‘ಅತ್ಯಾಚಾರ’ ಹೇಳಿಕೆ: ಕ್ಷಮೆ ಕೋರಲು ಸಲ್ಮಾನ್‌ಗೆ ಏಳು ದಿನಗಳ ಗಡುವು
Update: 2016-06-21 18:33 GMT
ಹೊಸದಿಲ್ಲಿ,ಜೂ.21: ಸುದ್ದಿ ಜಾಲತಾಣವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಮುಂಬರುವ ಚಿತ್ರ ’ಸುಲ್ತಾನ್’ನಲ್ಲಿ ಕುಸ್ತಿಪಟುವಿನ ಪಾತ್ರಕ್ಕಾಗಿ ತರಬೇತಿಯಿಂದಾಗಿ ಆಗುತ್ತಿದ್ದ ಸುಸ್ತಿನಿಂದ ತಾನು ಅತ್ಯಾಚಾರಕ್ಕೊಳಪಟ್ಟ ಮಹಿಳೆಯೆಂಬಂತೆ ತನಗೆ ಭಾಸವಾಗುತ್ತಿತ್ತು ಎಂಬ ತನ್ನ ಹೇಳಿಕೆಯಿಂದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಹೇಳಿಕೆಗಾಗಿ ಏಳು ದಿನಗಳಲ್ಲಿ ಕ್ಷಮೆ ಯಾಚಿಸುವಂತೆ ಖಾನ್‌ಗೆ ತಾಕೀತು ಮಾಡಿರುವ ರಾಷ್ಟ್ರೀಯ ಮಹಿಳಾ ಆಯೋಗವು, ಇಲ್ಲದಿದ್ದರೆ ತನ್ನೆದುರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದು ಅತ್ಯಂತ ನೋವಿನ ವಿಷಯವಾಗಿದೆ. ಅವರು ಸಲ್ಮಾನ್ ಖಾನ್ ಎಂಬ ಮಾತ್ರಕ್ಕೆ ಇಂತಹ ಹೇಳಿಕೆ ನೀಡಬೇಕಿರಲಿಲ್ಲ ಎಂದು ಆಯೋಗದ ಅಧ್ಯಕ್ಷೆ ಲತಾ ಕುಮಾರಮಂಗಲಂ ಅವರು ಕಿಡಿ ಕಾರಿದ್ದಾರೆ.