ಯೋಗ ತರಬೇತಿ ಕೇಂದ್ರಗಳಿಗೆ ಇನ್ನು ಮುಂದೆ ಆಯುಷ್ ಸಚಿವಾಲಯದಿಂದ ಪ್ರಮಾಣೀಕರಣ

Update: 2016-06-26 15:48 GMT

ಹೊಸದಿಲ್ಲಿ,ಜೂ.26: ಯೋಗ ಶಿಕ್ಷಣದಲ್ಲಿ ಗುಣಮಟ್ಟ ನಿಯಂತ್ರಣವನ್ನು ಕಾಯ್ದುಕೊಳ್ಳಲು ಮತ್ತು ಮೂಲ ಮಾನದಂಡಗಳನ್ನೂ ಪೂರೈಸದ ಯೋಗ ಕೇಂದ್ರಗಳು ನಾಯಿಕೊಡೆಗಳಂತೆ ತಲೆಯೆತ್ತುವುದನ್ನು ತಡೆಯಲು ಯೋಗ ತರಬೇತಿ ಸಂಸ್ಥೆಗಳ ಪ್ರಮಾಣೀಕರಣಕ್ಕೆ ಆಯುಷ್ ಸಚಿವಾಲಯವು ನಿರ್ಧರಿಸಿದೆ.
ಈ ವರ್ಷದ ಅಂತ್ಯದೊಳಗೆ ಪ್ರಮಾಣೀಕರಣಕ್ಕೆ ಅರ್ಜಿಗಳನ್ನು ಸಲ್ಲಿಸುವಂತೆ ದೇಶಾದ್ಯಂತ ಯೋಗ ತರಬೇತಿ ಸಂಸ್ಥೆಗಳಿಗೆ ಸಚಿವಾಲಯವು ಸೂಚಿಸಿದೆ.
ಈ ಯೋಜನೆಯು ಯೋಗ ಶಿಕ್ಷಣವನ್ನು ನೀಡುವ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಅಧಿಕೃತತೆಯನ್ನು ಖಚಿತಪಡಿಸುವ ವ್ಯವಸ್ಥೆಯನ್ನೊದಗಿಸುತ್ತದೆ ಎಂದು ಆಯುಷ್ ಸಚಿವ ಶ್ರೀಪಾದ ಯೆಸ್ಸೋ ನಾಯ್ಕೋ ಅವರು ತಿಳಿಸಿದರು.
ಈ ಸಂಬಂಧ ಸಚಿವಾಲಯವು ಶೀಘ್ರವೇ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಗಳಿವೆ ಎಂದು ಆಯುಷ್ ಇಲಾಖೆಯ ಕಾರ್ಯದರ್ಶಿ ಅಜಿತ ಎಂ.ಶರನ್ ತಿಳಿಸಿದರು.
ಯೋಜನೆಯು ಸ್ವಾಸ್ಥ ಕೇಂದ್ರಗಳು ಮತ್ತು ಯೋಗದಲ್ಲಿ ಡಿಪ್ಲೋಮಾ/ಪದವಿ ಕೋರ್ಸ್‌ಗಳನ್ನು ನೀಡುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಮಾನ್ಯತೆಯನ್ನು ಪಡೆಯ ಬಯಸುವ ಸಂಸ್ಥೆಗಳು ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾಕ್ಕೆ ಆನ್‌ಲೈನ್‌ಮೂಲಕ ಅರ್ಜಿಯನ್ನು ಸಲ್ಲಿಸಬೇಕಿದೆ.
ಮೂಲ ಮಾನದಂಡಗಳನ್ನೂ ಪೂರೈಸದ ಯೋಗ ಕೇಂದ್ರಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಅಗತ್ಯವಾಗಿದೆ ಎಂದು ಹೇಳಿದ ಶರಣ್, ಹೃಷಿಕೇಶವೊಂದರಲ್ಲಿಯೇ 300 ಯೋಗ ಸಂಸ್ಥೆಗಳಿವೆ. ವಿದೇಶಿ ಪ್ರವಾಸಿಗಳು ತರಬೇತಿ ಪಡೆಯಲೆಂದು ಇಂತಹ ಸಂಸ್ಥೆಗಳಿಗೆ ಸೇರಿ ಭ್ರಮನಿರಸನಗೊಂಡಿರುವ ಉದಾಹರಣೆಗಳಿವೆ. ತಕರಾರು ಮತ್ತು ಪೊಲೀಸ್ ದೂರುಗಳು ದಾಖಲಾದ ನಿದರ್ಶನಗಳಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News