ಉಮ್ರಾ ಯಾತ್ರಿಕರಿಗೆ ಸಮಸ್ಯೆ ತರುತ್ತಿರುವ ಸೆಲ್ಫಿ ಗೀಳು

Update: 2016-06-30 15:10 GMT

ಮಕ್ಕಾ, ಜೂ. 30  : ಕಾಬಾದ ತವಾಫ್ ಮಾಡುವ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳುವವರ ಉತ್ಸಾಹ ಇತರ ಯಾತ್ರಾರ್ಥಿಗಳಿಗೆ ತೊಂದರೆ ತಂದೊಡ್ಡುತ್ತಿರುವುದು ವರದಿಯಾಗಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುತ್ತಿರುವುದರ ನಡುವೆ ಈ ಸೆಲ್ಫಿ ಗೀಳು ಅಡೆತಡೆ ಉಂಟು ಮಾಡುತ್ತಿದೆ ಎಂದು ಯಾತ್ರಾರ್ಥಿಗಳು ದೂರಿದ್ದಾರೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿವೆ. 
" ಇದು ಹಿರಿಯರು ಹಾಗೂ ದೈಹಿಕ ವಿಕಲತೆ ಇರುವವರಿಗೆ ಹೆಚ್ಚು ತೊಂದರೆ ಉಂಟು ಮಾಡುತ್ತಿದೆ. ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದ್ದಕ್ಕಿದ್ದಂತೆ ನಮ್ಮ ಮುಂದೆ ನಡೆಯುತ್ತಿರುವವರು ನಿಂತು ಬಿಡುತ್ತಾರೆ. ನಾವು ಏನೋ ಸಮಸ್ಯೆಯಾಗಿದೆ , ಯಾರೋ ಬಿದ್ದಿರಬೇಕು ಎಂದು ಭಾವಿಸಿ ಆತಂಕ ಪಡುತ್ತೇವೆ. ಆದರೆ ಮತ್ತೆ ಗೊತ್ತಾಗುವುದು ಏನೆಂದರೆ ಅವರು ಸೆಲ್ಫಿ ತೆಗೆದುಕೊಳ್ಳಲು ಅಲ್ಲಿ ನಿಂತಿರುತ್ತಾರೆ" ಎಂದು ಯಾತ್ರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ತವಾಫ್ ( ಕಾಬಾದ ಸುತ್ತ ಪ್ರದಕ್ಷಿಣೆ) ಮಾಡುವ ಹಾಗೂ ಸಈ ( ಸಫಾ ಹಾಗೂ ಮರ್ವಾ ನಡುವೆ ಬೆಟ್ಟಗಳ ನಡುವೆ ನಡೆಯುವುದು) ಸಂದರ್ಭಗಳಲ್ಲಿ ಫೋಟೋಗ್ರಫಿಯನ್ನು ನಿಷೇಧಿಸಬೇಕು ಎಂದು ಬಹಳಷ್ಟು ಮಂದಿ ಆಗ್ರಹಿಸಿದ್ದಾರೆ . 
ರಿಯಾದ್ ನ ನ್ಯಾಯಾಧೀಶ ನೈಫ್ ಅಲ್ ಹಂದ್ ಅವರು " ಜನರ ದೇವಭಕ್ತಿಯನ್ನು ವಿಚಲಿತಗೊಳಿಸುವ ಚಟುವಟಿಕೆಗಳನ್ನು ಕುರ್ ಆನ್ ನಿಷೇಧಿಸಿದೆ. ಫೋಟೋಗ್ರಫಿಗೂ ಇದು ಅನ್ವಯವಾಗುತ್ತದೆ " ಎಂದು ಹೇಳಿದ್ದಾರೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News