಪ್ಪಿಸಿಕೊಳ್ಳುವಷ್ಟು ಧಾರಾಳ ಸಮಯಾವಕಾಶ ಒದಗಿಸುತ್ತದೆ. ಆದ್ದರಿಂದ ಪೊಲೀಸರ ಎಫ್ಐಆರ್, ದೂರು, ಹೇಳಿಕೆಗಳಿಗೂ ಘಟನಾ ಸ್ಥಳಕ್ಕೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ.

►ಮಲೆಕುಡಿಯರ ಮನೆಯೇ ಯಾಕೆ?

ಪೊಲೀಸರು ವಿಕ್ರಂ ಗೌಡರನ್ನು ಕೊಂದು ತಂದು ಜಯಂತ ಮಲೆಕುಡಿಯರ ಮನೆ ಮುಂದೆ ಹಾಕಿ ನಕಲಿ ಗುಂಡಿನ ಚಕಮಕಿ ದೃಶ್ಯ ಸೃಷ್ಟಿಸಿದರೇ? ಅಥವಾ ಬಂಧಿಸಲ್ಪಟ್ಟ ವಿಕ್ರಂ ಗೌಡರನ್ನು ಕರೆದುಕೊಂಡು ಬಂದು ನಿಲ್ಲಿಸಿ ಗುಂಡು ಹೊಡೆದರೇ? ಎಂಬ ಪ್ರಶ್ನೆ ಕಬ್ಬಿನಾಲೆ, ನಾಡ್ಪಾಲು ಗ್ರಾಮಸ್ಥರ ಬಳಿ ಚರ್ಚೆ ನಡೆಯುತ್ತಿದೆ.

ಹಾಗೊಂದು ವೇಳೆ ನಕಲಿ ಎನ್ ಕೌಂಟರ್ ಹೌದಾದರೆ, ಅದಕ್ಕಾಗಿ ಮಲೆಕುಡಿಯರ ಮನೆಯನ್ನೇ ಯಾಕೆ ಆಯ್ದುಕೊಳ್ಳಲಾಯಿತು? ನಕಲಿಯೇ ಹೌದಾಗಿದ್ದರೆ ಜನವಸತಿ ಸ್ಥಳದಲ್ಲಿ ಗೊಂದಲ ಸೃಷ್ಟಿಸಿ ಚರ್ಚೆಗೆ ಒಳಪಡಿಸುವ ಬದಲು, ಕಾಡಿನ ಮಧ್ಯಭಾಗದಲ್ಲಿ ಯಾರಿಗೂ ತಿಳಿಯದಂತೆ ಗುಂಡು ಹೊಡೆಯಬಹುದಿತ್ತಲ್ಲವೇ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ನಕ್ಸಲರನ್ನು ಕಾಡಿನ ಮಧ್ಯದಲ್ಲಿ ನಕಲಿ ಎನ್ ಕೌಂಟರ್ ಮಾಡಿ ಕೊಂದರೆ ಅದೊಂದು ಕೇವಲ ನಕ್ಸಲ್ ಮತ್ತು ಪೊಲೀಸ್ ಸಂಘರ್ಷ ಮಾತ್ರ ಆಗಿರುತ್ತದೆ. ಕಾಡಿನ ನಿವಾಸಿಗಳಾಗಿರುವ ಮಲೆಕುಡಿಯರ ಮನೆಯಲ್ಲಿ ಶೂಟ್ ಮಾಡಲಾಗಿದೆ ಎಂಬ ಘಟನೆಯು 'ನಕ್ಸಲರಿಗೆ ಯಾರೂ ರೇಷನ್, ಊಟ, ನೀರಿನ ಸಹಾಯ ಮಾಡಬಾರದು' ಎಂದು ಮಲೆಕುಡಿಯ ಸಮುದಾಯಕ್ಕೆ ಸಂದೇಶ ರವಾನಿಸಿದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟಕ್ಕೆ ಇದೊಂದು ಪೊಲೀಸರು ನೀಡಿದ ಎಚ್ಚರಿಕೆಯಾಗಿದೆ. ಮಲೆನಾಡು ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಗ್ರಾಮ ಸಭೆಗಳು, ಪ್ರತಿಭಟನಾ ಸಭೆಗಳ ಅವಲೋಕನ ನಡೆಸಬೇಕು. 'ಕಸ್ತೂರಿ ರಂಗನ್ ವರದಿ ಜಾರಿಯಾದ್ರೆ ನಾವು ನಕ್ಸಲರಾಗಬೇಕಾಗುತ್ತದೆ' ಎಂದು ಸಾಮಾನ್ಯ ಹಳ್ಳಿಗರು ಅಧಿಕಾರಿಗಳನ್ನು ಎಚ್ಚರಿಸಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ‌. ನಕ್ಸಲ್ ಎನ್ನುವುದು ಹಳ್ಳಿಗರು ಅಧಿಕಾರಸ್ಥರನ್ನು ಬೆದರಿಸಲು ಬಳಸಿರುವ ಅಸ್ತ್ರವಷ್ಟೆ. ಆ ರೀತಿ ಗ್ರಾಮಸಭೆಗಳಲ್ಲಿ ಬೆದರಿಕೆ ಒಡ್ಡುವವರು ನಕ್ಸಲರಾಗಲು ಸಿದ್ದವಿರಲ್ಲ, ಸಿದ್ದವಿದ್ದರೂ ಸೈದ್ದಾಂತಿಕ ಬದ್ಧತೆ ಇಲ್ಲದ ಸಿನಿಕರನ್ನು ನಕ್ಸಲರು ಸೇರಿಸಿಕೊಳ್ಳುವುದಿಲ್ಲ. ಆದರೆ ಅಂತಹ ಬಂಡಾಯದ ಮನಸ್ಥಿತಿಯನ್ನು ಹುಟ್ಟುಹಾಕಿದ ಚಳವಳಿಯನ್ನು ಮನೆ ಮನಗಳಿಂದ ದೂರವಾಗಿಸಲು ಮನೆಯೊಳಗೇ ನುಗ್ಗಿ ನಕ್ಸಲರ ಕೊಲೆ ಮಾಡಬೇಕಿತ್ತು. ಇನ್ಯಾವತ್ತೂ ಮನೆಗಳಲ್ಲಿ ಕಸ್ತೂರಿರಂಗನ್ ವರದಿಯ ಬಗೆಗೆ ಚರ್ಚೆ, ಸಭೆಗಳು ನಡೆಯಕೂಡದು ಎಂಬ ಸರ್ಕಾರದ ಅಜೆಂಡಾದ ಭಾಗವಾಗಿ ಮಲೆಕುಡಿಯರ ಮನೆಯಲ್ಲಿ ಶೂಟೌಟ್ ಮಾಡಲಾಯಿತು.

