ಸೆಲೆಬ್ರಿಟಿಗಳನ್ನೂ ತನ್ನ ಬಲೆಗೆ ಬೀಳಿಸಿರುವ ʼಸಿಕ್ಸ್ ಡಿಜಿಟ್ʼ ವಾಟ್ಸ್‌ಆ್ಯಪ್ ಹಗರಣ!
ಹೊಸದಿಲ್ಲಿ: 59.6 ಕೋಟಿ,ಇದು ಭಾರತದಲ್ಲಿಯ ವಾಟ್ಸ್‌ಆ್ಯಪ್ ಬಳಕೆದಾರರ ಸಂಖ್ಯೆ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕೂ ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ. ಈ ಅಂಕಿಅಂಶಗಳು ಭಾರತದಲ್ಲಿ ಫೇಸ್‌ಬುಕ್‌ನ ಸರ್ವಾಂತರ್ಯಾಮಿ ಮೆಸೇಜಿಂಗ್ ಆ್ಯಪ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಹೆಚ್ಚಿನ ಭಾರತೀಯರಿಗೆ ವಾಟ್ಸ್‌ಆ್ಯಪ್ ಕೇವಲ ಒಂದು ಆ್ಯಪ್ ಅಲ್ಲ. ಅದು ಅವರ ಜೀವನ ವಿಧಾನವಾಗಿದೆ. ಬದುಕಿನ ಗಂಭೀರ ಬಿಕ್ಕಟ್ಟುಗಳನ್ನು ಚರ್ಚಿಸುವುದರಿಂದ ಹಿಡಿದು ಜೋಕ್‌ಗಳು ಮತ್ತು ಮೀಮ್‌ಗಳನ್ನು ಹಂಚಿಕೊಳ್ಳುವುದು,ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತುಕತೆ,ನೆನಪುಗಳನ್ನು ಹಂಚಿಕೊಳ್ಳುವವರೆಗೆ ಸಂಪರ್ಕಗಳನ್ನು ವಾಟ್ಸ್‌ಆ್ಯಪ್ ಹೆಚ್ಚಿಸುತ್ತದೆ.
ಆದರೆ ಇದನ್ನು ಊಹಿಸಿಕೊಳ್ಳಿ;ಒಂದು ದಿನ ಆಗಂತುಕನೋರ್ವ ನಿಮ್ಮ ವಾಟ್ಸ್‌ಆ್ಯಪ್ ಖಾತೆಯೊಳಗೆ ನುಸುಳಿ ನಿಮ್ಮ ಎಲ್ಲ ವೈಯಕ್ತಿಕ ಚಾಟ್‌ಗಳು,ನೀವು ಹಂಚಿಕೊಂಡಿದ್ದ ನೆನಪುಗಳ ಮೇಲೆ ನಿಯಂತ್ರಣ ಸಾಧಿಸಿದರೆ? ಕಲ್ಪನೆ ಮಾತ್ರದಿಂದ ಆತಂಕವಾಗುತ್ತದೆ ಅಲ್ಲವೇ?
ಇದು ಕೇವಲ ಕಾಲ್ಪನಿಕವಲ್ಲ,ದುಸ್ವಪ್ನವೂ ಅಲ್ಲ. ವಾಟ್ಸ್‌ಆ್ಯಪ್ ಹ್ಯಾಕಿಂಗ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಇದು ಭಾರತದಲ್ಲಿಯ ಹೆಚ್ಚಿನ ಜನರಿಗೆ ವಾಸ್ತವವಾಗಿದೆ.
ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ವಾಟ್ಸ್‌ಆ್ಯಪ್ ಸಂದೇಶಗಳನ್ನು ನೋಡುತ್ತಿರುವಂತೆಯೇ ಹ್ಯಾಕಿಂಗ್ ಬಲೆಗೆ ಬೀಳಬಹುದು. ನೀವು ವರ್ಷಗಳಿಂದಲೂ ಬಲ್ಲ ಗೆಳೆಯನಿಂದ ನೋಟಿಫಿಕೇಷನ್ ಧುತ್ತೆಂದು ಕಾಣಿಸಿಕೊಳ್ಳುತ್ತದೆ, ನೀವು ಚಾಟ್ ವಿಂಡೋ ತೆರೆಯುತ್ತಿದ್ದಂತೆಯೇ ಶುಭಾಶಯಗಳನ್ನು ಹೇಳುವ ಮೂಲಕ ಮೆಲ್ಲನೆ ನಿಮ್ಮನ್ನು ಬಲೆಗೆ ಬೀಳಿಸುವ ಪ್ರಯತ್ನ ಆರಂಭವಾಗುತ್ತದೆ. ‘ಹೇ,ನಾನು ಹೊಸ ಫೋನ್ ಖರೀದಿಸಿದ್ದೇನೆ. ನಾನು ನಿಮ್ಮ ಸಂಖ್ಯೆಗೆ ಆಕಸ್ಮಿಕವಾಗಿ ಕೋಡ್‌ವೊಂದನ್ನು ಕಳಿಸಿದ್ದೇನೆ ಎಂದು ಭಾವಿಸಿದ್ದೇನೆ. ನೀವು ಅದನ್ನು ಮರಳಿ ಕಳುಹಿಸಬಹುದೇ?’ ಎಂಬ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ಎಷ್ಟಿದ್ದರೂ ಹಳೆಯ ಗೆಳೆಯನಲ್ಲವೇ ಎಂದುಕೊಂಡು ನೀವು ಒಟಿಪಿಯನ್ನು ಕಳುಹಿಸುತ್ತೀರಿ. ಅಲ್ಲಿಗೆ ನಿಮ್ಮ ಕಥೆ ಮುಗಿಯಿತು,ನಿಮಗೆ ಗೊತ್ತಾಗುವ ಮೊದಲೇ ನಿಮ್ಮ ಖಾತೆ ಹ್ಯಾಕ್ ಆಗಿರುತ್ತದೆ!
ಆ ನಯವಾದ ಸಂದೇಶ,ನಂಬಿಕೆಯ ಆ ಒಂದು ಕ್ಷಣ ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಗಳ ಭಂಡಾರವನ್ನು ನಿಮಗರಿವಿಲ್ಲದೆ ತೆರೆದಿರುತ್ತದೆ. ನಿಮಗೆ ತಣ್ಣನೆಯ ಸತ್ಯದ ಅರಿವಾಗುತ್ತದೆ,ಆ ಗೆಳೆಯ ನಿಮ್ಮ ನಿಜವಾದ ಗೆಳೆಯನೇ ಆಗಿರುವುದಿಲ್ಲ.
ಒಂದು ಸಲ ನಿಮ್ಮ ವಾಟ್ಸ್‌ಆ್ಯಪ್ ಖಾತೆ ಹ್ಯಾಕ್ ಆದರೆ ಹ್ಯಾಕರ್‌ಗಳು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಇತರ ನಂಬರ್‌ಗಳನ್ನೂ ಗುರಿಯಾಗಿಸಿಕೊಳ್ಳುತ್ತಾರೆ. ಇದೇ ಸರಳ ತಂತ್ರವನ್ನು ಬಳಸುತ್ತಾರೆ ಮತ್ತು ಒಬ್ಬರಾದ ನಂತರ ಒಬ್ಬರಂತೆ ನಿಮ್ಮ ಗೆಳೆಯರನ್ನು,ಸಂಪರ್ಕಗಳನ್ನು ಬಲೆಗೆ ಬೀಳಿಸುತ್ತಾರೆ.
ಇದು ಅತ್ಯಂತ ಹಳೆಯ ತಂತ್ರಗಳಲ್ಲೊಂದು. ನೀವು ಫೋನ್‌ಗಳನ್ನು ಸ್ವಿಚ್ ಮಾಡುತ್ತಿರುವಾಗ ವಾಟ್ಸ್‌ಆ್ಯಪ್‌ನಲ್ಲಿ ಬರುವ ಆರಂಕಿಗಳ ಕೋಡ್ ಅನ್ನು ನೀವು ಹಂಚಿಕೊಳ್ಳುವಂತೆ ಮಾಡುವ ಮೂಲಕ ಹ್ಯಾಕರ್‌ಗಳು ಖಾತೆಯನ್ನು ಹೈಜಾಕ್ ಮಾಡುತ್ತಾರೆ. ಈ ಹಗರಣ ರಾಜಾರೋಷ ನಡೆಯುತ್ತಿದ್ದರೂ ಈಗಲೂ ಅನೇಕರು ಅದರ ಬಲೆಯಲ್ಲಿ ಸಿಲುಕುತ್ತಿದ್ದಾರೆ.
ನೀವು ಏನೇ ಮಾಡಿದರೂ ನಿಮ್ಮ ಖಾತೆಯನ್ನು ಮರಳಿ ಪಡೆದುಕೊಳ್ಳಲು ನಿಮಗೆ ಸಾಧ್ಯವಿಲ್ಲ, ಏಕೆಂದರೆ ಹ್ಯಾಕರ್‌ಗಳು ಈಗ ನಿಮ್ಮ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ.
