ಮೋದಿ ಶಿಕ್ಷಣದ ಬಗ್ಗೆ ಆರ್ ಟಿ ಐ ಹಾಕಿದ ಗುಜರಾತ್ ನ ಪರಾಗ್ ಪಟೇಲ್ ಹಿಂದೆ ಬಿದ್ದ ಬೇಹು ಅಧಿಕಾರಿಗಳು

Update: 2016-07-05 07:01 GMT

ಪುಣೆ, ಜು.5 : ಗೃಹ ಸಚಿವಾಲಯದ ಅಣತಿಯಂತೆ ಬೇಹುಗಾರಿಕೆ ಇಲಾಖೆಯ ಅಧಿಕಾರಿಗಳು ತನ್ನ ಬೆನ್ನ ಹಿಂದೆ ಬಿದ್ದಿದ್ದಾರೆಂದು  ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಹಾಗೂ ವಿದೇಶ ಪ್ರವಾಸಗಳ ವೆಚ್ಚದ ಕುರಿತು ಹಲವಾರು ಆರ್ ಟಿ ಐ ಅರ್ಜಿಗಳನ್ನು ಸಲ್ಲಿಸಿರುವ ಅಹ್ಮದಾಬಾದ್ ಮೂಲದ ಆರ್ ಟಿ ಐ ಕಾರ್ಯಕರ್ತ ಪರಾಗ್ ಪಟೇಲ್ ಆರೋಪಿಸಿದ್ದಾರೆಂದು ಜನತಾ ಕಾ ರಿಪೋರ್ಟರ್ ವರದಿಯೊಂದು ತಿಳಿಸಿದೆ.

ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿಯೊಬ್ಬರು ಸೋಮವಾರ ಪಟೇಲ್ ಅವರನ್ನು ಸಂಪರ್ಕಿಸಿ ಅವರೊಂದಿಗೆ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ``ಬಾಬುರಾವ್ ಸಕಾರೊಜಿ ನನ್ನ ಮನೆಗೆ ಬಂದು ಸುಮಾರು 45 ನಿಮಿಷಗಳ ಕಾಲ ನನ್ನನ್ನು ಪ್ರಶ್ನಿಸಿದರು.  ನನ್ನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅವರಿಗೆ ಗೃಹ ಸಚಿವಾಲಯದಿಂದ ನಿರ್ದೇಶನ ಬಂದಿದೆಯೆಂದು ಅವರು ತಿಳಿಸಿದರು. ಏತಕ್ಕಾಗಿ ಎಂದು ನಾನು ಪ್ರಶ್ನಿಸಿದಾಗ, ಒಂದೋ ಮೋದಿ ಸರಕಾರ ನನಗೆ ಕೆಲ ಪ್ರಶಸ್ತಿಗಳನ್ನು ನೀಡ ಬಯಸಿದೆ ಅಥವಾ ನಾನು ಪ್ರಧಾನಿ ವಿರುದ್ಧ ಬಹಳಷ್ಟು ಆರ್ ಟಿ ಐ ಅರ್ಜಿಗಳನ್ನು ಸಲ್ಲಿಸುತ್ತಿದ್ದಿರಬಹುದು ಎಂದು ಅವರು ಹೇಳಿದರು,'' ಎಂದು ಪಟೇಲ್ ವಿವರಿಸಿದ್ದಾರೆ.
ಪಟೇಲ್ ಅವರು ಇಲ್ಲಿಯ ತನಕ 180 ಕ್ಕೂ ಹೆಚ್ಚು ಆರ್ ಟಿ ಐ ಅರ್ಜಿಗಳನ್ನು ಸಲ್ಲಿಸಿದ್ದು  ಇವುಗಳಲ್ಲಿ ಹೆಚ್ಚಿನವುಗಳಿಂದ ಕೇಂದ್ರ ಸರಕಾರಕ್ಕೆ ಮುಜುಗರವುಂಟಾಗಿದೆಯೆಂದು ಹೇಳಲಾಗುತ್ತಿದೆ. ಮೋದಿ ಕೈಯ್ಯಲ್ಲೊಂದು ಹಿಡಿಸೂಡಿ ಹಿಡಿದು ನಿಂತ ಫೊಟೋ ವಿಚಾರವಾಗಿ ಅವರ ಆರ್ ಟಿ ಐ ಅರ್ಜಿಯಿಂದ ಆ ಫೊಟೋ ನಕಲಿ ಎಂದು ತಿಳಿದು ಬಂದಿರುವುದು ಜನವರಿಯಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅವರ ಆರ್ ಟಿ ಐ ಅರ್ಜಿಯನ್ವಯ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತ್ ವಿಶ್ವವಿದ್ಯಾನಿಲಯ ಮೋದಿಯವರ ಎಂಎ ಪದವಿ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿತ್ತು. ಮೋದಿಯವರ ಪ್ರಥಮ ಅಮೇರಿಕಾ ಭೇಟಿ ಸಂಬಂಧ ಕೂಡ ಅವರು ಆರ್ ಟಿ ಐ ವಿವರಗಳನ್ನು 2014 ರಲ್ಲಿ ಕೋರಿದ್ದರೆ ಮೇ 2015 ರಂದು ಅವರಿಗೆ ದೊರೆತ ಉತ್ತರದಲ್ಲಿ ತಮ್ಮ ಪ್ರಥಮ ಅಮೇರಿಕಾ ಭೇಟಿ ಸಂದರ್ಭ ಮೋದಿ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿರದಿದ್ದರೂ ರೂ 9 ಕೋಟಿ ವೆಚ್ಚವಾಗಿತ್ತು ಎಂದು ತಿಳಿದು ಬಂದಿತ್ತು.

``ನನ್ನನ್ನು ಮೊದಲು ಪುಣೆಯ ಸ್ಥಳೀಯ ಠಾಣೆಯಿಂದ ಅಶ್ವಿನಿ ಎಂಬವರು ಸಂಪರ್ಕಿಸಿ ಹಿರಿಯ ಅಧಿಕಾರಿಗಳು ನನ್ನನ್ನು ನನ್ನ ಮನೆಯಲ್ಲಿ ಭೇಟಿಯಾಗುವರೆಂದು ತಿಳಿಸಿದ್ದರು. ಅವರಿಗೆ ನನ್ನ ಹೆಸರು ಹಾಗೂ ವಿಳಾಸ ಗೊತ್ತಿರುವುದು ಆತಂಕಕಾರಿ,'' ಎಂದು ಪುಣೆಯ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಹಾಗೂ ಆರ್ ಟಿ ಐ ಅರ್ಜಿ ಸಲ್ಲಿಸುವಾಗ ಹೆಸರು ಬಹಿರಂಗಪಡಿಸದಿರಲು ಯಾವತ್ತೂ ವಿನಂತಿಸುವ ಪಟೇಲ್ ಹೇಳಿದರು. ಕೇಂದ್ರ ಸರಕಾರ ತನ್ನ ವೈಯಕ್ತಿಕ ಮಾಹಿತಿಯನ್ನು ಬೇಹುಗಾರಿಕಾ ಇಲಾಖೆಗೆ ನೀಡಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News