ಕುತ್ಲೂರು ಹೋರಾಟದ ಕನವರಿಕೆಯಲ್ಲಿ ವಿಕ್ರಂ ಗೌಡ ಕುಟುಂಬ!

Update: 2024-11-26 09:28 GMT

 ಪೀತಬೈಲಿಗೆ ಸಾಮಾಜಿಕ ಕಾರ್ಯಕರ್ತರ ನಿಯೋಗ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿನಲ್ಲಿ ನಡೆದ ಮಲೆಕುಡಿಯರ ಹೋರಾಟ ಉಡುಪಿಯ ಹೆಬ್ರಿ ಭಾಗದ ಕಾಡಿನ ನಿವಾಸಿ ಮಲೆಕುಡಿಯರಿಗೆ ಈಗ ಮಾದರಿಯಾಗಿ ಕಂಡುಬಂದಿದೆ. ನಮ್ಮನ್ನು ನೋಡಿದ ತಕ್ಷಣ ಹಲವು ಮಲೆಕುಡಿಯರು 'ನಿಕುಲು ವಿಠಲ ಮಲೆಕುಡಿಯನ ಹೋರಾಟಡು ಇತ್ತರತ್ತೇ ?' (ನೀವು ವಿಠಲ ಮಲೆಕುಡಿಯನ ಹೋರಾಟದಲ್ಲಿ ಇದ್ದವರಲ್ಲವೇ?) ಎಂದು ಪ್ರಶ್ನಿಸಿ, ಎಷ್ಟೋ ಕಾಲದ ಆತ್ಮೀಯರಂತೆ ಮಾತನಾಡಿಸಿದರು.

"ಕಬ್ಬಿನಾಲೆ, ನಾಡ್ಪಾಲು ಗ್ರಾಮದಲ್ಲೂ ಮಲೆಕುಡಿಯರ ಮೇಲೆ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳ ದೌರ್ಜನ್ಯವಿದೆ. ಕಾಡುತ್ಪತ್ತಿಯನ್ನು ಸಂಗ್ರಹಿಸುವಂತೆಯೇ ಇಲ್ಲ. ಆದರೆ ವಿಠಲ ಮಲೆಕುಡಿಯ ಹೋರಾಟದ ಬಳಿಕ ಬೆಳ್ತಂಗಡಿಯಲ್ಲಿ ಯಾವುದೇ ಭಯವಿಲ್ಲದೇ ಅರಣ್ಯ ಉತ್ಪತ್ತಿ ಸಂಗ್ರಹಿಸಬಹುದು ಎಂದು ಕೇಳಿದ್ದೇವೆ. ಅಂತಹ ಮಾದರಿಯ ಚಳವಳಿ ಇಲ್ಲೂ ಅಗತ್ಯವಿದೆ" ಎಂದು ಹೆಚ್ಚಿನ ಮಲೆಕುಡಿಯರು ಅಭಿಪ್ರಾಯಪಟ್ಟರು.