"ಮಲೆಕುಡಿಯರು ಮುಗ್ದರು. ತಮ್ಮ ಕೃಷಿ ಭೂಮಿಯ ಹೊರತಾಗಿ ಬೇರಾವ ಪ್ರಶ್ನೆಯನ್ನೂ ಅವರು ಕೇಳುವುದಿಲ್ಲ. ನಕ್ಸಲ್ ವಿಷಯದಲ್ಲಿ ಪೊಲೀಸರು ನೆರೆಮನೆಯವರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸುತ್ತಿದ್ದರೂ ಯಾಕೆ ದೌರ್ಜನ್ಯ ನಡೆಸ್ತೀರಿ ಎಂದು ಪ್ರಶ್ನಿಸದಷ್ಟು ಅಮಾಯಕರು. ಆದರೆ ಇನ್ಮುಂದೆ ಅವರು ತಮ್ಮ ಕೃಷಿ ಭೂಮಿ, ಜಮೀನಿನಿಂದ ಹೊರ ಹಾಕುವಿಕೆಯನ್ನೂ ಪ್ರಶ್ನಿಸಬಾರದು ಎಂದು ಮಲೆಕುಡಿಯರ ಮನೆಯನ್ನೇ ಕೇಂದ್ರಿಕರಿಸಿ ನಕ್ಸಲ್ ಕಾರ್ಯಾಚರಣೆಯ ಕತೆ ಹೆಣೆಯಲಾಗುತ್ತದೆ" ಎಂದು ಮಲೆಕುಡಿಯ ಸಮುದಾಯದ ಮುಖಂಡ ಅಜ್ಜೊಳ್ಳಿ ಶೇಖರ್ ಹೇಳುತ್ತಾರೆ.

►ಶರಣಾಗತಿ ಸಮಿತಿ ಭೇಟಿ

ನಾನು, ಮುನೀರ್ ಕಾಟಿಪಳ್ಳ, ಕಾವ್ಯ ಅಚ್ಯುತ್, ನಿತಿನ್ ಬಂಗೇರ, ಅಹಮ್ಮದ್ ಜಿಶಾನ್ ಭೇಟಿ ಕೊಟ್ಟ ಸಂದರ್ಭದಲ್ಲೇ ರಾಜ್ಯ ಸರ್ಕಾರ ನೇಮಿಸಿದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರು ವಿಕ್ರಂ ಗೌಡ ಹತರಾದ ಸ್ಥಳ, ಮಲೆಕುಡಿಯರ ನಿವಾಸಗಳು ಮತ್ತು ವಿಕ್ರಂ ಗೌಡರ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದರು. ಸಮಿತಿಯ ಸದಸ್ಯರಾದ ವಕೀಲರೂ ಆಗಿರುವ ಕೆ ಪಿ ಶ್ರೀಪಾಲ್ ಮತ್ತು ಚಿಂತಕ ಪಾರ್ವತೀಶ್ ಬಿಳಿದಾಳೆ ಅವರ ನಿಯೋಗ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲನೆ ನಡೆಸಿತು.

