ರಾಹುಲ್ ಕೆಲವು ದಿನ ವಿದೇಶಕ್ಕೆ

Update: 2016-06-20 18:06 GMT

 ಹೊಸದಿಲ್ಲಿ, ಜೂ.20: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲವು ದಿನಗಳ ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆಂದು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸೋಮವಾರ ಪ್ರಕಟಿಸಲಾಗಿದೆ. ಅವರು ನಿನ್ನೆ 46ರ ಹರೆಯಕ್ಕೆ ಕಾಲಿಟ್ಟಿದ್ದಾರೆ.

ಹುಟ್ಟು ಹಬ್ಬದ ದಿನ ತನ್ನನ್ನು ಭೇಟಿಯಾಗಿ ಶುಭಾಶಯ ಕೋರಿದ್ದ ಎಲ್ಲರಿಗೂ ರಾಹುಲ್ ಧನ್ಯವಾದ ಸಲ್ಲಿಸಿದ್ದಾರೆ. ಅವರು ಸೋಮವಾರ ಬೆಳಗ್ಗೆ ತಡವಾಗಿ ವಿದೇಶಕ್ಕೆ ಪ್ರಯಾಣಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಕಾಂಗ್ರೆಸ್ ಸತತ ಚುನಾವಣಾ ಸೋಲು ಅನುಭವಿಸಿದ ಬಳಿಕ ರಾಹುಲ್ ಕೆಲವು ವಾರಗಳ ಕಾಲ ಅಜ್ಞಾತವಾಸದಲ್ಲಿದ್ದರು. ಸುಮಾರು 2 ತಿಂಗಳ ಬಳಿಕ, 2015ರ ಎ.16ರಂದು ಮರಳಿದ ಬಳಿಕ ಅವರು, ರೈತರು, ಭೂವಿಹೀನ ಕಾರ್ಮಿಕರು, ಮಧ್ಯಮ ದರ್ಜೆಯ ಮನೆ ಖರೀದಿದಾರರು, ಮೀನುಗಾರರು ಹಾಗೂ ದಲಿತ ಮಾಜಿ ಸೈನಿಕರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದರು.
ಈ ಸಲವೂ ಪರಿಸ್ಥಿತಿ ಬಹುತೇಕ ಅದೇ ರೀತಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಈಗದು ಕೇವಲ 6 ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿದ್ದು, ಕರ್ನಾಟಕ ಅವುಗಳಲ್ಲಿ ದೊಡ್ಡ ರಾಜ್ಯವಾಗಿದೆ.
ಇತ್ತೀಚೆಗೆ ರಾಹುಲ್‌ರನ್ನು ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಪ್ರತಿಷ್ಠಾಪಿಸಲಾಗುವುದೆಂಬ ಗಾಳಿ ಸುದ್ದಿಗೆ ಮತ್ತೆ ಚಾಲನೆ ದೊರಕಿತ್ತು. ಕಾಂಗ್ರೆಸ್ ಸಂಘಟನೆ ತುರ್ತು ಪುನಾರಚನೆಯಾಗಬೇಕೆಂದು ಹಲವು ನಾಯಕರು ಬಯಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News