"ಅರಣ್ಯಾಧಿಕಾರಿಗಳ ದೌರ್ಜನ್ಯ ಇಲ್ಲದೇ ಇದ್ದರೆ ಇಂದು ನನ್ನ ಮಾವ ವಿಕ್ರಂ ಗೌಡ ಬದುಕಿರುತ್ತಿದ್ದರು. ಈಗ ಬೆಳ್ತಂಗಡಿಯಲ್ಲಿರುವ ಪರಿಸ್ಥಿತಿ ಆ ಕಾಲದಲ್ಲಿ ನಮ್ಮ ಭಾಗದಲ್ಲಿ ಇರುತ್ತಿದ್ದರೆ ಮಾವ ಭೂಗತರಾಗುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಕಾಡುತ್ಪತ್ತಿ ಸಂಗ್ರಹಿಸಿದರೆಂದು ಅರಣ್ಯಾಧಿಕಾರಿಗಳು ಬೇಕಾಬಿಟ್ಟಿ ಹಲ್ಲೆ ನಡೆಸುತ್ತಿದ್ದರು. ಊಟಕ್ಕಾಗಿ ದುಡಿಯುತ್ತಿದ್ದ ಅವರನ್ನು ಪದೇ ಪದೇ ಬಂಧಿಸುತ್ತಿದ್ದರಿಂದ ಬೇಸತ್ತು ಅವರು ಸಂಪೂರ್ಣ ಭೂಗತರಾದರು. ಸಣ್ಣವನಿದ್ದಾಗ ನಾನು ಅವರನ್ನು ನೋಡಿದ ಅಸ್ಪಷ್ಟ ನೆನಪಿದೆ. ಆ ಬಳಿಕ ನೋಡಿದ್ದೇ ಹೆಣವಾಗಿ. ನಮ್ಮ ಕುಟುಂಬ, ಸಮುದಾಯ ರಕ್ಷಣೆಗಾಗಿ ಅವರು ಹತರಾಗಬೇಕಾಯಿತು" ಎಂದು ವಿಕ್ರಂ ಗೌಡರ ಅಳಿಯ ಪ್ರವೀಣ್ ಮಲೆಕುಡಿಯ ಹೇಳುತ್ತಾರೆ.

ವಿಕ್ರಂ ಗೌಡ ಅವರ ತಂಗಿ ಸುಗುಣ ಗೌಡ ಅವರ ಕುಟುಂಬಕ್ಕೆ ಇನ್ನೂ ಪೊಲೀಸ್ ದೌರ್ಜನ್ಯ ನಿಂತಿಲ್ಲ. ವಿಕ್ರಂ ಗೌಡ ಭೂಗತರಾಗಿ ನಕ್ಸಲ್ ಆದ ಬಳಿಕವಾದರೂ ಈ ಕುಟುಂಬದ ಬಗ್ಗೆ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಕನಿಕರ ಬಂದಿಲ್ಲ. ವಿಕ್ರಂ ಗೌಡ ಅವರ ಇಬ್ಬರು ಮಾವಂದಿರನ್ನು ಪೊಲೀಸರು ವಿನಾಕಾರಣ ಜೈಲಿಗೆ ಹಾಕಿದ್ದರು. ಸುಗುಣ ಅವರ ಗಂಡನನ್ನೂ ಪೊಲೀಸರು ಜೈಲಿಗೆ ಹಾಕಿದ್ದರು. ಇಷ್ಟಕ್ಕೆ ಪೊಲೀಸ್ ದೌರ್ಜನ್ಯ ನಿಲ್ಲುವುದಿಲ್ಲ.