"ನಕ್ಸಲರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮನವೊಲಿಕೆ ಮಾಡಿ ಅವರನ್ನು ಮುಖ್ಯವಾಹಿನಿಗೆ ತರಬೇಕೇ ಹೊರತು ಗುಂಡು ಹಾರಿಸಿ ಸಾಯುವುದು ಪರಿಹಾರವಲ್ಲ" ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟರು. ಎನ್ ಕೌಂಟರ್ ನಕಲಿಯೇ, ಅಸಲಿಯೇ ಎಂಬ ಬಗ್ಗೆ ಗ್ರಾಮಸ್ಥರ ಹೇಳಿಕೆಗಳು ಮತ್ತು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಮಿತಿಯ ಸದಸ್ಯರು ಈ ಬಗ್ಗೆ ಅಭಿಪ್ರಾಯ ವ್ಯಕ್ತಡಿಸಲು ನಿರಾಕರಿಸಿದರು. ಇದೇ ಸಂದರ್ಭದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ಸರ್ಕಾರ ನೀಡುವ ಸವಲತ್ತುಗಳ ಲಭ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಇನ್ನು ಕೆಲ ದಿನಗಳಲ್ಲಿ ಸಮಿತಿ ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

"ನಮ್ಮಲ್ಲಿಗೆ ನಕ್ಸಲರು ಬಂದು 15 ವರ್ಷವಾಯಿತು. ಈಗ ಪೊಲೀಸರು ಏಕಾಏಕಿ ನಕ್ಸಲ್ ಕತೆ ಕಟ್ಟುತ್ತಿದ್ದಾರೆ" ಎಂದು ಸಮಿತಿಯ ಮುಂದೆ ಮಲೆಕುಡಿಯರು ಅವಲತ್ತುಕೊಂಡರು.

'ಒಂದು ವೇಳೆ ಯಾರಾದರೂ ನಕ್ಸಲರು ನಿಮ್ಮ ಮನೆಗೆ ಊಟ ಕೇಳಿ ಬಂದರೆ ನಮಗೆ ಮಾಹಿತಿ ನೀಡಿ. ನಾವೇನು ಅವರನ್ನು ಅರೆಸ್ಟ್ ಮಾಡಿಸುವುದಿಲ್ಲ. ಬದಲಿಗೆ ಅವರಿಗೆ ಸೂಕ್ತ ಬದುಕಿನ ವ್ಯವಸ್ಥೆ ಕಲ್ಪಿಸುತ್ತೇವೆ' ಎಂದು ಸಮಿತಿ ಸದಸ್ಯರು ಮಲೆಕುಡಿಯರನ್ನು ಮನವಿ ಮಾಡಿದರು. ''ನಮಗೇ ಊಟಕ್ಕಿಲ್ಲ. ಅವರು ಊಟ ಬಂದು ಕೇಳಿದರೆ ನಾವೆಲ್ಲಿಂದ ಕೊಡೋದು ? ನಾವೇ ಒಂದೊತ್ತಿನ ಊಟಕ್ಕೆ ಪರದಾಡುವಂತಹ ಸ್ಥಿತಿ ಇದೆ' ಎಂದು ಮಲೆಕುಡಿಯರು ಹೇಳಿದಾಗ ಸಮಿತಿ ಸದಸ್ಯರ ಕಣ್ಣಂಚಿನಲ್ಲಿ ನೀರು ಹರಿಯಿತು. ಕೆಲ ಮಲೆಕುಡಿಯರ ಕಷ್ಟಗಳಿಗೆ ಸ್ಪಂದಿಸಿದ ಸಮಿತಿ ಸದಸ್ಯರಾದ ಕೆ ಪಿ ಶ್ರೀಪಾಲ್ ಮತ್ತು ಪಾರ್ವತೇಶ್ ಅವರು ಕೆಲ ಮಲೆಕುಡಿಯರಿಗೆ ವೈಯಕ್ತಿಕ ಸಣ್ಣ ಧನ ಸಹಾಯ ಮಾಡಿದ್ದಲ್ಲದೇ, ಸ್ಥಳದಿಂದಲೇ ಅಧಿಕಾರಿಗಳನ್ನು ಸಂಪರ್ಕಿಸಿ ಸಣ್ಣ ಸಣ್ಣ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.

ಒಟ್ಟಾರೆಯಾಗಿ ವಿಕ್ರಂ ಗೌಡ ಹತ್ಯೆ ಅಸಲಿ ಎನ್ ಕೌಂಟರ್ ಅಲ್ಲ ಎಂಬುದಕ್ಕೆ ಯಾವ ಸಾಕ್ಷ್ಯಗಳೂ ಬೇಕಾಗಿಲ್ಲ. ಪೀತಬೈಲ್, ನಾಡ್ಪಾಲು, ಕೂಡ್ಲು ಪ್ರದೇಶದ ಯಾವ ಮಲೆಕುಡಿಯರ ಬಳಿ ಮಾತನಾಡಿದರೂ ಇದೊಂದು ನಕಲಿ ಎನ್ ಕೌಂಟರ್ ಎಂಬ ಅಭಿಪ್ರಾಯಕ್ಕೆ ಬರಬಹುದು‌.

Writer - ವಾರ್ತಾಭಾರತಿ

contributor

Editor - Musaveer

contributor

Byline - ನವೀನ್ ಸೂರಿಂಜೆ

contributor

Similar News