ವಿದ್ವಾಂಸನ ತೇಜೋವಧೆ ನಡೆಸುವುದು ನಾಗರಿಕ ಸಮಾಜಕ್ಕೆ ಅವಮಾನ

Update: 2016-07-09 07:16 GMT

ಈ ಕೆಳಗೆ ನಾನು ಪ್ರಕಟಿಸಿರುವುದು ಈ ದಿನ ನನಗೆ ಮಿತ್ರ ಯು. ಹೆಚ್. ಉಮರ್ ರಿಂದ ಬಂದಿರುವಂತಹ ಒಂದು ವಾಟ್ಸಪ್ ಸಂದೇಶ. ನನಗೂ ಅಷ್ಟೇ, ಡಾ. ಝಾಕಿರ್ ನಾಯ್ಕರ ಧರ್ಮ ಪ್ರಚಾರದ ವೈಖರಿಯ ಬಗ್ಗೆಯಾಗಲೀ, ಅವರ ಕಾರ್ಯಕ್ರಮಗಳ ಬಗ್ಗೆಯಾಗಲೀ ಸಹಮತವಿಲ್ಲ.

ನಾನು ಅವರ ಬಹಳಷ್ಟು ಕಾರ್ಯಕ್ರಮಗಳನ್ನು ಟಿ.ವಿ. ಯಲ್ಲಿ ಮತ್ತು ಯೂ ಟೂಬಿನಲ್ಲಿ ವೀಕ್ಷಿಸಿರುತ್ತೇನೆ. ಅವರ ಪ್ರಚಾರದ ವೈಖರಿಯು ಉಮರ್ ರವರು ಬರೆದಿರುವಂತೆ ನನಗೂ ಬಹಳ ನಾಟಕೀಯವಾಗಿ ಕಂಡಿದೆ. ಆದರೆ ಇದುವರೆಗೂ ನಾನೆಲ್ಲಿಯೂ ಅವರ ಭಾಷಣಗಳಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಒಂದು ತುಣುಕನ್ನೂ ಕಂಡಿಲ್ಲ. ಸಾಮಾನ್ಯವಾಗಿ ಅವರು ಭಯೋತ್ಪಾದನೆಯನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತಿರುತ್ತಾರೆ. ಜತೆಗೆ, ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆಗೆ ತಳ್ಳಿರುವಂತಹ ಘಟನೆಗಳನ್ನು, ಕಾರಣಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಮತ್ತು ನಿಖರವಾಗಿ ವಿಶ್ಲೇಷಿಸುತ್ತಾರೆ. ಇದು ಕಾಲದ ಬೇಡಿಕೆ ಕೂಡಾ.

ಎಲ್ಲೋ ನಡೆದಿರುವಂತಹ ಅತ್ಯಂತ ಹೇಯ ಭಯೋತ್ಪಾದನೆಯ ಘಟನೆಯ ಪಾತ್ರಧಾರಿಯೊಬ್ಬ ತಾನು ಡಾ.ಝಾಕಿರ್ ನಾಯ್ಕರ ಅಭಿಮಾನಿಯೆಂದ ಮಾತ್ರಕ್ಕೆ ಅವರ ಮೇಲೆ ಮುಗಿಬೀಳುವುದು, ಅವರನ್ನೇ ಭಯೋತ್ಪಾದಕನಾಗಿ ಬಿಂಬಿಸುವುದು ಯಾವುದೇ ನಾಗರಿಕ ಸಮಾಜದ ಲಕ್ಷಣವಲ್ಲ. ನಾನೊಬ್ಬ ವ್ಯಕ್ತಿಯಿಂದ ಪ್ರಭಾವಿತನಾಗಿದ್ದೇನೆಂದ ಮಾತ್ರಕ್ಕೆ ನಾನು ನಡೆಸಬಹುದಾದ ಎಲ್ಲ ಅನಾಹುತಗಳಿಗೆ ಆ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡುವುದು, ಇದು ಯಾವ ಸೀಮೆಯ ನ್ಯಾಯ? ಇದು ತೋಳ ಮತ್ತು ಕುರಿಮರಿಯ ನ್ಯಾಯವಿದ್ದಂತೆ.