ವಿಕ್ರಂ ಗೌಡ ಅವರ ತಂಗಿ ಸುಗುಣ ಅವರ ಮಗಳ ಗಂಡ ಪ್ರವೀಣ್ ಮಲೆಕುಡಿಯ ಅವರಿಗೆ ಅರಣ್ಯಾಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಕಾಡುತ್ಪತ್ತಿ ಸಂಗ್ರಹ ಮಾಡಿದರೆ ಹಲ್ಲೆ ನಡೆಸುತ್ತಾರೆ. ಮಲೆಕುಡಿಯರು ಯಾವತ್ತೂ ಕೂಡಾ ಮರಗಳನ್ನು ಕಡಿಯುವುದಿಲ್ಲ. ಪ್ರಾಕೃತಿಕವಾಗಿ ಸತ್ತು ಹೋದ ಮರಗಳನ್ನಷ್ಟೇ ಕಟ್ಟಿಗೆಯಾಗಿ ಬಳಸುತ್ತಾರೆ. ಕಾಡಿನ ಅಂಚಿನಲ್ಲಿ ಸಹಜವಾಗಿಯೇ ಕಟ್ಟಿಗೆ ಹೇರಳವಾಗಿ ಸಿಗುವುದರಿಂದ ಅದಕ್ಕಾಗಿ ಮರ ಕಡಿಯುವ ಪ್ರಮೇಯವೇ ಬರುವುದಿಲ್ಲ. ಸತ್ತು ಬಿದ್ದ ಮರವನ್ನು ಕಟ್ಟಿಗೆಗಾಗಿ ಸಿಗಿಯುತ್ತಿದ್ದಾಗ ಬಂದ ಅರಣ್ಯಾಧಿಕಾರಿಗಳು ಪ್ರವೀಣ್ ಮಲೆಕುಡಿಯ ವಿರುದ್ಧ ಕೇಸು ದಾಖಲಿಸಿದ್ದಾರೆ. ಹಲವು ಬಾರಿ 5,000 ರೂ. ನಂತೆ ಈವರೆಗೆ ಒಟ್ಟು 65 ಸಾವಿರ ರೂಪಾಯಿಗಳನ್ನು ದಂಡವಾಗಿ ಕಟ್ಟಿಸಿಕೊಂಡಿದ್ದಾರೆ ! ಕಾಡಿನಲ್ಲಿ ಒಂದೊತ್ತು ಊಟಕ್ಕಾಗಿ ಹತ್ತಾರು ಕಿ.ಮೀ. ನಡೆದು ಕೂಲಿ ಮಾಡುವ ಕುಟುಂಬವೊಂದು 65 ಸಾವಿರ ರೂಪಾಯಿಗಳನ್ನು ಹೊಂದಿಸುವುದೆಲ್ಲಿಂದ ?

ಹೆಬ್ರಿ ವಲಯ ಅರಣ್ಯಾಧಿಕಾರಿಯೇ ಮಲೆಕುಡಿಯರಿಗೆ ನ್ಯಾಯಾಧೀಶರೂ ಆಗಿರುತ್ತಾರೆಯೇ ? ಹೆಬ್ರಿ ಅರಣ್ಯಾಧಿಕಾರಿಯೇ ಕೇಸು ದಾಖಲಿಸಿ, ಅವರೇ ವಿಚಾರಣೆ ನಡೆಸಿ, ಅವರೇ ತೀರ್ಪು ಘೋಷಿಸುತ್ತಾರೆ. ಇಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಯಾವುದೂ ಜಾರಿಯಲ್ಲಿ ಇಲ್ಲವೇ ಎಂಬ ಪ್ರಶ್ನೆ ಅರಣ್ಯಾಧಿಕಾರಿಗಳ ನೋಟಿಸ್ ನೋಡಿದಾಗ ಮೂಡುತ್ತದೆ.

"ಉಡುಪಿ ಜಿಲ್ಲೆ, ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿಯ ಅರಣ್ಯ ಮೊಕದ್ದಮೆ ಸಂಖ್ಯೆ 30/2019-20ರಲ್ಲಿ ಅಪರಾಧಿಯಾಗಿರುವ ಹೆಬ್ರಿ ತಾಲೂಕು ನಾಡಲು ಗ್ರಾಮದ ಮೇಗಡ್ಡೆ ಕೊಲ್ಲಂಗಾರು ಜೆಡ್ಡು ಎಂಬಲ್ಲಿ ವಾಸ್ತವ್ಯ ಮಾಡಿಕೊಂಡಿರುವ *** ಬಿನ್ **** ಇವರಿಗೆ ತಿಳಿಯಪಡಿಸುವುದೇನೆಂದರೆ ನಿಮ್ಮ ಮೊಕದ್ದಮೆಯನ್ನು ರಾಜೀ ಶುಲ್ಕ 5,000/- ದಂತೆ ಒಡಂಬಡಿಕೆ ವ್ಯವಸ್ಥೆ ಮಾಡಿಕೊಳ್ಳಲು ವಿಭಾಗಾಧಿಕಾರಿಯವರು ದಿನಾಂಕ: 02.01.2020ರಂದು ಆದೇಶ ನೀಡಿರುತ್ತಾರೆ. ನೀವು ಈ ನೋಟೀಸು ಜಾರಿಯಾದ 30 ದಿನಗಳೊಳಗೆ ಈ ಕೆಳಗೆ ತಪಸೀಲಾಗಿರುವ ಸದ್ರಿ ಮೊಬಲಗನ್ನು ನಮ್ಮಲ್ಲಿ ಪಾವತಿ ಮಾಡಿ ರಶೀದಿ ಪಡೆಯಬೇಕು ತಪ್ಪಿದಲ್ಲಿ ರೂಲ್ಸ್ ಅನುಸರಿಸಿ ಪ್ರಾಸಿಕ್ಯೂಷನ್ ಕ್ರಮ ಜಾರಿ ಮಾಡಲಾಗುವುದು" ಎಂದು ಹೆಬ್ರಿ ವಲಯ ಅರಣ್ಯಾಧಿಕಾರಿಗಳು 13.01.2020 ರಂದು ನೋಟಿಸ್ ನೀಡುತ್ತಾರೆ.

