ನಿಮ್ಮಲ್ಲಿಗೂ ಬರಬಹುದು ಸಿಂಗಾಪುರದ ಮುಲಾಮು ಹಚ್ಚುವ ನರ್ಸ್

Update: 2016-07-04 04:10 GMT

ಚೆನ್ನೈ, ಜು.4: ಕಾಲು ನೋವಿಗೆ ರಾಮಬಾಣ ಎನಿಸುವ ಸಿಂಗಾಪುರದ ಒಂದು ಅದ್ಭುತ ಮುಲಾಮು ತನ್ನಲ್ಲಿದೆ ಎಂದು ಹೇಳಿಕೊಂಡು ಬಂದು ಮನೆ ದೋಚಲು ಯತ್ನಿಸಿದ ನರ್ಸ್ ಒಬ್ಬಳು ಇದೀಗ ಪೊಲೀಸ್ ಅತಿಥಿಯಾಗಿದ್ದಾಳೆ.

ನಮ್ಮಿಲ್ಲಿ ಚೆರಿಯ ಲಕ್ಷ್ಮಿ ಎಂಬ 35 ವರ್ಷದ ಮಹಿಳೆ ನರ್ಸ್ ಎಂದು ಹೇಳಿಕೊಂಡು ಪೊನ್ನಲೂರು ಪೆಟ್ಟಾಯಿಯ ಇಂದ್ರಾಣಿ (50) ಎಂಬವರನ್ನು ಬಂಬಿಸಿ, ಕಾಲುನೋವಿಗೆ ಚಿಕಿತ್ಸೆ ನೀಡಲು ಬಂದಿದ್ದಾಳೆ. ಶನಿವಾರ ರಾತ್ರಿ 8ರವೇಳೆಗೆ ಲಕ್ಷ್ಮಿ ನರ್ಸ್ ಎಂದು ನಂಬಿಸಿ ಇಂದ್ರಾಣಿ ಮನೆಯೊಳಕ್ಕೆ ಬಂದಿದ್ದಾಳೆ. ಸಿಂಗಾಪುರದಿಂದ ತಂದ ಒಂದು ಮುಲಾಮು ನಿಮ್ಮ ಕಾಲುನೋವನ್ನು ಗುಣಪಡಿಸುತ್ತದೆ ಎಂದು ನಂಬಿಸಿದ್ದಾಳೆ. ಬಳಿಕ ಇಂದ್ರಾಣಿಯನ್ನು ಮಲಗಲು ಹೇಳಿ, ಮುಲಾಮು ಹಚ್ಚುವ ಮುನ್ನ ಎಲ್ಲ ಚಿನ್ನದ ಒಡವೆಗಳನ್ನು ತೆಗೆದಿಡುವಂತೆ ಸೂಚಿಸಿದ್ದಾಳೆ. ಇಂದ್ರಾಣಿ ಅಂತೆಯೇ ಎಲ್ಲ ಒಡವೆಗಳನ್ನು ತೆಗೆದು ಒಂದು ಸೀರೆಯಲ್ಲಿ ಕಟ್ಟಿಕೊಂಡಿದ್ದಾರೆ. ಮುಲಾಮು ಹಚ್ಚಿದ ಬಳಿಕ ನಿರಾಳವಾಗಲು ಕೆಲ ಹೊತ್ತು ಕಣ್ಣುಮುಚ್ಚಿಕೊಳ್ಳುವಂತೆ ವಂಚಕಿ ಸೂಚಿಸಿದ್ದಾಳೆ. ಈ ವೇಳೆ ಚಿನ್ನವನ್ನು ಎಗರಿಸಿದ ಮಹಿಳೆ ಸೀರೆಯಲ್ಲಿ ಟೊಮೊಟೆ ಕಟ್ಟಿದ್ದಾಳೆ ಎಂದು ತನಿಖಾಧಿಕಾರಿ ಘಟನೆಯ ವಿವರ ನೀಡಿದರು.

ಈಕೆ ಮಲಗುವ ಕೋಣೆಗೂ ಹೋಗಿ ಆಲ್ಮೇರಾದಿಂದ 19 ಸಾವಿರ ರೂಪಾಯಿ ನಗದು ಕದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಎದ್ದ ಇಂದ್ರಾಣಿ ಅಲರಾಂ ಸದ್ದು ಮಾಡಿದರು. ನೆರೆಯವರು ಆಕೆಯ ನೆರವಿಗೆ ಬಂದು ಕಳ್ಳಿಯನ್ನು ಪೊಲೀಸರಿಗೆ ಹಿಡಿದುಕೊಟ್ಟರು. ಇಂಥದ್ದೇ ವಿಧಾನದಿಂದ ಹಲವು ಕಡೆ ಕಳ್ಳತನ ಮಾಡಿದ್ದಾಗಿ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News