ಅವರು ಯುಪಿಐ ಮೂಲಕ ಹಣ ಪಾವತಿಸುವಂತೆ ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡು ನಿಮ್ಮ ಗೆಳೆಯರಿಗೆ ಸಂದೇಶಗಳನ್ನು ಕಳುಹಿಸಬಲ್ಲರು. ಹ್ಯಾಕ್ ಆಗಿರುವ ಬಗ್ಗೆ ನೀವು ನಿಮ್ಮ ಖಾತೆಯ ಮೂಲಕ ನಿಮ್ಮ ಸಂಪರ್ಕಗಳಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಪ್ರಯತ್ನಿಸಿದರೆ ಹ್ಯಾಕರ್‌ಗಳು ತಕ್ಷಣ ಅವುಗಳನ್ನು ಅಳಿಸುತ್ತಾರೆ.
ಭಾರತದಲ್ಲಿ ಇಂತಹ ವಾಟ್ಸ್‌ಆ್ಯಪ್ ವಂಚನೆಗಳ ಸಂಖ್ಯೆ ಕುರಿತು ನಿಖರವಾದ ಅಧಿಕೃತ ದತ್ತಾಂಶ ಲಭ್ಯವಿಲ್ಲದಿದ್ದರೂ,ಬಲೆಗೆ ಬೀಳುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹಲವಾರು ಸೆಲೆಬ್ರಿಟಿಗಳೂ ಈ ವಂಚನೆಯನ್ನು ಅನುಭವಿಸಿದ್ದಾರೆ.
ರೋಗ ಬರುವ ಮೊದಲೇ ಆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಹಿರಿಯರ ಮಾತು. ಇಲ್ಲಿಯೂ ಅದೇ ಅನ್ವಯವಾಗುತ್ತದೆ. ಸೈಬರ್ ಭದ್ರತೆಯ ವಿಷಯದಲ್ಲಿ ಯಾವಾಗಲೂ ಮುನ್ನೆಚ್ಚರಿಕೆ ಒಳ್ಳೆಯದು. ಎಲ್ಲ ವಾಟ್ಸ್‌ಆ್ಯಪ್ ಬಳಕೆದಾರರಿಗೆ ತಜ್ಞರ ಅತ್ಯಂತ ಮುಖ್ಯ ಸಲಹೆ ಸರಳವಾಗಿದೆ;ಯಾರೇ ಕೇಳಿದರೂ,ಅವರು ಹೇಗೆ ಕೇಳಿಕೊಂಡರೂ ನಿಮ್ಮ ಫೋನ್‌ಗೆ ಕಳುಹಿಸಲಾದ ಆರು ಅಂಕಿಗಳ ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇವು ಯಾವಾಗಲೂ ನಿಮ್ಮ ಖಾತೆಯನ್ನು ಹೈಜಾಕ್ ಮಾಡಲು ಮತ್ತು ಹಣ ಮತ್ತು ಇತರ ಸೂಕ್ಷ್ಮ ಮಾಹಿತಿಗಳಿಗಾಗಿ ಇತರರನ್ನು ಗುರಿಯಾಗಿಸಿಕೊಳ್ಳಲು ತಂತ್ರವಾಗಿರುತ್ತವೆ.
ಇಂತಹ ವಂಚನೆಗಳಿಂದ ನಿಮ್ಮನ್ನು ರಕ್ಷಿಸಕೊಳ್ಳಲು ನೀವೇನು ಮಾಡಬೇಕು?
ಟು-ಸ್ಟೆಪ್ ವೆರಿಫಿಕೇಷನ್ ಸಕ್ರಿಯಗೊಳಿಸಿ. ಇ-ಮೇಲ್ ವಿಳಾಸವನ್ನು ಸೇರಿಸಿ. ಪಾಸ್ ಕೀ(ಲಭ್ಯವಿದ್ದರೆ) ಅನ್ನು ಅಳವಡಿಸಿ.
ಇಂದಿನ ಡಿಜಿಟಲ್ ಯುಗದಲ್ಲಿ ನಂಬಿಕೆಯು ಅಮೂಲ್ಯವಾಗಿದ್ದು, ನಿಮ್ಮ ಆನ್‌ಲೈನ್ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ವಾಟ್ಸ್‌ಆ್ಯಪ್ ಕೋಟ್ಯಂತರ ಜನರನ್ನು ಬೆಸೆಯುತ್ತದೆ,ಆದರೆ ನೀವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯಿಂದ ಅದು ಸುರಕ್ಷಿತವಾಗಿರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಜಾಗರೂಕರಾಗಿರುವ, ಸರಿಯಾದ ಸುರಕ್ಷತಾ ಸೆಟ್ಟಿಂಗ್ ಬಳಸುವ ಮತ್ತು ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸುವ ಮೂಲಕ ನೀವು ಹ್ಯಾಕರ್‌ಗಳನ್ನು ದೂರವಿಡಬಹುದು.
ಕೃಪೆ: newindianexpress.com