ಮಲೆಕುಡಿಯರನ್ನು ತನಿಖೆಯೇ ನಡೆಸದೇ 'ಅಪರಾಧಿ' ಎಂದು ಘೋಷಿಸಲು ಅರಣ್ಯಾಧಿಕಾರಿ ಯಾರು ? ಈ ರೀತಿ ಸಂವಿದಾನ, ಕಾನೂನು ಜಾರಿಯಲ್ಲಿ ಇಲ್ಲದ ಪ್ರದೇಶದಲ್ಲಿ ಮಲೆಕುಡಿಯರು ವಾಸಿಸುತ್ತಿದ್ದಾರೆ.

"ಅದೊಂದು ದಿನ ಅರಣ್ಯಾಧಿಕಾರಿಗಳು ನನಗೆ 25 ಸಾವಿರ ರೂಪಾಯಿ ದಂಡ ಕಟ್ಟಬೇಕು ಎಂದು ನೋಟಿಸ್ ನೀಡಿದ್ದರು. ನಾವಿರೋದು ಕಾಡಿನ ಒಳಗೆ. ಕೂಲಿ ನಾಲಿ ಮಾಡಿ ಬದುಕುವ ನಾವು 25 ಸಾವಿರ ರೂ. ತರೋದು ಎಲ್ಲಿಂದ ? ಏನಾದರೂ ಮಾಡಿಕೊಳ್ಳಿ, ನಾನು ದಂಡ ಕಟ್ಟಲ್ಲ ಎಂದೆ. ಆಗ ಓರ್ವ ಅರಣ್ಯಾಧಿಕಾರಿ ನನ್ನ ಕೈಗೆ 25 ಸಾವಿರ ರೂ. ಕೊಟ್ಟು ಇದನ್ನು ಅರಣ್ಯ ಕಚೇರಿಯಲ್ಲಿ ಕಟ್ಟಿ ಬಾ ಎಂದರು. ನಾನು ಅರಣ್ಯಾಧಿಕಾರಿ ಕೊಟ್ಟ 25 ಸಾವಿರ ರೂ. ಕಟ್ಟಿ ಬಂದೆ. ಆ ಬಳಿಕ 25 ಸಾವಿರ ರೂ. ಕೊಟ್ಟ ಅರಣ್ಯಾಧಿಕಾರಿ ಕಾಟ ಶುರುವಾಯ್ತು. ಹಣ ವಾಪಸ್ ಕೊಡು ಎಂದು ಪೀಡಿಸಲಾರಂಭಿಸಿದರು. ಇನ್ನೂ 5 ಸಾವಿರ ರೂ. ಕೊಡಲು ಬಾಕಿ ಇದೆ. ನಾನು ಮಾಡದ ತಪ್ಪಿಗೆ ಸಾಲಗಾರನಾಗಿ ಹಿಂಸೆ ಅನುಭವಿಸುತ್ತಿದ್ದೇನೆ" ಎಂದು ಪ್ರವೀಣ್ ಮಲೆಕುಡಿಯ ಹೇಳುತ್ತಾರೆ.