ಡಾ. ನಾಯಕರು, ನಾನು ತಿಳಿದಿರುವಂತೆ, ತಮ್ಮ ಯಾವುದೇ ಕಾರ್ಯಕ್ರಮವನ್ನು ಗುಟ್ಟಾಗಿ ಮಾಡುತ್ತಿಲ್ಲ. ತನ್ನೆಲ್ಲಾ ಭಾಷಣಗಳನ್ನು ತನ್ನದೇ ಆದ ಪೀಸ್ ಟೀವಿಯಲ್ಲಿ ಬಹಿರಂಗವಾಗಿ ಮಾಡುತ್ತಾರಲ್ಲದೆ  ಪ್ರತಿಯೊಂದು ಕಾರ್ಯಕ್ರಮಗಳ ವೀಡಿಯೋ ಕ್ಯಾಸೆಟ್ ಗಳನ್ನೂ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತಾರೆ. ಹೀಗಿರುವಾಗ ಅವರ ಮೇಲಿರಬಹುದಾದ ಅಪಾದನೆಗಳನ್ನು ವಸ್ತುನಿಷ್ಠವಾಗಿ ವಿಚಾರಿಸುವುದನ್ನು ಬಿಟ್ಟು ಮಾಧ್ಯಮಗಳ ಮೂಲಕ ಒಬ್ಬ ವಿದ್ವಾಂಸನ ತೇಜೋವಧೆ ನಡೆಸುವುದು ಖಂಡನೀಯ ಮಾತ್ರವಲ್ಲ ಒಂದು ನಾಗರಿಕ ಸಮಾಜಕ್ಕೆ ಅವಮಾನ ಕೂಡಾ.

ಸಮಾಜದಲ್ಲಿ ಶಾಂತಿಯನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಇಂತಹ ಪ್ರವೃತ್ತಿಯನ್ನು ಖಂಡಿಸಲೇಬೇಕಾಗಿದೆ.

Mr. UH Umar writes:
"ನಿಮ್ಮ ಸರದಿಗಾಗಿ ಕಾಯುತ್ತಾ  ಮೂರ್ಖರಾಗಬೇಡಿ"

"ಅವರು ಮೊದಲು ಯಹೂದಿಗಳನ್ನು ಹುಡುಕುತ್ತಾ ಬಂದರು. ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕ್ರೈಸ್ತರನ್ನು ಹುಡುಕಿಕೊಂಡು ಬಂದರು. ಆವಾಗಲೂ ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಕ್ರೈಸ್ತನಾಗಿರಲಿಲ್ಲ.

ಬಳಿಕ ಅವರು ಕಮ್ಯೂನಿಸ್ಟರನ್ನು ಹುಡುಕುತ್ತಾ ಬಂದರು. ಆವಾಗಲೂ ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಕಮ್ಯುನಿಸ್ಟ್ ಅಲ್ಲ.

ಕೊನೆಗೆ ಅವರು ನನ್ನನ್ನೇ ಹುಡುಕುತ್ತಾ ಬಂದರು. ಅಂದು ನನ್ನ ಪರವಾಗಿ ನಿಲ್ಲಲು ಯಾರೂ ಇರಲಿಲ್ಲ"

ಐಎಸ್ ಐಎಸ್ ಉಗ್ರಗಾಮಿಗಳೊಂದಿಗೆ ಡಾ. ಝಾಕಿರ್ ನಾಯ್ಕ್ ರವರ ಸಂಪರ್ಕ ಕಲ್ಪಿಸಲು ಅಕ್ಷರ ಭಯೋತ್ಪಾದಕರು ವಿಫಲ ಯತ್ನ ನಡೆಸುತ್ತಿರುವುದನ್ನು ನೋಡಿ ಖುಷಿಪಡುತ್ತಿರುವ ಕೆಲವು ವಿಘ್ನ ಸಂತೋಷಿಗಳನ್ನು ಕಂಡು ಪಾಸ್ಟರ್ ನಿಯೊಮೊಲ್ಲರ್ ಶತಮಾನಗಳ ಹಿಂದೆ ಹೇಳಿರುವ ಮೇಲಿನ ಮಾತುಗಳು ಯಾಕೋ ನೆನಪಾಯಿತು!

ಈ ಹಿಂದೆಯೂ ಇಂತಹ ಅನುಭವಗಳು ಆಗಿರುವುದಿದೆ. ನಿಮಗೆ ನೆನಪಿರಬಹುದು, ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರನ್ನು ಪತ್ರಿಕೆಯೊಂದು ಕೆಟ್ಟ ಪದಗಳನ್ನು ಬಳಸಿ, ಏಕವಚನದಲ್ಲಿ ಪ್ರಕಟಿಸಿದ ವರದಿ. ಅಂದೂ ಕೆಲವು ಮಂದಿ ಖುಷಿಪಟ್ಟಿದ್ದರು."ಮುಸ್ಲಿಮ್ ಲೇಖಕರ ಸಂಘ"ವು ಪತ್ರಿಕೆಯ ಸಂಪಾದಕರನ್ನು ಭೇಟಿ ಮಾಡಿ ತಪ್ಪೊಪ್ಪಿಗೆ ಪ್ರಕಟಿಸಲು ಒತ್ತಾಯಿಸಿತ್ತು. ಮರುದಿನ ಪತ್ರಿಕೆಯು ಎ.ಪಿ.ಉಸ್ತಾದ್ ರವರ ಪ್ರತಿಕ್ರಿಯೆ ಮತ್ತು ವರದಿಗೆ ವಿಷಾದ ವ್ಯಕ್ತಪಡಿಸಿತ್ತು.

