ಸೇನೆಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Update: 2016-07-08 14:26 GMT

ಹೊಸದಿಲ್ಲಿ, ಜು.8: ಶಾಂತಿ ಕದಡಿರುವ ಪ್ರದೇಶದಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ಸೇನೆ ಹಾಗೂ ಅರೆ ಸೇನಾ ಪಡೆಗಳು ‘ಅತಿಯಾದ ಹಾಗೂ ಪ್ರತಿಕಾರ ಬಲವನ್ನು’ ಉಪಯೋಗಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.
ಸೇನೆಗೆ ವ್ಯಾಪಕವಾದ ತುರ್ತು ಅಧಿಕಾರ ನೀಡುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅಥವಾ ಅಫ್ಸ್ಪಾದ ವಿರುದ್ಧ ಹಲವು ವರ್ಷಗಳಿಂದ ಪ್ರತಿಭಟನೆಗೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ನಡೆದಿರುವ 1,500ಕ್ಕೂ ಹೆಚ್ಚು ನಕಲಿ ಎನ್‌ಕೌಂಟರ್‌ಗಳ ಕುರಿತಾದ ವಿವರವನ್ನೂ ಅದು ಕೇಳಿದೆ.
ಕಳೆದೆರಡು ದಶಕಗಳಿಗೂ ಹೆಚ್ಚು ಕಾಲ ನಡೆದಿವೆಯೆಂದು ಆರೋಪಿಸಲಾಗಿರುವ ಎನ್‌ಕೌಂಟರ್‌ಗಳ ಕುರಿತು ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇಂಫಾಲ ಮೂಲದ ಒಂದು ಮಾನವ ಹಕ್ಕು ಸಂಘಟನೆ ಹಾಗೂ ಬಲಿಯಾದವರ ಸಂಬಂಧಿಕರು ಕೆಲವು ವರ್ಷಗಳ ಹಿಂದೆ ಈ ಎನ್‌ಕೌಂಟರ್‌ಗಳ ವಿರುದ್ಧ ದೂರೊಂದನ್ನು ದಾಖಲಿಸಿದ್ದರು.
ಸುಪ್ರೀಂ ಕೋರ್ಟ್ ಈ ಹಿಂದೆ, ಸುಮಾರು 60ರಷ್ಟು ಯಾದೃಚ್ಛಿಕವಾಗಿ ಆರಿಸಲಾಗುವ ಪ್ರಕರಣಗಳ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ, ಸಂತೋಷ್ ಹೆಗ್ಡೆಯವರ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. ಎಲ್ಲ ಎನ್‌ಕೌಂಟರ್‌ಗಳೂ ನಕಲಿ ಎಂದು ಕಂಡು ಬಂದಿದ್ದವಾದರೂ, ಮಣಿಪುರದ ಭದ್ರತಾ ಪಡೆಗಳು ಅದರ ಬಗ್ಗೆ ತಕರಾರು ಎತ್ತಿದ್ದವು.
14 ವರ್ಷಗಳಿಗೂ ಹೆಚ್ಚುಕಾಲ ಉಪವಾಸ ಮುಷ್ಕರ ನಡೆಸಿದ್ದ ಕಾರ್ಯಕರ್ತೆ ಇರೋಮ್ ಶರ್ಮಿಳಾ, ಮಣಿಪುರದಲ್ಲಿ ಸಶಸ್ತ್ರ ಪಡೆಗಳ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಪ್ರತೀಕವಾದರು.
ಅಶಾಂತ ಪ್ರದೇಶಗಳಲ್ಲಿ ಅಥವಾ ಪ್ರತ್ಯೇಕತಾವಾದಿಗಳು ಹಾಗೂ ಬಂಡುಕೋರ ಪೀಡಿತ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುವ ಸೈನಿಕರಿಗೆ ಅಫ್ಸ್ಪಾ ಕಾನೂನು ರಕ್ಷಣೆ ಒದಗಿಸುತ್ತದೆ. ಸೈನಿಕರಿಗೆ ವಾರಂಟ್ ಇಲ್ಲದೆಯೇ ಬಂಧನ ನಡೆಸುವ ಹಾಗೂ ಯಾವುದೇ ಸ್ಥಳಕ್ಕೆ ದಾಳಿ ನಡೆಸುವ ಸ್ವಾತಂತ್ರವನ್ನು ಅದು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News