ಕುತ್ಲೂರಿನಂತೆ ಇಲ್ಲೂ ಕೂಡಾ ಅರಣ್ಯಾಧಿಕಾರಿಗಳು ಮತ್ತು ಎಎನ್ ಎಫ್ ಕಾಟ ನಿಲ್ಲಬೇಕಿದೆ ಎನ್ನುತ್ತಾರವರು.

ವಿಕ್ರಂ ಹತ್ಯೆ ಬಳಿಕವೂ ನಿಲ್ಲದ ದೌರ್ಜನ್ಯ

"ನಮ್ಮೂರಿನಲ್ಲೇ ಅಣ್ಣ ವಿಕ್ರಂ ಗೌಡನ ಶವ ಬಿದ್ದಿದ್ದರೂ ಪೊಲೀಸರು ನಮಗೆ ಮಾಹಿತಿ ನೀಡಲಿಲ್ಲ. ಟಿವಿ ಮತ್ತು ವಾಟ್ಸ್ ಆ್ಯಪ್ ಮೂಲಕ ನಮಗೆ ಮಾಹಿತಿ ತಿಳಿಯಿತು. ಆ ಬಳಿಕ ಅಣ್ಣ ಸುರೇಶ್ ಮಲೆಕುಡಿಯರು ಸರಿಯಾದ ಮಾಹಿತಿ ನೀಡಿದರು" ಎಂದು ವಿಕ್ರಂ ಗೌಡ ತಂಗಿ ಸುಗುಣ ಹೇಳುತ್ತಾರೆ.

ವಿಕ್ರಂ ಗೌಡ ಹತ್ಯೆಯಾದ ಬಳಿಕ ಪೋಸ್ಟ್ ಮಾರ್ಟಂ ನಡೆಸುವುದು ಪೊಲೀಸರ ಜವಾಬ್ದಾರಿ. ಪೀತಬೈಲಿನಿಂದ ಮಣಿಪಾಲ ಆಸ್ಪತ್ರೆಗೆ ಶವ ಸಾಗಿಸಲು ಪೊಲೀಸರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಗಿದ ಬಳಿಕವೂ ಶವ ನೀಡಲಿಲ್ಲ. ಅಂತ್ಯಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಪೂರೈಸಿದ ಬಳಿಕವೇ ಶವ ಹಸ್ತಾಂತರ ಮಾಡಿದರು.

"ಶವ ಹಸ್ತಾಂತರಕ್ಕೆ ಮಣಿಪಾಲದಿಂದ ನಾಡ್ಪಾಲು ಗ್ರಾಮಕ್ಕೆ ಬಂದ ಆ್ಯಂಬುಲೆನ್ಸ್ ಬಿಲ್ 8,000 ರೂ. ಆಗಿತ್ತು. 10 ಸಾವಿರ ರೂ.ಗೆ ಡಿಮ್ಯಾಂಡ್ ಇಡಲಾಗಿತ್ತು. ಶವ ಮಲಗಿರುವಾಗ ಹಣಕ್ಕಾಗಿ ಚೌಕಾಸಿ ನಡೆಸಿದರು. ಪೊಲೀಸರು ಎನ್ ಕೌಂಟರ್ ಸ್ಥಳದಿಂದ ಪೋಸ್ಟ್ ಮಾರ್ಟಂಗೆಂದು ಹೆಣ ಸಾಗಿಸಿದ ಆ್ಯಂಬುಲೆನ್ಸ್ ಬಾಡಿಗೆಯನ್ನೂ ನಮ್ಮಿಂದಲೇ ಪಡೆದುಕೊಂಡರು" ಎಂದು ವಿಕ್ರಂ ಗೌಡ ಕುಟುಂಬ ಬೇಸರ ವ್ಯಕ್ತಪಡಿಸಿತು.