ಅಂದು ನನಗೆ ಫೋನಾಯಿಸಿದ, ಸಂದೇಶ ಕಳುಹಿಸಿದ ಕೆಲವು ಮಿತ್ರರು "ನೀನೀಗ ಎ.ಪಿ.ಯಾ?" ಎಂಬುದಾಗಿ ಕೆಣಕಿದ್ದರು. "ಇಲ್ಲ, ಇಂದು ಎ.ಪಿ., ನಾಳೆ ನಾನು" ಎಂದು ಮಾತ್ರ ಅವರಿಗೆ ಉತ್ತರಿಸಿದ್ದೆ.

ಒಂದು ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದರೆ ಆ ಸಮುದಾಯ ಜೀವಂತವಾಗಿದೆ ಎಂದರ್ಥ.  ಎ.ಪಿ.ಉಸ್ತಾದರ ಬಗ್ಗೆ ನನಗೂ ಭಿನ್ನಾಭಿಪ್ರಾಯಗಳಿವೆ. ಆದರೆ, ಆ ಭಿನ್ನಾಭಿಪ್ರಾಯಗಳು ಅವರನ್ನ ಯಾರೋ ಅವಮಾನಿಸಿದಾಗ ಮೌನವಾಗಿರುವುದಕ್ಕೆ/ಖುಷಿಪಡುವುದಕ್ಕೆ ನಮ್ಮನ್ನ ಪ್ರೇರೇಪಿಸಬಾರದು ಎಂಬುದು ನನ್ನ ನಿಲುವು.

"ಇಸ್ಲಾಮ್ ವಿರೋಧಿಗಳ ಪೂರ್ವ ನಿಯೋಜಿತ ಜಾಗತಿಕ ಸಂಚಿನ ಭಾಗವಾಗಿ ಇಂದು ಝಾಕಿರ್ ನಾಯ್ಕರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ದಯವಿಟ್ಟು ಪ್ರತಿಭಟಿಸಿ" ಎಂಬುದಾಗಿ ಮಿತ್ರರನೇಕರಿಗೆ ನಾನು ಕಳುಹಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕೆಲವು ಮಿತ್ರರು "ನೀನು ಸಲಫಿಯಾ?" ಎಂದು  ಮತ್ತೆ ಕೆಣಕಿದ್ದಾರೆ. "ಇಲ್ಲ, ಇಂದು ಝಾಕಿರ್ ನಾಯ್ಕ್, ನಾಳೆ ನಾನು" ಎಂದು ಮಾತ್ರ ಅವರಿಗೆ ಉತ್ತರಿಸಿದ್ದೇನೆ.

ಝಾಕಿರ್ ನಾಯ್ಕರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯಗಳಿವೆ. ಯಾಕೋ ಅವರು ನನಗಿನ್ನೂ ಇಷ್ಟವಾಗಲೇ ಇಲ್ಲ. ಅವರ ಮಾತಾಂತರ ಕಾರ್ಯಕ್ರಮಗಳು ಅಪ್ಪಟ ಡ್ರಾಮಾದಂತೆ/ಇಸ್ಲಾಮಿನ ವರ್ಚಸ್ಸಿಗೆ ಹಾನಿ ಮಾಡುವಂತೆ ನನಗನಿಸುವುದಿದೆ. ಆದರೂ, ಇಂದು ನಾನು ಅವರ ಪರ!

ನನ್ನ ಮಿತ್ರರಿಗೆ ಹೇಳಬೇಕಾಗಿರುವುದು ಇಷ್ಟೇ. ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಒಂದಾಗಿರೋಣ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಜಗಳಾಡುತ್ತಾ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಇನ್ನಷ್ಟು ಬಲಿಷ್ಠರಾಗೋಣ.

ಉಮರ್ ಯು. ಹೆಚ್.

Writer - ರಹೀಂ ಟೀ.ಕೆ.

contributor

Editor - ರಹೀಂ ಟೀ.ಕೆ.

contributor

Similar News