ಉಣ್ಣೆಯಿಂದ ತಯಾರಿಸಿದ ಕಲಾಕೃತಿಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ
ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಡೋಲಿ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಹಿಳೆಯರು ಮತ್ತು ಇತರ ಉಣ್ಣೆ ಸಹಕಾರ ಸಂಘಗಳ ಮಹಿಳೆಯರು ಕೈಯಲ್ಲಿ ಸಿದ್ಧಪಡಿಸಿರುವ ಉಣ್ಣೆಯ ಕಲಾಕೃತಿಗಳನ್ನು ವಿದೇಶಗಳಿಗೆ ರವಾನಿಸಲಾಗುತ್ತಿದ್ದು, ವಿಶಿಷ್ಟ ಕಲಾಕೃತಿಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯುಂಟಾಗಿದೆ.
ಸುಮಾರು 15ರಿಂದ 20 ವರ್ಷಗಳಿಂದ ಉಣ್ಣೆ ಕಲಾಕೃತಿ ಮಾಡುವಲ್ಲಿ ನಿರತರಾಗಿರುವ ಮಹಿಳೆಯರ ಗುಂಪು ಹಲವು ಮಾದರಿಯಲ್ಲಿ ಉಣ್ಣೆಯ ಕಲಾಕೃತಿಗಳನ್ನು ರಚಿಸುವ ಮೂಲಕ ನೋಡುಗರನ್ನು ಆಕರ್ಷಿಸುತ್ತದೆ.
ಕಂಬಳಿ, ಹಾಸಿಗೆ, ಹೊದಿಕೆ, ಮ್ಯಾಟ್, ಬ್ಯಾಗ್, ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳು, ಅಲಂಕಾರಿಕ ವಸ್ತುಗಳು ದೊರೆಯುತ್ತವೆ. ಉಣ್ಣೆಯ ವಸ್ತುಗಳು ಹೆಚ್ಚು ಬೆಲೆಯುಳ್ಳವಾಗಿದ್ದರಿಂದ ಹಳ್ಳಿಗಳಲ್ಲಿ ಬೇಡಿಕೆ ಕಡಿಮೆ ಇದೆ. ಆದರೆ, ವಿದೇಶಗಳಲ್ಲಿ ರಾಜ್ಯದ ಉಣ್ಣೆಯ ವಸ್ತುಗಳು ಮತ್ತು ಕಲಾಕೃತಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುವುದು ಕಲಾಕೃತಿ ವಿನ್ಯಾಸಗಾರ ಮಹಿಳೆಯರ ಅಭಿಪ್ರಾಯವಾಗಿದೆ.
ನಮ್ಮ ಮಹಿಳೆಯರು ಮಾಡಿರುವ ಉಣ್ಣೆ ವಸ್ತುಗಳು ಜಗತ್ತಿನಾದ್ಯಂತ ರವಾನಿಸಲಾಗುತ್ತಿದೆ. ನಮಗೆ ಯಾವುದೇ ರೀತಿಯ ಮಾರುಕಟ್ಟೆ ಸಮಸ್ಯೆ ಇಲ್ಲ. ದಕ್ಷಿಣ ಭಾರತದಲ್ಲಿ ಹಲವು ಪ್ರಕಾರದ ಕುರಿಗಳು ಇವೆ. ಆದರೆ, ಎಲ್ಲ ಕುರಿಗಳಿಗೂ ಉಣ್ಣೆ ಇರುವುದಿಲ್ಲ. ದಖ್ಖನಿ ಮತ್ತು ಬಳ್ಳಾರಿ ಕುರಿಗಳಿಗೆ ಮಾತ್ರ ಉಣ್ಣೆ ಇರುತ್ತದೆ. ಉಣ್ಣೆ ಕುರಿಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಬಣ್ಣಗಳ ವಸ್ತುಗಳನ್ನು ಮಾಡಬಹುದು. ನಮ್ಮ ರಾಜ್ಯದಲ್ಲಿರುವ ವಿಶೇಷತೆಯನ್ನು ಜಗತ್ತಿಗೆ ಪರಿಚಯಿಸಬೇಕು ಎನ್ನುತ್ತಾರೆ ಹಿರಿಯ ವಿನ್ಯಾಸಗಾರ ಗೋಪಿಕೃಷ್ಣ.
ಬೇರೆ ಕೈಗಾರಿಕೆಗಳಲ್ಲಿ ಎಲ್ಲರೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಆದರೆ, ನಾವು ಎಲ್ಲರಿಗೂ ತರಬೇತಿ ನೀಡಿ ಕಲಾಕಾರರನ್ನಾಗಿ ಮಾಡುತ್ತೇವೆ. ಅದೇ ನಮ್ಮ ಉದ್ದೇಶವಾಗಿದೆ. ಕಲಾಕಾರರನ್ನು ಸಮಾಜ ಗುರುತಿಸುತ್ತದೆ. ಆದರೆ, ಕಾರ್ಮಿಕರನ್ನು ಗುರುತಿಸುವುದಿಲ್ಲ. ನಮ್ಮ ವಸ್ತುಗಳನ್ನು ಹುಡುಕಿಕೊಂಡು ಬರುತ್ತಾರೆ. ಸಾವಿರಾರು ಜನ ಮಹಿಳೆಯರಿಗೆ ತರಬೇತಿ ನೀಡಿದ್ದೇವೆ. ಈಗ ಕೆಲವರು ಅವರೇ ಸ್ವತಂತ್ರವಾಗಿ ಉಣ್ಣೆ ವಸ್ತುಗಳನ್ನು ಮಾಡುತ್ತಿದ್ದಾರೆ. ಉಣ್ಣೆ ವಸ್ತುಗಳಿಗೆ ಅದರ ವಿನ್ಯಾಸದ ಆಧಾರದಲ್ಲಿ ಬೆಲೆ ನಿಗದಿ ಮಾಡುತ್ತೇವೆ. ಸುಮಾರು 1 ಲಕ್ಷ ರೂ.ವರೆಗಿನ ವಸ್ತುಗಳು ಸಿಗುತ್ತವೆ.
-ಗೋಪಿಕೃಷ್ಣ, ಹಿರಿಯ ವಿನ್ಯಾಸಗಾರ
ನಗರ ಪ್ರದೇಶಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸುತ್ತೇವೆ. ನಮ್ಮ ಹಳ್ಳಿಯಲ್ಲಿಯೇ ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡು ಬೇರೆ ಕೆಲಸದ ಜತೆಗೆ ಉಣ್ಣೆ ವಸ್ತುಗಳನ್ನು ಸಿದ್ಧಪಡಿಸುತ್ತೇವೆ. ಉಣ್ಣೆಯ ವಸ್ತುಗಳಿಂದ ಸ್ವಲ್ಪಮಟ್ಟಿಗೆ ಲಾಭ ಬರುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರೇ ಸೇರಿಕೊಂಡು ಮಳಿಗೆ ಮಾಡುವ ಯೋಚನೆಯಿದೆ.
-ಪ್ರಭಾವತಿ, ಉಣ್ಣೆ ವಸ್ತು ವಿನ್ಯಾಸಗಾರ್ತಿ