ವಿಕ್ರಂ ಗೌಡ ಮೊದಲೇ ಅರೆಸ್ಟ್ ಆಗಿದ್ದರೆ ?

'ಎನ್ ಕೌಂಟರ್ ಗೂ ಹತ್ತು ದಿನ ಮೊದಲೇ ಕೊಪ್ಪ, ಶೃಂಗೇರಿ, ಬೆಳ್ತಂಗಡಿ, ಕಬ್ಬಿನಾಲೆ, ಹೆಬ್ರಿ ಪ್ರದೇಶದಲ್ಲಿ ಕೂಂಬಿಂಗ್ ನಡೆಯುತ್ತಿತ್ತು. ಧರ್ಮಸ್ಥಳ, ಕೊಪ್ಪ, ಶೃಂಗೇರಿಯಲ್ಲಿ ಇಬ್ಬರನ್ನೋ, ಮೂವರನ್ನೋ ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ವಿಕ್ರಂ ಗೌಡ ಕೂಡಾ ಅರೆಸ್ಟ್ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ದಿಡೀರಣೆ ಈ ಎನ್ ಕೌಂಟರ್ ನಡೆಯಿತು' ಎನ್ನುತ್ತಾರೆ ಕೂಡ್ಲುವಿನ ಮಲೆಕುಡಿಯರು.

"ನಕ್ಸಲ್ ನಾಯಕಿ ಮಂಡಗಾರು ಲತಾ ಪತ್ರವೊಂದನ್ನು ಕೊಟ್ಟಿದ್ದರಂತೆ. ಆ ಪತ್ರವನ್ನು ತಲುಪಿಸಲು ಹೊರಟ ನಾಲ್ಕು ಜನರನ್ನು ಅರೆಸ್ಟ್ ಮಾಡಿದ್ದರಂತೆ. ನಾಲ್ಕು ಜನರ ಪೈಕಿ ಇಬ್ಬರನ್ನು ಬಿಟ್ಟಿದ್ದಾರಂತೆ. ಇನ್ನಿಬ್ಬರು ಎಲ್ಲಿದ್ದಾರೆ ಅಂತ ಗೊತ್ತಿಲ್ಲ. ವಿಕ್ರಂ ಗೌಡ ಕೂಡಾ ಇದೇ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದಾರೆ ಎಂಬ ವದಂತಿ ಎನ್ ಕೌಂಟರ್ ಗೂ ಮೊದಲು ನಮ್ಮೂರಿನಲ್ಲಿ ಹಬ್ಬಿತ್ತು. ವಿಕ್ರಂ ಗೌಡ ಅರೆಸ್ಟ್ ಆಗಿದ್ದು ನಿಜವೋ ಸುಳ್ಳೋ ಗೊತ್ತಿಲ್ಲ. ಅಂತದ್ದೊಂದು ಸುದ್ದಿ ಹಬ್ಬಿದ್ದಂತೂ ನಿಜ" ಎಂದು ಅಜ್ಜೊಳ್ಳಿ ಶೇಖರ್ ಹೇಳುತ್ತಾರೆ.

"ಇಬ್ಬರನ್ನು ಅರೆಸ್ಟ್ ಮಾಡಿದ ಬಳಿಕ ವಿಕ್ರಂ ಗೌಡರನ್ನು ಅರೆಸ್ಟ್ ಮಾಡಿಸಿರುವ ಸಾಧ್ಯತೆ ಇದೆ. ಬಂಧಿತರ ಮಾಹಿತಿ ಆಧಾರದಲ್ಲೇ ವಿಕ್ರಂ ರನ್ನು ಬಂಧನ ಮಾಡಿರುವ ಸಾಧ್ಯತೆ ಇದೆ. ನಕ್ಸಲ್ ಮತ್ತು ಪೊಲೀಸ್ ಮುಖಾಮುಖಿ ಘಟನೆಯನ್ನು ಸೃಷ್ಟಿಸಿಕೊಳ್ಳಲು ಬಂಧಿತ ಇಬ್ಬರನ್ನು ಬಿಡುಗಡೆಗೊಳಿಸಲಾಯಿತು. ಇಲ್ಲದೇ ಇದ್ದರೆ ಮುಖಾಮುಖಿ ಕತೆ ಹೆಣೆಯಲು ಆಗಲ್ಲ" ಎಂಬ ಚರ್ಚೆ ಕೂಡ್ಲು ಪರಿಸರದಲ್ಲಿದೆ.

