ಇನ್ಫೋಸಿಸ್ ಉದ್ಯೋಗಿ ಹತ್ಯೆಯ ತನಿಖೆ ಚೆನ್ನೈ ಪೊಲೀಸರ ಪಾಲಿಗೆ

Update: 2016-06-27 18:33 GMT

ಚೆನ್ನೈ,ಜೂ.27: ಮದ್ರಾಸ್ ಉಚ್ಚ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಇನ್ಫೋಸಿಸ್ ಉದ್ಯೋಗಿ ಎಸ್.ಸ್ವಾತಿ ಹತ್ಯೆ ಪ್ರಕರಣದ ತನಿಖೆಯನ್ನು ಸೋಮವಾರ ಚೆನ್ನೈ ಪೊಲೀಸರಿಗೆ ವರ್ಗಾಯಿಸಲಾಗಿದೆ. ಸ್ವಾತಿ ಹತ್ಯೆ ಪ್ರಕರಣದ ತನಿಖೆ ಕುರಿತಂತೆ ರೈಲ್ವೆ ಪೊಲೀಸರು ಮತ್ತು ಚೆನ್ನೈ ಪೊಲೀಸರ ನಡುವೆ ಸಮನ್ವಯತೆಯ ಕೊರತೆಯಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಸ್.ನಾಗಮುತ್ತು ಮತ್ತು ವಿ.ಭಾರತಿ ಅವರ ಪೀಠವು ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಷಣ್ಮುಗ ವೇಲಾಯುಧಂ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಕರೆಸಿ ಮಧ್ಯಾಹ್ನ ಮೂರು ಗಂಟೆಯೊಳಗೆ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವಂತೆ ತಾಕೀತು ಮಾಡಿತ್ತು. ಇದಕ್ಕೂ ಮುನ್ನ ಚೆನ್ನೈ ಪೊಲೀಸ್ ಆಯುಕ್ತರು ಕೊಲೆ ರೈಲ್ವೆ ನಿಲ್ದಾಣದಲ್ಲಿ ನಡೆದಿರುವುದರಿಂದ ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದು, ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿತ್ತು ಮತ್ತು ಇದು ಸತ್ಯವೇ ಎಂದು ವೇಲಾಯುಧಂ ಅವರನ್ನು ಪ್ರಶ್ನಿಸಿತ್ತು. ಜೂ.24ರಂದು ಬೆಳಗ್ಗೆ ಸ್ವಾತಿ(24) ಕೆಲಸಕ್ಕೆ ತೆರಳಲು ನುಂಗಂಬಾಕಂ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಯುವಕನೋರ್ವ ಕತ್ತಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News