ವಿಕ್ರಂ ಗೌಡ ದಿಢೀರನೇ ಪೀತಬೈಲ್ ಪರಿಸರಕ್ಕೆ ಯಾಕೆ ಬಂದರು?. ಹದಿನೈದು ವರ್ಷಗಳಿಂದ ಈ ಪರಿಸರದಲ್ಲಿ ನಕ್ಸಲರ ಚಲನವಲನ ಇಲ್ಲ. ಅವರು ಜೀವಂತವಾಗಿ ಕಾಣಿಸಿಕೊಂಡು ಹದಿನೈದು ಇಪ್ಪತ್ತು ವರ್ಷವಾಯಿತು ಎಂದು ಮಲೆಕುಡಿಯರು ಪ್ರಶ್ನಿಸುತ್ತಾರೆ.

ಪೊಲೀಸರ ದೂರು ಮತ್ತು ವಾಸ್ತವ

ಎಎನ್ ಎಫ್ ಡಿವೈಎಸ್ಪಿ ರಾಘವೇಂದ್ರ ನಾಯಕ್ ಅವರು ಹೆಬ್ರಿ ಪೊಲೀಸರಿಗೆ ನೀಡಿರುವ ದೂರಿಗೂ ಘಟನಾ ಸ್ಥಳದ ವಾಸ್ತವ ಸ್ಥಿತಿಗೂ ಅಜಗಜಾ ಅಂತರವಿದೆ.

"ನಾಡ್ಪಾಲು ಗ್ರಾಮದ ಪೀತಬೈಲು ಪ್ರದೇಶಕ್ಕೆ ಸಂಜೆ 5 ಗಂಟೆಗೆ ಮಾವೋವಾದಿಗಳು ಭೇಟಿ ನೀಡುವ ನಿರೀಕ್ಷೆಯಿದೆ ಎಂಬ ಸುಳಿವು ನಮಗೆ ಸಿಕ್ಕಿತು. ಅದರಂತೆ ನಾವು ಅರಣ್ಯ ಪ್ರದೇಶದಲ್ಲಿ ಹೊಂಚು ದಾಳಿಗೆ ಕಾಯುತ್ತಿದ್ದೆವು. ಸಂಜೆ 6ರ ಸುಮಾರಿಗೆ ವಿಕ್ರಂ ಗೌಡ ಮತ್ತು ಮೂವರು ಬಂದೂಕುಗಳೊಂದಿಗೆ ಆ ಪ್ರದೇಶಕ್ಕೆ ಬಂದರು. ಅವರು ಮಾವೋವಾದಿಗಳು ಎಂದು ಅರಿತುಕೊಂಡು "ನಾವು ಪೊಲೀಸ್ ಅಧಿಕಾರಿಗಳು "ಶರಣಾಗಿ" ಎಂದು ಜೋರಾಗಿ ಹೇಳಿದೆವು. ಆದರೆ ಅವರು ಮಾವೋವಾದಿ ಝಿಂದಾಬಾದ್ ಎಂದು ಘೋಷಣೆ ಕೂಗುತ್ತಾ ನಮ್ಮ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ವಿಕ್ರಂ ಗೌಡ ಮತ್ತಿತರರು ನಮ್ಮ ಮೇಲೆ ಗುಂಡು ಹಾರಿಸುತ್ತಲೇ ಇದ್ದರು. ಹಾಗಾಗಿ ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸಿದೆವು. ವಿಕ್ರಮ್ ಗೌಡ ಅವರಿಗೆ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಇತರರು ಗುಂಡು ಹಾರಿಸುವುದನ್ನು ಮುಂದುವರಿಸಿದರು ಮತ್ತು ಅರಣ್ಯದಲ್ಲಿ ತಪ್ಪಿಸಿಕೊಂಡರು. ವಿಕ್ರಮ್ ಗೌಡ ಅವರ ದೇಹದ ಬಳಿ 9 ಎಂಎಂ ಕಾರ್ಬೈನ್ ಅನ್ನು ವಶಡಿಸಿಕೊಳ್ಳಲಾಯಿತು ಎಂದು ಡಿವೈಎಸ್ಪಿ ರಾಘವೇಂದ್ರ ನಾಯಕ್ ಹೇಳುತ್ತಾರೆ.

ವಿಕ್ರಂ ಗೌಡಗೆ ಗುಂಡು ಹಾರಿಸಿದ ರಾಘವೇಂದ್ರ ನಾಯಕ್ ಬಳಿ ಎಆರ್ ರೈಫಲ್ ಇತ್ತು. ವಿಕ್ರಂ ಗೌಡ ಕಡೆಗೆ ರಾಘವೇಂದ್ರ ಅವರು ಎಆರ್ ರೈಫಲ್ ನಿಂದ ಶೂಟ್ ಮಾಡುತ್ತಾರೆ. ರಾಘವೇಂದ್ರ ಅವರ ಸಿಬ್ಬಂದಿ ಬಳಿ ಎಕೆ 47 ಮತ್ತು ಎಕ್ಸಾಲಿಬರ್ ರೈಫಲ್ಸ್ ಹೊಂದಿದ್ದರು. ಈ ನಾಲ್ಕು ರೀತಿಯ 15ಕ್ಕೂ ಹೆಚ್ಚು ಅತ್ಯಾಧುನಿಕ ರೈಫಲ್ಸ್ ಗಳು ಏಕಕಾಲದಲ್ಲಿ ದಾಳಿ- ಪ್ರತಿದಾಳಿ ಮಾಡಬೇಕಾದರೆ ಆ ಮನೆಯ ಗೋಡೆ, ತೋಟ, ಪೊದೆಗಳು ಸಂಪೂರ್ಣ ಛಿದ್ರವಾಗಬೇಕಿತ್ತು. ಆದರೆ ಅಂತಹ ಯಾವುದೇ ಪರಿಸ್ಥಿತಿ ಅಲ್ಲಿ ಕಾಣುವುದಿಲ್ಲ.

ಆದಿವಾಸಿ ನಾಯಕ ವಿಕ್ರಂ ಗೌಡರ ಸಾವು ಪೊಲೀಸ್ ಇಲಾಖೆ ಮತ್ತು ಬಲಪಂಥೀಯರಿಗೆ ಸಂಭ್ರಮ ತಂದಿರಬಹುದು. ಆದರೆ ಕಾಡಿನ ಸಾವಿರಾರು ಆದಿವಾಸಿಗಳಿಗೆ ಇದು ಆತಂಕ ಮೂಡಿಸಿದೆ. ಆದಿವಾಸಿಗಳಿಗೂ ನಕ್ಸಲರಿಗೂ ಸಂಬಂಧ ಇದೆ ಎಂದು ಬಿಂಬಿಸುವ ಮೂಲಕ ಆದಿವಾಸಿಗಳ ಬದುಕಿನ ಪ್ರಶ್ನೆಯನ್ನು ಹೊಸಕಿ ಹಾಕುವ ವ್ಯವಸ್ಥಿತ ಹುನ್ನಾರ ಎನ್ ಕೌಂಟರ್ ಮೂಲಕ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ನವೀನ್‌ ಸೂರಿಂಜೆ

contributor

Similar News